ರೈತರ ಬೆಳೆಯುವ ಹಕ್ಕು ಮತ್ತು ಬೀಜ ಕಾಯಿದೆ

ರೈತನಿಗೆ ಬೆಳೆ ಬೆಳೆಯುವ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೆ ಕೆಲವು ಇತಿ ಮಿತಿಗಳೂ ಇವೆ ಎನ್ನುವುದಕ್ಕೆ ಕೆಲ ವರ್ಷಗಳ ಹಿಂದೆ ಗುಜರಾತ್ ನಲ್ಲಿ ರೈತರು ಆಲೂಗಡ್ಡೆ ಬೆಳೆದು ಕಾನೂನು ಕ್ರಮ ಎದುರಿಸುವಂತಾದ್ದು ಒಂದು ಉದಾಹರಣೆ. ಅಮೇರಿಕಾದ ಪಾನೀಯ ಮತ್ತು ಸ್ನಾಕ್ಸ್ ಉತ್ಪಾದಕ ಕಂಪೆನಿ ‘ಪೆಪ್ಸಿಕೋ’ವು ಟ್ರೂ ಪೊಟ್ಯಾಟೋ ಸೀಡ್ ಗಳನ್ನು ಮೊತ್ತ ಮೊದಲಾಗಿ ಉತ್ಪಾದಿಸಿ ಅದನ್ನು ನೋಂದಾಯಿಸಲ್ಪಟ್ಟ ರೈತರ ಮೂಲಕ ಕಂಪೆನಿಯ ತಜ್ಞರ ಮಾರ್ಗದರ್ಶನದಂತೆ ಬೆಳೆಸಿ ಅವರಿಂದ ಬೆಳೆದ ಬೆಳೆಯನ್ನು ಖರೀದಿ ಮಾಡುವ ಕೆಲಸ ಮಾಡುತ್ತಾ ಬರುತ್ತಿದೆ.
ಈ ಬೀಜಗಳನ್ನು (ಈಐ ೨೦೨೭ ಎಂಬ ಹೆಸರಿನ ಬೀಜ) ಕಂಪೆನಿಯು ಪೇಟೆಂಟ್ ಪಡೆದು ಉತ್ಪಾದಿಸಿದ್ದು, ಅದನ್ನು ‘ಲೇಸ್ ಪೊಟ್ಯಾಟೋ’ ಎನ್ನಲಾಗುತ್ತದೆ. ಇದು ಏಕ ಪ್ರಕಾರದ ಗಡ್ಡೆಗಳಾಗಿದ್ದು ಇದರ ಬೀಜಕ್ಕೆ ಬೌದ್ಧಿಕ ಆಸ್ತಿಯ ಹಕ್ಕು ಪ್ರಕಾರ ೨೦೧೬ ರಲ್ಲಿ ಕಂಪೆನಿಯು ತನ್ನ ಹಕ್ಕು ಸ್ವಾಮ್ಯವನ್ನು ಹೊಂದಿದೆ. ಹೀಗೆ ಹಕ್ಕು ಸ್ವಾಮ್ಯವನ್ನು ಪಡೆದ ಬೀಜಗಳನ್ನು ಅನಧಿಕೃತವಾಗಿ ಬೆಳೆಯುವುದು, ಮಾರಾಟ ಮಾಡುವುದು, ಬೀಜ ಮಾರಾಟ ಮಾಡುವುದು, ದಾಸ್ತಾನು ಮಾಡುವುದು ಕಾನೂನು ಪ್ರಕಾರ ಅಪರಾಧ. ಗುಜರಾತ್ನಲ್ಲಿ ಕೋಲ್ಡ್ ಸ್ಟೋರೇಜ್ ಒಂದರಲ್ಲಿ ಈ ಆಲೂಗಡ್ಡೆ ಪತ್ತೆಯಾಗಿ ಅದನ್ನು ಕಂಪೆನಿಯು ಬೆಂಬತ್ತಿದಾಗ ಕೆಲವು ರೈತರು ಈ ಬೀಜಗಳನ್ನು ಉಪಯೋಗಿಸಿ ಬೆಳೆ ಬೆಳೆದು ಅದು ಕಂಪೆನಿಗೆ ಗೊತ್ತಾಗಿ ಅವರು ಕಾನೂನು ಕ್ರಮ ಎದುರಿಸುವಂತಾಯಿತು. ಜೊತೆಗೆ ಅದನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟವರಿಗೂ ಕೇಸ್ ಬಿದ್ದಿದೆ. ಒಬ್ಬೊಬ ರೈತನು ಸುಮಾರು ೧.೫ ಕೋಟಿಯಂತೆ ಕಾನೂನು ಉಲ್ಲಂಘಿಸಿದ್ದಕ್ಕೆ ಕಂಪೆನಿಗೆ ದಂಡ ಕೊಡಬೇಕೆಂದು ವ್ಯಾಜ್ಯ ಹೂಡಲಾಗಿದೆ. ಈ ಬೀಜಕ್ಕೆ ೨೦೧೬ ರಲ್ಲಿ ಬೀಜ ಹಕ್ಕು ಸ್ವಾಮ್ಯ ಅನುಮತಿ ದೊರೆತಿತ್ತಾದರೂ ಅದು ೨೦೦೯ರಿಂದಲೂ ವಾಣಿಜ್ಯಿಕ ವ್ಯವಸಾಯದಲ್ಲಿ ಇತ್ತಂತೆ.
ಈ ಬಗ್ಗೆ ಕೆಲವರು ರೈತರ ಪರವಾಗಿ ನಿಂತಿದ್ದಾರೆ. ಬೌದ್ಧಿಕ ಆಸ್ತಿಯ ಹಕ್ಕಿನ ಕೆಲವು ಲೋಪ ದೋಷಗಳು ಮತ್ತು ಕಾನೂನಿನಲ್ಲಿರುವ ಕೆಲವು ತೊಂದರೆಗಳಿಂದ ನಮ್ಮ ದೇಶದ ಅಮಾಯಕ ರೈತನಿಗೆ ಯಾವ ರೀತಿಯಲ್ಲಿ ಅನ್ಯಾಯಗಳಾಗುತ್ತಿವೆ ಎಂಬ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದಾರೆ. ೨೦೦೧ ರಿಂದಲೂ ಈ ಬೀಜದ ಹಕ್ಕು, ಬೌದ್ಧಿಕ ಆಸ್ತಿಯ ಹಕ್ಕು ಮತ್ತು ತಳಿ ಹಕ್ಕುಗಳು ಚಾಲ್ತಿಯಲ್ಲಿವೆ. ಆದರೆ ನಮ್ಮ ದೇಶದಂತಹ ಬಡ ಮತ್ತು ಹೆಚ್ಚಿನ ಕಾನೂನು ಜ್ಞಾನ ಇಲ್ಲದ ರೈತನಿಗೆ ಇದು ಕೊರಳಿಗೆ ಉರುಳಾಗುವಂತಿದೆ. ಆದನ್ನು ಕೂಲಂಕುಶವಾಗಿ ಪರಿಶೀಲಿಸಿ ಬೆಳೆಯುವ ರೈತನಿಗೆ ತೊಂದರೆ ಆಗದಂತೆ ಕಾನೂನನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದು ಒತ್ತಾಯಿಸಲು ಮುಂದಾಗಿವೆ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ