ರೆಡ್ ಕ್ರಾಸ್ ಎಂಬ ಮಾನವೀಯ ಸೇವಾ ಸಂಘಟನೆ

ರೆಡ್ ಕ್ರಾಸ್ ಎಂಬ ಮಾನವೀಯ ಸೇವಾ ಸಂಘಟನೆ

‘ಮಾನವೀಯತೆಯಿಂದ ಶಾಂತಿಯ ಕಡೆಗೆ' ಎಂಬ ಧ್ಯೇಯ ವಾಕ್ಯದೊಡನೆ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಆದರೆ ರೆಡ್ ಕ್ರಾಸ್ ಸಂಸ್ಥೆ ಯಾವ ಉದ್ದೇಶಕ್ಕಾಗಿ ಸ್ಥಾಪನೆಯಾಯಿತು? ಅದರ ಮೂಲ ಉದ್ದೇಶ ಏನಾಗಿತ್ತು? ಯಾವ ದಿನವನ್ನು ರೆಡ್ ಕ್ರಾಸ್ ದಿನ ಎಂದು ಆಚರಿಸುತ್ತಾರೆ? ಎಂಬೆಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಆಶಯ ನಿಮಗೆ ಇರಬಹುದು ಅಲ್ಲವೇ? ಬನ್ನಿ, ಈ ಬಗ್ಗೆ ಒಂದು ಚೂರು ಮಾಹಿತಿಯನ್ನು ಪಡೆದುಕೊಳ್ಳುವ.

ಹೆನ್ರಿ ಡ್ಯೂನಾಂಟ್ ಎಂಬ ವ್ಯಕ್ತಿಯೇ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಕರು. ಇವರ ಜನ್ಮ ದಿನವಾದ ಮೇ ೮ ನ್ನು ಪ್ರತೀ ವರ್ಷ ‘ವಿಶ್ವ ರೆಡ್ ಕ್ರಾಸ್ ದಿನ’ ಎಂದು ಆಚರಿಸಲಾಗುತ್ತದೆ. ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯವನ್ನು ವೃದ್ಧಿಸುವ ಬಗ್ಗೆ ಕಾರ್ಯ ನಿರ್ವಹಣೆ, ಭೂಕಂಪ, ನೆರೆ ಮುಂತಾದ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ನೆರವು ನೀಡುವುದು, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಜಾಗೃತಿ ಮೂಲಕ ಕಾರ್ಯ ನಿರ್ವಹಿಸುವುದು ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವಿಕೆಯು ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಧ್ಯೇಯೋದ್ದೇಶಗಳಾಗಿವೆ.

೧೮೫೯ರ ಜೂನ್ ೨೪ರಂದು ನಡೆದ ಒಂದು ಯುದ್ಧವು ರೆಡ್ ಕ್ರಾಸ್ ಸಂಸ್ಥೆಯ ಉಗಮಕ್ಕೆ ಕಾರಣವಾಯಿತು. ಒಂದೆಡೆ ಇಟಲಿ ಮತ್ತು ಫ್ರಾನ್ಸ್ ದೇಶಗಳ ಕೂಡುವಿಕೆಯ ಸೈನ್ಯ ಹಾಗೂ ಮತ್ತೊಂದೆಡೆ ಆಸ್ಟ್ರಿಯಾ ದೇಶದ ಸೈನ್ಯದ ನಡುವೆ ಭೀಕರ ಕಾದಾಟ ಪ್ರಾರಂಭವಾಗಿತ್ತು. ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿ ಸೈನಿಕರು ಯುದ್ದದಲ್ಲಿ ಭಾಗವಹಿಸಿದ್ದರು. ದಿನಂಪ್ರತಿ ಪರಸ್ಪರ ಘನಘೋರ ಕಾದಾಟವಾಗುತ್ತಿತ್ತು. ಒಂದು ದಿನ ‘ಸಲ್ಫರಿನ್' ಎಂಬ ಸ್ಥಳದಲ್ಲಿ ಬರೋಬರಿ ಹದಿನೈದು ಗಂಟೆಗಳ ಕಾಲ ಯುದ್ಧ ನಡೆಯಿತು. ಯುದ್ಧ ಮುಗಿದಾಗ ಎಲ್ಲೆಡೆ ಬಿದ್ದು ಕೊಂಡಿರುವ ಮೃತ ದೇಹಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ಗಾಯಾಳುಗಳು, ಎಲ್ಲೆಡೆ ರಕ್ತದ ಹೊಳೆಯೇ ಹರಿದಿತ್ತು. ಆ ಸಮಯದಲ್ಲಿ ವೈದ್ಯರ ಹಾಗೂ ಆಸ್ಪತ್ರೆಯ ಕೊರತೆಯೂ ಬಹಳವಾಗಿತ್ತು. 

ಇದೇ ಸಮಯದಲ್ಲಿ ಹೆನ್ರಿ ಡ್ಯೂನಾಂಟ್ ಎಂಬ ವ್ಯಾಪಾರಿ ಆ ನಗರವನ್ನು ಹಾದು ಹೋಗುತ್ತಿದ್ದ. ಮೂಲತಃ ಸ್ವಿಟ್ಸರ್ಲೆಂಡ್ ದೇಶದ ವಾಸಿಯಾಗಿದ್ದ ಹೆನ್ರಿ ಡ್ಯೂನಾಂಟ್ ಈ ಯುದ್ಧದ ಬಳಿಕದ ದೃಶ್ಯಗಳನ್ನು ನೋಡಿ ಮಮ್ಮಲ ಮರುಗಿದನು. ಸತ್ತವರ ಮನೆಯವರ ಕಿರುಚಾಟ, ಗಾಯಾಳುಗಳ ನರಳಾಟ, ಇವೆಲ್ಲವನ್ನೂ ನೋಡಿದ ಅವನ ಮನಸ್ಸು ಕರಗಿ ನೀರಾಯಿತು. ಈ ಗಾಯಾಳುಗಳಿಗೆ ಸಹಾಯ ಮಾಡಬೇಕೆಂದು ಅವನ ಮನಸ್ಸು ಹೇಳಿತು. ಆ ದಿನ ಸಾಯಂಕಾಲದ ಸಮಯದಲ್ಲಿ ಅವನು ಯುದ್ಧದ ಗಾಯಾಳುಗಳ ಉಪಚಾರವನ್ನು ಪ್ರಾರಂಭಿಸಿದ. ರಾತ್ರಿಯಿಡೀ ನಿದ್ರೆಯನ್ನೂ ಮರೆತು ಗಾಯಾಳುಗಳನ್ನು ಉಪಚರಿಸಿದ. ಇದಕ್ಕಾಗಿ ಆ ಗ್ರಾಮದ ಜನರ ಸಹಾಯವನ್ನು ಪಡೆದುಕೊಂಡ. ಅಲ್ಲಿಯ ಸ್ಥಳೀಯರ ಮನೆ, ಊರಿನ ಚರ್ಚ್, ಮಸೀದಿ ಹಾಗೂ ಸೇನಾ ನೆಲೆಗಳಿಗೆ ಈ ಗಾಯಾಳುಗಳನ್ನು ಸಾಗಿಸಿ ಅವರ ಗಾಯಗಳಿಗೆ ಶುಷ್ರೂಷೆ ಮಾಡಿದ.

ಹೆನ್ರಿ ಡ್ಯೂನಾಂಟ್ ನೆಪೋಲಿಯನ್ ದೊರೆಯನ್ನು ಕಂಡು ಅಲ್ಜೀರಿಯಾದಲ್ಲಿ ಕಾರ್ನ್ ಮಿಲ್ ಗಳನ್ನು ಸ್ಥಾಪಿಸಲು ಅನುಮತಿಯನ್ನು ಪಡೆಯಲು ಹೊರಟಿದ್ದ. ಅವನು ಪಕ್ಕಾ ವ್ಯಾಪಾರಿ, ಆದರೆ ಈ ಯುದ್ಧ ದೃಶ್ಯಗಳನ್ನು ನೋಡಿ ಅವನು ತನ್ನ ವ್ಯವಹಾರದ ಬಗ್ಗೆ ಮರೆತೇ ಹೋದ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಲು ಅವನದ್ದೇ ಆದ ಸ್ವಯಂ ಸೇವಕರ ತಂಡವನ್ನು ಕಟ್ಟಿಕೊಂಡ. 

ಬಹಳ ಸಮಯ ಉರುಳಿದರೂ ಹೆನ್ರಿ ಡ್ಯೂನಾಂಟ್ ಗೆ ಈ ಘಟನೆಯನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಅವನ ಕನಸಲ್ಲೂ ಈ ಯುದ್ಧದ ಭೀಕರ ದೃಶ್ಯಗಳು ಬಂದು ಅವನನ್ನು ಬೆಚ್ಚಿ ಬೀಳಿಸುತ್ತಿದ್ದವು. ಈ ಯಾತನೆಯನ್ನು ಕಮ್ಮಿಗೊಳಿಸುವ ಸಲುವಾಗಿ ಅವನು ಅಂದಿನ ಘಟನೆಗಳ ಕುರಿತಾಗಿ ‘ದಿ ಮೆಮೊರಿ ಆಫ್ ಸಲ್ಫರಿನೊ' ಎಂಬ ಪುಸ್ತಕವನ್ನು ಬರೆದ. ಅವನೇ ಇದನ್ನು ಪ್ರಕಟಿಸಿ, ವಿಶ್ವದಾದ್ಯಂತ ಹಂಚಿದ. ಯುದ್ಧ ಕಾಲದಲ್ಲಿ ಮಾನವೀಯತೆಯನ್ನು ಸಾಯಲು ಬಿಡಬಾರದೆಂದು ಆ ಪುಸ್ತಕದಲ್ಲಿ ಪ್ರಸ್ತಾಪಿಸಿದ. ಯುದ್ಧ ಗಾಯಾಳುಗಳನ್ನು ಆರೈಕೆ ಮಾಡುವ ವ್ಯಕ್ತಿಗಳನ್ನು ತಟಸ್ಥ ವ್ಯಕ್ತಿಗಳನ್ನಾಗಿ ಗುರುತಿಸಬೇಕೆಂದು ಪ್ರಸ್ತಾಪ ಮಾಡಿದ. ಯಾವುದೇ ದೇಶದ ಗಾಯಾಳುಗಳನ್ನು ದೇಶ, ಜಾತಿ, ಧರ್ಮದ ಭೇಧ ಭಾವವಿಲ್ಲದೇ ಉಪಚರಿಸಲು ಅನುವಾಗುವಂತೆ ನಿಯಮಗಳನ್ನು ರೂಪಿಸಬೇಕೆಂದು ಪ್ರತಿಪಾದಿಸಿದ. ವೈದ್ಯರನ್ನು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿಗಳನ್ನು ರೋಗಿಗಳನ್ನು ಉಪಚರಿಸಲು ಅನುಕೂಲವಾಗುವಂತೆ ಯಾವುದೇ ದೇಶಕ್ಕೆ ಸೇರಿಲ್ಲದ ವ್ಯಕ್ತಿಗಳನ್ನಾಗಿ ಮಾನ್ಯತೆ ನೀಡುವ ಕರಾರು ಮಾಡಬೇಕೆಂದು ಅವನ ಆಸೆಯಾಗಿತ್ತು.

ಅವನ ಈ ಪುಸ್ತಕವನ್ನು ಓದಿದ ಜಿನೇವಾ ದೇಶದ ಸ್ವಯಂಸೇವಾ ಸಂಸ್ಥೆಯೊಂದು ಐದು ಮಂದಿ ವ್ಯಕ್ತಿಗಳ ಒಂದು ಸಮಿತಿಯನ್ನು ರಚಿಸಿ, ಅದಕ್ಕೆ ಹೆನ್ರಿ ಡ್ಯೂನಾಂಟ್ ನನ್ನು ಕಾರ್ಯದರ್ಶಿಯಾಗಿ ನೇಮಿಸಿತು. ಜಿನೇವಾದಲ್ಲಿ ೧೮೬೩ ರ ಅಕ್ಟೋಬರ್ ೨೬ರಂದು ಜರುಗಿದ ೧೬ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಈ ರೀತಿಯ ಸಂದರ್ಭದಲ್ಲಿ (ಯುದ್ಧ ಇತ್ಯಾದಿ...) ಗಾಯಾಳುಗಳ ಉಪಚಾರಕ್ಕಾಗಿ ಒಂದು ಸಂಸ್ಥೆಯನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೆ ಆಗ ‘ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ' ಎಂಬ ಹೆಸರು ನೀಡಲಾಯಿತು. ನಂತರದ ದಿನಗಳಲ್ಲಿ ಇದೇ ಸಂಸ್ಥೆ ‘ರೆಡ್ ಕ್ರಾಸ್ ಸಂಸ್ಥೆ' ಎಂದು ಕರೆಯಲ್ಪಟ್ಟಿತು. ಹೆನ್ರಿ ಡ್ಯೂನಾಂಟ್ ಅವರ ಈ ಸಾಧನೆಯನ್ನು ಗಮನಿಸಿ ೧೯೦೧ರಲ್ಲಿ ವಿಶ್ವದ ಅತ್ಯುನ್ನತ ಗೌರವವಾದ ನೊಬೆಲ್ ಪುರಸ್ಕಾರವನ್ನು ಅವರಿಗೆ ನೀಡಿ ಸನ್ಮಾನಿಸಲಾಯಿತು. ನಂತರದ ದಿನಗಳಲ್ಲೂ ಗಾಯಾಳುಗಳ ಉಪಚಾರ, ಶಾಂತಿ ಸ್ಥಾಪನೆ ಮೊದಲಾದ ಕಾರ್ಯಗಳನ್ನು ಮಾಡುತ್ತಾ ಬದುಕಿದ ಹೆನ್ರಿ ಡ್ಯೂನಾಂಟ್ ೧೯೧೦ರಲ್ಲಿ ನಿಧನ ಹೊಂದಿದರು.

ರೆಡ್ ಕ್ರಾಸ್ ಸಂಸ್ಥೆಯು ಬಿಳಿ ಹಿನ್ನಲೆಯಲ್ಲಿ ಕೆಂಪು ಬಣ್ಣದ ಕ್ರಾಸ್ (ಪ್ಲಸ್ ಅಥವಾ ಕೂಡುವಿಕೆಯ ಚಿನ್ಹೆ) ಹೊಂದಿರುವ ಲಾಂಚನ ಹೊಂದಿದೆ. ಇದರ ಕ್ರಾಸ್ ನ ಎಲ್ಲಾ ಬಾಹುಗಳು ಸಮಾನ ಅಳತೆ ಹೊಂದಿದೆ. ಈಗಲೂ ನಿರಂತರವಾಗಿ ರೆಡ್ ಕ್ರಾಸ್ ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳನ್ನು ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳಲ್ಲಿ ಮಾಡುತ್ತಿದೆ. ರೆಡ್ ಕ್ರಾಸ್ ಲಾಂಛನವನ್ನು ವೈದ್ಯಕೀಯ ಉಪಕರಣಗಳ ಮೇಲೆ ಹಾಗೂ ಕೆಲವೊಂದು ಸಂದರ್ಭದಲ್ಲಿ ತುರ್ತು ಬಳಸುವ ಧ್ವಜದ ಮೇಲೆ ಮುದ್ರಿಸಲಾಗುತ್ತದೆ. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಅಲ್ಲವೇ?  

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ