ರೈತರೇ ಮಾಡಬಹುದಾದ ಬಾಳೆಯ ಅಂಗಾಂಶ ಕಸಿ
ಉತ್ತಮ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು ಗಡ್ಡೆಯ ಮೂಲದಲ್ಲಿ ೪ ತಿಂಗಳೊಳಗೆ ೫೦ ಕ್ಕೂ ಹೆಚ್ಚು ಸಸಿಗಳನ್ನು ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಅನ್ವೇಷಣೆ ಮಾಡಿದ್ದಾರೆ.
ವಿಧಾನ: ಉತ್ತಮ ನಿರ್ವಹಣೆಯಿರುವ ತೋಟದಿಂದ ಬಾಳೆಯ ಇಳುವರಿ ಕ್ಷಮತೆ ಗಮನಿಸಿ, ೨-೩ ತಿಂಗಳು ಪ್ರಾಯದ ೭೦೦ ರಿಂದ ೧ ಕಿಲೋ ತನಕ ತೂಗುವ ಕತ್ತಿ ಕಂದನ್ನು ಆಯ್ಕೆ ಮಾಡಬೇಕು. ಬಾಳೆಯಿಂದ ಅದನ್ನು ಪೆಟ್ಟಾಗದಂತೆ ಜಾಗರೂಕತೆಯಲ್ಲಿ ಬೇರ್ಪಡಿಸಬೇಕು. ತೆಗೆದ ಗಡ್ಡೆಯ ಬೇರುಗಳನ್ನೆಲ್ಲಾ ಕತ್ತರಿಸಿ ತೆಗೆದು, ಸಸ್ಯ ಭಾಗವನ್ನು ಪೂರ್ತಿ ಕತ್ತರಿಸಿ ತೆಗೆದು ಗಡ್ಡೆ ಮಾತ್ರ ಉಳಿಸಬೇಕು. ಆ ಗಡ್ಡೆಗೆ ಗುಣಾಕಾರ ಚಿನ್ಹೆಯಂತೆ ೮/೧೦, ೦.೨೫ ರಿಂದ ೦.೫೦ ಸೆ. ಮೀ. ಆಳದ ಗಚ್ಚುಗಳನ್ನು ಹಾಕಬೇಕು. ನಂತರ ಗಡ್ಡೆಯನ್ನು ಶಿಲೀಂದ್ರ ಸೋಕು ನಿವಾರಣೆಗೆ ಶೇ. ೦.೩ ರ ಬಾವಿಸ್ಟಿನ್ ದ್ರಾವಣದಲ್ಲಿ ಅದ್ದಿ ತೆಗೆದು ೩-೪ ಗಂಟೆ ಕಾಲ ನೆರಳಿನಲ್ಲಿ ಒಣಗಿಸಬೇಕು.
ಈ ರೀತಿ ಸಿದ್ದಪಡಿಸಿದ ಗಡ್ಡೆಗಳನ್ನು ಪಾತಿಯಲ್ಲಿ, ಪಾಲಿಥೀನ್ ಚೀಲದಲ್ಲಿ ಅಥವಾ ಕುಂಡಗಳಲ್ಲಿ ಮರದ ಹುಡಿಯನ್ನು ಗಡ್ಡೆಯ ಮೇಭಾಗ ೩-೫ ಸೆಂ.ಮೀ. ಮುಚ್ಚುವಂತೆ ಹಾಕಿ ನೆರಳಿನಲ್ಲಿ ಇಡಬೇಕು. ಮರ ಸಿಗಿದ ಹುಡಿಗೆ ತೇವಾಂಶವನ್ನು ಅಧಿಕ ಪ್ರಮಾಣದಲ್ಲಿ ಹೀರಿಕೊಳ್ಳುವ ಗುಣ ಇದೆ ಮತ್ತು ರೋಗಗಳು ಇರುವುದಿಲ್ಲ. ನೀರೆಯುವಾಗ ಗಡ್ಡೆಯ ಮೇಲ್ಭಾಗ ತೆರೆದುಕೊಳ್ಳಬಾರದು. ಮಾಧ್ಯಮವು ಸದಾ ತೇವದಿಂದ ಇರಬೇಕು.
ಮರದ ಹುಡಿಯಲ್ಲದೆ ಬೇರೆ ಬೇರೆ ಮಾಧ್ಯಮವನ್ನೂ ಬಳಸಿ ನೊಡಲಾಗಿದ್ದರೂ, ಮರದ ಹುಡಿಯೇ ಉತ್ತಮವೆಂದು ಕಂಡು ಬಂದಿದೆ. ಈ ರೀತಿ ನಾಟಿ ಮಾಡಿದ ಗಡ್ಡೆಯಲ್ಲಿ ೧೭-೨೦ ದಿನಕ್ಕೆ ೨-೫ ಸಂಖ್ಯೆಯ ಮೊಳಕೆಗಳು ಮೂಡುತ್ತವೆ. ಅದನ್ನು ೨೫ ರಿಂದ ೩೦ ದಿನ ಬೆಳೆಯಲು ಬಿಟ್ಟಾಗ ಸುಮಾರು ೧-೨೦ ಸೆಂ ಮೀ. ಎತ್ತರಕ್ಕೆ ಬೆಳೆದು ೩ ಎಲೆ ಬಂದಿರುತ್ತದೆ. ಅದನ್ನು ಗಡ್ಡೆ ಉಳಿಸಿ ಸಸಿಯನ್ನು ಮಾತ್ರ ಜಾಗರೂಕತೆಯಲ್ಲಿ ಚೂರಿಯ ಮೂಲಕ ಕತ್ತರಿಸಿ ತೆಗೆಯಬೇಕು. ಆ ಗಡ್ಡೆಗೆ ಮತ್ತೆ ಪುನಹ ಎರಡು ಇಲ್ಲವೇ ಮೂರು ಗಚ್ಚು ಕೊಟ್ಟು ಮರದ ಹುಡಿಯಲ್ಲಿ ಮುಚ್ಚಿಟ್ಟರೆ, ಅದರಲ್ಲಿ ಮತ್ತೆ ೨೦ ದಿನಗಳಲ್ಲಿ ೪-೫ ಮೊಳಕೆಗಳು ಬರುತ್ತವೆ. ಅದನ್ನೂ ಸಹ ೩೦ ದಿನಗಳ ಕಾಲ ಬೆಳೆಯಲು ಬಿಟ್ಟು ನಂತರ ಸಸ್ಯ ತೆಗೆದು, ಗಡ್ಡೆ ಉಳಿಸಿ ಗಚ್ಚು ಕೊಟ್ಟು ಮರದ ಹುಡಿ ಮುಚ್ಚಿ ಅಲ್ಲೇ ಬಿಡಬೇಕು. ಎರಡು ಸಾರಿ ಸಸ್ಯವನ್ನು ತೆಗೆದು ಮೂರನೇ ಬಾರಿ ಮೊಳಕೆ ಬರಲು ಬಿಟ್ಟಾಗ ೨೦-೩೦ ಸಂಖ್ಯೆಯ ಬೇರು ಬಂದ ಮೊಳಕೆಗಳು ಹುಟ್ಟಿಕೊಳ್ಳುತ್ತವೆ. ಅ ಸಮಯದಲ್ಲಿ ಗಡ್ಡೆಯನ್ನು ಮೇಲೆ ತೆಗೆದು ಅದಕ್ಕೆ ಅಂಟಿಕೊಂಡಿರುವ ಮರದ ಹುಡಿಯನ್ನು ತೆಗೆದು ಗಡ್ಡೆಯನ್ನು ಜಾಗರೂಕತೆಯಲ್ಲಿ ತೊಳೆದು ತೆಗೆದು ಒಂದು ಹರಿತವಾದ ಚೂರಿಯಿಂದ ಆ ಮೊಳಕೆಗಳನ್ನು ಜಾಗರೂಕತೆಯಲ್ಲಿ ಪ್ರತ್ಯೇಕಿಸುತ್ತ ಬರಬೇಕು. ಪ್ರತಿಯೊಂದು ಬೇರ್ಪಡಿತ ಮೊಳಕೆಯಲ್ಲಿಯೂ ೨-೩ ಉತ್ತಮ ಬೇರುಗಳಿರಬೇಕು. ಒಂದು ವೇಳೆ ಸಸ್ಯದ ಬೇರು ಸ್ವಲ್ಪ ಹಾನಿಯಾದರೂ ಉತ್ತಮ ಆರೈಕೆಯಲ್ಲಿ ಮತ್ತೆ ಬೆಳೆಯುತ್ತದೆ. ಹೆಚ್ಚು ಬೇರುಗಳಿದ್ದರೆ ಕತ್ತರಿಸಿ ತೆಗೆಯಬೇಕು. ಬೇರಿನ ಉದ್ದವೂ ೨-೩ ಇಂಚಿನಷ್ಟು ಇದ್ದರೆ ಸಾಕು. ನಂತರ ಪ್ರತೀಯೊಂದು ಸಸಿಯನ್ನು ಒಂದೊಂದು ಪಾಲಿಬ್ಯಾಗ್ ನಲ್ಲಿಟ್ಟು ನೆಟ್ಟು, ಅದನ್ನು ಗಡಸುತನಕ್ಕೆ ಒಳಪಡಿಸಬೇಕು. ಗಡ್ಡೆಯನ್ನು ಮತ್ತೆ ಮರದ ಹುಡಿಯ ಮಾಧ್ಯಮದಲ್ಲಿ ಹಾಕಿದರೆ ಮತ್ತೆ ಅದರಲ್ಲಿ ಸಸ್ಯ ಮೊಗ್ಗುಗಳು ಬರುತ್ತವೆ.
ಪಾಲಿಥೀನ್ ಚೀಲಕ್ಕೆ ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ ಮತ್ತು ಮರಳನ್ನು ೧:೧:೧ ರ ಅನುಪಾತದಲ್ಲಿ ಮಾಧ್ಯಮವನ್ನು ಸೇರಿಸಬೇಕು. ಕತ್ತರಿಸಿ ತೆಗೆದ ಸಸಿಗಳ ಮೊಳಕೆಗಳಲ್ಲಿ ಬೇಗ ಬೇರು ಬರುವಂತೆ ಶೇ. ೦.೨೫ ರ ಐಬಿಎ (ಇಂಡೋಲ್ ಬ್ಯೂಟ್ರಿಕ್ ಅಸಿಡ್ IBA) ದಾವಣದಲ್ಲಿ ೧೫ ನಿಮಿಷ ಕಾಲ ಅದ್ದಿ ತೆಗೆಯಬೇಕು. ನಂತರ ಅದನ್ನು ಪಾಲಿಥೀನ್ ಚೀಲದಲ್ಲಿ ನೆಡಬೇಕು. ಇಂಡೋಲ್ ಬ್ಯುಟ್ರಿಕ್ ಆಸಿಡ್ ಅನ್ನು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಐಬಿಎ ಯನ್ನು ನೀರಿನಲ್ಲಿ ಮಿಶ್ರಣಮಾಡಿ ತಯಾರಿಸಿಕೊಳ್ಳಬಹುದು. ಈ ಪಾಲಿಥೀನ್ ಚೀಲಕ್ಕೆ ನೀರು ಒದಗಿಸುತ್ತಾ ೪೫ ದಿನಗಳ ಕಾಲ ನೆರಳಿನಲ್ಲಿ ಇಡಬೇಕು. ೪೫ ದಿನಗಳ ನಂತರ ಅದು ನಾಟಿಗೆ ಸಿದ್ದವಾಗುತ್ತದೆ.
ಹೆಚ್ಚು ಸಂಖ್ಯೆಯಲ್ಲಿ ಮೊಳಕೆ ಬರಿಸಲು ಮರದ ಹುಡಿಗೆ ಜೈವಿಕ ಗೊಬ್ಬರಗಳಾದ ಮೈಕೋರೈಝಾ, ಟ್ರೈಕೋಡರ್ಮಾವನ್ನು ಬಳಸಬೇಕು. ಶಿರಚ್ಚೇಧ ಮಾಡಿದ ಗಡ್ಡೆಯನ್ನು ಮರದ ಹುಡಿಯ ಪಾತಿಯಲ್ಲಿ ನಾಟಿ ಮಾಡುವಾಗ ಅದರ ಮೊಳಕೆ ಭಾಗದ ಕುಳಿಗೆ (meristem) ವನ್ನು ೪ ಮಿಲಿ ಲೀ. ಬಿ ಎ ಪಿ BAP (೦.೦೪%) ಹಾಕಿದರೆ ಅಧಿಕ ಮೊಗ್ಗು ಮೂಡುತ್ತದೆ. ಇದು ಸಾಮಾನ್ಯ ರೈತರಿಗೆ ಅಷ್ಟು ಅವಶ್ಯಕವಲ್ಲ. ವಾಣಿಜ್ಯಿಕವಾಗಿ ಸಸ್ಯೋತ್ಪಾದನೆ ಮಾಡುವಾಗ ಇದು ಬೇಕಾಗುತ್ತದೆ. ಈ ರೀತಿಯ ಸಸ್ಯೋತ್ಪಾದನೆಯಲ್ಲಿ ಒಟ್ಟು ೧೩೦-೧೩೫ ದಿನದಲ್ಲಿ ಒಂದು ಗಡ್ಡೆಯಿಂದ ೫೦-೬೦ ನೆಡಬಹುದಾದ ಸಸ್ಯಗಳನ್ನು ಉತ್ಪಾದಿಸಬಹುದು.
ಹೊಲದಲ್ಲೇ ಸಸ್ಯೋತ್ಪಾದನೆ: ರೈತರು ತಮಗೆ ಬೇಕಾದಷ್ಟು ಪ್ರಮಾಣದ ಸಸ್ಯಗಳನ್ನು ಉತ್ಪಾದಿಸಿಕೊಳ್ಳಬೇಕಾದರೆ ಮೇಲಿನಂತೆ ಕ್ರಮಗಳನ್ನು ಅನುಸರಿಸಬೇಕಾಗಿಲ್ಲ. ಎಲ್ಲಿ ಬಾಳೆ ಇದೆಯೋ ಅಲ್ಲೇ ಗಡ್ಡೆಯನ್ನು ತೆಗೆಯದೇ ಅಲ್ಲೇ ಮೇಲಿನ ಕ್ರಮದಂತೆ ಸಸಿ ಮಾಡಿಕೊಳ್ಳಬಹುದು.
ಇದು ಗ್ರಾಮಿಣ ರೈತರಿಗೆ ಗುಣಮಟ್ಟದ ಸಸ್ಯಗಳನ್ನು ಪ್ರಯೋಗಾಲಯವಿಲ್ಲದೇ ತಮ್ಮ ಬಳಿಯಲ್ಲೇ ಉತ್ಪಾದನೆ ಮಾಡಬಹುದಾದ ಮಿತವ್ಯಯದ ತಾಂತ್ರಿಕತೆ. ಅಂಗಾಂಶ ಕಸಿಯ ತಂತ್ರಜ್ಞಾನಕ್ಕೆ ಬೇಕಾಗುವ ಬಂಡವಾಳ ಮತ್ತು ಇತರ ಪೂರಕ ವ್ಯವಸ್ಥೆಗಳು ಇದಕ್ಕೆ ಬೇಕಾಗಿಲ್ಲ. ಇದು ರೈತರಿಗೆ ಕೈಗೆಟಕುವಂತದ್ದು. ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು, ನರ್ಸರಿ ಮಾಡಿ ಗ್ರಾಮೀಣ ಭಾಗದಲ್ಲಿ ವ್ಯವಹಾರ ಮಾಡಬಹುದು. ಆಗಾಗ ಪಟ್ಟಣಗಳ ರಸ್ತೆ ಬದಿಯಲ್ಲಿ ತೊಟ್ಟೆಯಲ್ಲಿ ಬೆಳೆಸಿದ ಬಾಳೆ ಸಸಿ ಮಾರಾಟಕ್ಕೆ ಸಿಗುವುದು ಇದೇ ರೀತಿಯಲ್ಲಿ ಮಾಡಿದ ಸಸ್ಯೋತ್ಪಾದನೆ.
(ಮೂಲ: ರಾಷ್ಟ್ರೀಯ ಬಾಳೆ ಸಂಶೋಧನಾ ಸಂಸ್ಥೆ ತಿರುಚಿನಾಪಳ್ಳಿಯ ತಮಿಳು ಹಸ್ತ ಪ್ರತಿ.)
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ