ರೈತರ ಗೇರುಕೊಯ್ಲು ಹಕ್ಕು ಹೋರಾಟಕ್ಕೆ ಜಯ


ಒರಿಸ್ಸಾದ ಕೊರಾಪುಟ್ ಜಿಲ್ಲೆಯ ಹನ್‌ತಾಲಪುರ ಹಳ್ಳಿಗೆ 6 ಫೆಬ್ರವರಿ 2008ರಂದು ಅಧಿಕಾರಿಯೊಬ್ಬರ ಆಗಮನ. ಆತ ಒರಿಸ್ಸಾ ರಾಜ್ಯ ಗೇರು ಅಭಿವೃದ್ಧಿ ನಿಗಮ (ಒರಿಸ್ಸಾ ಗೇಅನಿ) ಅಧಿಕಾರಿ. ಆತನಿಗೆ ಅಲ್ಲಿ ಹೋದೊಡನೆ ಆಘಾತ. ನಿಗಮವು ನಡೆಸಲಿರುವ ಗೇರು ಕೊಯ್ಲಿನ ಏಲಂನಲ್ಲಿ ಬಿಡ್ ಮಾಡಬೇಕೆಂದು ಆತ ಹಳ್ಳಿಗರನ್ನು ಒತ್ತಾಯಿಸುತ್ತಿದ್ದಂತೆ, ಅಲ್ಲಿನ ಮಹಿಳೆಯರು ರೊಚ್ಚಿಗೆದ್ದರು. ಕೊನೆಗೆ ಆತನನ್ನು ಕಂಬವೊಂದಕ್ಕೆ ಹಗ್ಗದಿಂದ ಬಿಗಿದು ಕಟ್ಟಿದರು!
ಅಂದಿನ ಪ್ರತಿಭಟನೆಯ ಮುಂದಾಳುತನ ವಹಿಸಿದ್ದ ಸುಬರ್ಣ ಹನ್‌ತಾಳ್, ಅದನ್ನು ನೆನಪು ಮಾಡಿಕೊಳ್ಳುತ್ತಾ ಹೀಗೆನ್ನುತ್ತಾರೆ, "ನಿಗಮಕ್ಕೆ ಬೇಕಿದ್ದರೆ ಗೇರು ಮರಗಳನ್ನು ಕಡಿದು ಒಯ್ಯಲಿ. ಆದರೆ ಜಮೀನು ಯಾವತ್ತಿಗೂ ನಮ್ಮದಾಗಿಯೇ ಉಳಿಯುತ್ತದೆ ಎಂದು ಹೇಳಿದರೂ ಅವನು ನಮ್ಮ ಮಾತಿಗೆ ಒಪ್ಪಲಿಲ್ಲ. ಹಾಗಾಗಿ ಆತನನ್ನು ಕಂಬಕ್ಕೆ ಕಟ್ಟಿ ಹಾಕಿದ್ದು. ಏಲಂ ಅಂತೆಲ್ಲ ತಾನಿನ್ನು ಮಾತಾಡೋದೇ ಇಲ್ಲ; ಹಳ್ಳಿಗೆ ಇನ್ನೆಂದಿಗೂ ಕಾಲಿಡೋದಿಲ್ಲ ಅಂತ ಅಧಿಕಾರಿ ಭಾಷೆ ಕೊಟ್ಟ ನಂತರವೇ ಅವನನ್ನು ಬಿಟ್ಟೆವು.”
ಆ ಚಾರಿತ್ರಿಕ ಪ್ರತಿಭಟೆನೆಯ ಮೂಲಕ, ಹನ್‌ತಾಲಪುರದ ಹಳ್ಳಿಗರು ಒರಿಸ್ಸಾ ಗೇ.ಅ. ನಿಗಮಕ್ಕೆ ತಿರುಗಿ ಬಿದ್ದರು. ಒರಿಸ್ಸಾದ 30,690 ಹೆಕ್ಟೇರ್ ಗೇರುತೋಟವನ್ನು ನಿಯಂತ್ರಿಸುತ್ತಿದ್ದ ನಿಗಮಕ್ಕೆ ಅವತ್ತು ರೈತರ ರೋಷದ ಬಿಸಿ ತಟ್ಟಿತು.
ಗೇರುತೋಟಗಳ ಮೇಲಿನ ತಮ್ಮ ಶತಮಾನಗಳ ಹಕ್ಕಿಗಾಗಿ 24 ವರುಷಗಳಿಂದ ರೈತರು ಹಾಗೂ ಬುಡಕಟ್ಟು ಜನರು ನಡೆಸುತ್ತಿದ್ದ ಹೋರಾಟವನ್ನು ಒರಿಸ್ಸಾ ಸರಕಾರ 2008ರಲ್ಲಿ ಅಂತಿಮವಾಗಿ ಮನ್ನಿಸಿತು. 20,234 ಹೆಕ್ಟೇರ್ ತೋಟದಲ್ಲಿ ಗೇರುಹಣ್ಣು ಕೊಯ್ಯುವ ಹಕ್ಕನ್ನು ರೈತರಿಗೆ ನೀಡಲು ಮುಖ್ಯಮಂತ್ರಿ ನೇತೃತ್ವದ ಉನ್ನತ-ಸಮಿತಿ 31ಜುಲಾಯಿ 2008ರಂದು ನಿರ್ಣಯಿಸಿತು. ಅದರ ಅನುಸಾರ, ರೈತರಿಗೆ ಗೇರುಹಣ್ಣು ಕೊಯ್ಯುವ ಹಕ್ಕು ಸಿಗುತ್ತದೆ ವಿನಃ ಜಮೀನಿನ ಒಡೆತನ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಗರಿಷ್ಠ ಎರಡು ಎಕ್ರೆ ತೋಟದ ಹಕ್ಕು ನೀಡಲಾಗುತ್ತದೆ.
ಇದೆಲ್ಲ ಶುರುವಾದದ್ದು 1950ನೇ ದಶಕದಲ್ಲಿ. ಅದು ಮಚ್‌ಕುಂಡ, ಕೊಲಬ ಮತ್ತು ಚಿತ್ರಕೊಂಡದ ಬೃಹತ್ ಅಣೆಕಟ್ಟುಗಳ ನಿರ್ಮಾಣ ಆರಂಭವಾದ ಕಾಲ. ಆ ಪ್ರದೇಶಗಳಲ್ಲಿದ್ದ ಸರಕಾರಿ ಪಾಳು ಭೂಮಿಯಲ್ಲಿ ಒರಿಸ್ಸಾ ಮಣ್ಣು ಸಂರಕ್ಷಣಾ ಇಲಾಖೆ ಗೇರು ಗಿಡಗಳನ್ನು ನೆಡಲು ಆರಂಭಿಸಿತು - ಮಣ್ಣಿನ ಸವಕಳಿ ತಡೆಯಲಿಕ್ಕಾಗಿ. ಆಗ, ಅಲ್ಲಿನ ಜನರಿಗೆ ಅಲಿಖಿತ ಆಶ್ವಾಸನೆ ನೀಡಲಾಗಿತ್ತು: ಗೇರುಮರಗಳು ಬೆಳೆದು ಹಣ್ಣು ಬಿಡುವಾಗ, ಅವನ್ನು ಕೊಯ್ದು ಮಾರುವುದು ಜನರ ಹಕ್ಕು ಎಂಬುದಾಗಿ.
ಹೀಗೆ ಗೇರು ತೋಟ ಬೆಳೆಸಿದ ಗುಡ್ಡಗಾಡು ಪ್ರದೇಶಗಳಲ್ಲಿ ಬುಡಕಟ್ಟು ಜನರು ಶತಮಾನಗಳಿಂದ ಕೃಷಿ ಮಾಡುತ್ತಿದ್ದರು. ಆದರೆ ಆ ಜಮೀನುಗಳ ಮೇಲಿನ ಅವರ ಹಕ್ಕು ಎಲ್ಲಿಯೂ ದಾಖಲಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ: ಅಲ್ಲಿನ ಬುಡಕಟ್ಟು ಜನರು ಸ್ಥಳಾಂತರ ಕೃಷಿ ಮಾಡುತ್ತಿದ್ದಾರೆ ಎಂಬುದನ್ನು ಭೂಮಿಯ ಸರ್ವೆ ಮಾಡುವಾಗ ಸರಕಾರ ದಾಖಲಿಸದೆ ಇದ್ದದ್ದು. ಇನ್ನೊಂದು ಕಾರಣ, ಆ ಜನರ ಅಮಾಯಕತನ. ಆದರೆ, ತಮ್ಮ ಜೀವನೋಪಾಯಕ್ಕೆ ಧಕ್ಕೆ ಬರುತ್ತದೆ ಎಂದು ಅರಿವಾದಾಗ ಅವರೆಲ್ಲ ಗೇರು ತೋಟ ಎಬ್ಬಿಸುವುದನ್ನು ವಿರೋಧಿಸಿದ್ದರು. ಕೊನೆಗೆ ಅಧಿಕಾರಿಗಳು ನೀಡಿದ ಆಶ್ವಾಸನೆ ನಂಬಿ, ತಮ್ಮ ವಿರೋಧ ಹಿಂತೆಗೆದಿದ್ದರು.
ಆದರೆ ಗೇರು ಮರಗಳು ಫಲ ಬಿಡಲು ಶುರು ಮಾಡಿದಾಗ, ಅಧಿಕಾರಿಗಳು ಕೊಟ್ಟ ಮಾತು ತಪ್ಪಿದರು. ಇಲಾಖೆ ಗೇರು ಹಣ್ಣು ಮಾರಿ ತಾನೇ ಹಣ ಮಾಡ ತೊಡಗಿತು. ಇದು ಕೊರಾಪುಟ್ ಜಿಲ್ಲೆಯ ರೈತರಿಗೆ ದೊಡ್ಡ ಹೊಡೆತ. ಆ ಜಿಲ್ಲೆ 62 ಬುಡಕಟ್ಟುಗಳ ನೆಲೆ (ಪರಜ, ಗಡಬ, ಕೊಂಡ, ಭುಮಿಯಾ ಇತ್ಯಾದಿ). ಅಲ್ಲಿನ ಸುಮಾರು 12 ಲಕ್ಷ ಜನಸಂಖ್ಯೆಯಲ್ಲಿ, ಆರು ಲಕ್ಷ ಬುಡಕಟ್ಟು ಜನರು. ಆದರೆ ಒಟ್ಟು ಜಮೀನಿನ ಮೂರನೇ ಒಂದು ಭಾಗವೂ ಅವರ ಒಡೆತನದಲ್ಲಿಲ್ಲ. ಅಣೆಕಟ್ಟು ನಿರ್ಮಾಣದಿಂದಾಗಿ ಬಹುಸಂಖ್ಯೆಯಲ್ಲಿ ಸ್ಥಳಾಂತರ ಆದವರೂ ಬುಡಕಟ್ಟು ಜನರು. ಹೀಗೆ ಅವರ ಬದುಕಿಗೆ ಹಲವು ಹೊಡೆತ.
ಹೀಗಿರುವಾಗ 1979ರಲ್ಲಿ ಒರಿಸ್ಸಾ ರಾಜ್ಯ ಗೇರು ಅಭಿವೃದ್ಧಿ ನಿಗಮದ ಸ್ಥಾಪನೆ. ಒರಿಸ್ಸಾ ಸರಕಾರದಿಂದ ನಿಗಮಕ್ಕೆ ಗೇರು ತೋಟಗಳ ವರ್ಗಾವಣೆ. ಅನಂತರ ನಿಗಮವು ಗೇರುಕೊಯ್ಲಿಗಾಗಿ ತೋಟಗಳನ್ನು ಏಲಂ ಮಾಡಲು ಆರಂಭಿಸಿತು.
ಇದರಿಂದಾಗಿ ರೈತರಿಗೂ ಬುಡಕಟ್ಟು ಜನರಿಗೂ ನಿಗಮದ ವಿರುದ್ಧ ಆಕ್ರೋಶ. ಅದು ಹೊಗೆಯಾಡುತ್ತಲೇ ಇತ್ತು. 1985ರಲ್ಲಿ ಕೊರಾಪುಟ್ ಜಿಲ್ಲೆಯ ಎನುಗು ಹಳ್ಳಿಯಲ್ಲಿ ಆಕ್ರೋಶ ಭುಗಿಲೆದ್ದಿತು. ಅಲ್ಲಿನ ಪ್ರತಿಭಟನೆಯ ನಾಯಕ ಸನಿಯಾ ಸಿಸಾ ಎಂಬ ಸಣ್ಣ ರೈತ. ಆತನ ನಾಯಕತ್ವದಲ್ಲಿ ಜನರು ಗೇರುತೋಟಗಳಿಗೆ ನುಗ್ಗಿ ಗೇರುಹಣ್ಣು ಕೊಯ್ಲು ಮಾಡಿದರು. ಆ ತೋಟಗಳನ್ನು ಏಲಂನಲ್ಲಿ ಖರೀದಿಸಿದ್ದ ಜೇಪೊರೆ ಪಟ್ಟಣದ ಒಬ್ಬ ವ್ಯಾಪಾರಿ ಮತ್ತು ನಿಗಮದ ಅಧಿಕಾರಿಗಳ ಮೋಸದ ಜಾಲಕ್ಕೆ ರೈತರು ಬಲಿಯಾಗಲಿಲ್ಲ.
ಬೇಗನೇ ಈ ಆಂದೋಲನ ಸುತ್ತಲಿನ ಹಳ್ಳಿಗಳಿಗೆ ಹಬ್ಬಿತು. ಸಿಸಾ ಮತ್ತು ಅವನ ಮೂರು ಸಂಗಡಿಗರನ್ನು ಬಂಧಿಸಲಾಯಿತು. ಆದರೆ ರೈತರ ಹೋರಾಟ ಬಿರುಸಾಯಿತು. ಇಸವಿ 2000ದಲ್ಲಿ ದನ್‌ಗಾರ್ ಸುರಕ್ಷಾ ಸಮಿತಿ ರಚನೆ. ಅದರ ಸ್ಥಾಪಕಾಧ್ಯಕ್ಷ ಸನಿಯಾ ಸಿಸಾ. ರೈತರ ಗೇರು ಕೊಯ್ಲು ಹಕ್ಕು ಹೋರಾಟ ಮುನ್ನಡೆಸಿದ ಆ ಸಮಿತಿಗೆ 2005ರಲ್ಲಿ ದನ್‌ಗಾರ್ ಅಧಿಕಾರ ಸಮಿತಿ ಎಂದು ಮರುನಾಮಕರಣ.
ಹಳ್ಳಿಗಳ ಸಮುದಾಯ ಜಮೀನಿನಲ್ಲಿರುವ ಎಲ್ಲ ಗೇರು ತೋಟಗಳ ಗೇರು ಕೊಯ್ಲು ಜನರ ಹಕ್ಕು ಎಂದು ಸಮಿತಿ ಘೋಷಿಸಿತು. ಸಭಗಳು ಹಾಗೂ ಪ್ರತಿಭಟನೆಗಳ ಮೂಲಕ ಸಮಿತಿಯಿಂದ ವ್ಯಾಪಕ ಜನಜಾಗೃತಿ. 2007ರಲ್ಲಿ ಇಬ್ಬರು ಹಳ್ಳಿಗರಿಂದಲೇ ಏಲಂನಲ್ಲಿ ಗೇರು ಕೊಯ್ಲು ಹಕ್ಕು ಖರೀದಿ. ಆದರೆ ಇತರ ಹಳ್ಳಿಗರು ಅವರಿಗೂ ಕೊಯ್ಲು ಮಾಡಲು ಬಿಡಲಿಲ್ಲ. ಅವರು ಪೊಲೀಸರನ್ನು ಕರೆಸಿದಾಗ, ಹಳ್ಳಿಗರು ಹೇಳಿದ್ದೇನು ಗೊತ್ತೇ? "ನಾವು ಜೈಲಿಗೆ ಹೋಗಲು ತಯಾರು. ಆದರೆ ನಮ್ಮ ಮಕ್ಕಳು ಮತ್ತು ಜಾನುವಾರುಗಳನ್ನೂ ಜೊತೆಗೆ ಜೈಲಿಗೆ ಒಯ್ಯುತ್ತೇವೆ.” ಇವರನ್ನು ಬಂಧಿಸಲು ಬಂದಿದ್ದ ಪೊಲೀಸರು ತೆಪ್ಪಗೆ ಹಿಂತಿರುಗಿದರು.
ಕೊನೆಗೂ, ರೈತರ ಹೋರಾಟಕ್ಕೆ ಮಣಿದು, ಅವರ ಗೇರು ಕೊಯ್ಲು ಹಕ್ಕನ್ನು ಒರಿಸ್ಸಾ ಸರಕಾರ ಒಪ್ಪಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಈ ಹೋರಾಟ ಇನ್ನೊಮ್ಮೆ ಸಾಬೀತು ಮಾಡಿದೆ.
ಫೋಟೋ 1 ಮತ್ತು 2: ಗೇರು ಹಣ್ಣುಗಳು (ಬೀಜ ಸಹಿತ) ಮತ್ತು ಎಲೆಗಳು