ರಿಯಲ್ ಎಸ್ಟೇಟ್ ಬೂಮ್!
ನನ್ನ ಮೊಬೈಲ್ ಫೋನಿಗೆ ಮತ್ತು ಈ-ಮೇಯ್ಲಿಗೆ ರಿಯಲ್ ಎಸ್ಟೇಟ್ ಏಜೆನ್ಸಿಗಳಿಂದ ಹಲವಾರು ಕಾಲ್‌ಗಳು ಮೇಯ್ಲ್‌ಗಳು ಬರುತ್ತವೆ. ಅವನ್ನು ಉಪೇಕ್ಷಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಎಲ್ಲಾದರೂ ಯಾವುದಾದರೂ ಕಾರ್ಯಕ್ರಮ/ಸಮಾರಂಭಗಳಲ್ಲಿ ಬಂಧು - ಮಿತ್ರರು - ಸಹೋದ್ಯೋಗಿಗಳು ಇತ್ಯಾದಿ ಪರಿಚಿತರ/ಅಪರಿಚಿತರ ಗುಂಪುಹರಟೆಗಳನ್ನು ಕೇಳಿಸಿಕೊಳ್ಳುತ್ತಿರುವಾಗ, ಮಾತು ಹೇಗೋ ಬೆಂಗಳೂರಿನ ರಿಯಲ್ ಎಸ್ಟೇಟ್ ಕಡೆ ಹೊರಳದೇ ಇರದು. ತಾವು ಕಂಡ ಅಥವಾ ಕೊಂಡ ಆಸ್ತಿ ಇತ್ತೀಚಿನ ಎಷ್ಟು ವರ್ಷಗಳಲ್ಲಿ ಎಷ್ಟು ಪಟ್ಟು ಹೆಚ್ಚಿದೆ ಎಂದು ಯಾರಾದರೂ ಹೇಳುವುದು ತೀರಾ ಸಾಮಾನ್ಯ. ಆಗೆಲ್ಲಾ ೧೯೯೦ರ ದಶಕದ ಕೊನೆಯ ಭಾಗದಲ್ಲಿ ಅಮೇರಿಕಾದಲ್ಲಿ ಷೇರು ಮಾರ್ಕೆಟ್ಟಿನ ಬಗ್ಗೆ ಹೀಗೇ ಕೇಳುತ್ತಿದ್ದುದು ಮತ್ತು ನಂತರ ೨೦೦೦ರ ದಶಕದ ಮಧ್ಯಭಾಗದಲ್ಲಿ ಅಲ್ಲಿನ ರಿಯಲ್ ಎಸ್ಟೇಟ್ ಬಗ್ಗೆಯೂ ಹೀಗೇ ಕೇಳುತ್ತಿದ್ದುದು ನೆನೆಪಿಗೆ ಬರುತ್ತದೆ.
ಇಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದ ಆಗುಹೋಗುಗಳನ್ನು ಅಮೇರಿಕಾದ ಹೌಸಿಂಗ್ ಕ್ರೈಸಿಸ್‌ಗೆ ಕಾರಣವಾದ ಅಕ್ರಮಗಳ ಅವ್ಯವಸ್ಥೆಗಳ ಜೊತೆ ವಸ್ತುನಿಷ್ಠವಾಗಿ ಹೋಲಿಸಿಲು ನನಗೆ ಇಲ್ಲಿನ ತಿಳಿವಳಿಕೆ ಅಷ್ಟು ಇಲ್ಲ. ಆದರೆ ಈ ಕೆಳಗಿನ ವಿಡಿಯೋ ರಿಪೋರ್ಟ್‌ನಲ್ಲಿ ಇರುವ ಕಥನ ಸಾಕಷ್ಟು ವಾಸ್ತವಿಕವಾಗಿದೆ ಎಂದು ಹೇಳಬಲ್ಲೆ. (ಇಂತಹ ಹಲವು ರಿಪೋರ್ಟ್‌ಗಳು ಅಂತರಜಾಲದಲ್ಲಿ ಸಿಗಬಹುದು.)
http://marketplace.publicradio.org/features/anatomy/foreclosure/lot-354-video-documentary.html
ಈ ದುರಂತವನ್ನು ಹಲವು ಅಧ್ಯಾಯಗಳಾಗಿ ಚಿತ್ರಿಸಲಾಗಿದೆ. ಈ ರಿಪೋರ್ಟಿನ ವರದಿಗಾರ ಹೇಳುವ ‘ಫ್ಲಿಪ್ಪಿಂಗ್’ ಅಂದರೆ ಒಂದು ಆಸ್ತಿಯನ್ನು ಕೊಂಡು, ವಾಸಿಸದೇ, ಕೂಡಲೇ ಲಾಭಕ್ಕಾಗಿ ಮಾರುವ ದಂಧೆ. ಬೆಂಗಳೂರಿನ (ಅಥವಾ ಇಡೀ ಭಾರತದ) ರಿಯಲ್ ಎಸ್ಟೇಟ್ ಕಥೆ ಈ ವರದಿಯಲ್ಲಿ ಇರುವಂತೆ ಆಗಲಾರದೇನೊ! ಇತ್ತೀಚಿನ ಬೆಂಗಳೂರು ರಿಯಲ್ ಎಸ್ಟೇಟ್ ಬೆಳವಣಿಗೆಯ ಕಥೆಗೂ ಮೇಲಿನ ರಿಪೋರ್ಟ್‌ನಲ್ಲಿನ ‘ಲಾಟ್ ೩೫೪’ ಪ್ರತಿನಿಧಿಸುವ ಒಟ್ಟಾರೆ ಪರಿಸ್ಥಿತಿಗೂ ಯಾವ ಅಂಶಗಳಲ್ಲಿ ಸಾಮ್ಯವಿದೆ? ಯಾವ ಅಂಶಗಳಲ್ಲಿ ವಿಭಿನ್ನತೆ ಇದೆ?
ಪ್ರಭು