ರೈತರ ಬದುಕು ಬದಲಿಸಿದ ಬಲವಾನ್ ಈರುಳ್ಳಿ

ರೈತರ ಬದುಕು ಬದಲಿಸಿದ ಬಲವಾನ್ ಈರುಳ್ಳಿ

ಬಲವಾನ್ ಸಿಂಗ್ ಹರಿಯಾಣದ ಭಿವಾನಿ ಜಿಲ್ಲೆಯ ಅಲಕ್‍ಪುರ ಗ್ರಾಮದ ೫೯ ವರುಷದ ರೈತ. ವಿಜ್ನಾನಿಗಳಿಗೆ ಸರಿಮಿಗಿಲೆನುವಂತೆ ಅತ್ಯುತ್ತಮ ಗುಣವಟ್ಟದ ಈರುಳ್ಳಿ ತಳಿಯೊಂದ್ನ್ನು ಅಭಿವೃದ್ಧಿ ಪಡಿಸಿರುವುದು ಅವರ ಹೆಗ್ಗಳಿಕೆ.
ಉತ್ತಮ ಗುಣಮಟ್ಟದ ಈರುಳ್ಳಿ ಬೀಜಗಳನ್ನು ಅವರು ಖರೀದಿಸಿದ್ದು ೧೯೮೦ರ ದಶಕದಲ್ಲಿ. ಅನಂತರ, ಪ್ರತಿಯೊಂದು ಈರುಳ್ಳಿ ಬೆಳೆಯ ಫಸಲಿನಿಂದಲೂ ಅತ್ಯುತ್ತಮ ಈರುಳ್ಳಿಗಳನ್ನು ಬೀಜಕ್ಕಾಗಿ ತೆಗೆದಿಟ್ಟರು. ಈರುಳ್ಳಿಗಳ ಗಾತ್ರ, ಆಕಾರ ಮತ್ತು ಬಿಗಿತ – ಇವುಗಳ ಆಧಾರದಿಂದ ಅವರ ಆಯ್ಕೆ.
ಒಂದಲ್ಲ, ಎರಡಲ್ಲ, ೧೭ ವರುಷ ಹೀಗೆ ಆಯ್ಕೆ ಮಾಡುತ್ತಾ ಕೊನೆಗೆ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ತಳಿ ಪಡೆದರು ಬಲವಾನ್ ಸಿಂಗ್. ಇತರ ತಳಿಗಳಿಗಿಂತ ಇದರ ಎಕ್ರೆವಾರು ಇಳುವರಿ ಅಧಿಕ. ಜೊತೆಗೆ, ಮಾರುಕಟ್ಟೆಯಲ್ಲಿ ಇದಕ್ಕೆ ಅಧಿಕ ಬೆಲೆ. ಅದಲ್ಲದೆ, ಇದನ್ನು ಬೆಳೆಸಲು ಕಡಿಮೆ ನೀರು ಮತ್ತು ಕಡಿಮೆ ರಾಸಾಯನಿಕ ಗೊಬ್ಬರ ಸಾಕು (ಸಾವಯವ ಗೊಬ್ಬರ ಜಾಸ್ತಿ ಬೇಕು). ಇಷ್ಟೆಲ್ಲ ಧನಾತ್ಮಕ ಗುಣಗಳಿರುವ ಈರುಳ್ಳಿ ತಳಿ ಈಗ “ಬಲವಾನ್ ಈರುಳ್ಳಿ” ಎಂದವರ ಹೆಸರಿನಿಂದಲೇ ಜನಜನಿತ. ಇದು ಅವರ ಶ್ರಮ ಮತ್ತು ಶ್ರದ್ಧೆಗೆ ಸಂದ ಗೌರವ.
ಈಗ, ಈರುಳ್ಳಿ ತಳಿಯ ಬೀಜಗಳ ಮಾರಾಟದಿಂದ ಅವರು ಗಳಿಸುವ ವಾರ್ಷಿಕ ಆದಾಯ ಮೂರು ಲಕ್ಷ ರೂಪಾಯಿ! ಜೊತೆಗೆ, ತನ್ನ ಎರಡೆಕ್ರೆ ಜಮೀನಿನಲ್ಲಿ ಬೆಳೆಸುವ ಈರುಳ್ಳಿಯ ಫಸಲಿನ ಮಾರಾಟದಿಂದಲೂ ಅಷ್ಟೇ ಆದಾಯ ಗಳಿಸುತ್ತಾರೆ ಬಲವಾನ್ ಸಿಂಗ್.
ಸುಮಾರು ಎರಡು ದಶಕಗಳ ಮುಂಚೆ ಉತ್ತಮ ಈರುಳ್ಳಿ ತಳಿಗಾಗಿ ಅವರು ಹುಡುಕಾಟ ನಡೆಸಿದ್ದರು – ಅಕ್ಕಪಕ್ಕದ  ಗ್ರಾಮಗಳಲ್ಲಿ. ಅದೊಂದು ದಿನ, ದೇಸಿ ಈರುಳ್ಳಿ ತಳಿಯೊಂದರ ಬೀಜ ಖರೀದಿಸಿ ತಂದರು. ಯಾಕೆಂದರೆ ಅದರ ಗಾತ್ರ, ಆಕಾರ ಮತ್ತು ಬಿಗಿತ ಆಕರ್ಷಕವಾಗಿತ್ತು.
ಆ ಬೀಜಗಳನ್ನು ಜತನದಿಂದ ಬಿತ್ತಿ ಬೆಳೆಸಿದರು. ಮೊದಲ ಬೆಳೆಯಲ್ಲೇ ಅಧಿಕ ಇಳುವರಿ ಪಡೆದರು. ಅದರಿಂದಾಗಿ ಇದೊಂದು ಉತ್ತಮ ತಳಿ ಎಂದವರಿಗೆ ಖಚಿತವಾಯಿತು. ಅನಂತರ ಅವರ ೧೭ ವರುಷಗಳ ತಪಸ್ಸು ಶುರು – ಅದರಿಂದ ಅತ್ಯುತ್ತಮ ತಳಿಯೊಂದನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ. ಪ್ರತಿಯೊಂದು ಹಂಗಾಮಿನಲ್ಲಿ ಈರುಳ್ಳಿಯ ಇಳುವರಿ ಮತ್ತು ಈರುಳ್ಳಿ ಮಾರಾಟವಾದ ಬೆಲೆಯನ್ನು ದಾಖಲಿಸ ತೊಡಗಿದರು.
೧೯೮೯ – ೧೯೯೦ನೇ ವರುಷದಿಂದ, ಉತ್ತಮ ಗುಣ ಮಟ್ಟದ ಈರುಳ್ಳಿ ಕೊಯ್ಲು ಮಾಡಿದಾಗಿನಿಂದ, ಮಾರುಕಟ್ಟೆಯಲ್ಲಿ ತನ್ನ ಈರುಳ್ಳಿಗೆ ಶೇಕಡಾ ೨೫ ಅಧಿಕ ಬೆಲೆ ಸಿಗುತ್ತಿದೆಯೆಂದು ತಿಳಿಸುತ್ತಾರೆ ಬಲವಾನ್ ಸಿಂಗ್. ಇತರ ರೈತರ ಫಸಲು ಕಿಲೋಕ್ಕೆ ರೂ.೧೦೦ ಬೆಲೆಗೆ ಮಾರಾಟವಾದರೆ, ಇವರ ಈರುಳ್ಳಿಯ ಮಾರಾಟ ಬೆಲೆ ಕಿಲೋಕ್ಕೆ ರೂ.೧೨೫. ಕ್ರಮೇಣ, ಸಾವಯವ ಈರುಳ್ಳಿಗೆ ಭಾರೀ ಬೇಡಿಕೆಯಿದೆ ಎಂಬುದನ್ನು ತಿಳಿದುಕೊಂಡರು ಬಲವಾನ್ ಸಿಂಗ್. ಹಾಗಾಗಿ, ಹಿಸ್ಸಾರಿನ ಹರಿಯಾಣ ಕೃಷಿ ವಿಶ್ವವಿದ್ಯಾಲಯದ ಪರಿಣತರ ಸಲಹೆಯಂತೆ, ಈರುಳ್ಳಿ ಬೆಳೆಗೆ ಕನಿಷ್ಠ ರಾಸಾಯನಿಕ ಗೊಬ್ಬರ ಹಾಕತೊಡಗಿದರು. ಜೊತೆಗೆ, ತಾನೇ ತಯಾರಿಸಿದ ಸಾವಯವ ಗೊಬ್ಬರ ಬಳಸತೊಡಗಿದರು.
ಹರಿಯಾಣ ತೋಟಗಾರಿಕಾ ಇಲಾಖೆ ಜರಗಿಸಿದ ರಾಜ್ಯಮಟ್ಟದ ಕೃಷಿ ಉತ್ಪನ್ನಗಳ ಸ್ಪರ್ಧೆಯಲ್ಲಿ ಬಲವಾನ್ ಈರುಳ್ಳಿ ಪ್ರಥಮ ಬಹುಮಾನ ಗಳಿಸಿತು – ೧೯೯೦ರಿಂದ ೧೯೯೯ರ ವರೆಗೆ ನಿರಂತರವಾಗಿ. ೨೦೦೮ರಲ್ಲಿ, ಬಲವಾನ್ ಸಿಂಗ್ ಅವರ ಅಪೂರ್ವ ಸಾಧನೆಯನ್ನು ಗುರುತಿಸಿದ ರಾಷ್ಟ್ರೀಯ ಆವಿಷ್ಕಾರ ಪ್ರತಿಷ್ಠಾನ (ಎನ್‍ಐಎಫ್) ಅವರಿಗೆ ರಾಷ್ಟ್ರೀಯ ತಳಮಟ್ಟದ ಆವಿಷ್ಕಾರ ಪ್ರಶಸ್ತಿ ನೀಡಿ ಪುರಸ್ಕರಿಸಿತು. ನಾಲ್ಕು ವರುಷಗಳ ನಂತರ, ಅವರಿಗೆ ಇದಕ್ಕಾಗಿ ನವದೆಹಲಿಯಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಲವಾನ್ ಈರುಳ್ಳಿಯ ಯಶೋಗಾಥೆ ಸುದ್ದಿಯಾಗುತ್ತಿದ್ದಂತೆ ಹಲವಾರು ರೈತರು ಇದರ ಬೀಜಕ್ಕಾಗಿ ಬಲವಾನ್ ಸಿಂಗರ ಹೊಲಕ್ಕೆ ಭೇಟಿ ನೀಡಲು ತೊಡಗಿದರು. ಜೊತೆಗೆ, ಬಲವಾನ್ ಈರುಳ್ಳಿ ಹೆಸರಿನಲ್ಲಿ ನಕಲಿ ಬೀಜಗಳನ್ನು ಮಾರಾಟ ಮಾಡುವ ವಂಚಕರ ದಂಧೆ ಶುರು. ಆ ಪ್ರತಿಷ್ಠಾನದ ಪರಿಣತರು ಬಲವಾನ್ ಈರುಳ್ಳಿಯ ಗುಣಮಟ್ಟದ ಪರೀಕ್ಷೆ ನಡೆಸುವಾಗ, ಈ ಹೆಸರಿನಲ್ಲಿ ಎಂಟು ಬೇರೆಬೇರೆ ತಳಿಗಳ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದನ್ನು ದಾಖಲಿಸಿದರು.
ರಾಷ್ಟ್ರೀಯ ಆವಿಷ್ಕಾರ ಪ್ರತಿಷ್ಠಾನದ ನಿರ್ದೇಶಕರಾದ ಹರ್‍ದೇವ ಚೌಧರಿ ಅವರಿಂದ ಬಲವಾನ್ ಸಿಂಗರ ಆವಿಷ್ಕಾರಕ್ಕೆ ಮುಕ್ತಕಂಠದ ಶ್ಲಾಘನೆ. ಹರಿಯಾಣ ಕೃಷಿ ವಿಶ್ವವಿದ್ಯಾಲಯ ಬಲವಾನ್ ಈರುಳ್ಳಿಯ ಗುಣಮಟ್ಟಗಳ ಬಗ್ಗೆ ಪರೀಕ್ಷೆಗಳನ್ನು ನಡೆಸಿ, ಖಚಿತ ಪಡಿಸಿಕೊಂಡ ನಂತರವೇ ಅದನ್ನು ಇತರ ರೈತರಿಗೆ ಶಿಫಾರಸ್ ಮಾಡುತ್ತಿದೆ ಎಂದು ಅವರು ತಿಳಿಸುತ್ತಾರೆ. ಕರ್ನಾಲಿನ ಕೇಂದ್ರೀಯ ಮಣ್ಣು ಕ್ಷಾರ ಸಂಶೋಧನಾ ಸಂಸ್ಥೆಯ ವಿಜ್ನಾನಿ ಡಾ. ಆರ್.ಕೆ. ಸಿಂಗ್, ಬಲವಾನ್ ಈರುಳ್ಳಿಯ ಇಳುವರಿ ಇತರ ತಳಿಗಳಿಗಿಂತ ಶೇ.೨೫ ಅಧಿಕ, ಗಾತ್ರ ಮತ್ತು ಬಾಳ್ವಿಕೆಯೂ ಅಧಿಕ ಎಂಬುದನ್ನು ಖಚಿತ ಪಡಿಸುತ್ತಾರೆ. .
ಆ ಪ್ರದೇಶದ ಬಹುಪಾಲು ರೈತರು ಗೋಧಿ ಮತ್ತು ಕಬ್ಬು ಬೆಳೆಯುವವರು. ಕಳೆದ ಕೆಲವು ವರುಷಗಳಿಂದ ಕೆಲವರು ಈರುಳ್ಳಿ ಬೆಳೆಯಲು ಶುರು ಮಾಡಿದ್ದಾರೆ. ಒಂದೂವರೆ ಎಕ್ರೆಯಲ್ಲಿ ಇದನ್ನು ಬೆಳೆಸಿದ ಬವಾನಿ ಖೇರಾ ಗ್ರಾಮದ ಧರಮ್‍ಬಿರ್ ಸಿಂಗ್ ಈ ತಳಿಯ ಉತ್ತಮ ಗುಣಗಳನ್ನೆಲ್ಲ ಖಾತರಿ ಪಡಿಸುತ್ತಾರೆ. ಭಿವಾನಿಯ ಇನ್ನೊಬ್ಬ ರೈತ ರಣಧೀರ್ ತ್ಯಾಗಿ ತಿಳಿಸುತ್ತಾರೆ, ಅರ್ಧ ಎಕ್ರೆಯಲ್ಲಿ ಈ ತಳಿ ೨೪೦ ಕ್ವಿಂಟಾಲ್ ಬಂಪರ್ ಇಳುವರಿ ನೀಡಿದ್ದನ್ನು.
ಬಲವಾನ್ ಈರುಳ್ಳಿಯಿಂದಾಗಿ ಬಲವಾನ್ ಸಿಂಗ್ ಅವರ ಬದುಕು ಮಾತ್ರವಲ್ಲ, ಅದನ್ನು ಬೆಳೆಸುವ ಹಲವು ರೈತರ ಬದುಕೂ ಬದಲಾಗಿದೆ.

ಚಿತ್ರ ಕೃಪೆ: ದ ಬೆಟರ್ ಇಂಡಿಯಾ ವೆಬ್-ಸೈಟ್

Comments

Submitted by Ashwin Rao K P Tue, 06/09/2020 - 11:14

ನಿಮ್ಮ ಮೇಲಿನ ಲೇಖನವು ಅತ್ಯಂತ ಮಾಹಿತಿಪೂರ್ಣವಾಗಿತ್ತು. ಭಗವಾನ್ ಎಂಬವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈರುಳ್ಳಿಯ ಹೊಸ ತಳಿಯನ್ನೇ ಹುಟ್ಟು ಹಾಕಿದ್ದು ಸಾಮಾನ್ಯ ಸಂಗತಿಯಲ್ಲ. ಸುಮಾರು ೧೭ ವರ್ಷಗಳ ಅವರ ತಪಸ್ಸು ಈಗ ಫಲಕೊಟ್ಟಿದೆ ಅನಿಸುತ್ತೆ. ಇಂತಹ ಸ್ಫೂರ್ತಿದಾಯಕ ಲೇಖನಗಳು ಹೆಚ್ಚು ಹೆಚ್ಚು ನಿಮ್ಮಿಂದ ಮೂಡಿ ಬರಲಿ ಎಂಬುದೇ ಹಾರೈಕೆಗಳು.