ರೈತರ ಆಸ್ತಿ ಜಪ್ತಿಗೆ ತಡೆ : ದುರುಪಯೋಗವಾಗದಂತೆ ಎಚ್ಚರ ವಹಿಸಲಿ
ಕಳೆದೆರಡು ದಶಕಗಳಿಂದೀಚೆಗೆ ರೈತರು ಬೆಳೆ ಹಾನಿ, ಸಾಲದ ಹೊರೆ ಮತ್ತಿತರ ಕಾರಣಗಳಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದೇಶದಲ್ಲಿ ಪ್ರತಿನಿತ್ಯ ಎಂಬಂತೆ ವರದಿಯಾಗುತ್ತಲೇ ಇವೆ. ಪ್ರವಾಹ, ಬರ, ಬೆಳೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ರೋಗಬಾಧೆಯಿಂದಾಗಿ ರೈತರ ಪರಿಶ್ರಮ ವ್ಯರ್ಥವಾಗುತ್ತಿದೆ. ಅಲ್ಲದೆ ಒಂದು ವೇಳೆ ಇವೆಲ್ಲವನ್ನೂ ಮೆಟ್ಟಿ ನಿಂತು ಬೆಳೆ ಕೈಗೆ ಸಿಕ್ಕಿದರೂ ಸೂಕ್ತ ಬೆಲೆ ಸಿಗದೆ ರೈತರು ತೀವ್ರವಾದ ಆರ್ಥಿಕ ಮುಗ್ಗಟ್ಟು ಎದುರಿಸುವ ಅನಿವಾರ್ಯತೆಗೆ ಸಿಲುಕುವಂತಾಗಿದೆ. ಇದರಿಂದಾಗಿ ಸಾಮಾನ್ಯ ರೈತ ತನ್ನ ಸಂಸಾರದ ವೆಚ್ಚವನ್ನೂ ಹೊಂದಿಸಲಾಗದೆ ಸಾವಿನ ಮೊರೆ ಹೋಗುತ್ತಿರುವುದು ತೀರಾ ದುರದೃಷ್ಟಕರ. ಅನ್ನದಾತನೇ ದೇಶದ ಬೆನ್ನೆಲುಬು ಎಂದು ಗುಣಗಾನ ಮಾಡಲಾಗುತ್ತಿದ್ದರೂ ದೇಶದಲ್ಲಿ ರೈತನ ಪರಿಸ್ಥಿತಿ ಮಾತ್ರ ಆರಕ್ಕೇರುತ್ತಿಲ್ಲ, ಮೂರಕ್ಕೆ ಇಳಿಯುತ್ತಿಲ್ಲ.
ನಮ್ಮನ್ನಾಳುವ ಸರಕಾರಗಳು ರೈತರ ಹಿತಾಸಕ್ತಿ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಟಾನಕ್ಕೆ ತಂದರೂ ವರ್ಷಗಳುರುಳಿದಂತೆ ಹೊಸ ಹೊಸ ಸಂಕಷ್ಟಗಳು ಎದುರಾಗಿ ರೈತರ ಸಂಕಷ್ಟವನ್ನು ಹೆಚ್ಚಿಸುತ್ತಲೇ ಬಂದಿವೆ. ಈ ಹಿನ್ನಲೆಯಲ್ಲಿ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಸರಕಾರ ಸಾಲ ನೀಡುವ ಉಪಕ್ರಮವನ್ನು ಆರಂಭಿಸಿತು. ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಜತೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು, ಲೇವಾದೇವಿದಾರರು ರೈತರಿಗೆ ಸಾಲವನ್ನು ನೀಡಲಾರಂಭಿಸಿದರು. ಈ ಆರ್ಥಿಕ ನೆರವು ರೈತರಿಗೆ ಆರಂಭದಲ್ಲಿ ಸಾಕಷ್ಟು ಪ್ರಯೋಜನವನ್ನುಂಟು ಮಾಡಿತು. ಆದರೆ ವರ್ಷಗಳುರುಳಿದಂತೆಯೇ ಈ ಸಾಲ ನೀಡಿಕೆ, ಬಡ್ಡಿದರ, ಸಾಲ ವಸೂಲಾತಿ ಪ್ರಕ್ರಿಯೆಗಳೆಲ್ಲವೂ ರೈತರ ಪಾಲಿಗೆ ಮುಳುವಾಗಿ ಪರಿಣಮಿಸಿತು.
ಇದೀಗ ರಾಜ್ಯ ಸರಕಾರ ಸಾಲ ವಸೂಲಿ ವಿಚಾರದಲ್ಲಿ ಆಸ್ತಿ ಜಪ್ತಿಯಂಥ ಬಲವಂತದ ಕ್ರಮಕ್ಕೆ ಮುಂದಾಗದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ಬಾರಿ ಮುಂಗಾರಿನಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆಯಾಗಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಹೀಗಾಗಿ ಈ ಬಾರಿ ರೈತರು ಹೆಚ್ಚು ಸಂಕಷ್ಟಕ್ಕೊಳಗಾಗಿರುವುದನ್ನು ಮನಗಂಡಿರುವ ರಾಜ್ಯ ಸರಕಾರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಲ ಕಟ್ಟದ ರೈತರ ಆಸ್ತಿಯ ಜಪ್ತಿಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರಿಗೆ ಅಭಯ ನೀಡಿದ್ದಾರೆ.
ರಾಜ್ಯ ಸರಕಾರದ ಈ ನಿರ್ಧಾರ ಅತ್ಯಂತ ಸಕಾಲಿಕ ಮತ್ತು ನ್ಯಾಯೋಚಿತವೇ. ಆದರೆ ಈ ನಿರ್ಧಾರವನ್ನು ರೈತರ ಹೆಸರಿನಲ್ಲಿ ಬೇರೆ ಸಾಲಗಾರರು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ. ಇತರ ಉದ್ದೇಶಗಳಿಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಠೆಗಳಿಂದ ಸಾಲ ಪಡೆದವರು ರೈತರ ಹೆಸರಿನಲ್ಲಿ ಸರಕಾರದ ನಿರ್ಧಾರದ ದುರ್ಲಾಭ ಪಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಸಂಬಂಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕು. ಇಲ್ಲವಾದಲ್ಲಿ ಇದು ರಾಜ್ಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟಾರೆ ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಸಹಜವಾಗಿಯೇ ರಾಜ್ಯದ ಆರ್ಥಿಕತೆಗೂ ಹೊಡೆತ ಬೀಳಲಿದೆ. ಹೀಗಾಗಿ ಈ ವಿಷಯದಲ್ಲಿ ಸರಕಾರ ಮತ್ತು ಬ್ಯಾಂಕ್ ಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೬-೦೯-೨೦೨೨
ಸಾಂದರ್ಭಿಕ ಚಿತ್ರ ಕೃಪೆ: BBC ಅಂತರ್ಜಾಲ ತಾಣ