ರೈಲು ಟಿಕೇಟ್ ಹೀಗೂ ಇತ್ತು...!
ನೀವು ೯೦ರ ದಶಕ ಅಥವಾ ಅದಕ್ಕೂ ಮೊದಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಕರಾಗಿದ್ದರೆ ನಿಮಗೆ ಈ ಚಿತ್ರದಲ್ಲಿ ಕಾಣಿಸುತ್ತಿರುವ ಟಿಕೇಟ್ ಬಗ್ಗೆ ತಿಳಿದೇ ಇರುತ್ತದೆ. ರೈಲು ಇಲಾಖೆಯು ಆಗಿನ್ನೂ ಕಂಪ್ಯೂಟೀಕೃತವಾಗಿರಲಿಲ್ಲ. ನಂತರದ ದಿನಗಳಲ್ಲಿ ನಿಧಾನವಾಗಿ ಮೊದಲಿಗೆ ದೊಡ್ಡ ದೊಡ್ಡ ರೈಲು ನಿಲ್ದಾಣಗಳು ಕಂಪ್ಯೂಟೀಕರಣಗೊಂಡರೂ ಪುಟ್ಟ ಪುಟ್ಟ ನಿಲ್ದಾಣಗಳಲ್ಲಿ ಕಂಪ್ಯೂಟರ್ ಮುದ್ರಿತ ಟಿಕೇಟ್ ನೀಡುವ ವ್ಯವಸ್ಥೆ ಇರಲಿಲ್ಲ. ಅಂತಹ ನಿಲ್ದಾಣಗಳಲ್ಲಿ ನೀಡುತ್ತಿದ್ದ ಟಿಕೇಟ್ ಇವು. ಈ ಟಿಕೇಟ್ ನಲ್ಲಿ ಸಂಖ್ಯೆ, ಪ್ರಯಾಣದ ದಿನಾಂಕ, ಸ್ಥಳ (ಎಲ್ಲಿಂದ ಎಲ್ಲಿಯವರೆಗೆ) ಹಣ ಬಗ್ಗೆ ಮಾಹಿತಿ ಇರುತ್ತಿತ್ತು. ಇದನ್ನು ಅವರು ಒಂದು ಯಂತ್ರದ ಮೂಲಕ ಪಂಚ್ ಮಾಡಿ ಮುದ್ರಿಸಿಕೊಡುತ್ತಿದ್ದರು.
ಈ ಚಿತ್ರದಲ್ಲಿರುವ ಟಿಕೇಟ್ ಗಳು ನಾನು ಕಾಲೇಜ್ ನಲ್ಲಿ ಕಲಿಯುತ್ತಿರುವ ಸಮಯದಲ್ಲಿ ಕಾಸರಗೋಡು ಜಿಲ್ಲೆಯ ಬೇಕಲಕೋಟೆ ಎಂಬ ಪ್ರವಾಸೀ ತಾಣಕ್ಕೆ ಹೋಗಿ ಹಿಂದೆ ಬರುವಾಗ ತೆಗೆದುಕೊಂಡವುಗಳು. ಆ ೧೯೯೫ರ ಸಮಯದಲ್ಲಿ ಮಂಗಳೂರು ರೈಲು ನಿಲ್ದಾಣದಿಂದ ಪಳ್ಳಿಕ್ಕೆರೆ (ಬೇಕಲಕೋಟೆಗೆ ಸಮೀಪದ ನಿಲ್ದಾಣ) ಎಂಬ ಸ್ಥಳಕ್ಕೆ ಟಿಕೇಟ್ ತೆಗೆದುಕೊಂಡಾಗ ಅದು ಕಂಪ್ಯೂಟೀಕೃತ ಟಿಕೇಟ್ ಆಗಿತ್ತು. ಆದರೆ ನಾವು ಪಳ್ಳಿಕ್ಕೆರೆ ನಿಲ್ದಾಣದಿಂದ ಮರಳಿ ಮಂಗಳೂರಿಗೆ ಬರುವಾಗ ತೆಗೆದುಕೊಂಡ ಟಿಕೇಟ್ ಈ ರೀತಿಯ ಪುಟ್ಟ ಕಾರ್ಡ್ ಟಿಕೇಟ್ ಆಗಿತ್ತು.
ನಂತರದ ದಿನಗಳಲ್ಲಿ ರೈಲು ಇಲಾಖೆಯು ಗಣನೀಯ ಪ್ರಗತಿಯನ್ನು ಕಂಡಿದೆ. ಈ ರೀತಿಯ ಕಾರ್ಡ್ ಟಿಕೇಟ್ ಇತಿಹಾಸಕ್ಕೆ ಸೇರಿಹೋಗಿದೆ. ಈಗಿನ ಯುವ ಜನಾಂಗದವರಿಗೆ ಈ ಬಗೆಯ ಟಿಕೇಟ್ ಬಗ್ಗೆ ಅರಿವಿರಲಾರದು. ಈಗಂತೂ ಪ್ರಯಾಣ ಮಾಡಲು ಮುದ್ರಿತ ಟಿಕೇಟ್ ಬೇಕಿಲ್ಲ. ನಿಮ್ಮ ಮೊಬೈಲ್ ನಲ್ಲೇ ಇರುವ ಇ-ಟಿಕೇಟ್ ತೋರಿಸಿದರಾಯಿತು. ಅದರ ಜೊತೆಗೆ ನಿಮ್ಮದೊಂದು ಗುರುತು ಚೀಟಿ ಇದ್ದರೆ ಸಾಕು. ಈಗ ಟಿಕೇಟ್ ಕಾಯ್ದಿರಿಸಲು ರೈಲು ನಿಲ್ದಾಣಕ್ಕೆ ಹೋಗಿ ಹನುಮಂತನ ಬಾಲದಂತೆ ಇರುವ ಸರದಿ ಸಾಲು (ಕ್ಯೂ) ನಿಲ್ಲಬೇಕೆಂದೂ ಇಲ್ಲ. ಎಲ್ಲವೂ ಆನ್ ಲೈನ್ ನಲ್ಲಿ ಲಭ್ಯ. ಹೀಗಾಗಿ ಮುದ್ರಿತ ಟಿಕೇಟ್ ಗಳೂ ನೋಡಲು ಸಿಗುವುದಿಲ್ಲ. ಸ್ವಲ್ಪ ಮಟ್ಟಿಗೆ ಕಾಗದದ ಉಳಿತಾಯ, ಪರಿಸರ ಸ್ನೇಹಿ ಎಂದೂ ಹೇಳಬಹುದು.
ಮೊನ್ನೆ ಹಳೆಯ ಪುಸ್ತಕಗಳೆಡೆ ಹುಡುಕಾಡುತ್ತಿರುವಾಗ ಈ ಕಾರ್ಡ್ ಟಿಕೇಟ್ ಗಳು ದೊರೆತಾಗ ಹಿಂದಿನ ದಿನಗಳ ನೆನಪಾದವು. ಈಗಿನವರಿಗೆ ಈ ಟಿಕೇಟ್ ಬಗ್ಗೆ ಸ್ವಲ್ಪ ತಿಳಿಸಿಬಿಡುವ ಎಂದು ಬರೆದ ಬರಹ ಇದು.