ರೂಪ ಒಪ್ಪಲು ಮತ್ತು ನೋವ ಬರಿಸುತ ಎಂಬ ಎರಡು ಕವಿತೆಗಳು

ರೂಪ ಒಪ್ಪಲು ಮತ್ತು ನೋವ ಬರಿಸುತ ಎಂಬ ಎರಡು ಕವಿತೆಗಳು

ಕವನ

ರೂಪ ಒಪ್ಪಲು

ತಾಳ ತಪ್ಪಿತು

ಸೂರ್ಯ ರಶ್ಮಿಯು ಮುಳುಗಲು

ಹೆಣ್ಣು ಮಾಯೆಯೊ

ಮಾಯೆ ಹೆಣ್ಣದೋ

ನನಸ ಉಣ್ಣುತ ಮಲಗಲು

 

ಬಾನ ಸೆರಗಿಗೆ 

ಚಂದ್ರ ಬಂದನು

ಮೋಹವುಣ್ಣುತ ನಲಿದನು

ತಾರೆ ಜಾರುತ

ತಂಪು ಏರುತ

ಮೈಯ ಮದವದ ಉಂಡನು

 

ಬೆಂಕಿ ಜ್ವಾಲೆಗೆ

ತುಪ್ಪ ಹೊಯ್ಯುತ

ಮತ್ತೆ ಹುರುಪನು ಕೊಟ್ಟನು

ಬಯಲಿನೊಳಗಡೆ

ಯಾರು ಇಲ್ಲವು

ಚೆಲುವನೆಲ್ಲವ ಸವಿದನು

 

ಸಾಗುತಿರಲದು

ಪ್ರೀತಿ ಕ್ಷಣಗಳು

ಸೂರ್ಯ ಪೂರ್ವದಿ ಬಂದನು

ಪ್ರಖರ ಕಾಂತಿಯ 

ಬಿಡುತ ಸಾಗಲು

ಚಂದ್ರ ದೂರಕೆ ಸರಿದನು

 

ಹೊತ್ತು ಮೂಡಲು

ಮುಗುದೆಯೆದ್ದಳು

ಹುಸಿಯ ನಗುವಲಿ ಮಿಂದಳು

ಇನಿಯನಾಟದ 

ಸುಖವನೆಣಿಸುತ

ತನ್ನ ಕೆಲಸಕೆ ಹೊರಟಳು

 

***

ನೋವ ಬರಿಸುತ

ನೋವ ಬರಿಸುತ

ನಗುವ ತರಿಸಿದೆ

ಇನಿಯ ನನ್ನವನೆಂದಿಹೆ

ನನಸು ಕಾಣುವ

ಸನಿಹ ನಿಂತಿಹೆ

ಒಡಲು ಸೊಗದಲಿ ಕಂಡಿದೆ

 

ಮೇರು ಪರ್ವತ

ದಂತೆ ಪಯಣವು

ಮುಂದೆ ಮುಂದಕೆ ಸಾಗಲು

ಖುಷಿಯ ನಡೆಯಲಿ

ಕೂಸ ನಗುವದು

ಮನೆಯ ತುಂಬಾ ಹರಡಲು

 

ನಲ್ಲನಾಸರೆ

ಮಗುವ ಪಯಣಕೆ

ಯಾವ ತೊಂದರೆಯಾಗದೆ

ಚಿಂತೆ ಇರದೆಲೆ

ಶಾಂತಿ ತುಂಬಿದೆ

ಬದುಕು ಧನ್ಯತೆ ಕಂಡಿದೆ

 

-ಹಾ ಮ ಸತೀಶ

 

ಚಿತ್ರ್