ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ...

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ...

ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ. ರಾಷ್ಟ್ರಪತಿ - ಪ್ರಧಾನ ಮಂತ್ರಿ, ವಿವಿಧ ಮಂತ್ರಿಗಳು - ಸಂಸದರು, ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು - ಶಾಸಕರು - ಮಹಾನಗರ ಪಾಲಿಕೆ - ಜಿಲ್ಲಾ ಪಂಚಾಯತ್ - ನಗರಸಭೆ - ತಾಲ್ಲೂಕು ಪಂಚಾಯತ್ -  ಪುರಸಭೆ - ಗ್ರಾಮ ಪಂಚಾಯತ್, ಕೇಂದ್ರ ಸಂಪುಟ ಕಾರ್ಯದರ್ಶಿ - ವಿವಿಧ ಇಲಾಖೆಗಳ ಕಾರ್ಯದರ್ಶಿಗಳು - ಆಯುಕ್ತರು - ರಾಜ್ಯದ ಮುಖ್ಯ ಕಾರ್ಯದರ್ಶಿ - ವಿವಿಧ ಇಲಾಖೆಗಳ ಕಾರ್ಯದರ್ಶಿಗಳು - ಆಯುಕ್ತರು - ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕರು - ತಹಸೀಲ್ದಾರ್ - ಕಂದಾಯ ಅಧಿಕಾರಿ - ಪಿಡಿಓ ಇನ್ನೂ ಇನ್ನೂ ಇವರಿಗೆ ಸಹಾಯಕ ಅಧಿಕಾರಿಗಳು, ಲೆಕ್ಕಪರಿಶೋಧಕರು, ಪೋಲೀಸರು, ವಾಹನಗಳು ಮತ್ತು ಅದರ ಚಾಲಕರು,  ಹೇಳುತ್ತಾ ಹೋದರೆ ಇದೇ ಒಂದು ದೊಡ್ಡ ಪಟ್ಟಿ.

ಸಾರ್ವಜನಿಕ ಹಣದಲ್ಲಿ ಇವರೆಲ್ಲರೂ ಸೇರಿ ಒಂದು ಅಂದಾಜಿನಂತೆ ದೇಶದಲ್ಲಿ ಇರುವ ಆದಾಯದ ಶೇಕಡಾ 60/70 ಕ್ಕೂ ಹೆಚ್ಚು  ಇವರ ಸಂಬಳ, ಖರ್ಚು, ವಿವಿಧ ಭತ್ಯೆಗಳು ಮತ್ತು ಇವರ ಪ್ರವಾಸ ಕಚೇರಿಗಳ ನಿರ್ವಹಣೆಗೇ ಖರ್ಚಾಗುತ್ತದೆ. ಇದರಲ್ಲಿ ಇವರು ಪಡೆಯುವ ಲಂಚದ ಹಣ ಸೇರಿಲ್ಲ.

ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಪಾಸಾಗುವ ಪ್ರತಿ ಅಭ್ಯರ್ಥಿ ಪ್ರಾರಂಭದ ಸಂದರ್ಶನದಲ್ಲಿ ಹೇಳುವುದು ನಾವು ಬಡವರಿಗೆ ಪ್ರಾಮಾಣಿಕ ಸೇವೆ ಮಾಡಲು  ಬದ್ದರಾಗಿದ್ದೇವೆ. ಇದೇ ಏನು ಇವರ ಸೇವೆ. ಇವರು ಪಡೆಯುವ ಕೂಲಿ ಸಾರ್ವಜನಿಕ ಹಣ ಎಂಬ ಪ್ರಜ್ಞೆ ಇವರಿಗೆ ಇರುವುದಿಲ್ಲವೇ. ಅದರ ಋಣ ತೀರಿಸಬೇಕು ಎಂಬ ಕನಿಷ್ಠ ಆತ್ಮಸಾಕ್ಷಿ ಸತ್ತು ಹೋಗಿದೆಯೇ ?

ಒಂದು ತಿಂಗಳ ಸಂಬಳ ಒಂದು ದಿನ ತಡವಾದರೂ ಸರ್ಕಾರಿ ಅಧಿಕಾರಿಗಳು ಗಾಬರಿಗೊಳಗಾಗುತ್ತಾರೆ. ಬಹಳಷ್ಟು ಅಧಿಕಾರಿಗಳು ಲಂಚ ಕೊಡದಿದ್ದರೆ ಕೆಲಸವನ್ನೇ ಮಾಡಿಕೊಡುವುದಿಲ್ಲ. ನಿಜವಾಗಿಯೂ ದೇಶ ಅಭಿವೃದ್ಧಿಯಾಗಬೇಕು, ಜನರ ಜೀವನಮಟ್ಟ ಉತ್ತಮವಾಗಬೇಕು ಎಂಬ ಕನಸು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಇದ್ದರೆ ಅವರು ಮೊದಲು ಮಾಡಬೇಕಾದ ಕೆಲಸ ಸರ್ಕಾರಿ ಯಂತ್ರವನ್ನು  ಶುದ್ದೀಕರಣ ಮಾಡಬೇಕು. ಹುಟ್ಟಿನಿಂದ ಸಾವಿನವರೆಗೂ ಬಡವರಿಗೆ ಸಹಾಯವಾಗುವ ಸಾಕಷ್ಟು ಯೋಜನೆಗಳು ಸರ್ಕಾರದ ಬಳಿ ಇದೆ. ಆದರೆ ಅದರ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲ.

ಒಂದು ದಿನದಲ್ಲಿ ಔಪಚಾರಿಕವಾಗಿ 8 ಗಂಟೆಗಳ ಕೆಲಸ ಇರುತ್ತದೆ. ಅದರಲ್ಲಿ ಕನಿಷ್ಠ 4 ಗಂಟೆಗಳಷ್ಟು ಸರಿಯಾಗಿ ಕೆಲಸ ಮಾಡಿದರೆ ಅನೇಕ ಸಾಮಾನ್ಯ ಜನರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದರೆ ಅನೇಕ ಹಿರಿಯ ಅಧಿಕಾರಿಗಳು ಮನೆಯಲ್ಲಿ ಮಲಗಿಕೊಂಡು ಆಫೀಸಿನಲ್ಲಿ ಇರುವವರಿಗೆ ದೂರದ ಅಧೀಕೃತ ಪ್ರವಾಸ ಅಥವಾ ವಿಧಾನಸೌಧದಲ್ಲಿ ಮೀಟಿಂಗ್ ನಲ್ಲಿ ಇರುವುದಾಗಿ ಸದಾ ಸುಳ್ಳು ಹೇಳುವುದು ಒಂದು ಹವ್ಯಾಸವಾಗಿದೆ. " ಸರ್ಕಾರದ ಕೆಲಸ ದೇವರ ಕೆಲಸ " ಎಂದು ಹೇಳುವವರು  ದೇವರಿಗೂ ವಂಚಿಸುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಅದಕ್ಕಾಗಿಯೇ ಹೇಳಿದ್ದು ನಾಚಿಕೆಯಾಗುತ್ತಿದೆ ಎಂದು.

ನಾವು ಪ್ರಾಮಾಣಿಕರಾಗುವವರೆಗೂ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವ ನಮ್ಮ ಪರಿಚಿತರಿಗೆ ನಾವುಗಳು ಕನಿಷ್ಠ ಅವರ ಕರ್ತವ್ಯ ಪ್ರಜ್ಞೆ ನೆನಪಿಸುವ ಮೂಲಕ ಅಳಿಲು‌ ಸೇವೆ ಸಲ್ಲಿಸಲು‌ ಪ್ರಯತ್ನಿಸೋಣ. ಏಕೆಂದರೆ...

ಜನವರಿ 26 ರಂದು ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿಸಿ ರಾಷ್ಟ್ರದ ಏಕತೆ - ಸಮಗ್ರತೆ - ಅಖಂಡತೆ - ಭಾವೈಕ್ಯತೆ - ಸಮೃಧ್ಧಿ - ಅಭಿವೃದ್ಧಿ ಬಗ್ಗೆ ಕಂಚಿನ ಕಂಠದ ಘೋಷಣೆಗಳು,  ದೇಶದ ಹೆಮ್ಮೆಯ ಸಂವಿಧಾನ - ಅದರ ಆಶಯಗಳು - ಸಮಾನತೆ - ಸ್ವಾತಂತ್ರ್ಯ - ನ್ಯಾಯದ ಬಗ್ಗೆ ಪುಂಖಾನುಪುಂಖ ಭಾಷಣಗಳು,  ಪತ್ರಿಕೆ ಟಿವಿಗಳಲ್ಲಿ ಅತ್ಯದ್ಭುತ ಲೇಖನ ಕಾರ್ಯಕ್ರಮಗಳು, ಕೆಲವೆಡೆ ಔತಣಕೂಟಗಳು ಹಲವೆಡೆ ಸಿಹಿ ಹಂಚಿಕೆ ಕೊನೆಗೆ  ದಿನದ ಮುಕ್ತಾಯ....

ಭಾರತ್ ಮಾತಾಕಿ ಜೈ..ಮೇರಾ ಭಾರತ್ ಮಹಾನ್ ... ಮುಂದೆ....

ನಮ್ಮ ದೇಶದಲ್ಲಿ ಸುಮಾರು ಶೇಕಡ 50-70%  ರೈತ - ಕಾರ್ಮಿಕರಿದ್ದಾರೆ. ಅಂದರೆ ಸರಿಸುಮಾರು 80-90 ಕೋಟಿ ಜನರು ಕೃಷಿ ಮತ್ತು ಅದಕ್ಕೆ ಪೂರಕ ಕಾರ್ಮಿಕ ಕೆಲಸಗಳ ಮೇಲೆ ಅವಲಂಬಿತರು. ಅವರ ಪರಿಸ್ಥಿತಿ ಹೇಗಿದೆ ಗೊತ್ತೆ? ದಯವಿಟ್ಟು ನಗಬೇಡಿ..

4 ನಿಂಬೆಹಣ್ಣಿನ ಬೆಲೆ ಕೇವಲ 10 ರೂಪಾಯಿ. 1 KG ತೂಗುವ 15 ಟೊಮ್ಯಾಟೋ ಬೆಲೆ ಸುಮಾರು 10-15 ರೂಪಾಯಿ, ಸಾವಿರಾರು ಕಾಳು ಸೇರಿಸಿ 1 KG ಆಗುವ ಅಕ್ಕಿ, ರಾಗಿ, ಗೋದಿ, ಜೋಳ, ಬೇಳೆ ಕಾಳುಗಳ ಬೆಲೆ 30 ರಿಂದ 100-120 ರೂಪಾಯಿಗಳು. ನೂರಾರು ಗಿಡ ಬಳ್ಳಿಗಳು ಸೇರಿ ಕಟ್ಟುವ ಒಂದು ದೊಡ್ಡ ಸೊಪ್ಪಿನ  ಕಟ್ಟಿಗೆ 10-20 ರೂಪಾಯಿಗಳು. ಒಂದು ಲೀಟರ್ ನಷ್ಟು ಹಾಲಿಗೆ 30-35 ರೂಪಾಯಿಗಳು. ಇನ್ನೂ ಇನ್ನೂ ಅನೇಕ ...

ಮನುಷ್ಯ ಬದುಕಿರುವುದೇ ಈ ಪದಾರ್ಥಗಳಿಂದ. ಅವನ ಆರೋಗ್ಯ - ನೆಮ್ಮದಿ - ಉತ್ಸಾಹ - ವಂಶಾಭಿವೃದ್ಧಿ ಎಲ್ಲಕ್ಕೂ ಈ ಆಹಾರಗಳೇ ಕಾರಣ. ಇದನ್ನು ಬೆಳೆಸಲು ರೈತರು ಪಡುವ ಕಷ್ಟದ ಅಂದಾಜಿದೆಯೇ. ಅವನ ಶ್ರಮ, ಸಮಯ,  ಸವೆಸುವ ಬದುಕು,  ಅನುಭವಿಸುವ ಯಾತನೆ ಯಾವ ಸಾಹಿತಿ ಕಲಾವಿದನಿಗೂ ವರ್ಣಿಸಲು ಸಾಧ್ಯವಾಗುವುದಿಲ್ಲ. ಮಾಲ್ ಗಳಲ್ಲಿ ಕಾರ್ ಪಾರ್ಕಿಂಗ್ ಗೆ ಗಂಟೆಗೆ 50-100 ಇದೆ. ರೊಟ್ಟಿಯಂತ Pizza ಗೆ 400-500 ಬೆಲೆ ಇದೆ.

ಸಾಧಾರಣ ದರ್ಜೆಯ ಶೂ ಮತ್ತು ಬಟ್ಟೆಗೆ ಸಾವಿರಾರು ರೂಪಾಯಿ, ಲಿಪ್ ಸ್ಟಿಕ್, ಪರ್ಪ್ಯೂಂ ಬೆಲೆಗೆ ಮಿತಿಯೇ ಇಲ್ಲ. ಮೊಬೈಲ್ ಕಂಪ್ಯೂಟರ್ ಗಳ ಬೆಲೆಯಂತೂ ನಿಮ್ಮ ಹಣದ ತಾಕತ್ತನ್ನು ಅವಲಂಬಿಸಿದೆ. ಏಕೆ ಈ ಅಸಮಾನತೆ. ರೈತರೇನು ಶಾಪಗ್ರಸ್ತರೇ? ಅವರು ಬೆಳೆದ ಫಸಲಿಗೆ ಒಂದು ವೈಜ್ಞಾನಿಕ ಬೆಲೆ ಬೇಡವೇ. ಒಂದು ಒಳ್ಳೆಯ ಮಾರುಕಟ್ಟೆ ಬೇಡವೇ. ಅವರು ಬೆಳೆಯುವುದೇನು ಕಸ ಕಡ್ಡಿಯೇ?

ರಾಜಕಾರಣಿಗಳೇ - ಅಧಿಕಾರಿಗಳೇ - ಪತ್ರಕರ್ತರೇ - ನೆನಪಿಡಿ. ಭಾರತವಿನ್ನೂ ಅಭಿವೃದ್ಧಿ ಹೊಂದಿಲ್ಲ. ಮೇಲ್ನೋಟದ ಭ್ರಮೆಗೆ ಒಳಗಾಗದಿರಿ. ನಿಲ್ಲಿಸಿ ನಿಮ್ಮ ನಾಟಕ. ಎಲ್ಲಿಯವರೆಗೆ ರೈತ ಕಾರ್ಮಿಕರೆಲ್ಲಾ ಸೇರಿದಂತೆ ಎಲ್ಲಾ ಭಾರತೀಯರ ಮುಖದಲ್ಲಿ ನಗು ಕಾಣುವುದಿಲ್ಲವೋ, ಎಲ್ಲಿಯವರೆಗೆ ಅವರ ದಿನನಿತ್ಯದ ಬವಣೆಗಳು ಕಡಿಮೆಯಾಗಿ ನೆಮ್ಮದಿ ಮೂಡುವುದಿಲ್ಲವೋ ಅಲ್ಲಿಯವರಗೆ ಭಾರತ ಮುಂದುವರಿಯಲು ಪ್ರಯತ್ನಿಸುತ್ತಿರುವ ಹಿಂದುಳಿದ ದೇಶ. ನಾವಿನ್ನೂ ಅಭಿವೃದ್ಧಿಯ ಮೊದಲ ಮೆಟ್ಟಿಲ ಹತ್ತಿರದಲ್ಲಿದ್ದೇವೆ ಅಷ್ಟೆ. ಭ್ರಮೆಗಳಿಂದ ಹೊರಬಂದು ನಿಜವಾದ ಸರ್ವತೋಮುಖವಾದ ಅಭಿವೃದ್ಧಿ ಸಾಧಿಸೋಣ.ಆಗ ಮಾತ್ರ ಗಣರಾಜ್ಯೋತ್ಸವದ ನಿಮ್ಮ ಸಂಭ್ರಮಕ್ಕೆ ಒಂದು ಅರ್ಥ ಸಿಗುತ್ತದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಲಿ ಎಂದು ಆಶಿಸುತ್ತಾ, ಭಾರತ ಒಕ್ಕೂಟ ವ್ಯವಸ್ಥೆ, ಗಣರಾಜ್ಯೋತ್ಸವ ದಿನದ ಶುಭಾಶಯಗಳು....

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ