ರೇಖಾ
ರವಿ ಬೆಳಗೆರೆಯವರ ನಿಧನದ ಬಳಿಕ ಹೊರಬಂದ ಕೆಲವು ಪುಸ್ತಕಗಳಲ್ಲಿ ‘ರೇಖಾ’ ಪುಸ್ತಕವೂ ಒಂದು. ಬಹಳ ಸಮಯದಿಂದ ಹೊರಬರಲು ಕಾಯುತ್ತಿದ್ದ ಪುಸ್ತಕವು ಅವರ ನಿಧನದ ನಂತರ ಬೆಳಕು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಆದರೂ ರವಿ ಬೆಳಗೆರೆಯವರು ರೇಖಾಳ ಜೀವನದ ಬಗ್ಗೆ ಬರೆಯಲು ಮಾಡಿದ ಸಿದ್ಧತೆಗಳನ್ನು ಮೆಚ್ಚಲೇ ಬೇಕು. ಸಾಮಾನ್ಯ ಜನರಿಗೆ ತಿಳಿಯದೇ ಇರುವ ಹಲವಾರು ಸಂಗತಿಗಳು ಹಾಗೂ ಭಾವಚಿತ್ರಗಳು ಈ ಪುಸ್ತಕದಲ್ಲಿವೆ.
ರೇಖಾ ೧೯೫೪ರಲ್ಲಿ ತಮಿಳು ಚಿತ್ರ ರಂಗದ ಆರಾಧ್ಯ ದೈವವಾಗಿದ್ದ ಜೆಮಿನಿ ಗಣೇಶನ್ ಮತ್ತು ತಮಿಳು ನಟಿ ಪುಷ್ಪವಲ್ಲಿಯ ಕೂಸಾಗಿ ಹುಟ್ಟಿದವಳು ರೇಖಾ. ಪುಷ್ಪವಲ್ಲಿಯನ್ನು ಜೆಮಿನಿ ಗಣೇಶನ್ ಅಧಿಕೃತವಾಗಿಯೇನೂ ಮದುವೆಯಾಗಿರಲಿಲ್ಲ. ಅವನಿಗೆ ಆಗಲೇ ಮದುವೆಯಾಗಿ ಮಕ್ಕಳಿದ್ದವು. ತಂದೆಯ ಹೆಸರು, ಪ್ರೀತಿ ಎರಡೂ ಸಿಗದ ಭಾನು ರೇಖಾ, ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ರೇಖಾ ಆಗಿದ್ದೇ ಒಂದು ಅಚ್ಚರಿ. ಹಿಂದಿ ಭಾಷೆಯ ಬಗ್ಗೆ ಒಂದಿಂಚೂ ಅರಿವು ಇರದ ಹುಡುಗಿ ಒಂದೆರಡು ದಶಕಗಳ ಕಾಲ ಬಾಲಿವುಡ್ ಚಿತ್ರರಂಗವನ್ನು ಆಳಿದ್ದು ಈಗ ಇತಿಹಾಸ.
ರವಿ ಬೆಳಗೆರೆಯವರು ಅವರು ರೇಖಾಳ ಸ್ವಗತವನ್ನು ಬರೆದಿರುವುದು ಹೀಗೆ “ಅವರೂ ಹಾಗೇ ಬೆಳೆದಿದ್ದಾರೆ. ಹೇಳಿದೆನಲ್ಲ? ನಮಗೆ ಮೂವರು ಅಮ್ಮಂದಿರು. ಛೋಟಿ ಮಾ, ಮೇರಿ ಮಾ ಔರ್ ತೀಸರಿ ಮಾ! ಅವರೆಲ್ಲರದೂ ಒಂದೇ ತೆರನಾದ ಬದುಕು. ಆರು ಜನರ ಪೈಕಿ ಮೊದಲ ಅಮ್ಮನಿಗೆ ಹಾಗೂ ಆಕೆಯ ಮಕ್ಕಳಿಗೆ ಒಂದು ವಿಶೇಷವಾದ ಸವಲತ್ತು ಒದಗಿತ್ತು. ಅವರನ್ನು ಹೊರತು ಪಡಿಸಿದರೆ, ಉಳಿದ ನಾವು ನಾಲ್ಕು ಜನ 'ಜೆಮಿನಿ' ಎಂಬ ಉಪನಾಮ ಇರಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಅಸಲಿಗೆ ಆ ಇಬ್ಬರು ಅಮ್ಮಂದಿರಿಗೆ ಸಹಜವಾಗಿ ಸಿಗುವ ಸರ್ ನೇಮ್ ಸಿಕ್ಕಿರಲಿಲ್ಲ. ಆರು ಮಕ್ಕಳ ಪೈಕಿ ಇಬ್ಬರಿಗೆ ಮಾತ್ರ ಜೆಮಿನಿ ಗಣೇಶನ್ ಹೆಸರನ್ನು ಇಟ್ಟುಕೊಳ್ಳುವ ಹಕ್ಕು ಇತ್ತು. ಉಳಿದಂತೆ ನಾಲ್ಕೂ ಜನಕ್ಕೆ ಅವರು ಹೆಸರಿಲ್ಲದೆ ಹುಟ್ಟಿದವರು. ಅಂಥವರೇ ನಟಿಯರೋ, ನೃತ್ಯ ಮಾಡೋರು ಆಗ್ತಾರೆ. ಆ ಕೊರತೆ ರೇಖಾಗೆ ಕಡೆ ತನಕ ಕಾಡುತ್ತಲೇ ಇತ್ತು. ಕೆಲವರಂತೂ ಎಲ್ಲರೆದುರು ‘ಲೊಟ್ಟ' ಅನ್ನುತ್ತಿದ್ದರು. ತಮಿಳಿನಲ್ಲಿ ‘ಲೊಟ್ಟ' ಅಂದರೆ ವೇಶ್ಯೆ. ವೇಶ್ಯೆಯ ಮಗಳು.. ಇತ್ಯಾದಿ ಅರ್ಥಗಳಿವೆ. ಅವು ರೇಖಾಗೆ ದೊರೆತ ಬಿರುದೂ ಹೌದು.
ತಮಿಳಿನಲ್ಲಿ ಸುರಸುಂದರರಿಗೆ ಒಂದು ಅಡ್ಡ ಹೆಸರಿದೆ. ಅದೇ ಹೆಸರಿನಿಂದ ಒಂದು ಸಿನೆಮಾ ಬಂದಿದೆ ‘ಕಾದಲ್ ಮನ್ನನ್’ ಅಂತ. ಅದರ ಅರ್ಥ ‘ದಿವ್ಯ ಪ್ರಣಯನ' the king of Romance’. ಅವನ ಮೂಲ ಹೆಸರು ರಾಮಸ್ವಾಮಿ. ಜೆಮಿನಿ ಸ್ಟುಡಿಯೋ ಬಿಟ್ಟ ನಂತರ ಆತ ಇಟ್ಟುಕೊಂಡದ್ದು ಜೆಮಿನಿ ಗಣೇಶನ್. ಮೊದಲ ಪತ್ನಿ ‘ಬಾಬ್ಬಿ' ಆಕೆಯನ್ನು ಆತ ಕುಲ ಸಂಪ್ರದಾಯದಂತೆ ವಿವಾಹವಾಗಿದ್ದ. ಹೀಗಾಗಿ ಅವರಿಬ್ಬರ ಹೆಸರಿಗೆ ಅಧಿಕೃತವಾದ ‘ಜೆಮಿನಿ' ಎಂಬ ಸರ್ ನೇಮ್ ಇತ್ತು. ಆಕೆಯ ಮಗನಿಗೂ ‘ಜೆಮಿನಿ' ಎಂಬ ಕಿರೀಟವಿತ್ತು. ರೇಖಾ ಜೀವನ ಪರ್ಯಂತ ನೆನೆದು ಹಲುಬಿದ್ದು, ತನ್ನ ಹೆಸರಿನೊಂದಿಗೆ ತಂದೆಯ ಅಥವಾ ಕುಟುಂಬದ ಸರ್ ನೇಮ್ ತನಗೆ ಸಿಕ್ಕಲಿಲ್ಲವಲ್ಲಾ ಅಂತ. ಅವಳು ರಾತೋರಾತ್ರಿ ಹೋಗಿ ಮದುವೆಯಾದಳಲ್ಲ? ಅದರ ಮರುಕ್ಷಣ ಆಕೆ ಇಡೀ ಪ್ರಪಂಚಕ್ಕೆ ಕೇಳಿಸುವಂತೆ ಕೂಗಿ ಹೇಳಿದ್ದಳು ‘Now I am Rekha Agarwal’ . ಸರ್ವರಿಗೂ ಪ್ರಿಯವಾದ ಭಾನುರೇಖಾ ಎಂಬ ಚೆಲುವೆ ಒಂದೇ ಒಂದು ಸರ್ ನೇಮ್ ಇಲ್ಲದೆ ಅದೆಷ್ಟು ನರಳಿದಳೋ?”
ರೇಖಾಳು ಬಾಲ್ಯದಿಂದಲೂ ಸುಖಕ್ಕಿಂತ ಕಷ್ಟ ಪಟ್ಟದ್ದೇ ಜಾಸ್ತಿ. ಬಾಲ್ಯದಲ್ಲಿ ತಂದೆಯ ಪ್ರೀತಿ ದೊರೆಯಲಿಲ್ಲ. ತಾಯಿ ಆ ಸಮಯದ ಖ್ಯಾತ ನಟಿಯಾದರೂ ಕುದುರೆ ರೇಸ್ ನ ಹುಚ್ಚು ಅವಳನ್ನು ರೇಖಾಳಿಂದ ದೂರವೇ ಇರಿಸಿತು. ಬಾಲ್ಯದಲ್ಲಿ ದೊರೆಯದ ಪ್ರೀತಿಗಾಗಿ ಹಂಬಲಿಸಿದ ರೇಖಾ ಹರೆಯ ಬಂದಾಗ ಹಲವಾರು ನಟರನ್ನು ಪ್ರೀತಿಸಿದಳು. ಆದರೆ ಯಾವುದೂ ಅವಳಿಗೆ ಗಿಟ್ಟಲಿಲ್ಲ. ವಿನೋದ್ ಮೆಹ್ರಾ, ಕಿರಣ್ ಕುಮಾರ್, ಅಮಿತಾಬ್ ಬಚ್ಚನ್ ಹೀಗೆ ಹಲವಾರು ಹೀರೋಗಳು ಅವಳ ನಿಜ ಜೀವನದ ನಾಯಕರಾಗಲೇ ಇಲ್ಲ. ವಿನೋದ್ ಮೆಹ್ರಾ ಜೊತೆ ಗುಟ್ಟಾಗಿ ಮಾಡಿಕೊಂಡ ಮದುವೆಯೂ ಹೆಚ್ಚು ದಿನ ಬಾಳಲಿಲ್ಲ. ಕಡೆಗೆ ಉದ್ಯಮಿ ಮುಖೇಶ್ ಅಗರ್ವಾಲ್ ಜೊತೆ ಮದುವೆಯಾದರೂ ಹೆಚ್ಚು ಸಮಯ ನಡೆಯಲಿಲ್ಲ. ಮಾನಸಿಕ ಕಾಯಿಲೆಯ ಕಾರಣ ಮುಖೇಶ್ ಅಗರ್ವಾಲ್ ಆತ್ಮಹತ್ಯೆ ಮಾಡಿಕೊಂಡ. ಕೊನೆಗೆ ಉಳಿದದ್ದು ಅದ್ಭುತ ನಟಿ ಎಂಬ ಬಿರುದು ಮತ್ತು ಏಕಾಂಗಿತನ ಮಾತ್ರ. ಈಗಲೂ ರೇಖಾ ಚೆಲುವೆಯೇ, ಜೊತೆಗೆ ಉತ್ತಮ ನಟಿ. ಆದರೆ ಖಾಸಗಿ ಬದುಕು ಮಾತ್ರ ಹಸನಾಗಲಿಲ್ಲ.
ರವಿ ಬೆಳಗೆರೆಯವರ ಎಂದಿನ ಶೈಲಿ ಈ ಪುಸ್ತಕದಲ್ಲಿ ಕಾಣ ಸಿಗುತ್ತಿಲ್ಲ. ಸರಾಗವಾಗಿ ಓದಿಸಿಕೊಂಡು ಪುಸ್ತಕ ಹೋಗುವುದಿಲ್ಲ. ಆಲ್ಲಲ್ಲಿ ರೇಖಾ ಜೀವನ ಪಯಣ ಹಿಂದು ಮುಂದಾಗಿರುವಂತೆ ಕಾಣಿಸುತ್ತದೆ. ವಾಕ್ಯಗಳೂ ಗೊಂದಲಕರವಾಗಿವೆ. ಆದರೂ ಪುಸ್ತಕ ಸಂಗ್ರಹ ಯೋಗ್ಯ. ಏಕೆಂದರೆ ರೇಖಾ ಬಗ್ಗೆ ಒಂದೇ ಕಡೆ ಇಷ್ಟೊಂದು ಚಿತ್ರಗಳು ಹಾಗೂ ಮಾಹಿತಿಗಳು ದೊರೆಯಲಾರವು.
ಯಾವುದೇ ಪಾತ್ರವಾಗಲಿ ಲೀಲಾಜಾಲವಾಗಿ ನಟಿಸುತ್ತಿದ್ದ ರೇಖಾ ಕನ್ನಡ ಚಿತ್ರದಲ್ಲೂ ನಟಿಸಿದ್ದಾಳೆ. ಅದು ಡಾ. ರಾಜ್ ಕುಮಾರ್ ಜೊತೆ ನಟಿಸಿದ ‘ಆಪರೇಷನ್ ಜಾಕ್ ಪಾಟ್ ನಲ್ಲಿ ಸಿ.ಐ.ಡಿ 999’ (೧೯೬೯) ಎಂಬ ಬಾಂಡ್ ಚಿತ್ರ. ಬಾಲನಟಿಯಾಗಿ ನಟನೆಯನ್ನು ಪ್ರಾರಂಭಿಸಿದ ರೇಖಾ, ನಾಯಕಿ ನಟಿಯಾಗಿ, ಸಹ ನಟಿಯಾಗಿ, ಪೋಷಕ ಪಾತ್ರಧಾರಿಣಿಯಾಗಿ, ಅತಿಥಿ ನಟಿಯಾಗಿ ತಮ್ಮ ನಟನಾ ಕೌಶಲ್ಯವನ್ನು ತೆರೆದಿಟ್ಟಿದ್ದಾರೆ. ‘ರೇಖಾ’ ಪುಸ್ತಕವು ಬಹಳಷ್ಟು ಅವಳ ಅಂತರಂಗವನ್ನು ಬಿಚ್ಚಿಡಲು ಪ್ರಯತ್ನಿಸಿದೆ. ೨೯೦ ಪುಟಗಳ ಈ ಪುಸ್ತಕವನ್ನು ರವಿ ಬೆಳಗೆರೆಯವರು ‘ಸದಾ ನನ್ನೊಂದಿಗೆ ಇದ್ದ ನನ್ನ ಪ್ರೀತಿಯ ಕಚೇರಿಯ ಸಿಬ್ಬಂದಿಯವರಿಗೆ' ಅರ್ಪಣೆ ಮಾಡಿದ್ದಾರೆ.