ರೈತರ ಆದಾಯ ಹೆಚ್ಚಳಕ್ಕೆ ಆರೋಮ್ಯಾಟಿಕ್ ಗಿಡಗಳ ಕೃಷಿ
“ಜೋಳದ ಬದಲಾಗಿ ಕಾಡು ಚೆಂಡುಮಲ್ಲಿಗೆ ಬೆಳೆಯಲು ೨೦೧೭ರಲ್ಲಿ ನಾನು ನಿರ್ಧರಿಸಿದಾಗ, ನನ್ನ ಹಳ್ಳಿಯ ಜನರು ನನಗೆ ಹುಚ್ಚು ಹಿಡಿದಿದೆ ಎಂದು ಯೋಚಿಸಿದರು” ಎನ್ನುತ್ತಾರೆ, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ತಲ್ಲಾ ಗ್ರಾಮದ ೪೫ ವರುಷ ವಯಸ್ಸಿನ ರೈತ ಪವನ್ ಕುಮಾರ್.
ಮೊದಲ ಹಂಗಾಮಿನಲ್ಲಿ ಅವರು ಬೆಳೆಸಿದ ಗಿಡಗಳಲ್ಲಿ ಹೂಗಳು ಅರಳಲೇ ಇಲ್ಲ. ಆಗಂತೂ ತನ್ನನ್ನು ಕುಗ್ರಾಮ ತಲ್ಲಾದ ಹಳ್ಳಿಗರು ಟೀಕಿಸಿದ್ದೇ ಟೀಕಿಸಿದ್ದು ಎಂಬುದವರ ನೆನಪು. ಆದರೆ ಈಗ ಚಂಬಾ ಜಿಲ್ಲೆಯ ಬಹುಪಾಲು ರೈತರಿಗೆ ಇವರೇ ಮಾದರಿ. ಯಾಕೆಂದರೆ, ಇವರು ಗಳಿಸುವ ಆದಾಯ ವರುಷಕ್ಕೆ ಹೆಕ್ಟೇರಿಗೆ ರೂ.೧.೨೦ ಲಕ್ಷ! ಇದು, ಇವರು ಜೋಳ ಬೆಳೆಸಿದ್ದರೆ ಸಿಗಬಹುದಾಗಿದ್ದ ಆದಾಯದ ಐದು ಪಟ್ಟು!
ಇವರಂತೆಯೇ ಬೆಳೆ ಬದಲಾವಣೆಯಿಂದ ಲಾಭ ಗಳಿಸುತ್ತಿರುವ ಇನ್ನೊಬ್ಬ ರೈತ, ಕಂಗ್ರಾ ಜಿಲ್ಲೆಯ ಬಾಂದ್ ಕಡಿಯಾನ್ ಗ್ರಾಮದ ಗಣೇಶ್ ಪ್ರಶಾರ್. ನಾಲ್ಕು ವರುಷಗಳಿಂದೀಚೆಗೆ ನಿಂಬೆಹುಲ್ಲು ಬೆಳೆಯುತ್ತಿರುವ ಗಣೇಶ್ ಹೀಗೆನ್ನುತ್ತಾರೆ: “ನಾನು ನಿಂಬೆಹುಲ್ಲು ಕೃಷಿ ಶುರು ಮಾಡಿದ್ದು ಒಂದು ಭಿಗಾ (೦.೧೭ ಹೆಕ್ಟೇರ್) ಜಮೀನಿನಲ್ಲಿ. ಈಗ ೪೬ ಭಿಗಾ ಜಮೀನಿನಲ್ಲಿ ಅದನ್ನು ಬೆಳೆಯುತ್ತಿದ್ದೇನೆ. ೨೬ ರೈತರು ಸದಸ್ಯರಾಗಿರುವ ಸೊಸೈಟಿಯನ್ನೂ ಶುರು ಮಾಡಿದ್ದೇನೆ. ಅವರಲ್ಲಿ ೧೬ ರೈತರು ಈಗಾಗಲೇ ಸಾಂಪ್ರದಾಯಿಕ ಬೆಳೆ ಬದಲಾಗಿ ನಿಂಬೆ ಹುಲ್ಲು ಬೆಳೆಯುತ್ತಿದ್ದಾರೆ.”
ಇವರಂತೆ ಹಲವಾರು ರೈತರು ಬೆಟ್ಟ ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿ ಸಾಂಪ್ರದಾಯಿಕ ಬೆಳೆಗಳ ಕೃಷಿ ತೊರೆಯುತ್ತಿದ್ದಾರೆ. ಯಾಕೆಂದರೆ, ಆ ಬೆಳೆಗಳಿಂದ ಸಿಗುವ ಆದಾಯ ನಿಶ್ಚಿತವಲ್ಲ. ಇದಕ್ಕೆ ಕಾರಣ, ಹವಾಮಾನದ ಏರುಪೇರು ಮತ್ತು ಪ್ರಾಣಿಗಳ ಧಾಳಿ. “ಹಲವು ಜಿಲ್ಲೆಗಳಲ್ಲಿ ಆಹಾರದ ಬೆಳೆಗಳ ಕೃಷಿಯಿಂದ ರೈತರಿಗೆ ನಷ್ಟವಾಗುತ್ತಿದೆ. ಅವುಗಳಿಗೆ ಹೋಲಿಸಿದಾಗ, ಬಾಷ್ಪಶೀಲ ತೈಲ ಉತ್ಪಾದನೆಗೆ ಬಳಕೆಯಾಗುವ ಆರೋಮ್ಯಾಟಿಕ್ ಗಿಡಗಳ ಕೃಷಿ ಹೊಸ ಭರವಸೆ ಮೂಡಿಸಿದೆ” ಎಂಬ ಮಾಹಿತಿ ನೀಡುತ್ತಾರೆ, ತೇಜ್ ಪ್ರತಾಪ್, ಉಪಕುಲಪತಿ, ಜಿ.ಬಿ. ಪಂತ್ ಕೃಷಿ ಮತ್ತು ತಂತ್ರಜ್ನಾನ ವಿಶ್ವವಿದ್ಯಾಲಯ, ಪಂತ್ನಗರ, ಉತ್ತರಖಂಡ.
ಆರೋಮ್ಯಾಟಿಕ್ ಗಿಡಗಳಿಗೆ (ಚೆಂಡುಮಲ್ಲಿಗೆ, ನಿಂಬೆಹುಲ್ಲು ಇತ್ಯಾದಿ) ಪ್ರಾಣಿಗಳ ಹಾವಳಿ ಕಡಿಮೆ. ಅದಕ್ಕಿಂತ ಮಿಗಿಲಾಗಿ, ಅವುಗಳಿಂದ ಉತ್ಪಾದಿಸುವ ಬಾಷ್ಪಶೀಲ ತೈಲ (ಎಶೆನ್ಷಿಯಲ್ ಆಯಿಲ್)ಗಳಿಗೆ ಪರಿಮಳದ್ರವ್ಯ, ಮಸಾಲೆ ಮತ್ತು ಸಾಂಬಾರ ಉದ್ಯಮಗಳಲ್ಲಿ ಭಾರೀ ಬೇಡಿಕೆ. ನಮ್ಮ ದೇಶದ ಈ ಉದ್ದಿಮೆಗಳು ಆಸ್ಟ್ರೇಲಿಯಾ, ಫ್ರಾನ್ಸ್, ಬ್ರೆಜಿಲ್ ಮತ್ತು ಕೆನ್ಯಾ ದೇಶಗಳಿಂದ ಅವನ್ನು ಆಮದು ಮಾಡಿಕೊಳ್ಳುತ್ತಿವೆ.
ಹಿಮಾಚಲ ಪ್ರದೇಶ ಕಳೆದ ಎರಡು ವರುಷಗಳಲ್ಲಿ ಕಾಡು ಚೆಂಡುಮಲ್ಲಿಗೆಯಿಂದ ಉತ್ಪಾದಿಸಿದ ಬಾಷ್ಪಶೀಲ ತೈಲದ ಪರಿಮಾಣ ೭.೬ ಟನ್. “ಇದರಿಂದಾಗಿ ೮೬೧ ರೈತರಿಗೆ ಲಾಭವಾಗಿದೆ. ಅವರ ಒಟ್ಟು ಆದಾಯ ೫.೫೬ ಕೋಟಿ ರೂಪಾಯಿ” ಎನ್ನುತ್ತಾರೆ, ರಾಖೇಶ್ ಕುಮಾರ್, ಮುಖ್ಯ ವಿಜ್ನಾನಿ, ಸಿಎಸ್ಐಆರ್ನ ಹಿಮಾಲಯ ಜೈವಿಕ ಸಂಪನ್ಮೂಲ ತಂತ್ರಜ್ನಾನ ಸಂಸ್ಥೆ, ಪಾಲಂಪುರ. ಈ ಸಂಸ್ಥೆ ಆರೋಮ್ಯಾಟಿಕ್ ಗಿಡಗಳ ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದೆ. ಜೊತೆಗೆ, ಬಾಷ್ಪಶೀಲ ತೈಲದ ಬಟ್ಟೀಕರಣ (ಡಿಸ್ಟಿಲ್ಲೇಷನ್)ಕ್ಕಾಗಿ ರಾಜ್ಯದಲ್ಲಿ ೧೬ ಘಟಕಗಳನ್ನು ಸ್ಥಾಪಿಸಿದೆ. ಇವನ್ನು ರೈತರ ಸಹಕಾರಿ ಸಂಘಗಳು ನಿರ್ವಹಿಸುತ್ತಿವೆ. ಈ ಘಟಕಗಳನ್ನು ಸೌದೆಯ ಬೆಂಕಿಯಿಂದ ಹಬೆ ಉತ್ಪಾದಿಸಿ ಚಾಲೂ ಮಾಡಲಾಗುತ್ತಿದೆ.
ಸಿಎಸ್ಐಆರ್ (ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್) ಅರೋಮಾ ಮಿಷನ್ ಯೋಜನೆ ಕಾರ್ಯಗತಗೊಳಿಸುತ್ತಿದೆ. ಇದರ ಅನುಸಾರ ೨೦೨೨ರ ಹೊತ್ತಿಗೆ ೫,೫೦೦ ಹೆಕ್ಟೇರಿನಲ್ಲಿ ಬಾಷ್ಪಶೀಲ ತೈಲ ಉತ್ಪಾದಿಸುವ ಗಿಡಗಳ ಕೃಷಿ ಮಾಡುವ ಯೋಜನೆ ರೂಪಿಸಲಾಗಿದೆ.
ಆರೋಮ್ಯಾಟಿಕ್ ಗಿಡಗಳ ಕೃಷಿ ರೈತರಿಗೆ ಲಾಭದಾಯಕ. ಒಂದು ಭಿಗಾ ಜಮೀನಿನಿಂದ ಸಿಗುವ ಕಾಡು ಚೆಂಡುಮಲ್ಲಿಗೆ ಫಸಲು ೩,೦೦೦ದಿಂದ ೪,೦೦೦ ಕಿಗ್ರಾ. “ನನಗೆ ನೂರು ಕಿಲೋ ಹೂವಿನಿಂದ ೭೦೦ – ೮೦೦ ಗ್ರಾಮ್ ಬಾಷ್ಪಶೀಲ ತೈಲ ಸಿಗುತ್ತದೆ ಹಾಗೂ ಒಂದು ಕಿಲೋ ಕಾಡು ಚೆಂಡುಮಲ್ಲಿಗೆ ತೈಲ ೭,೦೦೦ ರೂಪಾಯಿಗೆ ಮಾರಾಟವಾಗುತ್ತದೆ” ಎಂದು ತಿಳಿಸುತ್ತಾರೆ ಪವನ್ ಕುಮಾರ್. ನಿಂಬೆಹುಲ್ಲು ಬೆಳೆಸಿದವರಿಗೆ ಒಂದು ಭಿಗಾ ಜಮೀನಿನಿಂದ ಸಿಗುವ ಫಸಲು ೪,೫೦೦ – ೫,೦೦೦ ಕಿಗ್ರಾ. ಹಾಗೂ ನೂರು ಕಿಗ್ರಾ. ನಿಂಬೆಹುಲ್ಲಿನಿಂದ ಸಿಗುವ ತೈಲದ ತೂಕ ೧೬ – ೧೭ ಕಿಗ್ರಾ. ಇದರ ಮಾರಾಟ ಬೆಲೆ ಕಿಲೋಗ್ರಾಮಿಗೆ ರೂ.೮೦೦ರಿಂದ ರೂ.೮೫೦. ಇದೀಗ ಮಾರುಕಟ್ಟೆಯಲ್ಲಿ ಕಿಲೋಗ್ರಾಮಿಗೆ ರೂ.೭ ಲಕ್ಷದಿಂದ ರೂ.೮ ಲಕ್ಷ ಬೆಲೆಯಿರುವ ಗುಲಾಬಿ ತೈಲ ಉತ್ಪಾದನೆಗಾಗಿ ದಮಾಸ್ಕ್ ಗುಲಾಬಿ ಕೃಷಿಯ ಕ್ಷೇತ್ರಪ್ರಯೋಗ ನಡೆಸುತ್ತಿದೆ ಸಿಎಸ್ಐಆರ್.
ರೈತ ಗಣೇಶ್ ಪ್ರಶಾರ್ ಬೆಳೆಸುವ ನಿಂಬೆಹುಲ್ಲು ಖರೀದಿಸುವವರು ಗುಜರಾತಿನ ಬಾಷ್ಪಶೀಲ ತೈಲದ ವರ್ತಕ ಶಿವಕುಮಾರ್ ವಶಿಷ್ಠ. ಈ ರೈತರ ನಿಂಬೆಹುಲ್ಲಿನ ಕೃಷಿ ಸಾವಯವ ವಿಧಾನದ ಕೃಷಿ ಎಂದು ದೃಢೀಕರಿಸುವ ವ್ಯವಸ್ಥೆ ಸರಕಾರ ಮಾಡಿದರೆ, ಈ ನಿಂಬೆಹುಲ್ಲು ತೈಲಕ್ಕೆ ಇನ್ನೂ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ತಿಳಿಸುತ್ತಾರೆ ಶಿವಕುಮಾರ್. ಗಣೇಶ್ ಪ್ರಶಾರ್ ಬೆಳೆಸಿದ ನಿಂಬೆಹುಲ್ಲು ಸಾವಯವ ಎಂಬುದನ್ನು ಜರ್ಮನಿಯ ಏಜೆನ್ಸಿ ದೃಢೀಕರಿಸಿದೆ ಎಂಬ ಆಶಾದಾಯಕ ಮಾಹಿತಿ ನೀಡುತ್ತಾರೆ ಅವರು.
ಇವೆಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ರೈತರ ಆದಾಯ ಹೆಚ್ಚಿಸಲು ಇತರ ರಾಜ್ಯಗಳೂ ಆರೋಮ್ಯಾಟಿಕ್ ಗಿಡಗಳ ಕೃಷಿಗೆ ಪ್ರೋತ್ಸಾಹ ನೀಡುವುದು ಸೂಕ್ತ, ಅಲ್ಲವೇ?