ರೈತರ ಆತ್ಮಹತ್ಯೆ ಮಾಮೂಲಿ ವಿಷಯವೇ?

ರೈತರ ಆತ್ಮಹತ್ಯೆ ಮಾಮೂಲಿ ವಿಷಯವೇ?

ಬಾಬು ಬೆಳಗ್ಗೆ ಎದ್ದು ಮನೆಯ ಹಿಂಬದಿಯ ದನದ ಕೊಟ್ಟಿಗೆಗೆ ಹೋದ. ಅಲ್ಲಿ ಅವನ ತಂದೆ ಕುಸರ ಮಲ್ಲಗೌಡ ಶವವಾಗಿ ಬಿದ್ದಿದ್ದ. ಹಿಂದಿನ ದಿನ ರಾತ್ರಿ ಆತ ಮಾರಕ ಕೀಟನಾಶಕ ಕುಡಿದು, ದನದ ಕೊಟ್ಟಿಗೆಯಲ್ಲಿ ಮಲಗಿದ್ದ. ತನ್ನ ಬದುಕಿನ ಕೊನೆಯ ಒಂದೆರಡು ತಾಸುಗಳಲ್ಲಿ ತಾನು ನೋವಿನಿಂದ ವಿಲವಿಲನೆ ಒದ್ದಾಡುವುದನ್ನು ಮನೆಯವರು ಯಾರೂ ಕೇಳಿಸಿಕೊಳ್ಳಬಾರದು ಎಂದು ಆತ ಬಯಸಿದ್ದ. ತಾನು ಹೇಗೆ ಬದುಕಿದ್ದೆನೋ ಹಾಗೆಯೇ ಸಾಯಬೇಕೆಂದು ಆತ ಆಶೆ ಪಟ್ಟಿದ್ದ - ತನ್ನ ನೋವನ್ನು ತಾನೊಬ್ಬನೇ ನುಂಗುತ್ತಾ, ತನ್ನ ಕುಟುಂಬಕ್ಕೆ ಜೀವ ಹಿಂಡುವ ಸಂಕಟದ ಕಿಂಚಿತ್ ಅರಿವೂ ಆಗದಂತೆ.

ಅಂತಿಮವಾಗಿ, ಕುಸರ ಮಲ್ಲಗೌಡ ತಾನು ಗಾಢವಾಗಿ ಪ್ರೀತಿಸುತ್ತಿದ್ದ, ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದಿದ್ದ ತನ್ನ ಕುಟುಂಬವನ್ನೇ ಅನಾಥವಾಗಿಸಿ ಬಿಟ್ಟು ಹೋದ - ಕಳೆದ ಐದಾರು ವರುಷಗಳಲ್ಲಿ ಇನ್ನೂ ೨೨,೦೦೦ ರೈತರು ಮಾಡಿದಂತೆ.

ಅಪ್ಪನ ನೆನಪಿನಿಂದ ಉಕ್ಕಿ ಬರುವ ಕಣ್ಣೀರನ್ನು ಮಗ ಬಾಬು ತಡೆಯಲು ಪ್ರಯತ್ನಿಸುತ್ತಾನೆ. ಅವನ ಅಜ್ಜಿ ಮತ್ತು ಅತ್ತೆ ಸಂಕಟ ತಡೆಯಲಾಗದೆ ಬಿಕ್ಕಿಬಿಕ್ಕಿ ಅಳುತ್ತಾರೆ. ಮನೆಯ ಮಕ್ಕಳು ಗರಬಡಿದವರಂತೆ ಪಿಳಿಪಿಳಿ ಕಣ್ಣು ಬಿಡುತ್ತಾ ನೋಡುತ್ತವೆ. "ನನ್ನಣ್ಣ ಒಂದು ಮಾತು ಹೇಳಿದ್ದರೆ, ನಮ್ಮದನ್ನೆಲ್ಲಾ ಮಾರಿ, ಅವನ ಸಾಲ ತೀರಿಸಿ, ಅವನನ್ನು ಉಳಿಸಿಕೊಳ್ಳುತಿದ್ದೆವು” ಎಂದು ಉಮ್ಮಳಿಸುವ ದುಃಖ ನುಂಗುತ್ತಾ ಹೇಳುತ್ತಾಳೆ ಕುಸರನ ತಂಗಿ. ಅವನ ಶವದ ಸುತ್ತ ಜಮಾಯಿಸಿರುವ ಹಳ್ಳಿಗರು ಹೇಳುತ್ತಾರೆ, "ನಾವು ಹತಾಶರಾದಾಗ ಸಾಂತ್ವನ ಹೇಳುತ್ತಿದ್ದವನು ಕುಸರ. ಒಂದು ದಿನ ಅವನೇ ಹೀಗೆ ನಮ್ಮನ್ನು ಬಿಟ್ಟು ಹೋಗ್ತಾನೆಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲ."

ಬಾಬುವಿಗೆ ೧೯ ವರುಷ ವಯಸ್ಸು. ಇವನಲ್ಲಿ ಮಾತ್ರ ಕುಸರ ಎಂದಾದರೊಮ್ಮೆ ತನ್ನ ಸಂಕಟ ತೋಡಿಕೊಳ್ಳುತ್ತಿದ್ದ. ದಿನದಿಂದ ದಿನಕ್ಕೆ ಖಿನ್ನನಾಗುತ್ತಿದ್ದ ತಂದೆಯ ಅವಸ್ಥೆ ಕಂಡು ಬಾಬು ಶಾಲೆ ತೊರೆದು ಮನೆಗೆ ಬಂದಿದ್ದ. ಸಾಯೋದಕ್ಕೆ ಒಂದು ತಿಂಗಳ ಮುಂಚೆ, ಕುಸರ ತನ್ನ ದೊಡ್ಡ ಮೊತ್ತದ ಸಾಲದ ಬಗ್ಗೆ ಮಗನಿಗೆ ತಿಳಿಸಿದ್ದ. ಮೂರು ಲಕ್ಷ ರೂಪಾಯಿಗಳ ಸಾಲ ಕುಸರನ ಹೆಗಲ ಮೇಲೆ ಹೆಬ್ಬಂಡೆಯಂತೆ ಕೂತಿತ್ತು. ಸಾಲವಿತ್ತ ಸಾಹುಕಾರ ಎದುರಾದಾಗೆಲ್ಲ ಕುಸರ ತಲೆ ತಪ್ಪಿಸಿಕೊಳ್ಳುತ್ತಿದ್ದ. ಹಾಗೆ ಮಾಡುವಾಗೆಲ್ಲ ಅವನಿಗೆ ಹೀನಾಯ ಎನಿಸುತ್ತಿತ್ತು. ಅವಮಾನದಿಂದ ಸತ್ತಂತೆ ಆಗುತ್ತಿತ್ತು.

ಆದರೆ, ಎಷ್ಟು ದಿನ ತಲೆತಪ್ಪಿಸಿಕೊಂಡಿರಲು ಸಾಧ್ಯ? ಅಪ್ಪನ ಪಡಿಪಾಟಲು ಕಂಡ ಮಗ ಬಾಬು ಹೇಳಿದ್ದ, “ನಮಗಿರುವ ಎರಡೂವರೆ ಎಕ್ರೆ ಜಮೀನು ಮತ್ತು ಮನೆ ಮಾರಿಬಿಡೋಣ.” ಆದರೆ ಕುಸರ ಸುತಾರಾಂ ಒಪ್ಪಲಿಲ್ಲ. “ಅನಂತರ ನಿಮ್ಮ ಗತಿ ಏನು? ನೀನು, ನಿನ್ನ ತಮ್ಮತಂಗಿಯಂದಿರು, ನಿನ್ನ ಅಮ್ಮ ಏನು ಮಾಡ್ತೀರಿ? ಜಮೀನು ಮಾರಲು ನನ್ನಿಂದ ಸಾಧ್ಯವೇ ಇಲ್ಲ.”

ಆಂಧ್ರಪ್ರದೇಶದ ಮೇಡಕ್ ಜಿಲ್ಲೆಯ ಪಲ್ಲೇಪಹಾಡ್ ಗ್ರಾಮದಲ್ಲಿ ಕಳೆದ ಆರು ವರುಷಗಳಲ್ಲಿ ಸತತ ಬರಗಾಲ. ತುಂಡು ಜಮೀನಿನಿಂದ ಕುಸರನಿಗೆ ತುತ್ತು ಕಾಳೂ ಸಿಗಲಿಲ್ಲ. ಮೂರು ವರುಷಗಳ ಮುಂಚೆ, ಕೊಳವೆಬಾವಿ ಕೊರೆಸಲಿಕ್ಕಾಗಿ ಸಾಹುಕಾರನಿಂದ ಕುಸರ ಸಾಲ ಪಡೆದ. ಅದರಲ್ಲಿ ನೀರು ಸಿಗಲಿಲ್ಲ. ಇನ್ನಷ್ಟು ಸಾಲ ಪಡೆದು ಇನ್ನೂ ನಾಲ್ಕು ಕಡೆ ಕೊಳವೆಬಾವಿ ಕೊರೆಸಿದ. ಅವುಗಳಲ್ಲೂ ನೀರು ಸಿಗಲಿಲ್ಲ. (ಅಂತರ್ಜಲದ ಮಟ್ಟ ಕುಸಿಯುತ್ತಿರುವಾಗ ಬೋರಿನಲ್ಲಿ ನೀರು ಎಲ್ಲಿಂದ ಸಿಕ್ಕೀತು?)

ಅದಲ್ಲದೆ, ಪ್ರತಿ ವರುಷ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ - ಇವೆಲ್ಲದಕ್ಕಾಗಿ ಸಾಲ ಬೇಡುತ್ತಲೇ ಇದ್ದ ಕುಸರ. ಬ್ಯಾಂಕುಗಳಿಂದ ಸಾಲ ಸಿಗದಿದ್ದಾಗ ಸಾಹುಕಾರರೇ ಗತಿ. ಅವರು ವರುಷಕ್ಕೆ ಶೇ.೩೬ರಿಂದ ಶೇ.೬೦ ಬಡ್ಡಿ ಸುಲಿದರೂ ಕುಸರನಂತಹ ಬಡವರಿಗೆ ಅವರು ನೀಡುವ ಸಾಲವೇ ಗತಿ. ಹಲವು ಹಂಗಾಮುಗಳಲ್ಲಿ, ಕಳಪೆ ಬೀಜಗಳಿಂದಾಗಿ, ಕಲಬೆರಕೆ ರಾಸಾಯನಿಕ ಗೊಬ್ಬರಗಳಿಂದಾಗಿ ಸಾಲವೆಲ್ಲ ಸೋರಿಹೋಗುತ್ತಿತ್ತು.

ಬಹುಪಾಲು ರೈತರಿಗೆ ಈಗ ಕೃಷಿಗೆ ಹೈಬ್ರಿಡ್ ಬೀಜಗಳೇ ಬೇಕು. ಜೊತೆಗೆ ದುಬಾರಿ ರಾಸಾಯನಿಕ ಗೊಬ್ಬರಗಳೂ ಮಾರಕ ಪೀಡೆನಾಶಕಗಳೂ ಬೇಕು. ಈ “ಬೇಕು"ಗಳ ಭರಾಟೆಯಲ್ಲಿ ಕುಸರನಂಥವರಿಗೆ ಬದುಕೇ ಬೇಡವಾಗುತ್ತದೆ.

ಮಳೆ ಬಂದರೆ ಸಮೃದ್ಧ ಬೆಳೆ ಬೆಳೆದೀತು. ಆಗ ಲಾಭ ಸಿಕ್ಕೀತೇ? ಲಾಭ ನಿಶ್ಚಿತವಿಲ್ಲ. ಯಾಕೆಂದರೆ, ನಗದು ಹಣಕ್ಕಾಗಿ ಚಡಪಡಿಸುವ ಕುಸರನಂಥವರು ಉತ್ತಮ ಬೆಲೆಗಾಗಿ ಕಾದು ಕೂರುವುದಿಲ್ಲ. ಸಿಕ್ಕ ಬೆಲೆ ಸಾಕೆಂದು ಸಾಲ ನೀಡಿದ ಸಾಹುಕಾರನಿಗೇ ಫಸಲು ಮಾರುತ್ತಾರೆ. ಹೀಗೆ ದಕ್ಕಿದ್ದನ್ನೆಲ್ಲ ಅವನ ಸಾಲದ ಬಡ್ದಿಯೇ ಮುಕ್ಕಿದರೆ, ಮನೆಮಂದಿಗೇನು ಉಳಿದೀತು?

ಪ್ರತಿಯೊಂದು ವಾರ್ಷಿಕ ಬಜೆಟಿನಲ್ಲಿಯೂ ರೈತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸುವ ಕೇಂದ್ರ ಸರಕಾರದ ವಿತ್ತಸಚಿವರಿಗೆ ಇದೆಲ್ಲ ಅರ್ಥವಾಗುತ್ತದೆಯೇ? ಅವರ ಮಾತು ಹಾಗಿರಲಿ, ಕೇಂದ್ರ ಸರಕಾರದ ಕೃಷಿ ಸಚಿವರಿಗಾದರೂ ಇದೆಲ್ಲ ಮನವರಿಕೆ ಆಗುತ್ತದೆಯೇ?

ಇತ್ತೀಚೆಗೆ ಒಂದು ಟೆಲಿವಿಷನ್ ಚಾನೆಲಿಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸಚಿವರಾದ ಶರದ್ ಪವಾರ್ ಹೇಳಿದ್ದೇನು? “ಈ ರೈತರ ಆತ್ಮಹತ್ಯೆಗಳು ಮಾಮೂಲಿ ವಿಷಯ” ಎಂದರು! ಅಷ್ಟೇ ಅಲ್ಲ, “ಕಳೆದ ೧೦ - ೨೦ ವರುಷಗಳಲ್ಲಿ ರೈತರ ಆತ್ಮಹತ್ಯೆಯ ಶೇಕಡಾ ಪ್ರಮಾಣ ನೋಡಿದರೆ ನಿಜವಾಗಿ ಅದರಲ್ಲೇನೂ ಬದಲಾವಣೆ ಆಗಿಲ್ಲ" ಎಂದೂ ಹೇಳಿದರು.

ಭಾರತದ ರೈತರ ಬಗ್ಗೆ ಇಂತಹ ಮಾತು ಹೇಳುವಾಗ, ನಮ್ಮಲ್ಲಿ ಶೇಕಡಾ ೫೦ರಷ್ಟು ಜನರ ಬದುಕಿಗೆ ಕೃಷಿಯೇ ಜೀವನಾಧಾರ ಎಂಬುದನ್ನು ನೆನಪಿಡಬೇಕು. ಕೃಷಿ ಅವಲಂಬಿಸಿದ ಅಗಾಧ ಜನಕೋಟಿಯ ಬಗ್ಗೆ, ಅನ್ನದಾತರ ಬಗ್ಗೆ ಸರಕಾರದ ಸಚಿವರ ಧೋರಣೆ ಏನೆಂಬುದು ಅವರ ಮಾತಿನಿಂದ ಬಹಿರಂಗವಾಗಿದೆ. ಇಂತಹ ಜನಪ್ರತಿನಿಧಿಗಳ ಬಗ್ಗೆ ರೈತ ಸಮುದಾಯದ ಧೋರಣೆ ಏನು? ಇದನ್ನು ಮತ್ತೆಮತ್ತೆ ಬಹಿರಂಗ ಪಡಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ, ಅಲ್ಲವೇ?

ಫೋಟೋ ಕೃಪೆ: ದ ಹಿಂದೂ ದಿನಪತ್ರಿಕೆ