ರಾಷ್ಟ್ರ ಪಕ್ಷಿ ನವಿಲು

ರಾಷ್ಟ್ರ ಪಕ್ಷಿ ನವಿಲು

ಬಿರು ಬೇಸಗೆಯ ಎಪ್ರಿಲ್‌, ಮೇ ತಿಂಗಳಿನಲ್ಲಿ ಗರಿಬಿಚ್ಚಿ ಕುಣಿಯುವ ನೀಲವರ್ಣದ ನವಿಲನ್ನು ನೀವೆಲ್ಲ ನೋಡಿರುತ್ತೀರಿ.. ನೀಲ ಗಗನದಲಿ ಮೇಘಗಳಾ ಕಂಡಾಗಲೆ ನಾಟ್ಯವ, ನವಿಲು ಕುಣಿಯುತಿದೆ ನೋಡ... ಎಂಬ ಸುಂದರವಾದ ಹಾಡನ್ನು ನೀವೆಲ್ಲ ಕೇಳಿರಬಹುದು. ಇದಲ್ಲದೆ ಇನ್ನೂ ಹಲವಾರು ಹಾಡುಗಳನ್ನು ನೀವು ಕೇಳಿರಬಹುದು.. ನವಿಲು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ರಾಷ್ಟ್ರಪಕ್ಷಿ ನವಿಲು ಕೋಳಿಯ ಜಾತಿಗೆ ಸೇರಿದ ಹಕ್ಕಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನವಿಲು ಹೀಗೆ ಗರಿಬಿಚ್ಚಿ ಕುಣಿಯುವುದು ಏಕೆ ಎಂದು ನಿಮಗೆ ಗೊತ್ತೇ? 

ಇದೊಂದು ಸ್ವಾರಸ್ಯಕರ ವಿಚಾರ. ಪ್ರತಿವರ್ಷ ವಸಂತ ಋತುವಿನಲ್ಲಿ ನವಿಲಿಗೆ ಸಂತಾನಾಭಿವೃದ್ಧಿಕಾಲ. ಪಕ್ಷಿ ಲೋಕದಲ್ಲಿ ಗಂಡು ಹಕ್ಕಿಗಳು ಹೆಚ್ಚು ವರ್ಣಮಯವಾಗಿ ಆಕರ್ಷಕವಾಗಿ ಇರುತ್ತವೆ. ಗಂಡು ಹಕ್ಕಿ ಹೆಚ್ಚು ವರ್ಣಮಯವಾಗಿದ್ದರೆ, ಚೆನ್ನಾಗಿ ಹಾರಬಲ್ಲುದಾದರೆ, ಕುಣಿಯಬಲ್ಲದು ಎಂದಾದರೆ ಮಾತ್ರ ಹೆಣ್ಣು ಹಕ್ಕಿ ಗಂಡನ್ನು ವರನಾಗಿ ಆರಿಸುತ್ತದೆ. ನವಿಲುಗಳಲ್ಲಿ ನಡೆಯುವ ನರ್ತನ ಸ್ಪರ್ಧೆಯಲ್ಲಿ ತನ್ನ ಸುಂದರವಾಗಿ ಬೆಳೆದ ಗರಿಗಳನ್ನು ಬಿಚ್ಚಿಕೊಂಡು, ಬೆಳಗ್ಗೆ ಅಥವಾ ಸಂಜೆಯ ಹೊತ್ತು ಸೂರ್ಯನ ಹೊಂಬಿಸಿಲಿಗೆ ಡಿಷ್‌ ಆಂಟೆನಾ ತರಹ ಹಿಡಿದು ನರ್ತಿಸುತ್ತವೆ. ಆ ಬೆಳಕಿಗೆ ಗರಿಬಿಚ್ಚಿದ ನವಿಲಿನ ಸೌಂದರ್ಯ ಇನ್ನಷ್ಟು ಹೆಚ್ಚಾಗಿ ತಾನು ಬಲಾಢ್ಯ, ತಾನು ಆರೋಗ್ಯವಂತ ಎಂದು ಗಂಡು ನವಿಲು ತೋರಿಸಿಕೊಳ್ಳುತ್ತದೆ.. ನವಿಲಿನ ಬಣ್ಣ ಮುಖವರ್ಣಿಕೆ, ತಲೆಯ ಮೇಲಿನ ತುರಾಯಿ, ಗರಿಯ ಮೇಲಿನ ಕಣ್ಣುಗಳು ಇವುಗಳಿಗೆ ನಾವೂ ಮಾರುಹೋಗುತ್ತೇವೆ.. ಅಲ್ಲವೇ

ನಮ್ಮ ಕರಾವಳಿ ಭಾಗದ ಭೂತಕೋಲಗಳಲ್ಲಿ ಕಟ್ಟುವ ʼಅಣಿʼ ಯನ್ನು ಸರಿಯಾಗಿ ನೋಡಿ. ಭೂತದ ಅಣಿಯನ್ನು ಗರಿಬಿಚ್ಚಿದ ನವಿಲನ್ನು ನೋಡಿಯೇ ಮಾಡಿರಬೇಕು. ಮಾತ್ರವಲ್ಲ ಜಾತ್ರೆಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ನೀವೂ ನೋಡಿರುತ್ತೀರಿ.. ಅದರ ಅಲಂಕಾರದ ಕಲ್ಪನೆಯೂ ನನಗೆ ಗರಿಬಿಚ್ಚಿದ ನವಿಲಿನ ಹಾಗೆ ಕಾಣುತ್ತದೆ. 

ನವಿಲುಗಳಲ್ಲಿ ಹೆಣ್ಣು ಹಕ್ಕಿ ಗಂಡಿಗಿಂತ ತೀರಾ ಭಿನ್ನವಾದ ಬಣ್ಣ ಹೊಂದಿರುತ್ತದೆ. ಹಸಿರುಬಣ್ಣದ ಕುತ್ತಿಗೆ, ಕಂದು ಬಣ್ಣದ ದೇಹ, ಬಿಳಿ ಬಣ್ಣದ ಹೊಟ್ಟೆಯನ್ನು ಹೊಂದಿರುತ್ತದೆ. ಈ ಬಣ್ಣವೇ ಅವುಗಳಿಗೆ ಸಹಜವಾದ ರಕ್ಷಣೆಯನ್ನು ಒದಗಿಸುತ್ತದೆ. ದೊಡ್ಡ ಪೊದೆಗಳ ಒಳಗೆ. ನೆಲದಮೇಲೆಯೇ ಒಣಗಿದ ಎಲೆ ಮತ್ತು ಕಡ್ಡಿಗಳನ್ನು ಜೋಡಿಸಿ ಮೊಟ್ಟೆ ಇಟ್ಟು ಕಾವು ಕೊಡುವಾಗ ಅವುಗಳ ಬಣ್ಣವೇ ಅವುಗಳಿಗೆ ರಕ್ಷಣೆ. ಮೊಟ್ಟೆ ಇಟ್ಟು ಮರಿಮಾಡುವ ಹೆಣ್ಣು ನವಿಲಿನ ಸ್ವಭಾವ ಥೇಟ್‌ ನಮ್ಮ ಊರಿನ ಕೋಳಿಗಳ ಹಾಗೆಯೇ. ಮೊಟ್ಟೆ ಒಡೆದು ಮರಿಗಳಾದಾಗ ಕೋಳಿಯ ಹಿಂದೆ ಮರಿಗಳು ಓಡಾಡುವಂತೆಯೇ ನವಿಲಿನ ಮರಿಗಳು ತಾಯಿಯ ಹಿಂದೆ ಹೋಗುತ್ತವೆ. ನವಿಲಿನ ಮರಿಗಳು ನೋಡಲು ಕೋಳಿಯ ಹಾಗೆಯೇ ಇರುತ್ತವೆ. 

ಇನ್ನೊಂದು ವಿಚಾರ. ಸಂತಾನೋತ್ಪತ್ತಿಯ ಕಾಲ ಮುಗಿದಾಗ ಗಂಡು ಹಕ್ಕಿಯ ಸುಂದರವಾದ ಗರಿಗಳು ತಾನಾಗಿ ಉದುರಿ ಹೋಗುತ್ತವೆ. ಸುಮಾರು ಒಂದು ಮೀಟರ್‌ ಉದ್ದದ ಗರಿಗಳನ್ನು ಹಲವು ಸಮುದಾಯಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳಿಗೆ ಬಳಸುತ್ತಾರೆ.. ಪುರಾಣದಲ್ಲಿ ಬರುತ್ತಿದ್ದ ಕೃಷ್ಣನ ತಲೆಯ ಮುಂಡಾಸಿನಲ್ಲಿ ನವಿಲು ಗರಿಯನ್ನು ನೀವೂ ನೋಡಿರುತ್ತೀರಿ. 

ಅಪಾಯದ ಪರಿಸ್ಥಿತಿ ಎದುರಾದರೆ ತಕ್ಷಣ ಮರದ ಎತ್ತರಕ್ಕೆ ಹಾರಿ ಕುಳಿತುಕೊಳ್ಳುವ ಸಾಮರ್ಥ್ಯ ನವಿಲಿಗೆ ಇದೆ. ರಾತ್ರಿ ಹೊತ್ತು ಹೆಚ್ಚಾಗಿ ಮರದಮೇಲೆ ನಿದ್ದೆ ಮಾಡುತ್ತದೆ. ನಮ್ಮ ಮನೆಯ ಹಿಂದೆ ಒಂದಿಷ್ಟು ಮರಗಳು ಇರುವ ಪುಟ್ಟ ಕಾಡು ಇದೆ. ಬೆಳಗ್ಗೆ ಮತ್ತು ಸಂಜೆ ನವಿಲು ಕೂಗುವುದನ್ನು ನಾವು ದಿನವೂ ಎಂಬಂತೆ ಕೇಳುತ್ತೇವೆ. ಕಾಳುಗಳು, ಎಳೆಯ ತರಕಾರಿಗಳು, ಹುಳುಗಳು, ಹಾವುಗಳು ಮತ್ತು ಹಲ್ಲಿಗಳು ನವಿಲಿನ ಮುಖ್ಯ ಆಹಾರ. ಭತ್ತದ ಗದ್ದೆ, ತರಕಾರಿ ಮಾಡುವ ಗದ್ದೆಗಳಿಗೆ ನವಿಲು ಬರುವುದು ಸರ್ವೇ ಸಾಮಾನ್ಯ. ಎಳೆಯ ತರಕಾರಿ ಮಿಡಿಗಳನ್ನು ನವಿಲು ತಿಂದು ಹಾಳುಮಾಡುತ್ತವೆ ಎಂದು ಹಲವು ರೈತರು ಹೇಳುತ್ತಾರೆ. 

ನವಿಲಿನ ಸಂಖ್ಯೆ ಇಂದು ಹಳ್ಳಿಗಳಲ್ಲಿ ಮಾತ್ರವಲ್ಲದೆ ಪಟ್ಟಣಗಳಲ್ಲಿಯೂ ಹೆಚ್ಚಾಗಿದೆ. ನವಿಲನ್ನು ಮತ್ತು ಅದರ ಮರಿಗಳನ್ನು ಹಿಡಿದು ತಿನ್ನುವ ನರಿ, ತೋಳ, ಚಿರತೆಯಂತಹ ಪ್ರಾಣಿಗಳ ಸಂಖ್ಯೆ ಇಂದು ಗಣನೀಯವಾಗಿ ಕಡಿಮೆಯಾಗಿದೆ. ಮಾನವ ಬೇರೆ ಬೇರೆ ಕಾರಣಗಳಿಗೆ ಕಾಡನ್ನು ಕಡಿಯುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಒಂದೆಡೆ ನವಿಲನ್ನು ತಿನ್ನುವ ಪ್ರಾಣಿಗಳ ಕೊರತೆ ಮತ್ತೊಂದೆಡೆ ಕೃಷಿಯ ವಿಸ್ತಾರದಿಂದ ಹೆಚ್ಚಿದ ಆಹಾರ ಲಭ್ಯತೆಯಿಂದ ನವಿಲುಗಳ ಸಂಖ್ಯೆ ಇಂದು ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ಹಲವು ಕಡೆ ಮಾಂಸದ ರುಚಿಗಾಗಿ ನವಿಲನ್ನು ಬೇಟೆಯಾಡಿ ತಿನ್ನುತ್ತಿದ್ದರು. ಆದರೆ ಇಂದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ನವಿಲನ್ನು ಬೇಟೆಯಾಡುವುದು ಮಾತ್ರವಲ್ಲ ಸಾಕುವುದೂ ಕೂಡ ಶಿಕ್ಷಾರ್ಹ ಅಪರಾಧ. 

ಭಾರತ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲಿ ಮಾತ್ರ ಕಾಣಲು ಸಿಗುವ ಈ ಸುಂದರ ಪಕ್ಷಿ ನಮ್ಮ ಭಾರತ ದೇಶದ ಹೆಮ್ಮೆ. ನವಿಲಿನ ಬಗ್ಗೆ ಹಲವು ರೋಚಕ ಮತ್ತು ಆಸಕ್ತಿದಾಯಕ ಕಥೆಗಳು ನಿಮ್ಮ ಬಳಿಯೂ ಇರಬಹುದು. ನವಿಲಿನ ಚಿತ್ರ ಬರೆಯುವುದು ನಿಮಗೂ ಇಷ್ಟವಾಗಿದ್ದರೆ ಅದನ್ನು ಬಿಡಿಸಿ ನಮಗೂ ಕಳಿಸ್ತೀರಲ್ಲ. 

ಕನ್ನಡ ಹೆಸರು: ನವಿಲು

ಇಂಗ್ಲೀಷ್‌ ಹೆಸರು: Indian Peafowl

ವೈಜ್ಞಾನಿಕ ಹೆಸರು: Pavo cristatus

-ಅರವಿಂದ ಕುಡ್ಲ, ಮಂಗಳೂರು