ರೇಷ್ಮೆ ರುಮಾಲು

ರೇಷ್ಮೆ ರುಮಾಲು

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ಆಗಸ್ಟ್, ೨೦೦೭

‘ರೇಷ್ಮೆ ರುಮಾಲು’ ಎಂಬ ಕಾದಂಬರಿಯನ್ನು ಒಮ್ಮೆ ನೀವು ಓದಲೆಂದು ಕೈಗೆತ್ತಿಕೊಂಡರೆ, ಮುಗಿಯುವ ತನಕ ಕೆಳಗಿಡಲಾರಿರಿ, ಅಂತಹ ಕಥಾ ವಸ್ತುವನ್ನು ಹೊಂದಿದ ರೋಚಕ ಕಾದಂಬರಿ ಇದು. “ಬ್ರಿಟೀಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುವುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಭವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ, ಅಲ್ಲಹುವಿನ ಭಕ್ತರಾದ ಸೈಯದ್ - ಸುನ್ನಿ ಮುಸಲ್ಮಾನರೂ ಇರುತ್ತಿದ್ದರು. ದೇವರ ಹೆಸರಿನಲ್ಲೇ ಎಲ್ಲವೂ ನಡೆಯುತ್ತಿತ್ತು. ಅವರಿಗೆ ಪ್ರತ್ಯೇಕವಾದ ರಾಮಸಿ ಎಂಬ ಭಾಷೆಯೇ ಇರುತ್ತಿತ್ತು. ಅಂಥ ಥಗ್ಗರ ನಾಯಕ ಅಮೀರ್ ಅಲಿಯನ್ನು ಕೂಡಿಸಿಕೊಂಡು ಲೇಖಕ ಫಿಲಿಪ್ ಮೆಡೋಸ್ ಟೇಲರ್ ಹೇಳಿಸಿದ ಕಥೆಯೇ ‘ರೇಷ್ಮೆ ರುಮಾಲು'.” ಎಂದು ಬೆನ್ನುಡಿಯಲ್ಲಿ ಖುದ್ದು ರವಿ ಬೆಳಗೆರೆಯವರೇ ಬರೆದಿದ್ದಾರೆ.

ಇದೊಂದು ಭಾರತದ ಇತಿಹಾಸದ ರಕ್ತ ಸಿಕ್ತ ಅಧ್ಯಾಯವನ್ನು ಒಳಗೊಂಡ ಚಿತ್ರಣ. ಥಗ್ ಸಂಪ್ರದಾಯದ ಬಗ್ಗೆ ಹಳೆಯ ಕಾಲದ ಎಂಟನೇ ತರಗತಿಯ ಸಮಾಜ ಪಾಠದಲ್ಲಿ ‘ಲಾರ್ಡ್ ವಿಲಿಯಂ ಬೆಂಟಿಂಕನು ಥಗ್ಗರನ್ನು ಸದೆ ಬಡಿದು, ಪಿಂಡಾರಿಗಳನ್ನು ಮಟ್ಟಹಾಕಿದನು' ಎಂಬ ಸಾಲುಗಳಷ್ಟೇ ಇವೆ. ಹಳೆಯ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಈ ಕಾದಂಬರಿ ಬರೆದ ಮೂಲ ಲೇಖಕನಾದ ಮೆಡೋಸ್ ಟೇಲರ್ ಕುರಿತ ಸಂಕ್ಷಿಪ್ತ ಬರಹಗಳು ಪ್ರಕಟವಾಗಿದ್ದವು. 

ರವಿ ಬೆಳಗೆರೆಯವರು ಮುನ್ನುಡಿಯಲ್ಲಿ ಬರೆಯುತ್ತಾರೆ “ ಒಂದು ದಿನ ಬೇಸರ ಕಳೆಯಲೆಂದು ಯಾವತ್ತೋ ಓದಲೆಂದು ತಂದಿಟ್ಟುಕೊಂಡ ‘Confessions of a Thug’ ಪುಸ್ತಕ ಓದಲು ಕುಳಿತೆ ನೋಡಿ. ಬೆಳಕು ಹರಿಯುವ ತನಕ ಓದಿ ಮುಗಿಸಿಬಿಟ್ಟೆ. ಆಮೇಲೆ ಆಸಕ್ತಿ ಹಿಗ್ಗಿದಂತಾಗಿ ಬೇರೆ ಬೇರೆ ಪುಸ್ತಕ, ದಸ್ತಾವೇಜು ತರಿಸಿಕೊಂಡು ಒಂದು ಕಡೆಯಿಂದ ಟಿಪ್ಪಣಿ ಮಾಡಿಕೊಂಡೆ. ಇದು ಕೇವಲ ಹತ್ಯಾ ಕಥನವಾಗದೆ ಸಾಗುತ್ತ ಸಾಗುತ್ತ ಭಾರತದ ಇತಿಹಾಸದ ಒಂದು ಭಾಗವಾಗುತ್ತದೆ. ಎಲ್ಲೆಲ್ಲೋ ಹಿಂದು ಆಗುತ್ತದೆ. ಫಕ್ಕನೆ ಮುಸ್ಲಿಂ ಆಗುತ್ತದೆ. ಮಾನವೀಯ ಸಂಬಂಧಗಳ ಕನ್ನಡಿಯಾಗುತ್ತದೆ. ರಾಗ ದ್ವೇಷಗಳ ಘಟ್ಟವಾಗುತ್ತದೆ. ಬಹುಷಃ ಇವೆಲ್ಲ ಕಾರಣಗಳಿಂದಾಗಿಯೇ ಸಾವಿರ ಕೊಲೆಗಳ ಕಥನವಾದರೂ ಇದು ಓದಿಸಿಕೊಂಡು ಹೋಗುತ್ತದೆ.”

ಥಗ್ಗರು ರೇಷ್ಮೆ ಬಟ್ಟೆಯ ರುಮಾಲಿನಿಂದ ಮಾಡುವ ಹತ್ಯೆಗಳ ಚತುರತೆಯು ಓದಲು ಬಹಳ ರೋಚಕತೆ ಸೃಷ್ಟಿಸುತ್ತದೆ. ಥಗ್ಗರ ಸಂಪ್ರದಾಯಗಳು, ಆಚಾರ-ವಿಚಾರಗಳು, ಅವರ ಭಾಷೆ ಎಲ್ಲವೂ ನಮ್ಮ ಮನಸ್ಸಿನಲ್ಲಿಯೇ ಹೊಸದಾದ ಲೋಕವೊಂದನ್ನು ಸೃಷ್ಟಿಸುತ್ತಾ ಹೋಗುತ್ತದೆ. ರವಿ ಬೆಳಗೆರೆಯವರು ಈ ಪುಸ್ತಕವನ್ನು ಹಿರಿಯ ಲೇಖಕರಾದ ಮನೋಹರ ಮಳಗಾಂವಕರ್ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿದ್ದಾರೆ. ಸುಮಾರು ೩೫೦ ಪುಟಗಳ ಈ ಕಾದಂಬರಿಯು ರವಿ ಬೆಳಗೆರೆಯವರ ಅದ್ಭುತ ಶೈಲಿಯ ಕಾರಣದಿಂದ ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ.