ರಿಪೋರ್ಟಿಂಗ್

ರಿಪೋರ್ಟಿಂಗ್

ಪುಸ್ತಕದ ಲೇಖಕ/ಕವಿಯ ಹೆಸರು
ಪದ್ಮರಾಜ ದಂಡಾವತಿ
ಪ್ರಕಾಶಕರು
ಪ್ರೆಸ್ ಕ್ಲಬ್ ಪ್ರಕಾಶನ, ಕಬ್ಬನ್ ಉದ್ಯಾನ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦.೦೦, ಮುದ್ರಣ: ನವೆಂಬರ್ ೨೦೧೧

ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು ಪತ್ರಿಕೋದ್ಯಮದಲ್ಲಿ ಏನನ್ನು ಸಾಧಿಸಲು ಸಾಧ್ಯ ?

ಇಂಥವರಿಗೆಂದೇ ಗೆಳೆಯ ಪದ್ಮರಾಜ ದಂಡಾವತಿಯವರ ರಿಪೋರ್ಟಿಂಗ್ ಹಾಗೂ ‘ಪತ್ರಿಕಾ ಭಾಷೆ' ಪುಸ್ತಕಗಳಿವೆ. ಈ ಎರಡೂ ಪುಸ್ತಕಗಳು ಎಷ್ಟು ವಿಷಯ ಸಮೃದ್ಧವಾಗಿವೆಯೆಂದರೆ ; ಹೊಸಬರು ಇವುಗಳನ್ನು ಓದಿಕೊಂಡೇ ಪತ್ರಿಕಾ ವೃತ್ತಿಯಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ಪರಿಣತರಾಗಬಹುದು. ಒಬ್ಬ ಗುರು ತನ್ನ ಶಿಷ್ಯನಿಗೆ ಸರಳ ಗತಿಯಲ್ಲಿ ಬೋಧಿಸುವ ವಿಶಿಷ್ಟ ಕೃತಿ ಇದು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪುಸ್ತಕವಿದು" ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ಪದ್ಮಾರಾಜ ದಂಡಾವತಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಅಧಿಕ ಸಮಯ ದುಡಿದವರು. ಪತ್ರಿಕೆಯಲ್ಲಿ ‘ನಾಲ್ಕನೇ ಆಯಾಮ' ಎಂಬ ಅಂಕಣವನ್ನೂ ಬರೆಯುತ್ತಾರೆ. ಅವರು ತಮ್ಮ ಮುನ್ನುಡಿಯಾದ ನೆನೆಕೆಗಳಲ್ಲಿ ಹೇಳುವುದು ಹೀಗೆ “ರಿಪೋರ್ಟಿಂಗ್" ಪುಸ್ತಕವನ್ನು ಓದಿದ ಅನೇಕ ವಿದ್ಯಾರ್ಥಿಗಳು, ಉಪಾಧ್ಯಾಯರು ವೃತ್ತಿಗೆ ಬರುವವರಿಗೆ ಮಾತ್ರವಲ್ಲದೆ, ಈಗಾಗಲೇ ವೃತ್ತಿಯಲ್ಲಿ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ನನಗೆ ಹೇಳಿದ್ದಾರೆ. ಪುಸ್ತಕದ ಪ್ರತಿಗಳು ಲಭ್ಯವಿಲ್ಲದ ಕಾರಣ ಯಾವಾಗ ಮರು ಮುದ್ರಣ ಆಗುತ್ತದೆ ಎಂದು ವಿಚಾರಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಈಗ ತೀವ್ರ ಪ್ರಗತಿ ಆಗುತ್ತಿದ್ದು ರಾಜ್ಯಾದ್ಯಂತ ಮಾಧ್ಯಮ ಕಾಲೇಜುಗಳು ಆರಂಭವಾಗುತ್ತಿರುವುದರಿಂದ ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ವೃತ್ತಿಯ ‘ಪ್ರಾಯೋಗಿಕ’ ಮಾಹಿತಿ ಕೊಡುವ ಪುಸ್ತಕ ಇದು ಎಂಬುದು ನನ್ನ ಭಾವನೆ. ವೃತ್ತಿಯಲ್ಲಿ ೩೦ ವರ್ಷ ಕೆಲಸ ಮಾಡಿರುವ ನನಗೆ ಈ ಕೊರತೆಯನ್ನು ತುಂಬಿದ ಧನ್ಯತೆಯೂ ಇದೆ. ನಾನು ಈ ಪುಸ್ತಕವನ್ನು ಪಠ್ಯಪುಸ್ತಕದ ಹಾಗೆ ಉದ್ದೇಶಪೂರ್ವಕವಾಗಿಯೇ ಬರೆದಿಲ್ಲ. ಇದು ಒಂದು ಸಂದರ್ಭ ಗ್ರಂಥ ಎಂದೇ ವಿದ್ಯಾರ್ಥಿಗಳು ಓದಬೇಕು. ವಿದ್ಯಾರ್ಥಿಗಳು ಪದವಿ ಪೂರೈಸಿ ಹೊರಗೆ ಬರುವಾಗ ಅವರು ಎದುರಿಸುವ ಸಮಸ್ಯೆಗಳನ್ನು ನಿವಾರಿಸುವುದು ಈ ಪುಸ್ತಕದ ಉದ್ದೇಶ. ಅದು ಈಡೇರಿದರೆ ನನ್ನ ಶ್ರಮ ಸಾರ್ಥಕ. ಭಾವೀ ಪತ್ರಕರ್ತರನ್ನು ಉದ್ದೇಶಿಸಿ ಬರೆದ ಅಂಕಣವನ್ನು ಈ ಪುಸ್ತಕದಲ್ಲಿ ಸೇರಿಸಿದ್ದೇನೆ.” ಎಂದಿದ್ದಾರೆ. 

ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಅವರು ತಮ್ಮ ಮನದಾಳದ ಮಾತುಗಳನ್ನು ಪ್ರಕಾಶಕರ ನೆಲೆಯಲ್ಲಿ ಹೇಳಿಕೊಂಡಿದ್ದಾರೆ. ಪುಸ್ತಕದಲ್ಲಿ ಪತ್ರಿಕೋದ್ಯಮದ ಬಗ್ಗೆ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ವಿವರಗಳನ್ನು ದಂಡಾವತಿಯವರು ನೀಡುತ್ತಾ ಹೋಗಿದ್ದಾರೆ. ವರದಿಗಾರ ಹಾಗೂ ಉಪ ಸಂಪಾದಕರಲ್ಲಿ ಹೆಚ್ಚುಗಾರಿಕೆ ಯಾರದ್ದು? ಎಂಬ ಅಧ್ಯಾಯದಿಂದ ಪ್ರಾರಂಭಿಸಿ ವರದಿಗಾರಿಕೆ, ವರದಿಗಾರ ಮತ್ತು ಆತನ ಗುಣಗಳು, ಸುದ್ದಿ, ಪತ್ರಿಕಾಗೋಷ್ಟಿ, ವಿಧಾನ ಮಂಡಲದ ಕಲಾಪ ವರದಿ, ಅಪರಾಧ ಸುದ್ದಿ, ಮಾನವೀಯ ವರದಿ, ಪರಿಸರ ಮತ್ತು ಅಭಿವೃದ್ಧಿ, ಪತ್ರಿಕಾ ಕಾನೂನುಗಳು, ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ, ನೀತಿ ಸಂಹಿತೆ, ಗಿಫ್ಟು-ಭೋಜನ ಕೂಟ ಹಾಗೂ ಗುಂಡು ಪಾರ್ಟಿ ಹೀಗೆ ವರದಿಗಾರನೊಬ್ಬನಿಗೆ ಅವಶ್ಯವಾಗಿರುವ ಎಲ್ಲಾ ವಿಭಾಗಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಈ ಎಲ್ಲಾ ಅಧ್ಯಯಗಳ ವಿವರಗಳನ್ನು ಪರಿವಿಡಿಯಲ್ಲಿ ನೀಡಿದ್ದರೆ ಹುಡುಕಲು ಬಹಳ ಸುಲಭವಾಗುತ್ತಿತ್ತು. ಪರಿವಿಡಿ ಇಲ್ಲದಿರುವುದು ಒಂದು ಕೊರತೆಯಾಗಿದೆ. 

ಸುಮಾರು ೧೩೦ ಪುಟಗಳ ಈ ಪುಸ್ತಕವನ್ನು ಪದ್ಮರಾಜ ದಂಡಾವತಿ ಅವರು ‘ದಾರುಣ ಬಡತನದಲ್ಲೂ ವೈಯಕ್ತಿಕ ಘನತೆಯನ್ನು ಉಳಿಸಿಕೊಂಡ ತಮ್ಮ ಅವ್ವ ಮತ್ತು ಅಪ್ಪ’ನಿಗೆ ಸಮರ್ಪಿಸಿದ್ದಾರೆ. ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುವ ಕನಸು ಕಾಣುವ ಯುವಕ-ಯುವತಿಯರಿಗೆ ಈ ಪುಸ್ತಕ ಒಂದು ಗೈಡ್ ಆಗಬಹುದು.