ರೇಡಿಯೋ ಆಲಿಸೋಣ, ಬನ್ನಿ !

ರೇಡಿಯೋ ಆಲಿಸೋಣ, ಬನ್ನಿ !

ಇಂದು ಫೆಬ್ರವರಿ ೧೩, ವಿಶ್ವ ರೇಡಿಯೋ ದಿನ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ -ಯುಎನ್ ರೇಡಿಯೋ ಪ್ರಾರಂಭವಾದ ದಿನದ ನೆನಪಿನಲ್ಲಿ ಪ್ರತೀ ವರ್ಷ ಈ ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ ರೇಡಿಯೋಗೆ ರಾಜ ಮರ್ಯಾದೆ ಇತ್ತು. ರೇಡಿಯೋದಲ್ಲಿ ಬರುವ ಸುದ್ದಿಗಳನ್ನು ಕೇಳಲು ಎಲ್ಲರೂ ತಮ್ಮ ಕಿವಿಗಳನ್ನು ನಿಮಿರಿಸಿ ಕುಳಿತುಕೊಳ್ಳುತ್ತಿದ್ದರು. ಯುದ್ಧದ ಸಮಯದ ಸಂಗತಿಯೇ ಆಗಿರಲಿ, ತುರ್ತು ಪರಿಸ್ಥಿತಿಯ ಸಮಯವೇ ಆಗಿರಲಿ, ಸ್ವಾತಂತ್ರ್ಯದ ಮೊದಲ ದಿನಗಳ ಸುದ್ದಿಯೇ ಆಗಿರಲಿ ಅಥವಾ ಮಧುರ ಹಾಡುಗಳ ಇಂಪಾದ ದನಿಯೇ ಆಗಿರಲಿ, ರೇಡಿಯೋಗೆ ತನ್ನದೇ ಆದ ಸ್ಥಾನ ಇತ್ತು. 

ಸಮಯ ನಿಂತ ನೀರಲ್ಲ. ಹೊಸದು ಬಂದಾಗ ಹಳೆಯದ್ದು ಹಿಂದಕ್ಕೆ ಸರಿದೇ ಸರಿಯುತ್ತೆ. ರೇಡಿಯೋದಲ್ಲಿ ಅವಕಾಶ ಇದ್ದದ್ದು ಕೇಳಲು ಮಾತ್ರ. ಮಾತನಾಡುವವನ ಅಥವಾ ಹಾಡುವವನ ಧ್ವನಿ ಮಾತ್ರ ಕೇಳುವ ಸೌಭಾಗ್ಯ ನಮ್ಮದಾಗಿತ್ತು. ಆದರೆ ಕ್ರಮೇಣ ದೂರದರ್ಶನ ಬಂದಾಗ ಅದರಲ್ಲಿ ಚಿತ್ರಗಳೂ ಕಾಣಿಸಲು ಶುರುವಾದವು. ಕ್ರಮೇಣ ರೇಡಿಯೋ ತೆರೆಯ ಮರೆಗೆ ಸರಿಯಲಾರಂಭಿಸಿತು. ಈಗ ಯಾರ ಮನೆಯಲ್ಲೂ ಹಳೆಯ ರೇಡಿಯೋ ಇರಲಿಕ್ಕಿಲ್ಲ. ಆದರೆ ಎಲ್ಲರ ಕೈಯಲ್ಲಿ ಇರುವ ಮೊಬೈಲ್ ನಲ್ಲಿ ರೇಡಿಯೋ ಇರುವ ಕಾರಣ ಇನ್ನೂ ಅಂದಿನ ದಿನಗಳ ನೆನಪು ಸದ್ಯಕ್ಕೆ ಮಾಸಲಿಕ್ಕಿಲ್ಲ.

೮೦ರ ದಶಕದಲ್ಲಿ ನಾವು ಸಣ್ಣವರಿದ್ದು, ಶಾಲೆಗೆ ಹೋಗುತ್ತಿರುವಾಗ ನಮಗೆ ಓದುವುದು ಬಿಟ್ಟರೆ ಆಟ ಮಾತ್ರ ಮನರಂಜನೆಯ ಸಾಧನವಾಗಿತ್ತು. ನಿಮಗೆ ಗೊತ್ತಿದೆಯೋ ಇಲ್ಲವೋ ಆಗ ರೇಡಿಯೋ ಬಳಸಬೇಕಾದರೆ ಪರವಾನಗಿ (ಲೈಸೆನ್ಸ್) ಬೇಕಿತ್ತು. (ಈ ಬಗ್ಗೆ ಒಂದು ಬರಹವನ್ನು ನಾನು ಹಿಂದೆ ‘ಸಂಪದ' ದಲ್ಲಿ ಪ್ರಕಟಿಸಿದ್ದೆ) ಪರವಾನಗಿ ಇಲ್ಲದವರಿಗೆ ದಂಡವನ್ನೂ ವಿಧಿಸುತ್ತಿದ್ದರು. ನಂತರದ ದಿನಗಳಲ್ಲಿ ಪರವಾನಗಿ ಪಡೆದುಕೊಳ್ಳಬೇಕೆಂಬ ಕಾನೂನು ರದ್ದಾಯಿತು. ನನ್ನ ತಂದೆಯವರಿಗೆ ಆಗ ಕ್ರಿಕೆಟ್ ಆಟದ ದೊಡ್ಡ ಹುಚ್ಚು. ಆಗ ರೇಡಿಯೋದಲ್ಲಿ ಕಮೆಂಟರಿ ಕೇಳುವುದೇ ಒಂದು ಮಜಾ. ವೀಕ್ಷಕ ವಿವರಣೆ (ಕಮೆಂಟರಿ) ನೀಡುವವರು ಬೌಲರ್ ಓಡಿ ಬಂದು ಹಾಕಿದ ಬಾಲ್ ನಿಂದ ಹಿಡಿದು ಅದು ಹೇಗೆ ಪಿಚ್ ಗೆ ಬಿತ್ತು, ಬ್ಯಾಟ್ಸ್ ಮ್ಯಾನ್ ಆಡಿದ ರೀತಿ, ಫೀಲ್ಡರ್ ಕ್ಯಾಚ್ ಹಿಡಿದ ಬಗೆ ಎಲ್ಲವನ್ನೂ ಕೇಳುಗರ ಕಣ್ಣಿಗೆ ಕಟ್ಟುವಂತೆ ಹೇಳಬೇಕಾಗಿತ್ತು. ಈಗ ವೀಕ್ಷಕ ವಿವರಣೆಯ ಪರಿಯೇ ಬದಲಾಗಿದೆ. ಏಕೆಂದರೆ ಟಿವಿಯಲ್ಲಿ ಎಲ್ಲವೂ ಕಾಣಿಸುತ್ತಿರುವಾಗ ಪ್ರತಿಯೊಂದು ಸಣ್ಣ ಸಂಗತಿಗಳನ್ನು ಹೇಳುವ ಅಗತ್ಯ ಇಲ್ಲವೇ ಇಲ್ಲ. ಈ ಕಾರಣದಿಂದಲೇ ಈಗ ಎಲ್ಲರೂ ಅದರಲ್ಲೂ ಮಾಜಿ ಆಟಗಾರರು ವೀಕ್ಷಕ ವಿವರಣೆಗಾರರಾಗಿದ್ದಾರೆ. ತಮ್ಮ ಕಾಲದ ಯಾವುದೋ ಕಥೆ ಹೇಳಿಕೊಂಡು ವೀಕ್ಷಕ ವಿವರಣೆ ನೀಡುತ್ತಾರೆ. ಅಷ್ಟೇ.

ಹಿಂದಿನ ಸಮಯದಲ್ಲಿ ರೇಡಿಯೋ ಎಲ್ಲರನ್ನೂ ಸೆಳೆದಿಡುತ್ತಿದ್ದುದು ಚಲನ ಚಿತ್ರಗಳ ಹಾಡಿಗಾಗಿ. ದಿನದ ಒಂದು ನಿರ್ದಿಷ್ಟ ಸಮಯದಲ್ಲಷ್ಟೇ ಈ ಹಾಡುಗಳನ್ನು ಕೇಳಬಹುದಿತ್ತು. ಚಿತ್ರಗೀತೆಗಳು ಕೋರಿಕೆ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಕೇಳುಗರು ಯಾವ ಹಾಡುಗಳನ್ನು ಕೇಳಬೇಕೆಂದು ಸ್ಥಳೀಯ ಆಕಾಶವಾಣಿಗೆ ಕೋರಿಕೆ ಸಲ್ಲಿಸಿದರೆ ಅವರು ನಮ್ಮ ಹೆಸರನ್ನೆಲ್ಲಾ ಕರೆದು ನಾವು ಬಯಸಿದ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದರು. ಅಂದು ರೇಡಿಯೋದಲ್ಲಿ ಕೇಳಲ್ಪಡುತ್ತಿದ್ದ ಖ್ಯಾತ ನಿರೂಪಕ ಅಮೀನ್ ಸಯಾನಿ ಅವರ ಕಂಚಿನ ಕಂಠದ ಮಾತುಗಾರಿಕೆಯನ್ನು ಯಾರು ತಾನೇ ಮರೆತಾರು? ‘ಬಿನಾಕಾ ಗೀತ್ ಮಾಲಾ’ ಎನ್ನುವ ಚಿತ್ರ ಗೀತೆಗಳ ಕಾರ್ಯಕ್ರಮಕ್ಕಾಗಿ ಸಾವಿರಾರು ಮಂದಿ ಕಾಯುತ್ತಿದ್ದರು. ಇದರ ಜೊತೆಗೆ ಕೃಷಿ ಬಗ್ಗೆ ಮಾಹಿತಿ, ಹವಾಮಾನ ಮಾಹಿತಿ, ಮಕ್ಕಳಿಗಾಗಿ ಚಿಲಿಪಿಲಿ ಕಾರ್ಯಕ್ರಮ, ಆಂಗ್ಲಭಾಷೆಯ ವಾರ್ತೆಗಳು, ದೆಹಲಿ ಕೇಂದ್ರದಿಂದ ಹಿಂದಿ ವಾರ್ತೆ, ಉರ್ದು, ಸಂಸ್ಕೃತ ವಾರ್ತೆ ಎಲ್ಲವೂ ಕೇಳಿ ಬರುತ್ತಿತ್ತು. ಆಗ ನಮಗೆ ಸಂಸ್ಕೃತದ ಒಂದಕ್ಷರವೂ ಬಾರದೇ ಇದ್ದರೂ (ಈಗಲೂ ಬರುವುದಿಲ್ಲ) ಆ ವಾರ್ತೆಯನ್ನು ಕೇಳುತ್ತಿದ್ದೆವು. ಅದನ್ನು ಹೇಳುವ ರೀತಿಯೇ ಒಂಥರಾ ಖುಷಿ ಕೊಡುತ್ತಿತ್ತು. ಕೆಲವು ಬಾರಿ ಯಕ್ಷಗಾನದ ತುಣುಕು, ಆರೋಗ್ಯ ಮಾಹಿತಿ, ಸಂದರ್ಶನ ಕಾರ್ಯಕ್ರಮ, ಕಿರು ನಾಟಕಗಳು, ವಿಶೇಷ ದಿನಗಳಂದು ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು.

ನಾನು ಏಳನೇ ತರಗತಿಯಲ್ಲಿದ್ದಾಗ ಒಮ್ಮೆ ಮಂಗಳೂರು ಆಕಾಶವಾಣಿಯ ಒಳಗಡೆ ಹೋದ ನೆನಪು. ನಮ್ಮ ಶಾಲೆಯಿಂದ ಮಕ್ಕಳ ಕಾರ್ಯಕ್ರಮಕ್ಕಾಗಿ ನಾವೊಂದು ಪುಟ್ಟ ನಾಟಕದಲ್ಲಿ ಅಭಿನಯಿಸಬೇಕಿತ್ತು ಅಂದರೆ ಧ್ವನಿ ನೀಡಬೇಕಿತ್ತು. ಹವಾನಿಯಂತ್ರಿತ ಕೊಠಡಿಯೊಳಗೆ ಹೋಗಿ ಕುಳಿತದ್ದೇ ನಮಗೆಲ್ಲಾ ಖುಷಿ. ಆಗೆಲ್ಲಾ ಹವಾನಿಯಂತ್ರಣ (ಎಸಿ) ವ್ಯವಸ್ಥೆ ಉಳ್ಳವರ ಸೊತ್ತಾಗಿತ್ತು. ಈ ಕಾರಣದಿಂದ ನಮಗೆ ಆಕಾಶವಾಣಿಯೊಳಗಿನ ತಂಪು ವಾತಾವರಣ ಬಹಳ ಸಂತೋಷ ನೀಡಿತ್ತು. ನಾವು ನೀಡಿದ ಧ್ವನಿಯನ್ನು ಮುದ್ರಣ ಮಾಡಿ ನಂತರ ಒಂದು ವಾರದ ನಂತರ ರೇಡಿಯೋದಲ್ಲಿ ಕೇಳಿದಾಗ ಏನೋ ಒಂಥರಾ ರೋಮಾಂಚನದ ಅನುಭವವಾದದ್ದು ಸುಳ್ಳಲ್ಲ. ನಂತರ ನನಗೆ ಎಂದೂ ಆಕಾಶವಾಣಿಯೊಳಗೆ ಕಾಲಿಡುವ ಅವಕಾಶ ಸಿಗಲಿಲ್ಲ. 

ಇಂದಿನ ಯುಗದಲ್ಲಿ ಎಲ್ಲವೂ ಮೊಬೈಲ್ ನಲ್ಲಿ ಸಿಗುತ್ತಿರುವ ಕಾರಣ ರೇಡಿಯೋ ಕೇಳುಗರ ಸಂಖ್ಯೆ ಕಡಿಮೆ ಆಗಿದೆ. ಆದರೂ ಎಫ್ ಎಂ ರೇಡಿಯೋದ ಹುಟ್ಟಿನಿಂದಾಗಿ ಈಗಲೂ ಕೇಳುಗರ ಸಂಖ್ಯೆ ಸಾಕಷ್ಟು ಮಟ್ಟಿಗೆ ಉಳಿದುಕೊಂಡಿದೆ. ಪುಟ್ಟ ಪುಟ್ಟ ಮೊಬೈಲ್ ನಲ್ಲೂ ದಿನದ ೨೪ ಗಂಟೆಯೂ ಹಾಡುಗಳನ್ನು ಕೇಳುತ್ತಾ ಇರುವ ಎಫ್ ಎಂ ರೇಡಿಯೋ ಎಂಬುವುದು ಬಹಳ ಉತ್ತಮ ವ್ಯವಸ್ಥೆ. ನೀವು ಕಾರ್ ಮೂಲಕ ದೂರದ ಊರಿಗೆ ಪ್ರಯಾಣ ಬೆಳೆಸುತ್ತಿರುವಾಗಲೂ ನಿಮಗೆ ಎಫ್ ಎಂ ರೇಡಿಯೋ ಉತ್ತಮ ಸಂಗಾತಿಯಾಗಬಲ್ಲದು. ಹಲವಾರು ಖಾಸಗಿ ಎಫ್ ಎಂ ರೇಡಿಯೋ ವ್ಯವಸ್ಥೆಗಳು ಇವೆ. ಇದರ ಜೊತೆ ವಿದ್ಯಾರ್ಜನೆಯ ಜೊತೆಗೇ ಕಾಲೇಜಿನಲ್ಲೇ ಪುಟ್ಟ ರೇಡಿಯೋ ತಾಣವನ್ನು ಸ್ಥಾಪನೆ ಮಾಡಿದ ಸಂಸ್ಥೆಗಳೂ ಇವೆ. ಉದಾಹರಣೆಗೆ ಮಂಗಳೂರಿನ ಸೈಂಟ್ ಅಲೋಶಿಯನ್ ಕಾಲೇಜಿನಲ್ಲಿ ‘ರೇಡಿಯೋ ಸಾರಂಗ್’ ಎನ್ನುವ ರೇಡಿಯೋ ವ್ಯವಸ್ಥೆ ಇದೆ. ಮಂಗಳೂರು ಆಕಾಶವಾಣಿಯೂ ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ತಂದು ರೇಡಿಯೋ ಕೇಳುಗರನ್ನು ತನ್ನತ್ತ ಆಕರ್ಷಿಸಲು ಪ್ರಯತ್ನ ಮಾಡುತ್ತಿದೆ.

ಏನಾದರಾಗಲಿ, ರೇಡಿಯೋ ಒಂದು ರೀತಿಯಲ್ಲಿ ಹಳೆಯ ಮತ್ತು ಹೊಸತರ ನಡುವಿನ ಬಿಡಿಸಲಾಗದ ಕೊಂಡಿ. ಈ ಕಾರಣದಿಂದಲೇ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿದ ತಕ್ಷಣವೇ ಪ್ರತೀ ತಿಂಗಳ ಕೊನೆಯ ರವಿವಾರ ‘ಮನ್ ಕೀ ಬಾತ್' ಎಂಬ ರೇಡಿಯೋ ಕಾರ್ಯಕ್ರಮ ಪ್ರಾರಂಭಿಸಿದ್ದು. ಈಗಾಗಲೇ ಈ ಕಾರ್ಯಕ್ರಮ ನೂರರ ಗಡಿ ದಾಟಿದೆ. ಆ ತಿಂಗಳಲ್ಲಿ ತಮ್ಮ ಗಮನಕ್ಕೆ ಬಂದ, ಜನರಿಗೆ ತಿಳಿಸಬೇಕಾದ ಹಲವಾರು ವಿಷಯಗಳನ್ನು ಉದಾಹರಣೆಗಳ ಸಹಿತ ಪ್ರಧಾನಿಯವರು ಈ ಕಾರ್ಯಕ್ರಮದಲ್ಲಿ ಹೇಳುತ್ತಾರೆ. ನಮ್ಮದೇ ರಾಜ್ಯದ ನಮಗೆ ಗೊತ್ತೇ ಇಲ್ಲದ ಹಲವಾರು ಸಾಧಕರ ಹೆಸರನ್ನು ಪ್ರಧಾನಿಯವರು ತಮ್ಮ ‘ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಹೇಳಿ, ಪರಿಚಯಿಸಿದ್ದಾರೆ. ಈ ಕಾರ್ಯಕ್ರಮ ರೇಡಿಯೋ ಕಾರ್ಯಕ್ರಮಗಳಿಗೆ ಪ್ರಧಾನಿಯವರು ಮಾಡಿದ ಕಾಯಕಲ್ಪ ಎನ್ನಬಹುದೇನೋ? 

ನಿಜಕ್ಕೂ ೯೦ರ ದಶಕಕ್ಕೂ ಮೊದಲಿನ ಸಮಯ ರೇಡಿಯೋ ಕೇಳುಗರದ್ದೇ ಆಗಿತ್ತು. ರೇಡಿಯೋ ಕೇಳಲು ಮನೆಯಲ್ಲೇ ಇರಬೇಕೆಂದು ಇರಲಿಲ್ಲ. ಪುಟ್ಟ ರೇಡಿಯೋ ಸಾಧನವನ್ನು ಹಿಡಿದುಕೊಂಡು ಹೋಗಿ ನಮಗೆ ಬೇಕಾದಲ್ಲಿ ಕುಳಿತು ಕಾರ್ಯಕ್ರಮವನ್ನು ಕೇಳಬಹುದಾಗಿತ್ತು. ಸಮಯದ ಜೊತೆಗೆ ಬಹಳಷ್ಟು ಬದಲಾವಣೆಗಳು ಸಂಭವಿಸಿವೆ. ಆದರೆ ಅಂದಿನ ರೇಡಿಯೋ ಜಮಾನಾದ ಮರೆಯಲಾಗದ ನೆನಪುಗಳು ಇಂದಿನ ‘ರೇಡಿಯೋ ದಿನ'ದಂದು ಮತ್ತೆ ನೆನಪಾದವು.

ಚಿತ್ರ ಕೃಪೆ: ಅಂತರ್ಜಾಲ ತಾಣ