ರಾಹುಲ್ ಮಾತು ಕಲಿಯಬೇಕಿದೆ

ರಾಹುಲ್ ಮಾತು ಕಲಿಯಬೇಕಿದೆ

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಹಳೆಯ ಗಾದೆಯಿದೆ. ಮಾತೇ ಜಗಳಕ್ಕೆ ಮೂಲ. ಅದನ್ನು ನೀವು ಸರಿಯಾಗಿ ನಿಭಾಯಿಸಿದರೆ ಜಗಳ ಇರುವುದಿಲ್ಲ ಎಂಬುದು ಈ ಮಾತಿನ ಅರ್ಥ. ಅದರಲ್ಲೂ ರಾಜಕೀಯದಲ್ಲಿ, ಹೆಚ್ಚು  ಮಾತನಾಡುವ ಹುದ್ದೆಯಲ್ಲಿರುವವರಿಗೆ ಇದು ಇನ್ನೂ ಹೆಚ್ಚು ಅನ್ವಯವಾಗುತ್ತದೆ. ರಾಹುಲ್ ಗಾಂಧಿ ಈ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ.

ರಾಜಕೀಯವಾಗಿ ಟೀಕೆ ಸಾಮಾನ್ಯ. ಪರಸ್ಪರ ಒಬ್ಬರನ್ನೊಬ್ಬರು ಟೀಕಿಸುವುದೇ ಜಾಯಮಾನ. ಹೀಗೆ ಪರಸ್ಪರ ಟೀಕಿಸುವಾಗ ಕೆಲವೊಮ್ಮೆ ವೈಯಕ್ತಿಕ ಟೀಕೆಗಳೂ ನಡೆಯುತ್ತವೆ. ಅಪರೂಪಕ್ಕೊಮ್ಮೆ ಮಿತಿಮೀರಿದ ಬೈಗುಳಗಳ ಟೀಕೆ ಕೂಡ ಇರುತ್ತದೆ. ಆದರೆ ಸಾಮಾನ್ಯವಾಗಿ ಪ್ರಕರಣಗಳು ದಾಖಲಾಗಿ ಶಿಕ್ಷೆಯಾಗುವುದು ಅಪರೂಪ. ಸಾಕಷ್ಟು ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಮೀರಿದ್ದಕ್ಕೋ, ಶಾಂತಿ ಕದಡುವ ಭಾಷಣ ಮಾಡಿದ್ದಕ್ಕೂ ರಾಜಕಾರಣಿಗಳ ಮೇಲೆ ಪ್ರಕರಣಗಳು ದಾಖಲಾಗಿದ್ದಿದೆ. ಆದರೆ ಬಹುಷಃ ರಾಹುಲ್ ಗಾಂಧಿಯ ಮೇಲೆ ದಾಖಲಾಗಿರುವಷ್ಟು ಪ್ರಕರಣಗಳು ಇನ್ಯಾರ ಮೇಲೂ ದಾಖಲಾಗಿಲ್ಲವೇನೊ?

ಈಗಾಗಲೇ ರಾಹುಲ್ ಗಾಂಧಿ ಹಲವು ಪ್ರಕರಣಗಳಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ ನಮ್ಮ ರಾಜ್ಯದ ಕೋಲಾರದಲ್ಲಿ ಭಾಷಣ ಮಾಡುವಾಗ ಅವರು ಈ ಕಳ್ಳರೆಲ್ಲಾ ‘ಮೋದಿ' ಎಂದೇ ಏಕೆ ಹೆಸರಿಟ್ಟುಕೊಳ್ಳುತ್ತಾರೆ ಎಂದಿದ್ದರು. ಆದರೆ ಮೋದಿ ಎಂಬುದು ಕೇವಲ ಹೆಸರಲ್ಲ, ಮೋದಿ ಉಪನಾಮದ ಸಾಕಷ್ಟು ಜನರಿದ್ದಾರೆ. ಒಂದು ಸಮುದಾಯವೇ ಇದೆ. ಅದನ್ನು ರಾಹುಲ್ ಮರೆತಿದ್ದರು. ಮೋದಿ ಸಮುದಾಯದ ಒಬ್ಬರು ಪ್ರಕರಣ ದಾಖಲಿಸಿ, ರಾಹುಲ್ ಗಾಂಧಿಗೆ ಅದರಲ್ಲಿ ಶಿಕ್ಷೆಯೂ ಆಗಿಬಿಟ್ಟಿತು. ಶಿಕ್ಷೆಯಾದ ಪರಿಣಾಮ ಅವರ ಸಂಸತ್ ಸ್ಥಾನದಿಂದಲೂ ಅನರ್ಹರಾದರು. ಸೂರತ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿದೆ. ಈಗ ಗುಜರಾತ್ ಹೈಕೋರ್ಟ್ ನಿಂದ ತುರ್ತಾಗಿ ತಡೆಯಾಜ್ಞೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲವಾದಲ್ಲಿ ಸೂರತ್ ನ್ಯಾಯಾಲಯ ನೀಡಿದ ೩೦ ದಿನಗಳ ಗಡುವು ಮುಗಿಯುತ್ತಿದ್ದಂತೆ, ಜೈಲಿಗೆ ಹೋಗಬೇಕಾಗುತ್ತದೆ.

ಒಬ್ಬ ವ್ಯಕ್ತಿಯನ್ನು ಟೀಕಿಸುವುದಕ್ಕೂ, ಸಮುದಾಯವನ್ನು ಟೀಕಿಸುವುದಕ್ಕೂ ವ್ಯತ್ಯಾಸವಿದೆ. ಹಾಗೆಯೇ ಆರೆಸ್ಸೆಸ್ ವಿರುದ್ಧ ಕೂಡ ರಾಹುಲ್ ಗಾಂಧಿ ಹಲವು ಟೀಕೆ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ನಾಲ್ಕೈದು ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ದಾಖಲಾಗಿದೆ. ಸಾಮಾನ್ಯವಾಗಿ ಮಾತಿನ ಭರದಲ್ಲಿ ಆಡಿದ ಮಾತುಗಳ ಮೇಲೆ ಪ್ರಕರಣ ದಾಖಲಾದರೆ ರಾಜಕಾರಣಿಗಳು ಕ್ಷಮೆ ಕೇಳುವ ಮೂಲಕ ಅದನ್ನು ಇತ್ಯರ್ಥಗೊಳಿಸುತ್ತಾರೆ. ಆದರೆ ರಾಹುಲ್ ಗಾಂಧಿ ಹಲವು ಬಾರಿಯ ತಪ್ಪುಗಳಿಂದಲೂ ಪಾಠ ಕಲಿತಿಲ್ಲ. ರಾಹುಲ್ ಗಾಂಧಿ ತುಂಬಾ ಒಳ್ಳೆಯ ಮಾತುಗಾರ ಅಲ್ಲ, ಹಾಗಾಗಿ ಅವರು ಮಾತಿನಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಇನ್ನಾದರೂ ಅವರು ಮಾತಿನ ಬಗ್ಗೆ, ಟೀಕಿಸುವಾಗ ಬಳಸುವ ಶಬ್ಧಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೧-೦೪-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ