ರಾಸಾಯನಿಕ ರಹಿತ ಮಾವಿನಹಣ್ಣನ್ನು ಮಾತ್ರ ತಿನ್ನಿ

ರಾಸಾಯನಿಕ ರಹಿತ ಮಾವಿನಹಣ್ಣನ್ನು ಮಾತ್ರ ತಿನ್ನಿ

ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗಿದೆ. ಮಾವು ಹಣ್ಣುಗಳ ರಾಜ. ಆದರೆ ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳ ಕಾರಣದಿಂದ ಉತ್ತಮ ದರ್ಜೆಯ ಮಾವಿನ ಹಣ್ಣು ತಿನ್ನಲು ಸಿಗುವುದೇ ಇಲ್ಲ. ಅಕಾಲಿಕ ಮಳೆ, ಆಲಿಕಲ್ಲು ಮಳೆ, ವಿಪರೀತ ಉಷ್ಣಾಂಶ, ಮೋಡ ಕವಿದ ವಾತಾವರಣದಿಂದಾಗಿ ಸರಿಯಾಗಿ ಬೆಳೆದು ಹಣ್ಣಾದ ಮಾವು ಸಿಗುವುದೇ ಇಲ್ಲ. ಮಾವಿನಲ್ಲಿ ಇರುವಷ್ಟು ವೈವಿಧ್ಯತೆಗಳು ಬೇರೆ ಹಣ್ಣಿನಲ್ಲಿ ಇಲ್ಲ. ನೂರೆಂಟು ಬಗೆಯ ರುಚಿಕರ, ಸಿಹಿ, ಪದಾರ್ಥಕ್ಕೆ ಬಳಕೆಯಾಗುವ ಹುಳಿ-ಸಿಹಿ, ಉಪ್ಪಿನಕಾಯಿಗೆಂದೇ ಇರುವ ಮಿಡಿ ಮಾವಿನಕಾಯಿ ತಳಿಗಳು... ಒಂದೇ ಎರಡೇ, ಬಹುಬಗೆಯ ವೈವಿಧ್ಯಮಯ ತಳಿಗಳು ಕಾಣಲು ಸಿಗುತ್ತವೆ. 

ಬದಲಾದ ಪರಿಸ್ಥಿತಿಯಲ್ಲಿ ಹಲವಾರು ತಳಿಗಳು ಕಣ್ಮರೆಯಾಗುತ್ತಾ ಸಾಗಿವೆ. ಕಾಡಿನ ನಾಶದಿಂದ ಕಾಡು ಮಾವಿನ ಹಣ್ಣಿನ ಮರಗಳು ಕಣ್ಮರೆಯಾಗಿವೆ. ಅಪರೂಪದ ತಳಿಗಳಾದ ಅಪ್ಪೆಮಿಡಿ, ಜೀರಿಗೆ ಮಿಡಿ, ಮಲ್ಲಿಗೆ ಮಿಡಿ, ಕದ್ರಿ, ನೆಕ್ಕರೆ ಮುಂತಾದ ತಳಿಗಳು ವಿನಾಶದ ಅಂಚಿನಲ್ಲಿವೆ. ವೈಜ್ಞಾನಿಕ ಪ್ರಯೋಗಗಳ ಮೂಲಕ ಹಲವಾರು ಕಸಿ ತಳಿಗಳು ಮಾರುಕಟ್ಟೆಗೆ ಬಂದಿವೆ. ಬಹುಬೇಗನೇ ಫಲ ಕೊಡುವ ತಳಿಗಳೂ ಇವೆ. ಮಲ್ಲಿಕಾ ಎಂಬ ತಳಿ ಈಗ ಬಹಳ ಪ್ರಸಿದ್ಧಿ. ರಸಮಯವಾದ ಸಿಹಿ ತಿರುಳು, ತೆಳುವಾದ ಬೀಜ ಇದರ ವೈಶಿಷ್ಟ್ಯ. 

ಈ ವರ್ಷ ಮತ್ತೆ ಮಾವಿನ ಹಣ್ಣಿನ ಫಸಲು ಕೈಕೊಟ್ಟಿರುವಂತೆ ಕಾಣಿಸುತ್ತಿದೆ. ಈ ಕಾರಣದಿಂದ ಹಣ್ಣುಗಳನ್ನು ಮಾರಾಟ ಮಾಡುವವರು ಸರಿಯಾಗಿ ಬೆಳೆಯದ, ಹಣ್ಣಾಗದ ಮಾವುಗಳಿಗೆ ರಾಸಾಯನಿಕಗಳನ್ನು ಬಳಸಿ ಅದಕ್ಕೆ ಸೊಗಸಾದ ಬಣ್ಣ ಬರುವಂತೆ ಮಾಡಿ, ಜನರನ್ನು ಮರುಳು ಮಾಡಿ, ದುಬಾರಿ ಬೆಲೆ ಕೊಟ್ಟು ಮಾವು ಕೊಳ್ಳುವಂತೆ ಮಾಡುತ್ತಾರೆ. ನೀವು ಅವರ ಬಣ್ಣದ ಮಾತುಗಳಿಗೆ ಮತ್ತು ಬಣ್ಣದ ಮಾವಿನ ಹಣ್ಣುಗಳ ನೋಟಕ್ಕೆ ಬಲಿಯಾಗಿ ಮನೆಗೆ ಹಣ್ಣುಗಳನ್ನು ತೆಗೆದುಕೊಂಡು ಬಂದು ತುಂಡರಿಸಿದಾಗಲೇ ನಿಮಗೆ ಅದರ ಅಸಲಿಯತ್ತು ಗೊತ್ತಾಗುವುದು. ಈ ರಾಸಾಯನಿಕ ಬಳಕೆಯ ಹಣ್ಣುಗಳ ತಿರುಳುಗಳು ಮಂದವಾದ ಬಣ್ಣವನ್ನು ಹೊಂದಿದ್ದು, ತಿನ್ನಲು ರುಚಿಯನ್ನು ಹೊಂದಿರುವುದಿಲ್ಲ. ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳನ್ನು ಬಳಸಿದ್ದರೆ ನಿಮ್ಮ ಆರೋಗ್ಯವೂ ಕೆಟ್ಟು ವೈದ್ಯರ ಅಥವಾ ಆಸ್ಪತ್ರೆಯ ಸಹವಾಸ ಮಾಡಬೇಕಾದೀತು. ಹುಷಾರ್ !

ಈಗಂತೂ ರಾಸಾಯನಿಕ ರಹಿತ ಮಾವಿನಹಣ್ಣು ಯಾವುದು ಎಂದು ತಿಳಿದುಕೊಳ್ಳುವುದೇ ಕಷ್ಟಕರವಾದ ಪರಿಸ್ಥಿತಿಯಾಗಿದೆ. ದುಡ್ಡಿನ ಆಸೆಗಾಗಿ ಈ ಮಾರಾಟಗಾರರು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸರಿಯಾಗಿ ಪಕ್ವವಾಗದ ಹಣ್ಣುಗಳನ್ನು ರಾಸಾಯನಿಕ ಬಳಕೆಯ ಮೂಲಕ ಹಣ್ಣಾಗುವಂತೆ ಮಾಡುತ್ತಾರೆ. ರಾಸಾಯನಿಕದ ಮುಸುಕು ಹಾಕಿಕೊಂಡು ಬರುವ ಹಣ್ಣುಗಳನ್ನು ಗುರುತಿಸುವುದೇ ಖರೀದಿದಾರರ ಎದುರು ಇರುವ ದೊಡ್ದ ಸಮಸ್ಯೆ. ರಾಸಾಯನಿಕಗಳನ್ನು ಹೊಂದಿರುವ ಮಾವಿನಹಣ್ಣಿನ ಬಳಕೆಯಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳುಂಟಾಗುತ್ತವೆ. ವಾಕರಿಕೆ, ವಾಂತಿ ಬೇಧಿ, ರಕ್ತದಿಂದ ಕೂಡಿದ ಬೇಧಿ, ಅತಿಯಾದ ಆಯಾಸ, ಎದೆಯಲ್ಲಿ ವಾಯು ತುಂಬಿದಂತಹ ಅನುಭವ, ತಲೆನೋವು ಮುಂತಾದ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರಬಹುದು.

ಇದರ ಜೊತೆಗೆ ಚರ್ಮದ ತುರಿಕೆ, ಕಣ್ಣುಗಳಿಗೆ ಹಾನಿ, ಗಂಟಲಿನ ಸಮಸ್ಯೆ, ಆಹಾರ ತಿನ್ನಲು ಕಷ್ಟವಾಗುವುದು, ಚರ್ಮದ ಬಣ್ಣದಲ್ಲಿ ಬದಲಾವಣೆ ಮೊದಲಾದ ತೊಂದರೆಗಳೂ ಕಾಣಸಿಗಬಹುದು. ಇಂತಹ ರಾಸಾಯನಿಕ ಭರಿತ ಮಾವಿನಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಉಸಿರಾಟದ ಸಮಸ್ಯೆ ಪ್ರಾರಂಭವಾಗಬಹುದು. ಇದರಿಂದ ತಲೆ ಸುತ್ತು, ನಿದ್ರೆ ಮಂಪರು, ಕಾಲುಗಳಲ್ಲಿ ಬಲವಿಲ್ಲದಂತಾಗುವುದು, ಪಾರ್ಶ್ವವಾಯು, ರಕ್ತದ ಒತ್ತಡದಲ್ಲಿ ಏರುಪೇರು ಮೊದಲಾದ ಸಮಸ್ಯೆಗಳು ಎದುರಾಗಬಹುದು.

ಮಾವಿನ ಹಣ್ಣುಗಳನ್ನು ಹಣ್ಣು ಮಾಡಲು ಅಥವಾ ಬಣ್ಣ ಬರಿಸಲು ಸಾಮಾನ್ಯವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಉಪಯೋಗಿಸಲಾಗುತ್ತದೆ. ಇದರ ಬಳಕೆಯಿಂದ ಹಸಿರು ಬಣ್ಣದಲ್ಲಿರುವ ಮಾಗದ ಕಾಯಿಗಳು ರಾತ್ರಿ ಬೆಳಗಾಗುವುದರ ಮುನ್ನ ಹಳದಿ ವರ್ಣಕ್ಕೆ ಬದಲಾಗಿರುತ್ತವೆ. ಈ ರಾಸಾಯನಿಕಗಳು ಅಸಿಟೈಲಿನ್ ಅಂಶಗಳನ್ನು ಉತ್ಪತ್ತಿ ಮಾಡುವುದರಿಂದ ಅವುಗಳು ಮಾವಿನ ಹಣ್ಣು ಬೇಗನೇ ಹಣ್ಣಾಗಲು ಸಹಾಯ ಮಾಡುತ್ತವೆ. ಹೀಗೆ ಹಣ್ಣಾದ ಮಾವಿನ ಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡು ಬರುವ ಖನಿಜಾಂಶಗಳು ಮತ್ತು ಪೌಷ್ಟಿಕ ಸತ್ವಗಳು ನಾಶವಾಗುತ್ತವೆ. ಅದರ ಬದಲು ಆರ್ಸಿನಿಕ್ ಮತ್ತು ಫಾಸ್ಫರಸ್ ಎನ್ನುವ ಹಾನಿಕಾರಕ, ವಿಷಕರ ಅಂಶಗಳು ಹಣ್ಣಿನಲ್ಲಿ ಕಾಣಸಿಗುತ್ತವೆ. 

ಮಾವಿನ ಹಣ್ಣಿನ ಸೀಸನ್ ಅಲ್ಲದ ಸಮಯದಲ್ಲಿ ಮಾವಿನ ಹಣ್ಣಿನ ಖರೀದಿ ಮಾಡಲು ಹೋಗಬೇಡಿ. ಅವುಗಳು ರಾಸಾಯನಿಕ ಬಳಸಿ ಹಣ್ಣು ಮಾಡಿದವುಗಳಾಗಿರುತ್ತವೆ. ಹಣ್ಣಿನ ಸೀಸನ್ ನಲ್ಲಿ ನಿಮ್ಮ ಪರಿಚಯದ ಸ್ಥಳೀಯ ಮಾರಾಟಗಾರರಿಂದ ಹಣ್ಣುಗಳನ್ನು ಖರೀದಿಸಿ. ಬೆಲೆ ಸ್ವಲ್ಪ ಹೆಚ್ಚಾದರೂ ಅಡ್ಡಿಯಿಲ್ಲ, ಆರೋಗ್ಯ ಉಳಿಯುತ್ತದೆಯಲ್ಲಾ. ನಿಮ್ಮ ವಾಸಸ್ಥಳದ ಸಮೀಪದಲ್ಲಿ ಮಾವಿನಹಣ್ಣಿನ ತೋಟವಿದ್ದರೆ ಅವರ ಬಳಿಯಲ್ಲಿ ಹಣ್ಣುಗಳನ್ನು ಖರೀದಿಸಿ. ಪ್ರಮಾಣೀಕೃತ ಸಾವಯವ ಮಾರಾಟಗಾರರಿಂದ ಹಣ್ಣುಗಳನ್ನು ಖರೀದಿಸಿ. ಈ ಮೂಲಕ ಸ್ವಲ್ಪ ಮಟ್ಟಿಗಾದರೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ