ರೀ Start

“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ, ಗೆದ್ದವರ ರಹಸ್ಯ, ಅದರಲ್ಲಿಯೂ ಸೋತು ತಮ್ಮನ್ನೇ
RE-START ಮಾಡಿಕೊಂಡು ಗೆಲ್ಲುವ ಸಾಹಸದ ಕತೆಗಳಲ್ಲಿ ಒಂದು ಥ್ರಿಲ್, ಮಾಂತ್ರಿಕತೆ ಇದೆ. ಸಾಮಾನ್ಯವಾಗಿ ಗೆದ್ದವರ ಸಾಹಸ ಕತೆಗಳು, ವಿಜಯಶಾಲಿಯಾದವರ ಸಾಹಸಯಾತ್ರೆ ಎಲ್ಲೆಡೆ ಸೌಂಡ್ ಮಾಡುವುದು ಸಾಮಾನ್ಯ. ಸೋತು ಗೆದ್ದವರ ಕತೆಗಳು ನಮ್ಮನ್ನು ಯಾವತ್ತೂ ರೋಮಾಂಚನಗೊಳಿಸುತ್ತದೆ.
ಅನುಮಾನ, ಅವಮಾನ, ಅಡೆತಡೆ, ಆಲಸ್ಯ, ಮೋಸ, ನೋವು, ತಪ್ಪು, ಹಣೆಬರಹ, ಕಠಿಣ ಸಮಸ್ಯೆಗಳು, ಭಯ ಎಲ್ಲವನ್ನೂ ಬದಿಗಿಟ್ಟು ಛಲದಿಂದ RE-START ಮಾಡಿಕೊಳ್ಳುತ್ತಾ ಗೆಲ್ಲಲು ಹೊರಟವರ ಯಶಸ್ಸಿನ ಸೀಕ್ರೆಟ್ ಇದರಲ್ಲಿವೆ. ಸೋತವರಿಗೆ ಸಾಂತ್ವನ ನೀಡಿ, ಅವಮಾನ ಪಟ್ಟವರಿಗೆ, ಸೋಲು ಕಂಡವರಿಗೆ, ನೋವು ಉಂಡವರಿಗೆ, ಪ್ರೀತಿ ಬಿತ್ತಿ, ಜ್ಞಾನ ಬೆಳೆಸಿ ಶಕ್ತಿ ತುಂಬುವ, ವಿಜಯಶಾಲಿಗಳಾಗಲು ಮುನ್ನುಗ್ಗುವವರಿಗೆ ಗುರಿ ತೋರಿಸುವ ಒಂದು ಪ್ರಯತ್ನವಿದೆ. ಜೀವನದಲ್ಲಿ ಮುನ್ನುಗ್ಗಿ, ಈ ಪುಸ್ತಕವನ್ನು ಒಮ್ಮೆ ಓದಿ ನೋಡಿ. ಸೋಲು ಪ್ರಕೃತಿಯ ನಿಯಮವಾದರೆ, ಇಲ್ಲಿ ಎಲ್ಲವೂ ಸವಾಲು ಎಂದು ಮುನ್ನುಗ್ಗುತ್ತಾ ಆಗಾಗ ನಮ್ಮನ್ನೇ ನಾವು ರೀಸ್ಟಾರ್ಟ್ ಮಾಡಿಕೊಳ್ಳುತ್ತಾ, ಸಾಧನೆ ಮಾಡಲು ಪ್ರಶ್ನಿಸಿಕೊಳ್ಳುತ್ತಾ, ಏಕೆ ಸಾಧ್ಯವಿಲ್ಲವೆಂದು ಕೇಳಿಕೊಳ್ಳುತ್ತಾ, ನಿರಂತರ ಹೋರಾಡುವುದು ನಮ್ಮ ಕರ್ತವ್ಯ. ಆಗ ಯಶಸ್ಸು ಗ್ಯಾರಂಟಿ!” ಎನ್ನುವುದು ಲೇಖಕರಾದ ವಾಗೀಶ ಕಟ್ಟಿ ಅವರ ಅಟಲ ಮಾತುಗಳು.
“ಹಾಗೇ ಸುಮ್ಮನೆ ನನ್ನ ಹೆಸರು ವಾಗೀಶ ರಘೋತ್ತಮ ಕಟ್ಟಿ. ಬೆಳೆದದ್ದು, ಕಲಿತದ್ದು, ಓದಿಕೊಂಡಿದ್ದು, ನಾಟಕಗಳನ್ನು ಮಾಡಿದ್ದು ಎಲ್ಲವೂ ಗೌರಿಬಿದನೂರು. ಓದು ಮುಗಿಸಿ ಹೆಚ್ಚಿನ ಓದು ಮತ್ತು ಕಂಪ್ಯೂಟರ್ ಕಲಿಕೆಗಾಗಿ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕಾರ್ಪೊರೇಟ್ ಕಂಪನಿಯಲ್ಲಿ ಕಾಲಿಟ್ಟಮೇಲೆ, ಕೈಗೆ ಸಿಕ್ಕಿದ್ದು ಮೌಸ್, ಕೀ ಬೋರ್ಡ್, ಕಣ್ಣಿಗೆ ಕಾಣಿಸಿದ್ದು ಸಾಫ್ಟ್‌ವೇರ್ ಮಾನಿಟರ್. ಸಾಫ್ಟ್‌ವೇರ್ ಕಂಪನಿಯಿಂದ ಇಡೀ ಜಗತ್ತನ್ನು ಸುತ್ತಿ ಬಂದಿದ್ದರೂ, ಅಮೆರಿಕದಲ್ಲಿ ಒಂದಷ್ಟು ವರ್ಷ ವಾಸವಿದ್ದರೂ, COVID ನಂತರ ಕಾಡಿದ್ದು ದೀರ್ಘ ಏಕಾತಾನತೆ. ನಮಗೆ ಜೀವನ ತುಂಬಾ ಬೋರು ಹೊಡೆಸಿ, ಬದುಕು ಬರಡಾದಾಗ ಮಾತ್ರ ನಾವು ಹೊಸದೇನನ್ನಾದರೂ ಮಾಡಲು ನಮ್ಮನ್ನು ನಾವು RE-START ಮಾಡಿಕೊಂಡು ಹೊಸ ಕನಸುಗಳೊಂದಿಗೆ ಜೀವನವನ್ನು ಮತ್ತೆ ಶುರುಮಾಡುತ್ತೇವೆ.
ಒಂದಷ್ಟು ಗ್ಯಾಪ್ ಆದರೂ ಓದಿಕೊಂಡಿದ್ದ ಒಂದಷ್ಟು ಪುಸ್ತಕಗಳು, ಫೇಸ್‌ಬುಕ್‌ನಲ್ಲಿ ಬರೆದ ಕೆಲವು ಬರಹಗಳು ಮತ್ತೆ ಮೂಡಿದ ರಂಗಭೂಮಿಯ ಆಸಕ್ತಿ, ನೋಡಿದ ಮತ್ತು ನಟನೆ ಮಾಡಿದ ಹಲವು ನಾಟಕಗಳು. ಮಕ್ಕಳಿಗೆ ಬರೆದು ಆಡಿಸಿದ ನಾಟಕಗಳು, ಬೀದಿ ನಾಟಕಗಳು, ಬರೆದು ನಟಿಸಿದ ಒಂದಷ್ಟು ಕಿರು ಚಿತ್ರಗಳು, ನಟನೆ ಮಾಡಿದ ಕೆಲವು ಸಿನಿಮಾಗಳು ಹಾಗೂ ಸಿನಿಮಾ ಎಂಬ ಮಾಯಾ ಪರದೆಯ ಕನಸು. ಇವೆಲ್ಲವೂ ಕೆಲವು ವರುಷಗಳಿಂದ ಟೇಬಲ್ ಟೆನಿಸ್ ಬಾಲಿನಂತೆ ಜಾಗೃತವಾಗಿ ಸದಾ ಪುಟಿದೇಳುತ್ತಿರುವ ಕನಸು, ಏನಾದರೂ ಮಾಡಬೇಕೆನ್ನುತ್ತಿರುವ ಮನಸು, ಹಂಬಲ ನನ್ನೊಳಗೇ ಈ ಲೈಫ್ ಅಲ್ಲಿ ಎಲ್ಲವನ್ನೂ RE-START ಮಾಡಿಕೊಂಡು ಹೊಸ ಉತ್ಸಾಹವನ್ನು ತುಂಬಿದೆ. ಕೆಲವು ವರುಷಗಳ ಹಿಂದಷ್ಟೇ ಕನಸು ಕಂಡು ಸಾಧ್ಯವಾಗಿಸಲು ಪ್ರಾರಂಭಿಸಿ ಹೊರಟವನಿಗೆ, ಏನೂ ಇಲ್ಲದಿದ್ದರೂ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ ಎನ್ನುವುದಾದರೆ, ಹಾಗೇ ಸುಮ್ಮನೆ ಈ ರೀತಿಯ ಕನಸುಗಳನ್ನು ಸಾಧ್ಯಮಾಡಲು ಆಗಾಗ RE-START ಮಾಡಿಕೊಳ್ಳಲು ಇಚ್ಛಿಸುವ ಎಲ್ಲರಿಗೂ ಸಾಧ್ಯವಿದೆ ಅಲ್ಲವೇ? ಸೋಲುಗಳು ನಮ್ಮೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬರುವ ಒಂದು ಸುವರ್ಣಾವಕಾಶ ಮತ್ತು ಯಾವುದೇ ಕ್ಷೇತ್ರವಿರಲಿ ಯಶಸ್ಸು ಅನ್ನುವುದು ಮೈದಾನವಲ್ಲ ಅದೊಂದು ಶಿಖರ. ಅತಿ ಎಚ್ಚರಿಕೆಯಿಂದ ಒಂದೊಂದೇ ಮೆಟ್ಟಿಲುಗಳನ್ನು ಏರಬೇಕು.
ಎಲ್ಲರ ಬದುಕಿನಲ್ಲಿಯೂ ನಡೆಯುವ ಒಂದಲ್ಲ ಒಂದುರೀತಿಯ ಸಹಜ ಗೊಂದಲಗಳು, ಸೋತವರ ಕತೆಗಳು, ಗೆದ್ದವರ ಸಾಹಸಗಳು, ಸೋತು ಗೆಲ್ಲುವ ಪ್ರವೃತ್ತಿಯ ಮತ್ತು ಸೋಲಿನಲ್ಲಿಯೂ ಕಾಣುವ ಕೋಲ್ಕಿಂಚಾಗಿ ನಾನು ಎಲ್ಲವನ್ನೂ ಈ ಲೈಫ್ ಅಲ್ಲಿ ಪಾಸಿಟಿವ್ ಆಗಿಯೇ ಸ್ವೀಕರಿಸುತ್ತೇನೆ. ಯಾರಾದರೂ ಮೋಸಮಾಡಿದರೂ, ತೆಗಳಿದರೂ ಅದರಲ್ಲಿಯ ಒಳ್ಳೆಯದನ್ನು ತಕ್ಷಣ ತೆಗೆದುಕೊಂಡು ಮುನ್ನಡೆಯುತ್ತೇನೆ. ಏಕೆಂದರೆ ಯಾರು ನಮ್ಮ ಬಗ್ಗೆ ಏನೇ ಹೊಗಳಿದರೂ, ಮೂದಲಿಸಿದರೂ, ನಮ್ಮ ಬಗ್ಗೆ ನಮಗೆ ಚೆನ್ನಾಗಿ ತಿಳಿದಿರುತ್ತದೆ ಮತ್ತು ಆ ನಮ್ಮನ್ನು ಹಾಗೇ ಸುಮ್ಮನೆ ಈ ಲೈಫ್ ಅಲ್ಲಿ ಬದಲಾಯಿಸಿಕೊಳ್ಳುವ, RE-START ಮಾಡಿಕೊಳ್ಳುವ ಶಕ್ತಿಯೂ ನಮ್ಮೊಳಗೇ ಅಡಗಿ ಕುಳಿತಿದೆ. ಜರಿದ ಜನರೆದುರು ಗಟ್ಟಿಯಾಗಿ ನಿಲ್ಲಬೇಕು ಅಂದರೆ ಬಂಡೆಯಾಗಬೇಕು, ಅದಕ್ಕೇ ಅಲ್ಲವೇ ಆ ದೇವರೂ ಬಂಡೆಯಾಗಿರೋದು. ಇಲ್ಲಿ ಯಾವ ಸಮಸ್ಯೆಯೂ . Yes, 'RE-START' ಎನ್ನುವುದೇ ಮಂತ್ರ. ತೊಂದರೆ, ಕಷ್ಟ, ಸವಾಲುಗಳೆಲ್ಲವನ್ನೂ ಎದುರಿಸುತ್ತಾ ನಮ್ಮನ್ನೇ ನಾವು RE-START ಮಾಡಿಕೊಳ್ಳುತ್ತಾ, ಸಕಾರಾತ್ಮಕವಾಗಿ ಸ್ವೀಕರಿಸುತ್ತ ಮುನ್ನಡೆದರೆ, ನಮ್ಮನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲ... ನಗುನಗುತ RE-START ಮಾಡಿಕೊಳ್ಳುತ್ತಿರಿ, ಮುನ್ನುಗ್ಗಿ, All the best!
ಒಂದು ಕತೆಯ ಪುಸ್ತಕ ಬರೆಯಬೇಕೆಂದುಕೊಂಡು ಸ್ನೇಹಿತರ ಬಳಿ ಮಾತನಾಡುತ್ತಿದ್ದೆ. ಜಮೀಲ್ ಸಾರ್ ಮೂರು ತಿಂಗಳ ಹಿಂದೆ ಒಂದು ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ನನಗೆ ಮೋಟಿವೇಷನ್ ಬಗ್ಗೆ ಪುಸ್ತಕ ಬರೆಯಿರಿ ಅದನ್ನು ನಾನು ಪಬ್ಲಿಶ್ ಮಾಡುತ್ತೇನೆ ಎಂದರು. ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ಹಾಗೆ. So, ಇಂದು ಈ "RE-START' ಪುಸ್ತಕ ನಿಮ್ಮ ಕೈಲಿದೆ ಎಂದರೆ ಅದಕ್ಕೆ ಮೂಲ ಕಾರಣವೇ ಸಾವಣ್ಣ ದ ಜಮೀಲ್ ಸಾರ್, ಈಗ ನಿಮ್ಮ ಕೈಲಿ ಈ 'RE-START' ಪುಸ್ತಕ. ಓದಿ ಇಷ್ಟವಾದರೆ ಏನು ಇಷ್ಟವಾಯಿತೆಂದೂ ಅಥವಾ ಇಷ್ಟವಾಗದಿದ್ದರೂ ಏಕೆ ಎಂದು ಫೋನ್ ಮಾಡಿ ತಿಳಿಸುವಿರೆಂದು ಹಾಗೇ ಸುಮ್ಮನೆ ನಂಬಿರುವೆ. ಸೋಲು ಪ್ರಕೃತಿಯ ನಿಯಮ, ಹೋರಾಟ ನಮ್ಮ ಕರ್ತವ್ಯ. ಬದುಕಿನಲ್ಲಿ RE-START ಮಾಡಿಕೊಳ್ಳುತ್ತಾ ಹೋರಾಡಲು ಹೊರಟ ಅದಮ್ಯ ಚೇತನಗಳು ಯಶಸ್ಸು ಕಾಣಲೆಂದು ನನ್ನ ಮನದಾಳದ ಆಸೆ, ಹಾರೈಕೆ. ಹಾಗೇ ಸುಮ್ಮನೆ ಈ ಲೈಫ್ ಅಲ್ಲಿ ಒಳ್ಳೆಯದಾಗಲಿ.” ಎಂದು ತಮ್ಮ ಮಾತುಗಳಲ್ಲಿ ವಾಗೀಶ ಕಟ್ಟಿಯವರು ಬರೆದುಕೊಂಡಿದ್ದಾರೆ.