ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸ್ಥಾನವಿಲ್ಲದಿರುವುದು ಅನ್ಯಾಯ

ನಮ್ಮ ದೇಶದಲ್ಲಿ ಅತಿದೊಡ್ಡ ಉದ್ಯೋಗದಾತ ಸರ್ಕಾರಿ ಸಂಸ್ಥೆಗಳಲ್ಲಿ ರೈಲ್ವೆ ಇಲಾಖೆ ಕೂಡ ಒಂದು. ವರ್ಷವಿಡೀ ರೈಲ್ವೆಯಲ್ಲಿ ನಾನಾ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುತ್ತದೆ. ಇದು ಕೇಂದ್ರ ಸರ್ಕಾರದ ಇಲಾಖೆ. ಹೀಗಾಗಿ ಈ ಸಂಸ್ಥೆ ಎಲ್ಲಾ ಭಾಷಿಕ ಅಭ್ಯರ್ಥಿಗಳನ್ನೂ ಸಮಾನವಾಗಿ ಕಾಣಬೇಕು. ಇದು ನೈತಿಕ ಮತ್ತು ನೈಸರ್ಗಿಕ ಬಾಧ್ಯತೆಯೂ ಹೌದು, ಸಂವಿಧಾನಬದ್ಧವಾಗಿ ರೈಲ್ವೇ ಇಲಾಖೆಗಿರುವ ಹೊಣೆಗಾರಿಕೆಯೂ ಹೌದು. ಆದರೆ, ಪ್ರತಿ ಬಾರಿ ರೈಲ್ವೆ ಇಲಾಖೆಗಳಲ್ಲಿ ನೇಮಕಾತಿ ಪರೀಕ್ಷೆಗಳು ನಡೆದಾಗಲೂ ಕನ್ನಡ, ಮಲಯಾಳಂ, ತೆಲುಗು ಮುಂತಾದ ಭಾಷೆಗಳನ್ನು ಮಾತನಾಡುವ ಅಭ್ಯರ್ಥಿಗಳು ತಮ್ಮ ಬಾಷೆಯಲ್ಲಿ ಪರೀಕ್ಷೆ ನಡೆಯುತ್ತಿಲ್ಲ ಎಂದು ಗೋಳಿಡುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದೀಗ ಕರ್ನಾಟಕದಲ್ಲಿ ನೈಋತ್ಯ ರೈಲ್ವೆಯು ನಡೆಸುತ್ತಿರುವ ಸುಮಾರು ಒಂದು ಸಾವಿರದಷ್ಟು ಸಹಾಯಕ ಲೋಕೋಪೈಲೆಟ್ ಗಳ ಆಯ್ಕೆ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಬೇಕು ಎಂದು ಷರತ್ತು ವಿಧಿಸುವ ಮೂಲಕ ಮತ್ತೊಮ್ಮೆ ಅದೇ ಅನ್ಯಾಯ ಮುನ್ನಲೆಗೆ ಬಂದಿದೆ. ಏಕೆ ಪ್ರಾದೇಶಿಕ ಭಾಷೆಯವರು ಪ್ರತಿ ಸಲವೂ ರೈಲ್ವೆ ನೌಕರಿಯ ವಿಷಯದಲ್ಲಿ ಹೋರಾಟವನ್ನೇ ಮಾಡಬೇಕು? ಏಕೆ ಸಹಜವಾಗಿ ಇವರಿಗೆ ನ್ಯಾಯ ಸಿಗುವುದಿಲ್ಲ?
ರೈಲ್ವೆ ಪರೀಕ್ಷೆಗಳಲ್ಲಿ ಇಂಗ್ಲಿಷ್ ಗೆ ಅವಕಾಶವಿರುವುದು ಸಹಜವಾಗಿದೆ. ಇಂಗ್ಲಿಷ್ ಅನ್ನದ ಭಾಷೆ ಮತ್ತು ಎಲ್ಲಾ ರಾಜ್ಯಗಳ ನಡುವೆ ಕೊಂಡಿಯಂತಿರುವ ಸ್ಪರ್ಧಾ ಭಾಷೆ. ಅದನ್ನು ಹೊರತುಪಡಿಸಿದರೆ ರೈಲ್ವೆ ಯಾವಾಗಲೂ ಹಿಂದಿ ಭಾಷೆಯನ್ನು ಆಯ್ಕೆಯನ್ನಾಗಿ ನೀಡುತ್ತದೆ. ಇದು ಏಕೆ? ದಕ್ಷಿಣ ಭಾರತೀಯರಿಗೆ ಹಿಂದಿ ತಿಳಿದಿರುವುದಿಲ್ಲ. ಹೀಗಾಗಿಯೇ ರೈಲ್ವೆಯ ಈ ತಾರತಮ್ಯ ನೀತಿಯಿಂದಾಗಿ ರೈಲ್ವೆ ಇಲಾಖೆಯ ನೌಕರಿಯಲ್ಲಿ ದಕ್ಷಿಣ ಭಾರತದಲ್ಲೂ ಹಿಂದಿ ಭಾಷಿಕರೇ ತುಂಬಿಕೊಂಡಿದ್ದಾರೆ. ಕನ್ನಡಿಗರಿಗೆ ಮತ್ತು ಇತರ ಪ್ರಾದೇಶಿಕ ಭಾಷಿಕರಿಗೆ ಸತತವಾಗಿ ವಂಚನೆಯಾಗಿತ್ತಿದೆ. ಇಲ್ಲಿ ಇನ್ನೂ ಒಂದು ಹಂತದ ತಾರತಮ್ಯವಿದೆ. ತಮಿಳುನಾಡು, ಪಶ್ಚಿಮ ಬಂಗಾಳದಂತಹ ಕೆಲವೇ ರಾಜ್ಯಗಳಲ್ಲಿ ಅಲ್ಲಿನ ಭಾಷೆಯಲ್ಲೂ ರೈಲ್ವೆ ಪರೀಕ್ಷೆಗಳು ನಡೆಯುತ್ತವೆ. ಅಲ್ಲಿಯವರು ರೈಲ್ವೆ ಸಚಿವರಾಗಿದ್ದಾಗ ಈ ವ್ಯವಸ್ಥೆ ಮಾಡಿಟ್ಟುಕೊಂಡಿದ್ದಾರೆ. ಕನ್ನಡಿಗರು ದುರದೃಷ್ಟವಂತರು. ಆದರೆ ಈ ತಾರತಮ್ಯ ತೊಲಗಬೇಕು. ಸಂವಿಧಾನದ ೮ ನೇ ಪರಿಚ್ಛೇದದಲ್ಲಿ ಹೇಳಿದ ಎಲ್ಲಾ ಭಾಷೆಗಳಲ್ಲೂ ರೈಲ್ವೆ ಪರೀಕ್ಷೆಗಳು ನಡೆಯಬೇಕು. ಸಂಸ್ಕೃತ, ಡೊಂಗ್ರಿಯಂತಹ ಭಾಷೆ ಬಿಡಬಹುದು. ರಾಜ್ಯಗಳ ಒಳಗಿನ ಹುದ್ದೆಗಳಿಗೆ ನಡೆಸುವ ರೈಲ್ವೆ ಪರೀಕ್ಷೆಗಳು ಇಂಗ್ಲಿಷ್ ಮತ್ತು ರಾಜ್ಯ ಭಾಷೆಯಲ್ಲಿ ಇರಬೇಕು. ಇದಕ್ಕಾಗಿ ಕೇಂದ್ರ ಸರಕಾರ ನಿಯಮಗಳಿಗೆ ತಿದ್ದುಪಡಿ ತರುವಂತೆ ರಾಜ್ಯದ ಸಂಸದರು ಮತ್ತು ಕನ್ನಡಿಗ ರೈಲ್ವೆ ಸಚಿವರು ಪ್ರಯತ್ನಿಸಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೩-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ