ರೂಪಕಗಳ ರೂಪ ಬದಲಾಗಬೇಕಿದೆ!

ರೂಪಕಗಳ ರೂಪ ಬದಲಾಗಬೇಕಿದೆ!

ಕವನ
ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ: ಒಂದಕ್ಕೊಂದು ತಬ್ಬಿಕೊಂಡಂತೆ ಎರಡೂ ಒಂದಾಗಿ ಹೋದಂತೆ. ವೇಗ ಕಳೆದುಕೊಂಡಾಗ ಮುಚ್ಚಿಟ್ಟ ಸತ್ಯವೊಂದು ತೋರಿದೆ; ಮೂರನೇ ತಂತಿಯೊಂದು ಕಂಡಿದೆ! ರೂಪರೇಖೆಗಳೇ ಬದಲಾಗುವ ಈ ಹೊತ್ತಿನಲ್ಲಿ ರೂಪಕಗಳ ರೂಪ ಬದಲಾಗಬೇಕಿದೆ ರೂಹೂ ಬದಲಾಗಬೇಕಿದೆ. ಯತಿಗಳು ಒತ್ತುವ ಬಿಸಿಮುದ್ರೆ ಪೋಸ್ಟ್ ಆಫೀಸಿನ ಕರಿಮುದ್ರೆ ಭರತನಾಟ್ಯದ ಬೆರಳಮುದ್ರೆ - ತ್ರಿಭುಜದ ಈ ಮೂರು ಬಿಂದುಗಳಿಗೂ ಪೈಥಾಗೊರಸ್ ಪ್ರಮೇಯಕ್ಕೂ ಸಂಬಂಧವಿಲ್ಲ ಆದರೆ ಯಾವತ್ತೋ ಅವಳ ಹಣೆಗೆ ಒತ್ತಿದ ತುಸುಮುದ್ರೆ ಮಾತ್ರ ತ್ರಿಭುಜ ಸೀಳಿದ ರೇಖೆಯಾಗಿ ಮುನ್ನುಗ್ಗಿದೆ; ಏಳೂ ಬಣ್ಣ ಒಟ್ಟಿಗೆ ಚಿಮ್ಮಿಸಿದೆ; ಕಾಮನಬಿಲ್ಲಿನ ಇಂದ್ರಜಾಲ ತೋರಿಸಿದೆ! ಸದ್ಯ,ಕವಿಯ ಮುಲಾಜಿಗೆ ಬೀಳುವ ರೂಪಕಗಳನ್ನು ಇನ್ನೂ ಯಾರೂ ಖರೀದಿಸಿಲ್ಲ. ಆದರೂ ಒಮ್ಮೊಮ್ಮೆ ರೂಪಕಗಳು ಹೀಗೂ ಹುಟ್ಟಿ ಹಾಗೆ ಸತ್ತು ಹೋಗುತ್ತವೆ. ಕೊನೆಗೆ ರೂಪ ಅಳಿಯುತ್ತದೆ ರೇಖೆ ಉಳಿಯುತ್ತದೆ.. --

Comments