ರೈತ ದಿನಾಚರಣೆಯ ಶುಭಾಶಯಗಳು

ರೈತ ದಿನಾಚರಣೆಯ ಶುಭಾಶಯಗಳು

ಕವನ

ಗಝಲ್

ಅನ್ನದಾತ ಜಗದ ಕಣ್ಣಿವ ಅಪ್ಪಟ

ರೈತ ದುಡಿಯುತಿಹನು ದೇವ|

ಕನ್ನೆನೆಲವ ಹಸನು ಮಾಡುತ ಬೆವರ

ಇಳಿಸಿ ನಡೆಯುತಿಹನು ದೇವ||

 

ಹಸಿವಿಗೆ ತಂಪಾಗಿ ಲೋಕ ತಣಿಸುವ

ಕಾಯಕ ಬಂಧು ಕೃತಕೃತ್ಯನು|

ಉಸಿರಿಗೆ ನೆರವಾಗಿ ಜೀವ ಉಳಿಸುವ

ಭಾವಜ್ಞ ದಣಿಯುತಿಹನು ದೇವ||

 

ಬದುಕಿಗೆ ಹೆಸರಾಗಿ ಚೈತನ್ಯ ಹೆಚ್ಚಿಸೊ

ನವೀನ ಮಾದರಿಯ ಧರ್ಮಾತ್ಮ|

ಕದಕರಿಂದ ಬೆಳೆಗೆ ತಥ್ಯ ಬೆಲೆಯಿಲ್ಲದೆ

ನಿತ್ಯವು ಕುಸಿಯುತಿಹನು ದೇವ||

 

ಹಸಿರಿಗೆ ನೆರಳಾಗಿ ಭೂತಾಯಿ ಒಡಲನು

ಸಮೃದ್ಧಿಗೊಳಿಸಲು ಒಪ್ಪ ಮಾಡುವನು|

ಕೆಸರಲಿ ದಿನವೂ ಕೆಲಸ ನಿರ್ವಹಿಸುತ

ಖುಷಿಯಲಿ ಕುಣಿಯುತಿಹನು ದೇವ||

 

ಬಾಳಿಗೆ ಭರವಸೆಯ ಬೆಳಕ ತುಂಬುತ

ಅಭಿಜ್ಞಾಳ ಮನದಿ ನೆಲೆಸಿರುವನು|

ಕೇಳುವ ತುಳಿಯುವ ಮನಗಳಿಗೆ ಅವನು

ಕಷ್ಟದಲು ಮಣಿಯುತಿಹನು ದೇವ||

***

*ನಮ್ಮ ರೈತ* (ಭಾಮಿನಿ ಷಟ್ಪದಿ)

 

ಲೋಕ ಬೆಳಗುವ ದಿವ್ಯ ಮೂರ್ತಿಯು

ನಾಕ ಮಾಡುತ ಧರೆಯ ಮಡಿಲನು

ದೇಕುತಿರುತಿಹ ನಿತ್ಯ ಹೊಲದಲಿ

ದಣಿದ ಜೀವವಿದು|

ನೂಕು ನುಗ್ಗಲು ಜನರ ಗುಂಪಲು

ಬೇಕು ಬೇಡುವನರಿತು ಸಾಗುವ

ಬಾಕಿಯುಳಿಸದೆ ಭುವಿಯ ಕಾರ್ಯವ

ಮಾಡೊ ನಿಸ್ವಾರ್ಥಿ||

 

ಹಸಿರ ಸೇಚಿಸಿ ಚಂದ ಗೊಳಿಸುತ

ನಸುಕು ಕಾಲದೊಳೆದ್ದು ದುಡಿಯುತ

ಕೆಸರು ಧರಣಿಗೆ ಚೆಲುವ ಮಾಡಿ

ನಿಂತು ನೋಡಿಹನು|

ಸಸಿನೆಯಿಂದಲೆ ಹಸನು ಮಾಡಿಸಿ

ಬೆಸೆದ ಬಂಧವ ಗಟ್ಟಿಗೊಳಿಸುತ

ತಸಕುಗೊಳ್ಳುವ ಪಾಪ ರೈತನು

ನಿತ್ಯ ಮರುಗುವನು||

 

ಭವದ ಭಯವನು ಸಹಿಸಿಕೊಳ್ಳುತ

ದವನ ಸೂಸುವ ಬೆಳೆಯ ಬೆಳೆಯುತ

ಸವಿದ ಭಾವದ ದಿವ್ಯ ಹೂರಣ

ಮೆಚ್ಚಿ ನಡೆಯುವನು|

ತವಕದಿಂದಲೆ ಕುಗ್ಗಿ ಹೋಗುವ

ಬೆವರ ಸುರಿಸುತ ಕೆಲಸ ಮಾಡುತ

ಧವಸ ಧಾನ್ಯವ ಬೆಳೆದು ನಲಿದರು

ಕಷ್ಟ ಕಾರ್ಪಣ್ಯ||

 

ಮಳೆಯ ಮಾಟಕೆ ಕುಸಿದು ಬೀಳುತ

ಬೆಳೆದ ಬೆಳೆಗೂ ಬೆಲೆಯು ಸಿಗದೇ

ಕಳೆಯು ಕುಂದಿದೆ ರೈತ ಮೊಗವದು

ಭಾರಿ ಭಂಗದಲಿ|

ತೊಳೆಯಬೇಕಿದೆ ಮನದ ಕೊಳೆಯನು

ಬಳಕೆ ಮಾಡದ ವಸ್ತು ವಿಷಯದ

ಹಳತು ಹೊಸತಿನ ಭವ್ಯ ಸಂಗಮ

ಕೂಗಿ ಕರೆದಿರಲು||

 

ಅನ್ನ ನೀಡುತ ಜಗವ ರಕ್ಷಿಸಿ

ತನ್ನ ಹೆಸರಲಿ ನೋವು ಬರೆಸುತ

ಭಿನ್ನ ರೂಪದಿ ಮನವ ಗೆದ್ದು ನೋವ

ಪಡುತಿಹನು|

ಚಿನ್ನದಂತಹ ಬೆಳೆಯ ತೆಗೆದರು

ಕನ್ನ ಹಾಕುವ ಮಂದಿ ಮುಂದೆಯೆ

ಮನ್ನದಿಂದಲೆ ಬದುಕ ಸವೆಸುತ

ದುಡಿವ ಯೋಗಿಯಿವ||

 

-*ಅಭಿಜ್ಞಾ ಪಿ ಎಮ್ ಗೌಡ* 

 

ಚಿತ್ರ್