ರೈತರ ಬೀಜದ ಹಕ್ಕು ರಕ್ಷಣೆ
ತಳಿ ಪರಿಣತ ಹಾಗೂ ತಳಿಸಂರಕ್ಷಕ ರೈತರು ಎಲೆಮರೆಯ ಕಾಯಿಗಳು. ಜಗತ್ತಿನ ಮೂಲೆಮೂಲೆಗಳಲ್ಲಿ ಅವರದು ಸದ್ದಿಲ್ಲದ ಕಾಯಕ. ತಾವು ಬಿತ್ತಿ ಬೆಳೆಸುವ ಬೀಜಗಳ ಅಧ್ಯಯನ ಮಾಡಿ, ಇಳುವರಿ ಮತ್ತು ರುಚಿ ಉತ್ತಮ ಪಡಿಸಲು ತಳಿಸಂಕರ ಪ್ರಯೋಗಗಳನ್ನು ನಡೆಸಿ, ವಿಶ್ವವಿದ್ಯಾಲಯಗಳೂ ಸಾಧಿಸಲಾಗದ್ದನ್ನು ಈ ರೈತರು ಸಾಧಿಸುತ್ತಾರೆ. ಕೃಷಿಕ್ರಮಗಳನ್ನು ಸುಧಾರಿಸುವುದರಲ್ಲಿಯೂ ಕೆಲವು ರೈತರದು ಪ್ರಚಂಡ ಜಾಣ್ಮೆ. ತಮ್ಮ ಸಂಶೋಧನೆಯ ಫಲಗಳನ್ನು ಇತರ ರೈತರೊಂದಿಗೆ ಹಂಚಿಕೊಳ್ಳಲು ಅವರು ಸದಾ ಸಿದ್ಧ.
ದಾದಾಜಿ ಖೊಬ್ರಗಡೆ ಇಂತಹ ಒಬ್ಬ ಸಾಧಕ ರೈತ. ಅವರು ಹೆಚ್‍ಎಂಟಿ ಭತ್ತದ ತಳಿಯ ಜನಕ. ಮಹಾರಾಷ್ಟ್ರ ಮತ್ತು ಇತರ ನಾಲ್ಕು ರಾಜ್ಯಗಳಲ್ಲಿ ಅದು ಜನಪ್ರಿಯ ತಳಿ. ಆಗಿನ ಜನಪ್ರಿಯ ರಿಸ್ಟ್ ವಾಚಿನ ಹೆಸರೇ ಈ ತಳಿಯ ಹೆಸರಿಗೆ ಪ್ರೇರಣೆ. ಇತರ ಅನೇಕ ಭತ್ತದ ತಳಿಗಳ ಇಳುವರಿಗಿಂತ ಇದರ ಇಳುವರಿ ಸುಮಾರು ಶೇಕಡಾ ೮೦ ಅಧಿಕ. ಇದರ ರುಚಿಯೂ ಉತ್ತಮ ಎಂಬುದು ಖೊಬ್ರಗಡೆ ಅವರ ಹೇಳಿಕೆ.
ಮಹಾರಾಷ್ಟ್ರದ ನಾನ್‍ದೆಡ್‍ನ ಈ ರೈತ ಮಹಾಶಯರ ಹೆಸರು "ಗ್ರಾಮೀಣ ಭಾರತದ ಏಳು ಅತ್ಯಂತ ಪ್ರಭಾವಿ ಉದ್ಯಮಶೀಲರ" ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚಿದ್ದು ವಿಶೇಷ. ಯಾಕೆಂದರೆ, ಆ ಏಳು ಜನರ ಅನುಶೋಧನೆಗಳು ಭಾರತದ ಉದ್ದಗಲದಲ್ಲಿ ಜನರ ಜೀವನವನ್ನು ಬದಲಾಯಿಸುತ್ತಿವೆ.
ಅಧಿಕ ಇಳುವರಿ ನೀಡುವ ಹೆಚ್‍ಎಂಟಿ ಭತ್ತದ ತಳಿ ಗ್ರಾಮೀಣ ಜನರ ಬದುಕು ಬದಲಾಯಿಸಿದ್ದು ನಿಜ. ಆದರೆ, ೭೧ ವರುಷದ ಕನ್ನಡಕಧಾರಿ ಖೊಬ್ರಗಡೆ ಅವರನ್ನು ಕಂಡಾಗ ಅವರೊಬ್ಬ "ಗ್ರಾಮೀಣ ಪ್ರಭಾವಿ ಉದ್ಯಮಶೀಲ" ಎಂಬ ಯಾವ ಸೂಚನೆಯೂ ಸಿಗೋದಿಲ್ಲ. ಯಾಕೆಂದರ ಭಾರತದ ಸಣ್ಣರೈತರ ಇಂದಿನ ಸ್ಥಿತಿಗೆ ಅವರೇ ಜೀವಂತ ನಿದರ್ಶನ. ಅವರಿಗೆ ಸ್ವಂತ ಜಮೀನಿಲ್ಲ. ಅವರದಾಗಿದ್ದ ತುಂಡು ಜಮೀನನ್ನು ಬಂಧುವೊಬ್ಬನ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಪಾವತಿಸಲಿಕ್ಕಾಗಿ ಮಾರಬೇಕಾಯಿತು. ಅವರೀಗ ದಿನಗೂಲಿಗಾಗಿ ಹಲವು ದಿನ ದುಡಿಯುತ್ತಾರೆ!
೧೯೯೦ರ ದಶಕದ ಆರಂಭದಲ್ಲಿ, ಹೆಚ್‍ಎಂಟಿ ಭತ್ತದ ತಳಿ ಸುದ್ದಿ ಮಾಡಿದಾಗ ನಡೆದ ಘಟನೆ: ಮಹಾರಾಷ್ಟ್ರದ ಅಕೋಲಾದ ಪಂಜಾಬ್‍ರಾವ್ ದೇಶಮುಖ್ ಕೃಷಿ ವಿದ್ಯಾಪೀಠದ ವಿಜ್ನಾನಿಗಳು ೫ ಕಿಗ್ರಾ ಹೆಚ್‍ಎಂಟಿ ಭತ್ತದ ಬೀಜವನ್ನು ಖೊಬ್ರಗಡೆ ಅವರಿಂದ ಒಯ್ದರು. "ಅದನ್ನು ಭತ್ತ ಸಂಶೋಧನಾ ಕೇಂದ್ರದಲ್ಲಿ ಬೆಳೆಸಿ ಪರೀಕ್ಷಿಸುತ್ತೇವೆ" ಎಂದಿದ್ದರು. ಕೆಲವು ವರುಷಗಳ ನಂತರ, ಆ ವಿಶ್ವವಿದ್ಯಾಲಯದಿಂದ "ಪಿಕೆವಿ - ಹೆಚ್‍ಎಂಟಿ" ಹೆಸರಿನ ಹೊಸ ಭತ್ತದ ತಳಿಯ ಬಿಡುಗಡೆ. ಅದು ಖೊಬ್ರಗಡೆ ಅವರು ಸಂಶೋಧಿಸಿದ ತಳಿಯೇ ಆಗಿತ್ತು. ಆದರೆ ವಿಶ್ವವಿದ್ಯಾಲಯದ ಉಪಕುಲಪತಿಯ ಹೇಳಿಕೆ ಹೀಗಿತ್ತು, "ಮೂಲಬೀಜವನ್ನು ಖೊಬ್ರಗಡೆಯಿಂದ ಪಡೆದಿರಬಹುದು. ಆದರೆ ಈಗ ಇದು ಸಂಪೂರ್ಣವಾಗಿ ನಮ್ಮ ವಿಶ್ವವಿದ್ಯಾಲಯದ ಬೌದ್ಧಿಕ ಸೊತ್ತು."
ಎಪ್ರಿಲ್ ೨೬ನ್ನು "ಅಂತರಾಷ್ಟ್ರೀಯ ಬೀಜ ದಿನ" ಎಂದು ರೈತ ಸಂಘಟನೆಗಳು, ಬೀಜ ಸಂರಕ್ಷಕರು ಹಾಗೂ ರೈತ ಆಂದೋಲನದ ಕಾರ್ಯಕರ್ತರು ಆಚರಿಸುವಾಗ, ಈ ಘಟನೆಯಿಂದ ದೊಡ್ಡ ಪಾಠ ಕಲಿಯಬೇಕಾಗಿದೆ. ಬೀಜದ ಒಡೆತನ ಯಾರದು? ಎಂಬ ವಿಷಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಧೋರಣೆ ಈ ಘಟನೆಯಿಂದ ಸ್ಪಷ್ಟವಾಗುತ್ತದೆ.
ಪ್ರತಿಯೊಂದು ಬೀಜವನ್ನೂ ಬೌದ್ಧಿಕ ಹಕ್ಕು ಕಾಯಿದೆಯ ಪಟ್ಟಿಗೆ ಸೇರಿಸಬೇಕೆಂಬುದು ಅಭಿವೃದ್ಧಿ ಹೊಂದಿದ ದೇಶಗಳ ಹುನ್ನಾರ. ಯುಪಿಓವಿ (ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ದಿ ಪ್ರೊಟೆಕ್ಷನ್ ಆಫ್ ನ್ಯೂ ವೆರೈಟೀಸ್ ಆಫ್ ಪ್ಲಾಂಟ್ಸ್) ಎಂಬ ಬಹುಸರಕಾರ ಪ್ರವರ್ತಿತ ಸಂಸ್ಥೆ ಈ ಹುನ್ನಾರದ ಸಾಂಘಿಕ ರೂಪ. ಅಂತರಾಷ್ಟ್ರೀಯ ಒಪ್ಪಂದದ ಅನುಸಾರ ೧೯೬೮ರಲ್ಲಿ ಈ ಸಂಸ್ಥೆಯ ಸ್ಥಾಪನೆ. ಅಂದಿನಿಂದ ಮೂರು ಸುತ್ತಿನಲ್ಲಿ ಆ ಒಪ್ಪಂದಕ್ಕೆ ಬದಲಾವಣೆಗಳನ್ನು ಮಾಡಲಾಗಿದೆ. ಇದರ ಉದ್ದೇಶ ಸಸ್ಯಗಳ ಹೊಸ ತಳಿಗಳನ್ನು ಬೌದ್ಧಿಕ ಸೊತ್ತಿನ (ಐಪಿ ಅಂದರೆ ಇಂಟಲೆಕ್ಚುವಲ್ ಪ್ರಾಪರ್ಟಿ) ಹಕ್ಕು ಮೂಲಕ ರಕ್ಷಿಸುವುದು. ಆದರೆ, ದೇಸಿ ಬೀಜಗಳು ಮತ್ತು ರೈತರೇ ಸಂಶೋಧಿಸಿದ ಬೀಜಗಳ ಮೇಲೆ ರೈತರು ಹಾಗೂ ಗ್ರಾಮೀಣ ಸಮುದಾಯಗಳಿಗೆ ಇರುವ ಹಕ್ಕನ್ನು ಆ ಒಪ್ಪಂದ ಗುರುತಿಸುವುದಿಲ್ಲ. ವಾಣಿಜ್ಯ ತಳಿಪರಿಣತರ ಹಕ್ಕುಗಳನ್ನು ಮಾತ್ರ ಗುರುತಿಸುತ್ತದೆ.
ಭಾರತವು ಯುಪಿಓವಿಗೆ ಸದಸ್ಯ ದೇಶ ಆಗಿಲ್ಲ. ಬೀಜದ ಮೇಲೆ ರೈತರ ಹಕ್ಕನ್ನು ಭಾರತ ಗುರುತಿಸುತ್ತದೆ ಮತ್ತು ರಕ್ಷಿಸಲು ಬದ್ಧವಾಗಿದೆ. ಆದರೆ, ಯುಪಿಓವಿಯ ಸದಸ್ಯ ದೇಶ ಆಗಬೇಕೆಂದು ಭಾರತದ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ದಾದಾಜಿ ಖೊಬ್ರಗಡೆ ಅವರ ಪ್ರಕರಣ ನಮ್ಮೆಲ್ಲರನ್ನೂ ಎಚ್ಚರಿಸಲಿ.