ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟ್ರೀಯ ಸೇವಾ ಯೋಜನೆ

 ಶೈಕ್ಷಣಿಕ ಅಭ್ಯಾಸದ ಜತೆಗೆ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಉತ್ತಮವಾಗಿರುತ್ತದೆ. ಕೇವಲ ಪಾಠದ ಕಡೆಗೆ ಮಾತ್ರ ಗಮನ ಕೊಡದೆ ಯೋಚನಾ ಶಕ್ತಿಯನ್ನು ಹೆಚ್ಚಿಸುವ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಬೌದ್ಧಿಕ ಮಟ್ಟದ ಬೆಳವಣಿಗೆಯೂ ಹೆಚ್ಚುತ್ತದೆ.ಶಾಲಾ ಕಾಲೇಜುಗಳಲ್ಲಿ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಾಗ ಮಕ್ಕಳು ಸಕ್ರಿಯರಾಗಿರುತ್ತಾರೆ. ಅದಕ್ಕಾಗಿ ಮಧ್ಯಂತರ ರಜೆ,ವಾರ್ಷಿಕ ರಜೆಗಳಲ್ಲಿ ವಿವಿಧ ರೀತಿಯ ತರಬೇತಿಗಳನ್ನು ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಪಟ್ಟಣದ ವಿದ್ಯಾರ್ಥಿಗಳು ಕ್ರಿಕೆಟ್‌, ಸಂಗೀತ, ನೃತ್ಯ ಇಂತಹ ತರಬೇತಿ ಶಾಲೆಗಳಲ್ಲಿ  ಸೇರಿಕೊಂಡರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಭಾಗವಹಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಕಲಿಯುವ ವಿಷಯಗಳು ಅನೇಕ.
 ರಾಷ್ಟ್ರೀಯ ಸೇವಾ ಯೋಜನೆ:
ಕಾಲೇಜಿನ ಮಧ್ಯಂತರ ರಜೆಗಳಲ್ಲಿ ನಡೆಸಲ್ಪಡುವ ಹತ್ತು ದಿನಗಳ ಶಿಬಿರ. ೩೦-೫೦ ವಿಧ್ಯಾರ್ಥಿಗಳಿರುವ ಒಂದು ತಂಡ ತಮ್ಮ ತಾಲೂಕು ಅಥವಾ ಜಿಲ್ಲೆಯ ಒಳಗಿನ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗೆ ಹೋಗಿ ಅಲ್ಲಿಗೆ ಅಗತ್ಯವಾಗಿ ಬೇಕಾಗಿರುವ ಆಟದ ಮೈದಾನದ ವಿಸ್ತರಣೆ ಹಾಗೂ ಸರಿಪಡಿಸುವಿಕೆ ಇತ್ಯಾದಿ  ಕೆಲಸಗಳನ್ನು ಮಾಡುವುದು. ಅಲ್ಲಿನ ಮಕ್ಕಳೊಂದಿಗೆ ಒಡನಾಡಿಯಾಗಿ ಪರಿಸರ ಸ್ವಚ್ಚತೆ, ಪರಿಸರದ ಮಹತ್ವ, ವಿವಿದ ರೀತಿಯ ಹಾಡು, ನೃತ್ಯ ಮುಂತಾದವುಗಳನ್ನು ಅವರಿಗೆ ತಿಳಿಸಿಕೊಡುವುದು. ವಿದ್ಯಾರ್ಥಿಗಳಿಗೆ ಸಾಮಾಜಿಕ ಕುಂದುಕೊರತೆಗಳ ಬಗ್ಗೆ ಗಮನಹರಿಸಿ ಅವುಗಳನ್ನು ತಮ್ಮ ಮಟ್ಟದಲ್ಲಿ ಪರಿಹರಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರನ್ನಾಗಿಸುವುದು.
ಯೋಜನೆಯ ಉದ್ದೇಶ:           
ಕರ್ನಾಟಕ ರಾಜ್ಯದಲ್ಲಿ ಪದವಿಪೂರ್ವ ಶಿಕ್ಷಣದ ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿಸ್ತಾರವಾದ್ದರಿಂದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹೆಚ್ಚಿನ ಪ್ರಾಮುಖ್ಯತೆ,ಪ್ರಾಶಸ್ತ್ಯ ಮತ್ತು ಜವಾಬ್ದಾರಿಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿ ಬೆಳೆಸುವ ಉದ್ದೇಶದಿಂದ ಒಂದು ಹೊಸ ಯುವ ಶಕ್ತಿಯನ್ನು ರೂಪಿಸುವ ಮಹತ್ತರ ಪ್ರಯತ್ನ. ತಾವು ವಾಸಿಸುವ ಸಮುದಾಯ ಅಥವಾ ಸಮಾಜದ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು. ಸಮಾಜದ ಅಗತ್ಯಗಳನ್ನು ಗುರುತಿಸಿ ಈ ಬಗ್ಗೆ ತಾವು ಏನು ಮಾಡಬಹುದೆಂದು ಆಲೋಚಿಸಿ ಸಾಮಾಜಿಕ ಹಾಗೂ ಪೌರ ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸುವುದು.ವಿದ್ಯಾವಂತರು ಮತ್ತು ಅವಿದ್ಯಾವಂತರ ನಡುವಿನ ಅಂತರವನ್ನು ಕಡಿಮೆಗೊಳಿಸಲು ಪ್ರಯತ್ನಿಸುವುದು.ಕಲಿತ ವಿದ್ಯೆಯ ಫಲವನ್ನು ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಿಕೊಳ್ಳಬಹುದೆಂದು ಕಂಡುಕೊಳ್ಳವುದು. ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು. ಪ್ರಕೃತಿ ವಿಕೋಪ,ಬೆಂಕಿ ಅನಾಹುತ ಇತ್ಯಾದಿ ಸಂದರ್ಭಗಳಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಇತ್ಯಾದಿ
ಗುರಿ:
ವಿದ್ಯಾರ್ಥಿಗಳಲ್ಲಿ ಆದರ್ಶ,ಉತ್ಸಾಹ,ಬುದ್ದಿಬಲ,ಬಾಹುಬಲ ಇದ್ದು ಸಮಾಜದ ಏಳಿಗೆಗೆ ದುಡಿಯಬೇಕೆಂಬ ಹಂಬಲ ಇರುತ್ತದೆ. ಈ ಶಕ್ತಿ ಉತ್ಸಾಹಗಳನ್ನು ಬಳಸಿಕೊಂಡು ಅವರನ್ನು ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸುವುದು ಈ ಯೋಜನೆಯ ಮುಖ್ಯ ಗುರಿ. "ನನಗಲ್ಲ ನಿಮಗೆ " ಎನ್ನುವುದು ಈ ಯೋಜನೆಯ ಧ್ಯೇಯವಾಕ್ಯ.
ರಾಷ್ಟ್ರೀಯ ಯೋಜನೆಯ ಚಿಹ್ನೆ:
ಒರಿಸ್ಸಾ ರಾಜ್ಯದ ಕೊನಾರ್ಕ್ ನ ಸೂರ್ಯ ದೇವಾಲಯದ ಕಲ್ಲು ರಥದ ಎಂಟು ಕಡ್ಡಿಗಳ ಒಂದು ಚಕ್ರವಾಗಿದೆ. ಇದು ಯುವಶಕ್ತಿಯ ನಿರಂತರ ಚಲನೆಯ ಸಂಕೇತವಾಗಿದೆ.
ರಾಷ್ಟ್ರೀಯ ಯೋಜನೆಯ ಬ್ಯಾಡ್ಜು:
ರಾಷ್ಟ್ರೀಯ ಯೋಜನೆಯ ಲಾಂಛನವನ್ನು ಒಳಗೊಂಡಿದ್ದು ಚಕ್ರದ ಒಳಾಂಗಣ ಕೆಂಪು ಬಣ್ಣವನ್ನು,ಚಕ್ರದ ಹೊರಗಿನ ವ್ಯೂಹ ನೀಲಿ ಬಣ್ಣವನ್ನು ಹಾಗೂ ಕಡ್ಡಿಗಳು ಮತ್ತು ಚಕ್ರದ ಒಳಗಿನ ವ್ಯೂಹ ಬಿಳಿ ಬಣ್ಣವನ್ನು ಒಳಗೊಂಡಿದೆ. ಕೆಂಪು ಬಣ್ಣ ಜೀವಂತಿಕೆ, ಸ್ಪೂರ್ತಿ ಮತ್ತು ಚೈತನ್ಯ , ನೀಲಿ ಬಣ್ಣ ಹೃದಯ ವೈಶಾಲ್ಯತೆ ಹಾಗೂ ಸಮೃಧ್ದಿ , ಬಿಳಿ ಬಣ್ಣ ಸರಳತೆ, ಪ್ರಾಮಾಣಿಕತೆ ಮತ್ತು ಶುಭ್ರತೆಯ ಪ್ರತೀಕವಾಗಿದೆ.

Comments