ರೈತ ಮತ್ತು ಹುಲಿ
ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದಿತ್ತು. ಅದು ಕಾಡುಪ್ರಾಣಿಗಳ ರಾಜನಾಗಿತ್ತು. ಕಪ್ಪು ಚರ್ಮದ, ಬೆಂಕಿಯಂತಹ ಕಣ್ಣುಗಳ ಮತ್ತು ಚೂರಿಯಂತಹ ಹರಿತ ಹಲ್ಲುಗಳ ಈ ಹುಲಿ, ಕಾಡಿನ ಪ್ರಾಣಿಗಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಹಲವಾರು ಪ್ರಾಣಿಗಳನ್ನು ಕೊಂದು ತಿನ್ನುತ್ತಿತ್ತು.
ಅದೊಂದು ದಿನ ಬೆಳಗ್ಗೆ ಜಿಂಕೆಯನ್ನು ಕೊಂದು ತಿಂದ ಹುಲಿ ಸುತ್ತಾಡಲು ಹೊರಟಿತು. ತನ್ನನ್ನು ಕಾಣುತ್ತಲೇ ಇತರ ಪ್ರಾಣಿಗಳು ಓಡುವುದನ್ನು ಕಂಡು ಅದರ ಸೊಕ್ಕು ಹೆಚ್ಚುತ್ತಿತ್ತು. ಆಗ ಹುಲಿಗೆ ಅಲ್ಲೊಂದು ದೃಶ್ಯ ಕಂಡಿತು; ಅದೇನೆಂದು ಅದಕ್ಕೆ ಅರ್ಥವಾಗಲಿಲ್ಲ. ಅಲ್ಲಿನ ಪರ್ವತದ ಬುಡದಲ್ಲಿದ್ದ ಗದ್ದೆಯಲ್ಲಿ ಕೋಣವೊಂದು ಸದ್ದಿಲ್ಲದೆ ನೇಗಿಲನ್ನು ಎಳೆಯುತ್ತಿತ್ತು. ಅದನ್ನು ಬಿದಿರಿನ ಕೋಲಿನಿಂದ ಬಡಿಯುತ್ತಾ, ಬೊಬ್ಬೆ ಹಾಕುತ್ತಾ ಯುವಕನೊಬ್ಬ ಹಿಂಬಾಲಿಸುತ್ತಿದ್ದ.
ಇದನ್ನು ಕಂಡು ಹುಲಿಗೆ ಗೊಂದಲವಾಯಿತು. ಯಾಕೆಂದರೆ ಅದರ ಕಾಡಿನ ಸಾಮ್ರಾಜ್ಯದಲ್ಲಿ ಯಾರೂ ಅದರೊಂದಿಗೆ ಆ ರೀತಿ ನಡೆದುಕೊಳ್ಳುವುದಿಲ್ಲ. ರೈತ ಮತ್ತು ಕೋಣ ವಿರಮಿಸಲು ನಿಲ್ಲುವ ವರೆಗೆ ಇದನ್ನು ನೋಡುತ್ತಾ ಹುಲಿ ಅಲ್ಲೇ ನಿಂತಿತ್ತು. ನಂತರ ಕೋಣನ ಹತ್ತಿರ ಬಂದ ಹುಲಿ ಕೇಳಿತು, "ನನ್ನ ಗೆಳೆಯಾ, ಇದೇನಿದು! ಆ ಸಣ್ಣ ಮನುಷ್ಯ ನಿನಗೆ ಹಾಗೆ ಬಡಿಯುತ್ತಾ ಬೊಬ್ಬೆ ಹಾಕುವಾಗ ನೀನು ಯಾಕೆ ಸುಮ್ಮನಿದ್ದೆ? ನೀನು ದೊಡ್ಡ ಪ್ರಾಣಿ ಮತ್ತು ಶಕ್ತಿಶಾಲಿಯಾಗಿ ಕಾಣಿಸುತ್ತಿ. ಖಡ್ಗದಷ್ಟು ಹರಿತವಾದ ಚೂಪಾದ ನಿನ್ನ ಕೊಂಬುಗಳಿಂದ ನೀನು ಆ ಮನುಷ್ಯನನ್ನು ಯಾವಾಗ ಬೇಕಾದರೂ ಕೊಂದು ಬಿಡಬಹುದು. ನೀನ್ಯಾಕೆ ಅವನಿಗೆ ಶರಣಾಗಿದ್ದಿ ಅನ್ನೋದು ನನಗೆ ಅರ್ಥವಾಗುತ್ತಲೇ ಇಲ್ಲ.”
ಹುಲಿಯನ್ನು ನೇರವಾಗಿ ನೋಡಿದ ಕೋಣ ದುಃಖದಿಂದ ಹೇಳಿತು, "ಅವನೇನೋ ಸಣ್ಣ ಮನುಷ್ಯ. ಆದರ ಅವನಲ್ಲಿ ಬುದ್ಧಿವಂತಿಕೆ ಇದೆಯೆಂಬುದು ನಿನಗೆ ತಿಳಿದಿಲ್ಲವೇ?”
“ಏನೆಂದೆ? ಬುದ್ಧಿವಂತಿಕೆ ಅಂದೆಯಾ? ಅದೇನದು" ಎಂದು ಕೇಳಿತು ಹುಲಿ. ಕೋಣಕ್ಕೆ ಕಿರಿಕಿರಿಯಾಯಿತು. ಯಾಕೆಂದರೆ ಬುದ್ಧಿವಂತಿಕೆ ಎಂದರೇನೆಂದು ಅದಕ್ಕೂ ತಿಳಿದಿರಲಿಲ್ಲ. ಆದರೆ ಇದನ್ನು ಒಪ್ಪಿಕೊಳ್ಳಲು ಕೋಣ ತಯಾರಿರಲಿಲ್ಲ. ಆದ್ದರಿಂದ ಕೋಣ ಹೇಳಿತು, “ನೀನೇ ಹೋಗಿ ಅದೇನೆಂದು ಮನುಷ್ಯನನ್ನು ಕೇಳು.”
ಬಿದಿರಿನ ಕೊಳವೆಯೊಂದನ್ನು ಬಾಯಿಗಿರಿಸಿ ಸೇದುತ್ತಿದ್ದ ರೈತನ ಬಳಿಗೆ ನಡೆದು ಬಂದ ಹುಲಿ ಕೇಳಿತು, “ನಿನ್ನಲ್ಲಿ ಬುದ್ಧಿವಂತಿಕೆ ಇದೆಯೆಂದು ಕೋಣ ಹೇಳಿತು. ಹೌದೇನು?”
"ಹೌದು, ಅದು ಸತ್ಯ" ಎಂದ ರೈತ. ಆಗ ಹುಲಿ ಪ್ರಶ್ನಿಸಿತು, "ಅದೇನದು? ನನಗೆ ದಯವಿಟ್ಟು ಅದನ್ನು ತೋರಿಸುತ್ತೀಯಾ?”
“ರೈತನ ಉತ್ತರ, "ನಿನಗೆ ಅದನ್ನು ತೋರಿಸಬಹುದಾಗಿತ್ತು. ಆದರೆ ಅದು ಗದ್ದೆಯಲ್ಲಿ ಕಳೆದು ಹೋಗಬಹುದೆಂದು ಹೆದರಿ ಅದನ್ನು ಇವತ್ತು ಬೆಳಗ್ಗೆ ಮನೆಯಲ್ಲೇ ಇಟ್ಟು ಬಂದೆ."
ಈಗ ಹುಲಿ ಕೇಳಿತು, "ಮನೆಗೆ ಹೋಗಿ ಅದನ್ನು ತರುತ್ತೀಯಾ? ನನಗೆ ನಿಜವಾಗಿಯೂ ಅದನ್ನು ನೋಡಬೇಕಾಗಿದೆ.”
“ಖಂಡಿತವಾಗಿ ಅದನ್ನು ಮನೆಯಿಂದ ತರುತ್ತೇನೆ” ಎಂದು ಕೆಲವು ಹೆಜ್ಜೆ ನಡೆದು ಹೋದ ರೈತ. ನಂತರ ಗಕ್ಕನೆ ನಿಂತು, ವಾಪಾಸು ಬಂದ. "ನಾನು ಈಗ ಹೋಗಲಾಗದು. ಯಾಕೆಂದರೆ, ನಾನು ದೂರ ಹೋದಾಗ ನೀನು ಕೋಣವನ್ನು ಕೊಲ್ಲುತ್ತಿ ಎಂದು ಹೆದರಿಕೆಯಾಗುತ್ತಿದೆ” ಎಂದ.
"ಕೋಣವನ್ನು ಕೊಲ್ಲುವುದಿಲ್ಲವೆಂದು ನಾನು ಮಾತು ಕೊಡುತ್ತೇನೆ. ಯಾಕೆಂದರೆ ಬೆಳಗ್ಗೆ ಒಂದು ಜಿಂಕೆಯನ್ನು ತಿಂದು ನನ್ನ ಹೊಟ್ಟೆ ತುಂಬಿದೆ. ಹಾಗಾಗಿ ನೀನು ಚಿಂತೆ ಮಾಡಬೇಡ” ಎಂದಿತು ಹುಲಿ.
ಒಂದು ಕ್ಷಣ ಯೋಚಿಸಿದ ರೈತ ಹೇಳಿದ, "ಸರಿ, ಆ ಮರಕ್ಕೆ ನಿನ್ನಲು ಕಟ್ಟಲು ಒಪ್ಪಿದರೆ ನಾನು ಮನೆಗೆ ಹೋಗಿ ಬರುತ್ತೇನೆ. ಆಗ ನೀನು ಕೋಣವನ್ನು ತಿನ್ನುತ್ತಿ ಎಂಬ ಚಿಂತೆ ನನಗೆ ಇರೋದಿಲ್ಲ.”
ಬುದ್ದಿವಂತಿಕೆಯನ್ನು ಕಾಣಲು ಕಾತರವಾಗಿದ್ದ ಹುಲಿ ಈ ಸಲಹೆಯನ್ನು ಒಪ್ಪಿತು. ಹುಲಿಯನ್ನು ಹತ್ತಿರದ ಮರಕ್ಕೆ ಹಗ್ಗದಿಂದ ಬೇಗನೇ ಕಟ್ಟಿದ ರೈತ. ಅನಂತರ ಹುಲಿಯ ಸುತ್ತಲೂ ಒಣ ಎಲೆ ಮತ್ತು ಕಟ್ಟಿಗೆ ಪೇರಿಸಿದ ರೈತ, ಅವಕ್ಕೆ ಬೆಂಕಿ ಕೊಟ್ಟು ಹೇಳಿದ, "ಈಗ ನೋಡು, ಇಲ್ಲಿದೆ ನನ್ನ ಬುದ್ಧಿವಂತಿಕೆ."
ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಏರಿದಂತೆ ಬಿಸಿಯೂ ಏರಿತು. ಆದರೆ ಹುಲಿಗೆ ಅಲುಗಾಡಲಿಕ್ಕೂ ಆಗಲಿಲ್ಲ. ಬೆಂಕಿಯಿಂದಾಗಿ ಹುಲಿ ಸಂಕಟ ಪಟ್ಟಿತು ಮತ್ತು ಅಸಹಾಯಕವಾಗಿ ಒದ್ದಾಡಿತು. ಅದನ್ನು ನೋಡಿದ ಕೋಣ ಬಿದ್ದುಬಿದ್ದು ನಗುವಾಗ, ಒಂದು ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಬಿತ್ತು. ಅದರಿಂದಾಗಿ ಅದರ ಬಾಯಿಯ ಮೇಲ್ಭಾಗದ ಹಲ್ಲುಗಳು ಮುರಿದವು.
ಹುಲಿಯ ಸುತ್ತ ಬಿಗಿದಿದ್ದ ಹಗ್ಗ ಸುಟ್ಟ ನಂತರವೇ ಹುಲಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಯಿತು. ನೋವಿನಿಂದ ಗರ್ಜಿಸಿದ ಹುಲಿ, ಅಲ್ಲಿಂದ ತಕ್ಷಣವೇ ಓಡಿ ಕಾಡಿನೊಳಗೆ ಹೋಯಿತು.
ರೈತ ಹಾಕಿದ ಬೆಂಕಿಯಿಂದಾಗಿ ಚರ್ಮ ಸುಟ್ಟ ಕಾರಣ, ಹುಲಿಯ ಕುಟುಂಬದವರಿಗೆಲ್ಲ ಹುಟ್ಟುವಾಗ ಕಪ್ಪು ಮತ್ತು ಕಂದು ಪಟ್ಟೆಗಳ ಚರ್ಮ ಇರುತ್ತದೆ ಮತ್ತು ಹಲ್ಲು ಮುರಿದುಕೊಂಡ ಕೋಣನ ಕುಟುಂಬದವರಿಗೆಲ್ಲ ಹುಟ್ಟುವಾಗ ಬಾಯಿಯ ಮೇಲ್ಭಾಗದ ಹಲ್ಲುಗಳು ಇರುವುದಿಲ್ಲ.
ಆಧಾರ: ವಿಯೆಟ್ನಾಂ ಜಾನಪದ ಕತೆ
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ: ರೀಡ್ ಮಿ ಎ ಸ್ಟೋರಿ
ಚಿತ್ರಕಾರ: ಗುಯೆನ್ ಕ್ಸುಅನ್ ತಾಂಗ್