ರಾಷ್ಟ್ರ ಭಾಷೆ ಸೋಗಿನಲ್ಲಿ ಹಿಂದಿ ಹೇರಿಕೆ!

ರಾಷ್ಟ್ರ ಭಾಷೆ ಸೋಗಿನಲ್ಲಿ ಹಿಂದಿ ಹೇರಿಕೆ!

ಬರಹ

ಭಾರತ ದೇಶದ ಒಟ್ಟು ಐಕಮತ್ಯ, ಸಮಗ್ರತೆ ಮತ್ತು ಪರಿಪೂರ್ಣತೆಯನ್ನು ಭದ್ರಗೊಳಿಸಲು, ಅದರ ಎಲ್ಲಾ ಭಾಷಾವಾರು ಜನಾಂಗಗಳ ಪ್ರಾದೇಶಿಕ ಸ್ವಾಯತ್ತತೆಯ ಅಖಂಡತೆಯನ್ನು ಕಾಪಾಡುವುದು ಹಾಗು ಬೆಳೆಸುವುದು ಬಹುಮುಖ್ಯವಾದದ್ದು. ಈ ನಿಟ್ಟಿನಲ್ಲಿ ದೇಶದ ಎಲ್ಲಾ ಪ್ರದೇಶಗಳ ಸಹ ಜೀವನ ಮತ್ತು ಒಟ್ಟು ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಉಂಟು ಮಾಡುವುದು ನಮ್ಮ ಘನ ಭಾರತ ಸರ್ಕಾರ ಕೈಗೊಳ್ಳ ಬೇಕಾಗಿರುವ ಬಹುಮುಖ್ಯ ಕೆಲಸವಾಗಿದೆ. ಆಯಾ ರಾಜ್ಯ - ಪ್ರದೇಶದ ಜನಗಳ ನಡೆ-ನುಡಿ , ಅವರು ಬೆಳೆಸಿ, ಪೋಷಿಸಿದ ಅಚಾರ-ವಿಚಾರ, ಅವರ ಸಾಮಾಜಿಕ-ಆರ್ಥಿಕ ವಿಕಸನ, ಅಲ್ಲಿನ ಸಂಸ್ಕೃತಿಯ ವಿವಿಧ ವೈಭವ- ವಿಲಾಸಗಳನ್ನು ಮೆರೆಸಲು, ಈ ಮೂಲಕ ಎಲ್ಲರನ್ನೂ ಒಂದು ಸಿದ್ಧಾಂತ-ನಂಬಿಕೆಗಾಗಿ ಸಂಘಟಿಸಿ ಒಗ್ಗೂಡಿಸಲು, ಅಂದು ಕೊಂಡ ಉದ್ದೇಶ-ಗುರಿ ತಲುಪಲು, ಆಯಾ ಪ್ರದೇಶಗಳಲ್ಲೇ ಹುಟ್ಟಿ-ಬೆಳೆದು ಈ ಮೇಲಿನವೆಲ್ಲಕ್ಕೂ ಮೂಲ ಸಂಕೇತವೆನಿಸಿರುವ ಭಾಷೆ ಅತಿ ದೊಡ್ಡ ಸಾಧನಗಳಲ್ಲೊಂದು.

ಹಾಗಾಗಿ ಕರ್ನಾಟಕದಲ್ಲಿ ಕನ್ನಡವನ್ನು ನಮ್ಮ ಬದುಕು, ಶಿಕ್ಷಣ, ಉದ್ಯೋಗ, ಮನೋರ೦ಜನೆ, ವ್ಯವಹಾರ ಮತ್ತು ಎಲ್ಲೆಡೆಗಳಲ್ಲೂ ಅನುಷ್ಠಾನಕ್ಕೆ ತರುವುದು ಮತ್ತು ಕರ್ನಾಟಕಕ್ಕೆ ನೆಲಸಲು ಬರುವ ಎಲ್ಲರೂ ಅದನ್ನು ಅರಿತು, ಕಲಿತು, ಉಪಯೋಗಿಸಿ ಪ್ರಾಂತೀಯ ಸಂಸ್ಕೃತಿಯನ್ನು ಬೆಂಬಲಿಸಿ ಸ್ಥಳೀಯರೊಂದಿಗೆ ಒಗ್ಗೂಡಿಸುವ ಪ್ರಯತ್ನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈ ಜೋಡಿಸಿ ಕೆಲಸ ಮಾಡಬೇಕಾಗಿರುವುದು ಅವರ ಸಾಮಾಜಿಕ ಜವಾಬ್ದಾರಿಗಳೊಲ್ಲೊಂದಾಗಿದೆ. ನಮ್ಮ ದಾರ್ಶನಿಕರು ಮತ್ತು ದೇಶ ಕಟ್ಟಲು ಶ್ರಮಿಸಿದ್ದ ಎಲ್ಲ ಘಟಾನುಘಟಿಗಳು, ಹೀಗೆ ಹಲವು ಭಾಷೆ- ಜನಾಂಗ -ಸಂಸ್ಕೃತಿಗಳ ತವರಾದ ಭಾರತದ ವೈಶಿಷ್ಟ್ಯತೆಯಿರುವುದೇ ಈ 'ವಿವಿವಿಧತೆಯಲ್ಲಿ ಏಕತೆ ಎಂಬ ಬೀಜ ಮಂತ್ರದಲ್ಲಿ' ಎಂದು ಅರಿತು ಸ್ವತಂತ್ರದ ನಂತರವೂ ಅಖಂಡತೆಯನ್ನು ಕಾಪಾಡಲು ಎಲ್ಲಾ ಜನಾಂಗಗಳ ಸಮನಾದ ಪೋಷಣೆಯ ಅಗತ್ಯತೆಯನ್ನು ಸಾರಿ ಸಾರಿ ಹೇಳಿದ್ದರು . ಈ ಸದುದ್ದೇಶದ ತತ್ವ-ಚಿಂತನೆಗಳ ಕರ್ತವ್ಯವನ್ನು ಮರೆತು, ಸ್ವಾತಂತ್ರ್ಯದ ನಂತರ ನಮ್ಮನ್ನಾಳಿದವರೆಲ್ಲರೂ ವೈವಿಧ್ಯಗಳ ಭಾರತವನ್ನು ಒಗ್ಗಟ್ಟಿನಲ್ಲಿ ಹಿಡಿದಿಡಲು ಒಂದು ಭಾಷೆಯ ಅವಶ್ಯಕತೆಯಿದೆಯೆಂಬ ಪೊಳ್ಳು ಕಲ್ಪನೆಗೆ ಜೋತು ಬಿದ್ದು , ವ್ಯವಸ್ತಿತವಾಗಿ ಭಾರತದೆಲ್ಲೆಡೆ ಹಿಂದಿಯನ್ನು ಹರಡಲು ಶ್ರಮಿಸುತ್ತಿರುವುದು ಕಣ್ಣೆದುರಿರುವ ಸತ್ಯ. ಇದು ಪರೋಕ್ಷವಾಗಿ ಕೇವಲ ಹಿಂದಿ ಮಾತನಾಡುವವರಿಗೆ ಮಾತ್ರ ಒದಗಿ ಬಂದಿರುವ ಸೌಲಭ್ಯ ಮತ್ತು ಅವರು ತಿರುಗುವೆಡೆಯೆಲ್ಲ ಕೇವಲ ಹಿಂದಿ ಸಂಸ್ಕೃತಿಯನ್ನು ಹರಡಲು ದೊರಕುತ್ತಿರುವ ಅನುಕೂಲವಾಗಿ ಪರಿಣಮಿಸಿದೆ. ಇದು ಯಾವ ಪರಿ ವ್ಯಾಪಿಸುತ್ತಿದೆಯೆಂದರೆ ಹಿಂದಿ ನಮ್ಮ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ, ಇಡೀ ಭಾರತದ ಸಂಸ್ಕೃತಿಯೆಂದರೆ ಹಿಂದಿ ಸಂಸ್ಕೃತಿ, ಹಿಂದಿ ಬಲ್ಲವನಿಗೆ ಕೇಂದ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ, ಹೀಗೆ ಹಿಂದಿಯನ್ನು ಕಲಿಸಲು ಒತ್ತಾಯ, ಆಮಿಷ ಮತ್ತು ವಿಶ್ವಾಸ ಎಂಬ ತಂತ್ರವನ್ನು ಉಪಯೋಗಿಸುವ ಮೂಲಕ, ಅದಕ್ಕೆ ಎಲ್ಲಾ ಸಂಪತ್ತು-ಸವಲತ್ತು ನೀಡುತ್ತ, ಹಿಂದಿಯನ್ನು ಬಿಟ್ಟು ಅನ್ಯವೆಲ್ಲವೂ ಕೀಳು ಎಂಬ ಭಾವನೆಯನ್ನು ಬಿಂಬಿಸುತ್ತ, ಸರ್ವತ್ರವಾಗಿ ಹಿಂದಿಯನ್ನು ಭಾರತದೆಲ್ಲೆಡೆ ಬೇರೂರಿಸಲು ಪ್ರಯತ್ನಿಸುತ್ತಿರುವಂತಿದೆ.

ಜಾಗತೀಕರಣದ ಜ್ವಾಲಾಮುಖಿಯಲ್ಲಿ ಇಂದು ಇಡೀ ವಿಶ್ವದ ಸಂಬಂಧ ನಮಗೆ ಮತ್ತು ಇತರ ದೇಶ ಭಾಂದವರಿಗೆ ನಿಕಟವಾಗಿದೆ. ದ್ವಿಭಾಷ ಸೂತ್ರದಡಿ ಆಯಾ ದೇಶದ ಆಡು ಭಾಷೆ, ಮತ್ತು ಜಾಗತೀಕರಣದ ಅರಿವಿಗೆ ಬೇಕಾಗಿರುವ ಇಂಗ್ಲೀಷನ್ನು ಅನುಸರಿಸುತ್ತಿರುವ ದೇಶಗಳು ತಮ್ಮ ಭಾಷೆ, ಸಂಸ್ಸೃತಿಯನ್ನು ಉಳಿಸಿ-ಬೆಳೆಸುವಲ್ಲಿ ಮತ್ತು ಈ ಮೂಲಕ ಶೈಕ್ಷಣಿಕ-ತಂತ್ರಜ್ಞಾನ-ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿದ್ದಾರೆ. ನಮ್ಮ ಕನ್ನಡದ ಇಂದಿನ ಸ್ಥಿತಿಗೆ ಕನ್ನಡಿಗರ ನಿರಭಿಮಾನದ ಜತೆಗೆ ಈ ತ್ರಿಭಾಷ ಸೂತ್ರ ಮತ್ತು ಕೇಂದ್ರ ಸರ್ಕಾರದ ಅವ್ಯಾಹತವಾದ ಹಿಂದಿ ಹೇರಿಕೆಯು ಬಹು ಮುಖ್ಯ ಕಾರಣವಾಗಿದೆ. ಇದರ ಜತೆಗೆ ಬದುಕು-ದುಡಿಮೆಗಾಗಿ ಬರುವ ವಲಸಿಗರು ಮತ್ತು ಅವರ ಪರ ವಕಾಲತ್ತು ನಡೆಸುವ ನಮ್ಮ ಗಣ್ಯ ಬುದ್ಧಿ ಜೀವಿಗಳು ಮಾಡುತ್ತಿರುವ ಉದ್ಘೋಷಣೆ- ಬೆಂಗಳೂರು ಕಾಸ್ಮೋಪಾಲಿಟಿನ್ ನಗರ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿಬಿಡಿ. ಕನ್ನಡ-ಬೆಂಗಳೂರು ಬಗೆಗಿನ ಈ ಮಲತಾಯಿ ದೋರಣೆಯನ್ನು ರಾಷ್ಟ್ರೀಯ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ನಮ್ಮ ರಾಜಕರಣಿಗಳು ಕೇಂದ್ರದ ಉನ್ನತಾಧಿಕಾರಿ/ವರಿಷ್ಠಾಧಿಕಾರಿ ಸಮಿತಿಯನ್ನು ಒಲೈಸಿಕೊಳ್ಳುಲು ಹಿಂದಿಯ ಜತೆಗೂಡಿರುವುದನ್ನು ನಾವು ಕಾಣಬಹುದಾಗಿದೆ. ಹಿಂದಿ ಭಾಷೆಯ ಏಳಿಗೆಗಾಗಿ ಕೋಟ್ಯಂತರ ರೂಪಾಯಿ ಸುರಿಯುವ ಕೇಂದ್ರ ಸರ್ಕಾರ ಮತ್ತು ಅದನ್ನು ಇಲ್ಲಿ ಆಲಿಂಗಿಸಲು ದೊರೆಯುವ ಸಕಲ ಸವಲತ್ತು-ಸೌಲಭ್ಯಗಳಿಂದ ಒಕ್ಕೂಟದ ಇತರ ಭಾಷೆಗಳು ವಂಚಿತವಾಗಿರುವುದು ನಿಚ್ಚಳವಾಗಿ ಜನಜನಿತ

ದೀರ್ಘಾವದಿಯಲ್ಲಿ ಸಂಪೂರ್ಣವಾಗಿ ಈ ಹಿಂದಿ ಪೆಡಂಭೂತ ಈ ಮೇಲೆ ತಿಳಿಸಿದಂತೆ ಭಾರತದ ಇತರ ವಿವಿಧ ನಡೆ-ನುಡಿ-ಆಚಾರ -ವಿಚಾರ ಅವರ ಸಾಮಾಜಿಕ-ಆರ್ಥಿಕ ವಿಕಸನ ಅಲ್ಲಿನ ಸಂಸ್ಕೃತಿಯ ವೈಭವ-ವಿಲಾಸಗಳನ್ನು ಛಿದ್ರ ಛಿದ್ರ ಮಾಡಿ ಭಾರತದ ಅಖಂಡತೆಯನ್ನು ಖಂಡ -ತುಂಡ ಮಾಡುವ ಸಾಧ್ಯತೆ ಇರುವುದನ್ನು ನಾವೆಲ್ಲ ಮನಗಾಣಬೇಕಿದೆ ಈ ನಿಟ್ಟಿನಲ್ಲಿ, 14 ಸೆಪ್ಟೆಂಬರ್ ನಂದು ದೇಶದಾದ್ಯಂತ ನಡೆಸಲಿರುವ "ಹಿಂದಿ ದಿವಸ್ " ಮತ್ತು "ಹಿಂದಿ ಸಪ್ತಾಹ್" ಗಳೆಂಬ ಆಚರಣೆಗಳು ಎಷ್ಟು ಸರಿ ! ಹಿಂದಿ ಹೇರಿಕೆ ವಿವಿಧ ಆಯಾಮಗಳ ಮೂಲಕ ನುಸುಳಿ, ಹೇಗೆ ನಮ್ಮನ್ನು ಸರ್ವನಾಶ ಮಾಡಿಬಿಡಬಹುದು, ಹೇಗೆ ನಾವು ಎಚ್ಚತ್ತುಗೊಳ್ಳಬೇಕು ಮತ್ತು ಇದಕ್ಕೆಲ್ಲಾ ಪರಿಹಾರವೇನು ಎಂದು ಕನ್ನಡಿಗರು ಚಿಂತಿಸಿ ಪರಾಮರ್ಶಿಸಲು ಮುಂದಾಗಬೇಕಿದೆ. ಸೆಪ್ಟಂಬರ್ ೧೪ ರಂದು "ಹಿಂದೀ ದಿವಸ್" ಆಚರಣೆ ನಡೆಯಲಿರುವ ಈ ಸಂದರ್ಭದಲ್ಲಿ ಹಿಂದಿ ನಮಗೆ ಬೇಡ ಎಂದು ಪ್ರತಿಭಟಿಸಿ, ಕನ್ನಡ ಉಳಿಸಿಕೊಳ್ಳುವತ್ತ ಚಿಂತಿಸಿ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಕರೆ ನೀಡಿರುವ ಕಿಡಿಗೇಡಿಗಳಿಗೆ ತಿಳಿಹೇಳಿ, ಅವರು ಬೆಂಗಳೂರು / ಕರ್ನಾಟಕದಲ್ಲಿ ನೆಲೆಗೊಳ್ಳಬೇಕಾದರೆ ಅವರಿಗೆ ಕನ್ನಡ ಅನಿವಾರ್ಯವಾಗುವ ವಾತಾವರಣ ಮೂಡಿಸುವತ್ತ ನಮ್ಮ ಸರ್ಕಾರ, ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಕನ್ನಡಿಗರು ತಮ್ಮ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ಖಂಡತುಂಡವಾಗಿ ಪ್ರತಿಭಟಿಸಬೇಕಿದೆ.

ಚಂ.ಶೇ.ಕಲ್ಯಾಣ ರಾಮನ್,
ಬೆಂಗಳೂರು-
ಮಿಂಚೆ: kalyana.r@gmail.com