ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...?

ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...?

ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲಿಟಿ ಶೋಗಳನ್ನು ನೋಡಿದಾಗ ಆಗುತ್ತಿದೆ. 

ಇದು ಸರಿಯೇ ಅಥವಾ ತಪ್ಪೇ ? ಇದರ ಪರಿಣಾಮ ಸಮಾಜದ ಮೇಲೆ ಉತ್ತಮವಾಗುತ್ತದೆಯೇ ಅಥವಾ ಕೆಟ್ಟದ್ದಾಗುತ್ತದೆಯೇ ? ಸಾಮಾನ್ಯವಾಗಿ ಸಂಪ್ರದಾಯವಾದಿಗಳು ಮುಕ್ತತೆಯ ವಿರೋಧಿಗಳು ಮತ್ತು ಪ್ರಗತಿಪರರು ಮುಕ್ತತೆಯ ಪರವಾಗಿರುವವರು.  ಹಾಗೆಯೇ ಅನೇಕ ಇತರ ವಿಷಯಗಳಲ್ಲಿ ಇಬ್ಬರಲ್ಲಿಯೂ ಸಾಕಷ್ಟು ಗೊಂದಲಗಳಿವೆ. ಆದರೆ ರಿಯಾಲಿಟಿ ಶೋಗಳ ಮುಕ್ತತೆ ಕೃತಕ - ಅಸಹಜ - ಮನರಂಜನೆ ಮತ್ತು ವಾಣಿಜ್ಯೀಕರಣದ ಉದ್ದೇಶ ಹೊಂದಿರುತ್ತದೆ. ಇಲ್ಲಿನ ಮುಕ್ತತೆಯಲ್ಲಿ ವೈಚಾರಿಕ ಚಿಂತನೆಗಿಂತ ಪ್ರದರ್ಶನ ಮನೋಭಾವವೇ ತುಂಬಿರುತ್ತದೆ.

ಇಲ್ಲಿ ಮತ್ತೊಂದು ಗಮನಸೆಳೆಯುವ ವಿಷಯವೆಂದರೆ ಈ ಮುಕ್ತತೆ ಕೇವಲ ಮನರಂಜನೆಗೆ ಮಾತ್ರ ಸೀಮಿತ. ಅದನ್ನು ನಿಜ ಬದುಕಿನಲ್ಲಿ ಅಥವಾ ಸಮಾಜದಲ್ಲಿ ಅಳವಡಿಸಿಕೊಂಡರೆ ಸಾಮಾನ್ಯ ಜನ ಇಷ್ಟಪಡುವುದಿಲ್ಲ. ಅಷ್ಟೇ ಏಕೆ ರಿಯಾಲಿಟಿ ಶೋಗಳ ಪಾತ್ರಧಾರಿಗಳು ಮತ್ತು ತೀರ್ಪುಗಾರರು ಸಹ ಒಪ್ಪುವುದಿಲ್ಲ. ಈ ನಡವಳಿಕೆ ಸಾಮಾನ್ಯರ ಜೀವನದಲ್ಲಿ ಅಶ್ಲೀಲ ಅಥವಾ ಅತಿರೇಕದಂತೆ ಕಾಣುತ್ತದೆ. 

ವಾಸ್ತವ ಮತ್ತು ಭ್ರಮೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಸಾಮಾನ್ಯ ಜನ ಸೋಲುತ್ತಾರೆ. ಆಗ ಈ ರೀತಿಯ ಕಾರ್ಯಕ್ರಮಗಳ ದುಷ್ಪರಿಣಾಮ ಗೋಚರಿಸುತ್ತದೆ. ಮೇಲ್ನೋಟಕ್ಕೆ ಮತ್ತು ತಕ್ಷಣಕ್ಕೆ ಇದು ಕಾಣಬರುವುದಿಲ್ಲ. ಆದರೆ ನಿಧಾನವಾಗಿ ಮನಸ್ಸುಗಳಲ್ಲಿ ಇದು ಬೇರು ಬಿಡತೊಡಗುತ್ತದೆ. ವಾರಾಂತ್ಯದಲ್ಲಿ ರಾತ್ರಿಯ ವೇಳೆ ಈ ಕಾರ್ಯಕ್ರಮಗಳು ಪ್ರಸಾರವಾಗುವುದರಿಂದ ಇದರ ವೀಕ್ಷಕರು ಜಾಸ್ತಿ ಮತ್ತು ಹೆಚ್ಚು ಜನಪ್ರಿಯತೆ ಪಡೆದಿವೆ. ಬಹುತೇಕ ಮನೆಗಳ‌ ಟಿವಿಗಳಲ್ಲಿ ಇದೇ ಕಾರ್ಯಕ್ರಮಗಳನ್ನು ನೋಡುತ್ತಿರುತ್ತಾರೆ.

ಸಂಗೀತ, ನೃತ್ಯ, ಜ್ಞಾನಾರ್ಜನೆಯ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳು ಸ್ವಾಗತಾರ್ಹ. ಆದರೆ ಅದಕ್ಕಿಂತ ಭಿನ್ನವಾದ ಕೆಲವು ಕಾರ್ಯಕ್ರಮಗಳು ಒಂದು ರೀತಿಯಲ್ಲಿ ಅಪಾಯಕಾರಿ ಹಂತವನ್ನು ದಾಟಿ ಮಿತಿಮೀರಿದ ಪ್ರಮಾಣದಲ್ಲಿ ಮುಂದುವರೆದಿವೆ. ಹಾಸ್ಯ ಮನರಂಜನೆಯ ಹೆಸರಿನಲ್ಲಿ ಸಮಾಜದ ವಿರುದ್ಧ ಮೌಲ್ಯಗಳಿಗೆ ಮಾನ್ಯತೆ ದೊರೆಯುವಂತೆ ಮಾಡುತ್ತಿವೆ.

ಹೆಣ್ಣು ಗಂಡಿನ ಸಂಬಂಧಗಳನ್ನು ಬಿಂಬಿಸುವ ಅವರ ವರ್ತನೆಗಳನ್ನು ಪ್ರದರ್ಶಿಸುವ ಸನ್ನಿವೇಶಗಳಲ್ಲಿ ಈ ಮುಕ್ತತೆ ಹೆಚ್ಚು ವ್ಯಾಪಕವಾಗಿದೆ. ಇನ್ನೂ ಮದುವೆಯಾಗದ, ಮದುವೆಯ ಬಗ್ಗೆ ಕನಸುಗಳನ್ನು ಕಾಣುತ್ತಿರುವ ಯುವಕ ಯುವತಿಯರ ಮನಸ್ಸುಗಳಲ್ಲಿ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಏಕೆಂದರೆ ಸಾಮಾನ್ಯ ಮನುಷ್ಯರ ದೇಹ ಮತ್ತು ಮನಸ್ಸುಗಳ ವಾಸ್ತವ ಪರಿಸ್ಥಿತಿ ಇಲ್ಲಿಗಿಂತ ಬೇರೆಯದೇ ಆಗಿರುತ್ತದೆ. ಈ ಕಾಲ್ಪನಿಕ ಲೋಕದ ಸನ್ನಿವೇಶಗಳು ವಾಸ್ತವವನ್ನು ಭ್ರಮೆಯಾಗಿಸಿ ವಂಚಿಸುತ್ತವೆ.

ನೋಡಲು‌ ಹಾಸ್ಯ ಮತ್ತು ಮನರಂಜನೆ ಎನಿಸಿದರೂ ಮನದಾಳದಲ್ಲಿ ನಮ್ಮನ್ನೇ ನಾವು ಪಾತ್ರವಾಗಿಸಿ ಆ ದೃಶ್ಯಗಳನ್ನು ಕಲ್ಪಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇವೆ. ಆದ್ದರಿಂದ ಹೆಚ್ಚು ಈ ರೀತಿಯ ರಿಯಾಲಿಟಿ ಶೋಗಳನ್ನು ನೋಡುವವರು ದಯವಿಟ್ಟು ಅದನ್ನು ನಕ್ಕು ಅಲ್ಲಿಯೇ ಮರೆತು ಬಿಡಿ. ನಿಜವಾದ ರಿಯಾಲಿಟಿ ಶೋ ವಾಸ್ತವ ಜಗತ್ತಿನ ಅಪ್ಪ ಅಮ್ಮ ಸಂಬಂಧಿಕರು ಸುತ್ತಮುತ್ತಲಿನ ಜನರುಗಳ ಜೀವನಶೈಲಿಯೇ ಆಗಿರುತ್ತದೆ. ಈ ಸೆಲೆಬ್ರಿಟಿಗಳದು ರಿಯಾಲಿಟಿ ಶೋ ಅಲ್ಲ ರಿಯಾಲಿಟಿ ಹೆಸರಿನ ಡೂಪ್ಲಿಕೇಟ್ ಶೋಗಳು. ಅದರ ಬಗ್ಗೆ ಎಚ್ಚರಿಕೆಯಿಂದಿರಿ. ಅವರನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳೋಣ.

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ