ರೈತರ ಆತ್ಮಹತ್ಯೆ ಕಾರಣ ಬೆಂಬತ್ತಿದಾಗ...
ಕರ್ನಾಟಕದಲ್ಲಿ ೨೦೧೨ರಲ್ಲಿ, ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೦೪. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಜೀವ ಕಳೆದುಕೊಂಡದ್ದು ಬೀದರ್ (೧೪ ರೈತರು) ಮತ್ತು ಹಾಸನ (೧೧ ರೈತರು) ಜಿಲ್ಲೆಗಳಲ್ಲಿ. ಇದು ಕರ್ನಾಟಕದ ಕೃಷಿ ಇಲಾಖೆ ನೀಡಿರುವ ಮಾಹಿತಿ.
ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿಯೂ ರೈತರದ್ದು ಇದೇ ಸಂಕಟ. ಅಲ್ಲಿ ನವಂಬರ್ ೨೦೧೧ ತಿಂಗಳೊಂದರಲ್ಲೇ ೬ ಜಿಲ್ಲೆಗಳಲ್ಲಿ ೯೦ ರೈತರ ಆತ್ಮಹತ್ಯೆ - ಇದು ರೈತು ಸ್ವರಾಜ್ಯ ವೇದಿಕ ಎಂಬ ೪೦ ರೈತ ಸಂಘಗಳ ಸಂಘಟನೆ ನೀಡಿದ ಮಾಹಿತಿ. ವಿದರ್ಭದಿಂದಲೂ ಇಂತಹದೇ ನೋವಿನ ಸುದ್ದಿ. ವಿದರ್ಭ ಜನ ಆಂದೋಲನ ಸಮಿತಿಯ ಪ್ರಕಾರ, ೨೦೧೧ರಲ್ಲಿ ಮಹಾರಾಷ್ಟ್ರದ ಮಳೆಯಾಶ್ರಿತ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ೬೭೧.
ಯಾಕೆ ಹೀಗಾಯಿತು? ಮಳೆ ಕೈಕೊಟ್ಟಿತು, ಬೆಳೆ ಕೈಬಿಟ್ಟಿತು. ಇದರಿಂದಾಗಿ ರೈತರಿಗೆ ತಮ್ಮ ಜೀವವೇ ಬೇಡವಾಯಿತು. ಆದರೆ ಪ್ರಧಾನ ಕಾರಣ ಬೇರೇಯೇ ಇದೆ. ಆಂಧ್ರದ ವಾರಂಗಲ್ ಜಿಲ್ಲೆಯ ರೈತರ ಬದುಕನ್ನು ಇಸವಿ ೨೦೦೦ದಿಂದ ಅಧ್ಯಯನ ಮಾಡುತ್ತಿರುವ ಗ್ಲೆನ್ ಡೇವಿಸ್ ಸ್ಟೋನ್ ಅದನ್ನು ಗುರುತಿಸಿದ್ದಾರೆ. (ಅವರು ವಾಷಿಂಗ್ಟನ್ ವಿಶ್ವವಿದ್ಯಾಲಯದ ಮಾನವ ವಿಜ್ನಾನ ಮತ್ತು ಪರಿಸರ ಅಧ್ಯಯನದ ಪ್ರೊಫೆಸರ್) ಅದುವೇ ತಾಂತ್ರಿಕತೆಯ ತಿಪ್ಪರಲಾಗ.
ಬೀಜಗಳು, ತಳಿಗಳು ಮತ್ತು ಪೀಡೆನಾಶಕ ರಾಸಾಯನಿಕಗಳಲ್ಲಿ ಹೊಸತುಹೊಸತು ಮಾರುಕಟ್ಟೆಗೆ ಬರುತ್ತಿರುವ ಬಿರುಸಿನ ವೇಗವೇ ತಾಂತ್ರಿಕತೆಯ ತಿಪ್ಪರಲಾಗ. ಈ ವೇಗದ ದಾಳಿಯಿಂದಾಗಿ ೨೦೦೨ರಲ್ಲಿ ಬಿಟಿ ಹತ್ತಿ ಪ್ರಚಾರಕ್ಕೆ ಬಂದಾಗಿನಿಂದ ರೈತರು ತಮ್ಮ ಪಾರಂಪರಿಕ ಕೃಷಿ ಜ್ನಾನಸಂಪತ್ತನ್ನು ಕಳೆದುಕೊಳ್ಳುತ್ತಿದ್ದಾರೆ. ಅದು ಕಣ್ಮರೆಯಾಗುತ್ತಿರುವಂತೆ ತಮ್ಮ ಜಮೀನಿಗೆ ಯಾವ ತಳಿ ಸೂಕ್ತ ಎಂದು ನಿರ್ಧರಿಸಲಾಗದ ರೈತರ ಸಂಖ್ಯೆ ಹೆಚ್ಚುತ್ತಿದೆ. ಹತ್ತಿ ಬೆಳೆಗಾರರು, ಅದರಲ್ಲೂ ಮಳೆಯಾಶ್ರಿತ ಜಮೀನಿನಲ್ಲಿ ಹತ್ತಿ ಬೆಳೆಯುವವರು, ಒಳಸುರಿಗಳ ಏರುತ್ತಿರುವ ವೆಚ್ಚದ ಸುಂಟರಗಾಳಿಯಲ್ಲಿ ಸಿಲುಕಿದ್ದಾರೆ. ಬೀಜಗಳು ಹಾಗೂ ಪೀಡೆನಾಶಕಗಳಿಗಾಗಿ ಅವರು ಸಾವಿರಾರು ರೂಪಾಯಿ ವೆಚ್ಚ ಮಾಡಿದರೂ ಫಸಲು ಅನಿಶ್ಚಿತ. ಯಾಕೆಂದರೆ ಅದು ಮಳೆ ಅವಲಂಬಿತ.
ಪೀಡೆನಾಶಕಗಳಲ್ಲಿ ತಾಂತ್ರಿಕತೆಯ ತಿಪ್ಪರಲಾಗ ಹೇಗಾಗುತ್ತದೆ? ಕೀಟಗಳು ಅಥವಾ ಕಳೆಗಳನ್ನು ನಾಶ ಮಾಡಲಿಕ್ಕಾಗಿ ಒಂದು ವಿಷರಾಸಾಯನಿಕವನ್ನು ಕಂಪೆನಿಯೊಂದು ತಯಾರಿಸುತ್ತದೆ. ಆದರೆ ಆ ಕೀಟ ಅಥವಾ ಕಳೆ ಅದಕ್ಕೆ ಪ್ರತಿರೋಧ ಬೆಳೆಸಿಕೊಳ್ಳುತ್ತದೆ. ಆಗ ರೈತರು ಏನು ಮಾಡುತ್ತಾರೆ? ಅದೇ ವಿಷರಾಸಾಯನಿಕವನ್ನು ಅಥವಾ ಹೊಸ ವಿಷರಾಸಾಯನಿಕವನ್ನು ಹೆಚ್ಚೆಚ್ಚು ಪರಿಮಾಣದಲ್ಲಿ ಬೆಳೆಗೆ ಪ್ರಯೋಗಿಸುತ್ತಾರೆ.
ಗ್ಲೆನ್ ಸ್ಟೋನ್‍ಗೆ ಇಸವಿ ೨೦೦೦ದಲ್ಲಿ ವಾರಂಗಲ್ಲಿಗೆ ಬಂದಾಗಿನ ನೆನಪು ಈಗಲೂ ಹಸಿಹಸಿ. "ರೈತರು ಪೀಡೆನಾಶಕಗಳ ತಿಪ್ಪರಲಾಗದಲ್ಲಿ ಸಿಲುಕಿದ್ದನ್ನು ನಾನು ಮೊದಲು ಕಂಡದ್ದು ಇಲ್ಲಿ" ಎನ್ನುತ್ತಾರೆ. ’ಅಲ್ಲಿನ ರೈತರು ನಿಮಗೆ ಯಾವುದಾದರೂ ಹೊಸ ಪೀಡೆನಾಶಕ ಗೊತ್ತೇ? ಎಂದು ಪದೇಪದೇ ಕೇಳಿದರು. ಯಾಕೆಂದರೆ ಆಗ ಬಳಕೆಯಲ್ಲಿದ್ದ ಕೀಟನಾಶಕಕ್ಕೆ ಪೀಡೆಕೀಟಗಳು ಪ್ರತಿರೋಧ ಬೆಳೆಸಿಕೊಂಡಿದ್ದವು. ಹಾಗಾಗಿ ಆ ಕೀಟನಾಶಕ ನಿಷ್ಪ್ರಯೋಜಕವಾಗಿತ್ತು’ ಎಂಬುದವರ ನೆನಪು.
ಹೊಸಹೊಸ ತಳಿಗಳಲ್ಲಿ ಕೂಡ ತಾಂತ್ರಿಕತೆಯ ತಿಪ್ಪರಲಾಗ ಹೀಗೆಯೇ ಆಗುತ್ತದೆ. ಒಂದು ತಳಿಯ ಇಳುವರಿ ಕಡಿಮೆ ಆಗುತ್ತಿರುವಾಗಲೇ ಹತ್ತಾರು ಹೊಸತಳಿಗಳ ಬಿಡುಗಡೆ. ಮಾರುಕಟ್ಟೆಯಲ್ಲಿ ಈಗ ೮೦೦ ಬಿಟಿ ಹೈಬ್ರಿಡ್‍ಗಳಿವೆ ಎಂದರೆ ನಂಬುತ್ತಿರಾ?
"ಇದರಿಂದಾಗಿ ರೈತರಿಗೆ ಗೊಂದಲವಾಗುತ್ತದೆ" ಎನ್ನುತ್ತಾರೆ, ನಾಗಪುರದ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಕೇಶವ ಕ್ರಾಂತಿ. ವಾರಂಗಲ್ ಜಿಲ್ಲೆಯ ಮೆಕಬೊಡ್ಡು ಗ್ರಾಮದ ನರಸಿ ರೆಡ್ಡಿ ಈ ಮಾತನ್ನು ಒಪ್ಪುತ್ತಾರೆ. "ಇದೊಂದು ಜುಗಾರಿ. ಪಕ್ಕದ ಹೊಲದ ರೈತ ಯಾವ ತಳಿ ಆಯ್ಕೆ ಮಾಡಿದ್ದಾನೆ? ಎಂದು ಗಮನಿಸಿ, ಬಹುಪಾಲು ರೈತರು ಅದನ್ನೇ ಆಯ್ಕೆ ಮಾಡುತ್ತಾರೆ. ಯಾವ ತಳಿ ಆಯ್ಕೆ ಮಾಡಬೇಕೆಂಬುದೇ ನಮ್ಮ ಗೊಂದಲ. ಮೊನ್‍ಸಾಂಟೋ ಕಂಪೆನಿಯ ಬೊಲ್‍ಗಾರ್ಡ್ - ೧ ತಳಿ ಏನೆಂದು ನಮಗೆ ಅಂದಾಜು ಆಗುವಷ್ಟರಲ್ಲಿ ಅದಕ್ಕಿಂತ ಬೊಲ್‍ಗಾರ್ಡ್ - ೨ ತಳಿ ಉತ್ತಮ ಅಂತ ತಿಳಿಸಿದರು" ಎಂಬ ವಿವರಣೆ ಅವರಿಂದ.
ಮುಂಚೆ ನರಸಿ ರೆಡ್ಡಿ ಮತ್ತು ಇತರ ರೈತರು ಒಂದು ತಳಿಯನ್ನು ಒಂದೆರಡು ಹಂಗಾಮು ಬೆಳೆದು ಮೌಲ್ಯಮಾಪನ ಮಾಡುತ್ತಿದ್ದರು. "ಆದರೆ ಈಗ ಪ್ರತಿಯೊಂದೂ ಬಹಳ ವೇಗವಾಗಿ ಬದಲಾಗುತ್ತದೆ" ಎಂದು ಅವಲತ್ತು ಕೊಳ್ಳುತ್ತಾರೆ ಪಕ್ಕದ ಹೊಲದ ರೈತ ಚಿನತಾಲ ಬಾಲಯ್ಯ.
ಹತ್ತಿಯ ಪೀಡೆಕೀಟ ಬೊಲ್‍ವರ್ಮಿಗೆ ವಿರುದ್ಧವಾಗಿ ಬಿಟಿ ಹತ್ತಿ ತಳಿ ಅಭಿವೃದ್ಧಿ ಪಡಿಸಲಾಗಿತ್ತು; ಆದರೆ ಈಗ ಹತ್ತಿಗೆ ರಸ ಹೀರುವ ಕೀಟಗಳ ಕಂಟಕ. ಇವುಗಳ ವಿರುದ್ಧ ಬಿಟಿ ತಂತ್ರಜ್ನಾನ ನಿಷ್ಪ್ರಯೋಜಕ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ ಗ್ಲೆನ್ ಸ್ಟೋನ್. ಹೊಸಹೊಸ ಬಿಟಿ ಹತ್ತಿ ತಳಿಗಳನ್ನು ಬೆಳೆಸಿದಂತೆ ಅವಕ್ಕೆ ದಾಳಿ ಮಾಡುವ ಹೊಸಹೊಸ ಕೀಟ ಹಾಗೂ ರೋಗಗಳೂ ಹೆಚ್ಚಾಗುತ್ತವೆ ಎಂದು ಎಚ್ಚರಿಸುತ್ತಾರೆ ಕೇಶವ ಕ್ರಾಂತಿ.
ಅವರಿಬ್ಬರೂ ಹೊಸ ತಳಿಗಳ ಬಿಡುಗಡೆಯ ಭರಾಟೆಯಲ್ಲಿರುವ ಖಾಸಗಿ ಕಂಪೆನಿಗಳ ಹುನ್ನಾರವನ್ನು ಬಹಿರಂಗ ಪಡಿಸುತ್ತಾರೆ. ವಿವಿಧ ತಳಿಗಳನ್ನು ಬೆಳೆಸಿ, ಮೌಲ್ಯಮಾಪನ ಮಾಡಿ, ಆಯಾ ಪ್ರದೇಶಕ್ಕೆ ಸೂಕ್ತವಾದ ತಳಿ ಹಾಗೂ ಕೃಷಿಕ್ರಮಗಳನ್ನು ಶಿಫಾರಸ್ ಮಾಡಬೇಕಾದ್ದು ಕಂಪೆನಿಗಳ ಜವಾಬ್ದಾರಿ. ಇದನ್ನು ಅವು ನಾಜೂಕಾಗಿ ರೈತರ ಹೆಗಲಿಗೇರಿಸಿವೆ. ಅಂದರೆ ಈ ಕಂಪೆನಿಗಳು ಮಾಡಬೇಕಾಗಿದ್ದ ಕೆಲಸವನ್ನು ಈಗ ರೈತರು ಮಾಡುತ್ತಿದ್ದಾರೆ. ಇದರಿಂದಾಗಿ ಕಳೆದ ಹತ್ತು ವರುಷಗಳಲ್ಲಿ ಲಕ್ಷಗಟ್ಟಲೆ ರೈತರು ತಮ್ಮ ಫಸಲು ಹಾಗೂ ಆದಾಯ ಕಳೆದುಕೊಂಡಿದ್ದಾರೆ. ಹತಾಶರಾದ ರೈತರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನಾದರೂ ರೈತರು ಎಚ್ಚತ್ತುಕೊಳ್ಳಬೇಕು.
Comments
ನಿಮ್ಮ ಮಾತುಗಳು ಚಿಂತನಾರ್ಹ.
In reply to ನಿಮ್ಮ ಮಾತುಗಳು ಚಿಂತನಾರ್ಹ. by kavinagaraj
ನಾ ಕೆಲ ತಿಂಗಳುಗಳ ಹಿಂದೆ ಈ
ಮಣ್ಣಿನ ಗುಣ, ವಾತಾವರಣ ಮತ್ತು
In reply to ಮಣ್ಣಿನ ಗುಣ, ವಾತಾವರಣ ಮತ್ತು by makara
"ರೈತರ ಆತ್ಮಹತ್ಯ್ಗೆಗಳಿಗೆ ಮುಖ್ಯ
In reply to "ರೈತರ ಆತ್ಮಹತ್ಯ್ಗೆಗಳಿಗೆ ಮುಖ್ಯ by Shreekar
ವಿಮೆ-ಸರಕಾರದ್ದು ಖಾಸಗಿಯದ್ದು ಇದೆ