ರೈಲ್ವೆ ಟಿಕೆಟ್ ರಿಯಾಯತಿಗೆ ೭೦ ವರ್ಷ ಮಿತಿ ; ಅಗೌರವದ ನಡೆ
ರೈಲ್ವೆ ಟಿಕೆಟ್ ದರದ ಮೇಲೆ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಹಿಂಪಡೆಯುವ ಮೂಲಕ ತೀವ್ರ ಜನಾಕ್ರೋಶಕ್ಕೆ ಒಳಗಾಗಿದ್ದ ಭಾರತೀಯ ರೈಲ್ವೆ ಇಲಾಖೆಯು ಮತ್ತೆ ರಿಯಾಯಿತಿ ಜಾರಿಗೆ ತರಲು ಮುಂದಾಗಿದೆ. ಆದರೆ, ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸುವ ಮುನ್ಸೂಚನೆ ನೀಡಿದೆ. ವಾರದ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, "ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ ನಲ್ಲಿ ಮತ್ತೆ ರಿಯಾಯಿತಿ ನೀಡುವ ಯಾವುದೇ ಆಲೋಚನೆಗಳು ಸರಕಾರಕ್ಕಿಲ್ಲ" ಎಂದು ನೇರವಾಗಿ ಹೇಳಿದ್ದರು. ರೈಲ್ವೆ ಇಲಾಖೆಯು ನಷ್ಟದಲ್ಲಿರುವುದರಿಂದ ರಿಯಾಯಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣವನ್ನೂ ನೀಡಿದ್ದರು. ಆದರೆ, ಕೇಂದ್ರ ಸರಕಾರದ ಈ ನಿರ್ಧಾರ ವಿರುದ್ಧ ವ್ಯಾಪಕ ಆಕ್ರೋಶ ಉಂಟಾಯಿತು. ಇದರಿಂದ ಎಚ್ಚೆತ್ತ ಸರಕಾರ ಈಗ ರಿಯಾಯಿತಿಯನ್ನು ಒದಗಿಸುವ ಭರವಸೆ ನೀಡಿದೆ.
೨೦೨೦ರ ಮಾರ್ಚ್ ಗಿಂತ ಮೊದಲು ಅಂದರೆ ಕೋವಿಡ್-೧೯ ಸಾಂಕ್ರಾಮಿಕಗಿಂತ ಮುಂಚೆ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ರಿಯಾಯಿತಿ ಇತ್ತು. ೫೮ ವರ್ಷ ದಾಟಿದ ಮಹಿಳಾ ಹಿರಿಯ ನಾಗರಿಕರಿಗೆ ಟಿಕೆಟ್ ನಲ್ಲಿ ಶೇ.೫೦ ಮತ್ತು ೬೦ ವರ್ಷ ದಾಟಿದ ಪುರುಷ ಹಿರಿಯ ನಾಗರಿಕರಿಗೆ ಶೇ.೪೦ ರೈಲ್ವೆ ಟಿಕೆಟಿನಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ಹೆಚ್ಚುತ್ತಿದ್ದಂತೆ ರೈಲ್ವೆ ಇಲಾಖೆಯು ನಷ್ಟದ ಕಾರಣ ನೀಡಿ, ಈ ರಿಯಾಯಿತಿಯ ಸೌಲಭ್ಯವನ್ನು ಹಿಂಪಡೆಯಿತು.
ಜನಾಕ್ರೋಶದ ಬಳಿಕ ಮತ್ತೆ ರಿಯಾಯಿತಿಯನ್ನು ಆರಂಭಿಸಲಿದೆ. ಆದರೆ, ಅದಕ್ಕೆ ಒಂದಿಷ್ಟು ಷರತ್ತುಗಳನ್ನು ಹಾಕುವ ಇರಾದೆ ವ್ಯಕ್ತಪಡಿಸಿದೆ. ಅರ್ಹತೆಯ ವಯೋಮಾನವನ್ನು ೬೦ ವರ್ಷದಿಂದ ೭೦ ವರ್ಷಕ್ಕೆ ಹೆಚ್ಚಿಸುವುದು. ನಾನ್ ಎಸಿ ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಗೆ ಮಾತ್ರ ರಿಯಾಯಿತಿಯನ್ನು ಸೀಮಿತಗೊಳಿಸುವ ಸಾಧ್ಯತೆಗಳಿವೆ. ಈ ಎಲ್ಲ ಷರತ್ತುಗಳ ಪೈಕಿ ವಯೋಮಿತಿ ಹೆಚ್ಚಳವು ಅವೈಜ್ಞಾನಿಕವಾಗಿದೆ. ಸರಕಾರವೇ ೬೦ ವರ್ಷ ಆದವರನ್ನು ಹಿರಿಯ ನಾಗರಿಕರೆಂದು ಗುರುತಿಸುವಾಗ ರೈಲ್ವೆ ಇಲಾಖೆ ಆ ಮಿತಿಯನ್ನು ೭೦ ವರ್ಷಕ್ಕೆ ಹೆಚ್ಚಿಸಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ಹಿರಿಯ ನಾಗರಿಕರಿಗೆ ಮಾಡುವ ಅವಮಾನ ಎಂದು ವಿಶ್ಲೇಷಿಸಬಹುದು.
ಜಗತ್ತಿನ ಯಾವುದೇ ರಾಷ್ಟ್ರಗಳನ್ನು ತೆಗೆದುಕೊಂಡರೂ ಅಲ್ಲೆಲ್ಲ ಹಿರಿಯ ನಾಗರಿಕರನ್ನು ಬಹಳ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ಅವರಿಗೆ ಅರ್ಹ ಎಲ್ಲ ಸರಕಾರಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ನಮ್ಮಲ್ಲಿ ಮಾತ್ರವೇ ರೈಲ್ವೆ ಟಿಕೆಟಿನಲ್ಲಿ ರಿಯಾಯಿತಿಗೂ ದೊಡ್ಡ ಹೋರಾಟವನ್ನು ಮಾಡಬೇಕಾದ ಪರಿಸ್ಥಿತಿ ಇದೆ. ಹಿರಿಯ ನಾಗರಿಕರು ಅಂದ ಕೂಡಲೇ ಅವರನ್ನು ಕಡೆಗಣಿಸಬೇಕಿಲ್ಲ. ಅವರು ಈ ದೇಶವನ್ನು ಕಟ್ಟಿದವರು. ಒಂದರ್ಥದಲ್ಲಿ 'ಎಲೆಮರೆಯಲ್ಲಿ ಉಳಿದ ಹೀರೋಗಳು'. ತಮ್ಮ ಜೀವಿತದ ಅವಧಿಯಲ್ಲಿ ಯಾರಿಗೂ ಕೇಡನ್ನು ಬಯಸದೇ ತಮಗೆ ದೊರೆತ ಕೆಲಸವನ್ನು ಅಷ್ಟೇ ನಿಷ್ಟೆಯಿಂದ ಮಾಡಿ, ವೃತ್ತಿಯಿಂದ ನಿವೃತ್ತರಾಗಿರುತ್ತಾರೆ. ಆ ಮೂಲಕ ದೇಶದ, ಸಮಾಜದ ಕೊಡುಗೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಣಿಕೆ ನೀಡಿರುತ್ತಾರೆ. ಅಂಥವರು ಹಿರಿಯ ನಾಗರಿಕರ ಸ್ಥಾನಕ್ಕೇರಿದ ಕೂಡಲೇ ಕಡೆಗಣಿಸುವುದು ಸರಿಯಲ್ಲ.
ರಿಯಾಯಿತಿ ಕೊಟ್ಟ ಮಾತ್ರಕ್ಕೆ ಅದರ ಪ್ರಯೋಜನಕ್ಕೆ ಅರ್ಹರಾಗುವ ಎಲ್ಲರೂ, ರಿಯಾಯಿತಿಯನ್ನು ಬಳಸುತ್ತಾರೆ ಎಂದೇನಿಲ್ಲ. ತೀರಾ ಅಗತ್ಯವಿರುವವರು ಮಾತ್ರವೇ ಬಳಸಿಕೊಳ್ಳುವುದು. ಆದರೆ, ತಮಗೆ ರಿಯಾಯಿತಿ ನೀಡುವ ಮೂಲಕ ಸರಕಾರ ಮತ್ತು ಸಮಾಜ ತಮ್ಮನ್ನು ಗೌರವಿಸಿದೆ ಎಂಬ ಭಾವ ಸಂತೃಪ್ತಿ ಎಲ್ಲ ಹಿರಿಯ ನಾಗರಿಕರಲ್ಲೂ ಇರುತ್ತೆ. ರಿಯಾಯಿತಿ ತಗ್ಗಿಸುವ ಇಲ್ಲವೇ ನಿರಾಕರಿಸುವ ಮೂಲಕ, ಈ ತೃಪ್ತಿಗೂ ಭಂಗ ತರುವುದು ಸರಿಯಲ್ಲ. ರೈಲ್ವೆ ಇಲಾಖೆಗೆ ನಷ್ಟ ಎನ್ನುವುದು ಕೇವಲ ಕಾಲ್ಪನಿಕ. ಹಿರಿಯ ನಾಗರಿಕರಿಗೂ ಸರಕಾರ ಗೌರವ ನೀಡಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೯-೦೭-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ