ರೈಲ್ವೇ ಕಂಬದ ಜೇನು ಕಿತ್ತು ಸಿಕ್ಕಿಬಿದ್ದದ್ದು...! (ಭಾಗ 2)

ರೈಲ್ವೇ ಕಂಬದ ಜೇನು ಕಿತ್ತು ಸಿಕ್ಕಿಬಿದ್ದದ್ದು...! (ಭಾಗ 2)

ನಮ್ಮ ತಂಡ ಹಾಸ್ಟೆಲ್ ನಿಂದ ಹೋರಹೋಗುತ್ತಿರುವುದು ಜೇನು ಬಿಡಿಸಿ ತಿನ್ನಲಿಕ್ಕೆ ಎಂದು ವಾರ್ಡನ್ ಆದಿಯಾಗಿ ಎಲ್ಲರಿಗೂ ಗೊತ್ತಾಗಿತ್ತು. ಅನೇಕ ಹುಡುಗರು ನಮ್ಮ ತಂಡ ಎಲ್ಲಿಯಾದರೂ ಹೊರಟರೆಂದರೇ ಇವರು ಜೇನು ಹುಡುಕಲು, ಜೇನುಕೀಳಲೇ ಹೋಗುತ್ತಿದ್ದಾರೆಂದು ಅವರಿದ್ದ ಸ್ಥಿತಿಯಲ್ಲಿಯೇ ನಮ್ಮ ಹಿಂದೆ ಬರಲು ಸಿದ್ದರಿದ್ದರು. ಅದಕ್ಕಾಗಿ ಅವರನ್ನೂ ನಮ್ಮ ಜೊತೆಗೆ ಸೇರಿಸಿಕೊಳ್ಳಲು ಮನೆಯಿಂದ ತಂದ ತಿಂಡಿಗಳನ್ನು ಕೊಡುವುದು, ಇಲ್ಲವೇ ಅಂಗಡಿಗಳಲ್ಲಿ ಅದೂ ಇದು ಕೊಡಿಸಿವುದು ಮಾಡುತ್ತಿದ್ದರು. ಜೇನು ಹುಡುಕಲು ಹದಿನೈದು ಇಪ್ಪತ್ತು ಹುಡುಗರನ್ನು ಕರೆದುಕೊಂಡು ಹೋಗಿ ದೊಂಬಿ ಮಾಡುವ ಪರಿಸ್ಥಿತಿಯಲ್ಲಿ ನಾವೂ ಇರಲಿಲ್ಲ. ಆದ್ದರಿಂದ ನಾವು ಜೇನು ಕೀಳಲು ಹೋಗಲೇ ಬೇಕೆಂದರೆ ಒಬ್ಬೊಬ್ಬರಾಗಿ ಸ್ವತಂತ್ರವಾಗಿ ಅವರ ಪಾಡಿಗೆ ಅವರು ಹೊರಟು ಹೋಗಿ ಕೊನೆಗೆ ನಿಗದಿಪಡಿಸಿದ ಸ್ಥಳದಲ್ಲಿ ಎಲ್ಲರೂ ಕೂಡಿಕೊಂಡು ಆಮೇಲೆ ಜೇನು ಹುಟ್ಟುಗಳನ್ನು ಬಿಡಿಸಲು ಹೋಗುತ್ತಿದ್ದೆವು. ಅಂದು ಹೀಗೆ ಮಾತಾಡಿದಂತೆ ಅವರವರ ಪಾಡಿಗೆ ಅವರು ಹೊರಟು ಹುರಿಗಡಲೆ ಮಿಲ್ ಬಳಿ ಸೇರಬೇಕೆಂದು ಸೂಚಿಸಿದ್ದರಿಂದ ಎಲ್ಲರೂ ಎತ್ತೆತ್ತಲಿಂದಲೋ ಬಂದು ನಮ್ಮ ತಂಡ ಸೇರಿಕೊಂಡರು. ಹುರಿಗಡಲೆಯ ವಾಸನೆ ನಮ್ಮನ್ನು ಕೆರಳಿಸಿದ್ದರಿಂದ ಗೇಟಿನಿಂದ ಒಳಹೋಗಿ 'ನಾವು ಹಾಸ್ಟೆಲ್ ಹುಡುಗರು ತಿನ್ನಲು ಹುರಿಗಡಲೆ ಬೇಕು' ಎಂದು ಕೇಳಿಕೊಂಡಾಗ ಯಾರೊ ಪುಣ್ಯಾತ್ಮ ಒಬ್ಬೊಬ್ಬರಿಗೆ ಒಂದೊಂದು ಬೊಗಸೆ ತುಂಬಾ ತುಂಬಿಕೊಟ್ಟಿದ್ದ. ಕಡಲೆಯ ಮುಕ್ಕುತ್ತಾ ಹನ್ನೊಂದು ಹನ್ನೊಂದು ವರೆ ಸುಮಾರಿಗೆ ಆ ಜೇನಿದ್ದ ರೈಲ್ವೇ ಸಿಗ್ನಲ್ ಕೈ ಕಂಬದ ಬಳಿ ಬಂದೆವು. ಹಿಂದೆ ಕಚ್ಚಿಸಿಕೊಂಡಂತೆ ಇಂದು ಜೇನಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಅಂಜಿನಿ ಒಂದು ಟವೆಲ್ ಅನ್ನೂ ತೆಗೆದುಕೊಂಡು ಬಂದಿದ್ದ. ಅವನು ಕೈ ಕಂಬದಿಂದ ಸುಮಾರು ದೂರದಲ್ಲಿ ನಿಂತಿದ್ದ. ಇತ್ತ ಗೊವಿಂದ ನಮ್ಮೆಲ್ಲರಿಗಿಂತಲೂ ಹಿರಿಯ. ಅವನು ಅಡುಗೆ ರೂಂ ಗೆ ಹೋದಾಗ ಒಂದು ಬೆಂಕಿ ಪೊಟ್ಟಣ ಜೇಬಿನಲ್ಲಿ ಹಾಕಿಕೊಂಡು ಬಂದಿದ್ದ. ಈ ಬಾರಿ ನನ್ನ ಜೊತೆ ದೇವರಾಜನಿಗಿಂತ ಗೋವಿಂದನೇ ನಿರ್ಣಾಯಕ ಪಾತ್ರ ವಹಿಸಿದ್ದ. ಅಂಜಿನಿಯ ಹತ್ತಿರ ಟವೆಲ್ ಇಸ್ಕೊಂಡ್ ಮುಖ, ತಲೆಯ ಸುತ್ತಲೂ ಸುತ್ತಿ ಕಣ್ಣಿನ ಭಾಗ ಮಾತ್ರ ತೆರೆದುಕೊಂಡು ಅಲ್ಲೇ ಅಕ್ಕ ಪಕ್ಕ ಬಿದ್ದಿದ್ದ ಕಸ ಕಡ್ಡಿಗಳನ್ನು ಒಟ್ಟುಮಾಡಿ ಬೆಂಕಿ ಹಚ್ಚಿ ಜೇನಿನ ಸಮೀಪ ತಂದಿಟ್ಟ. ಹೊಗೆಗೆ ಸ್ವಲ್ಪ ಹಾರಿದ ಹುಳುಗಳು ಹೊಗೆ ತಾಗದ ಇನ್ನೊಂದು ಬದಿಯಲ್ಲಿ ಹಾಗೇ ಕುಳಿತಿದ್ದವು. ಹೊಗೆ ಇದ್ದುದ್ದರಿಂದಲೋ ಏನೋ ಅಂಥಾ ತೀಕ್ಷ್ಣವಾದ ದಾಳಿ ಮಾಡಲಿಲ್ಲ. ನಾನು ಕೈಯಲ್ಲಿ ತಂಗಟಿ ಸೊಪ್ಪು ಹಿಡಿದು ಅಲ್ಲಾಡಿಸುತ್ತಾ ಬಾಯಿಂದ ಗಾಳಿ ಊದಿ ಹುಳುಗಳನ್ನು ಎಬ್ಬಿಸಿದೆ. ಅಲ್ಲಿಂದ ಸುಮಾರು 600-700 ಮೀಟರ್ ಇದ್ದ ಸ್ಟೇಶನ್ ಸಿಬ್ಬಂದಿಗೆ ಸಿಗ್ನಲ್ ಕಂಬದ ಕೆಳಗೇ ಹೊಗೆ ಹಾಕಿದ್ದು, ನಾವು ಬೇರೆ ಏನನ್ನೋ ಅಲ್ಲಿ ಮಾಡುತ್ತಿದ್ದುದನ್ನು ಗಮನಿಸಿದ ಅವರು ಯಾರೋ ಗ್ಯಾಂಗ್ ಮ್ಯಾನನಂತಿದ್ದ ಒಬ್ಬರನ್ನು ಕಳಿಸಿದರು. ಹತ್ತಿರ ಬರುತ್ತಾ ಬರುತ್ತಾ ಜೇನು ಕಿತ್ತು ಹಾಗೆ ಹಂಚಿಕೊಂಡು ತಿನ್ನುತ್ತಾ ಇದ್ದುದರಿಂದ ಏನ್ರೋ ಜೇನಾ ?? ಎಂದು ಕೇಳಿದರು. ಅವರು ಸ್ಟೇಷನ್ ಕಡೆಯಿಂದಲೇ ಬಂದಿದ್ದು ನೋಡಿ ರೈಲ್ವೆ ಅವರೇ ಎಂದೆನಿಸಿತ್ತಾದರೂ ಯಾಕೋ ಆತ್ಮೀಯತೆ ಯಿಂದ ಮಾತಾಡಿದ್ದಕ್ಕೆ ಅಲ್ಲವೇನೋ ಎನಿಸಿತು. ಅಂಜಿನಿ ಹತ್ತಿರ ಬಂದ ಆ ಮನುಷ್ಯ ಏಕಾ ಏಕಿ ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು "ಕಳ್ಳ ನನ್ ಮಕ್ಕಳ ರೈಲು ಸಿಗ್ನಲ್ ಕಂಬಕ್ಕೆ ಬೆಂಕಿ ಇಟ್ಟಿದ್ದಿರಾ...??? ನಡೆಯಿರಿ ಎಲ್ಲರೂ ಸ್ಟೆಷನ್ ಹತ್ತಿರ" ಎಂದರು. ನಮಗೆ ಓಡಿ ಹೋಗಲು ಅವಕಾಶ ಇತ್ತಾದರೂ ಅಂಜಿನಿಯನ್ನು ಅವರು ಹಿಡಿದುಕೊಂಡಿದ್ದರಿಂದ ಕಾಲ್ಕೀಳದೇ ಸಂಪೂರ್ಣವಾಗಿ ಶರಣಾಗಿ ಎಲ್ಲರೂ ಒಟ್ಟಿಗೆ "ನಡೀ ಅಣ್ಣ ಬರುತ್ತೀವಿ ನಾವೇನು ಮಾಡಿಲ್ಲ... ಜೇನನ್ನು ಮಾತ್ರ ತೆಗೆದಿದ್ದೇವೆ." ಅಂತ ಹೇಳಿ ಹೊರಟೆವು. ಅಷ್ಟೊತ್ತಿಗೆ ಎರಡಡಿ ಒಣಹುಲ್ಲಿಗೆ ಹಚ್ಚಿದ್ದ ಬೆಂಕಿ ನಾಮಾವಶೇಷವಾಗಿ ಆರಿಹೋಗಿತ್ತು. ಆ ರೈಲು ನೌಕರ ಅಂಜಿನಿಯ ಕೈಯನ್ನು ಹಿಡಿದೇ ಸಿಗ್ನಲ್ ಕೈ ಕಂಬದಲ್ಲಿ ಏನಾದರೂ ಸುಟ್ಟುಹಾಕಿದ್ದಾರೆಯೇ ಎಂದು ವೀಕ್ಷಣೆ ಮಾಡಿದರು. ಜೇನು ತೆಗೆಯುವಾಗ ಬೆಂಕಿಹಾಕಬಾರದೆಂದು ಗೊತ್ತಾಗಲಿಲ್ಲವಾದರೂ ಜೇನು ತಿನ್ನುವ ಆಸೆಯಲ್ಲಿ ನಮ್ಮಿಂದ ತಪ್ಪೊಂದು ನಡೆದಿದೆ. ಎಲ್ಲರ ಎದೆಯಲ್ಲೂ ಡವ.. ಡವ... ಏನಾಗುವುದೋ ಏನೋ ??ಹೊಡೆಯುವರೋ..?? ಹಾಸ್ಟೆಲ್ ವಾರ್ಡನ್ ನ್ನು ಕರೆಸುವರೋ..??? ಯಾವ ನಿರ್ಣಯಕ್ಕೂ ಬಾರದೇ ಗಾಬರಿಯಾಗಿ 'ಭಯ' ಅಷ್ಟೇ ನಮ್ಮನ್ನು ಕಾಡುತ್ತಾ ಬಾಯಾರಿಕೆಗೆ ಬಾಯಿ ಒಣಗುತ್ತಾ ಇತ್ತು. ಏನಾಗುವುದೋ ಏನೋ ಎಂಬ ಆತಂಕದಿಂದ ಸ್ಟೇಷನ್ಗೆ ನಡೆದು ಬಂದೆವು. ಆತಂಕದಿಂದ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದೇವೆ. ಏನೂ ಮಾತಾಡಲಾಗುತ್ತಿಲ್ಲ. ನೌಕರನ ಕೈಯಲ್ಲಿ ಬಂಧಿಯಾದ ಅಂಜಿನಿ ಮಾತ್ರ ಭಯದಿಂದ ನಡುಗುತ್ತಿದ್ದಾನೆ. ಆಗ ಸ್ಟೇಶನ್ ನಲ್ಲಿ ನೌಕರರು, ಒಬ್ಬಿಬ್ಬರು ಪ್ರಯಾಣಿಕರು ಬಿಟ್ಟರೇ ಯಾರು ಇರಲಿಲ್ಲ. ಯಾವುದೋ ಒಂದು ರೂಂಗೆ ನಮ್ಮನ್ನ ಹಾಕಿದರು. 'ಕೂತ್ಕಳ್ರಿ... ಸಾರ್ ಬರುತ್ತಾರೆ' ಎಂದೇಳಿ ಆ ನೌಕರ ಹೋದ...

ನಮ್ಮನ್ನು ಪೋಲಿಸ್ ಸ್ಟೇಶನ್ನಿಗೆ ಕಳಿಸ್ತಾರ...? ಅಥವಾ ಪೋಲಿಸರನ್ನೇ ಕರೆಸುತ್ತಾರಾ...? ಎಂಬ ಆತಂಕ ಹೆಚ್ಚಿ ಗಂಟಲು ಒಣಗುತ್ತಿತ್ತು. ಆ ಸ್ಟೇಷನ್ ಮಾಸ್ಟರ್ ಹಿಂದಿಯವರು ಅನ್ಸತ್ತೆ... ಅವರಿಗೆ ನಮ್ಮನ್ನು ಕರೆದುಕೊಂಡು ಬಂದವನು ಅನುವಾದ ಮಾಡುತ್ತಿದ್ದ. ಕೊನೆಗೆ ಯಾರೋ ಒಬ್ಬ ಪೋಲಿಸೋ ಸೆಕ್ಯುರಿಟಿ ಗಾರ್ಡೋ ಗೊತ್ತಾಗಲಿಲ್ಲ. ಪ್ಯಾಂಟ್ ಮಾತ್ರ ಖಾಕಿ ಅಗಿತ್ತು. ನಮ್ಮನ್ನೆಲ್ಲಾ ಉದ್ದೇಶಿಸಿ ಕನ್ನಡ, ಅಸಂಸ್ಕೃತ ಬಾಷೆಯಲ್ಲಿ ಒಂದಷ್ಟು ಬಯ್ದರು. ನಮ್ಮದೆಲ್ಲರದೂ ಒಂದೇ ಉತ್ತರ. "ಸಾರ್ ನಾವು BCM ಹಾಸ್ಟೆಲ್ ಹುಡುಗರು... ಜೇನನ್ನು ಮಾತ್ರ ಕಿತ್ತಿದ್ದೇವೆ. ಕೈಯಲ್ಲಿ ಅಂಟಿದ ಜೇನು ಹಾಗೆ ಇದೆ.. ಬೆಂಕಿಯನ್ನು ಹಾಕಿದ್ದು ತಪ್ಪು ಆದರೆ ಇನ್ಮೇಲೆ ಇಲ್ಲೆಲ್ಲಿ ಬರುವುದಿಲ್ಲ.." ಎಂದು ಎಲ್ಲರನ್ನೂ ನಿಂದು ಯಾವ ಊರು ನಿನ್ನದು ಯಾವ ಊರು ಎಂದು ಕೇಳುತ್ತಾ ಅವರು "ಇನ್ಮೇಲೆ ರೈಲು ಹಳಿಗಳ ಮೇಲೆ ಎಲ್ಲಿಯಾದರೂ ಕಂಡಿರೋ... ನಿಮಗೆ ಬಾಯಲ್ಲಿ ಹೇಳುವುದಿಲ್ಲ..." ಎಂದು ಲಾಠಿಯನ್ನು ಗೊಡೆಗೆ ಬಡಿದರು. "ಇಲ್ಲಾ ಸರ್ ಬರುವುದಿಲ್ಲ" ಎಂದು ಹೇಳಿ ಆ ಸಿಗ್ನಲ್ ಕಂಬದಲ್ಲಿ ಏನು ಸುಟ್ಟುಹೋಗಿಲ್ಲ ತಾನೇ ಎಂದು ಗಾರ್ಡ ನಿಂದ ಖಚಿತ ಪಡಿಸಿ ಕೊಂಡು ನಮ್ಮನ್ನು ಬಿಟ್ಟರು. ಅಷ್ಟೊತ್ತಿಗಾಗಲೇ ಗಂಟಲು ವಿಪರೀತ ಒಣಗಿದ್ದರಿಂದ ಅಲ್ಲೇ ನೀರು ಕುಡಿದು ಇನ್ಮೇಲೆ ಎಲ್ಲಿಯೂ ಬರುವುದು ಬೇಡ.. ಮತ್ತೆ ಸಿಕ್ಕರೆ ನಮ್ಮನ್ನು ಹೊಡೆಯಬಹುದು‌ ಅಥವಾ ಪೋಲಿಸ್ ಸ್ಟೇಷನ್ಗೆ ಕಳಿಸಬಹುದೆಂದು ಅಂದಿನಿಂದ ಅತ್ತ ಕಡೆ ಹೋಗುವುದನ್ನು ಕಡಿಮೆ ಮಾಡಿದೆವು. ಹೋದರೂ ರೈಲ್ವೆ ಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಕಾಲಲ್ಲಿ ಮುಟ್ಟಲೂ ಭಯ ಆಗುತ್ತಿತ್ತು. ಕೆಲವು ದಿನಗಳಾದ ನಂತರ ನಮ್ಮ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂತು. ಶಾಲೆ ಮತ್ತು ಹಾಸ್ಟೆಲ್ ಪುನರಾರಂಭ ಆದಾಗ ನಮ್ಮ ಹಾಸ್ಟೆಲ್ ಅಲ್ಲಿಂದ ದೂರ ಅಂದರೆ ಬೆಂಗಳೂರು ರಸ್ತೆಯಿಂದ ಚಿತ್ರದುರ್ಗದ ರಸ್ತೆಗೆ ಸ್ಥಳ ಬದಲಾಯಿಸಿದ್ದರಿಂದ ಪುನಃ ನಾವು ಆ ರೈಲ್ವೇ ಹಳಿಗಳ ಕಡೆಹೋಗಲಿಲ್ಲ. ಹೊಸ ಸ್ಥಳದಲ್ಲಿ ಬೇರೆ ಬೇರೆ ಕಡೆ ಜೇನು ಹುಡುಕುವ ಕಾರ್ಯ ಮುಂದುವರೆಸಿದವು. ಆದರೆ ದೇವ, ಗೋವಿಂದ, ವರುಣ, ಧನಂಜಯ ಹತ್ತನೇ ತರಗತಿ ಮುಗಿದದ್ದರಿಂದ ಅವರು ಹಾಸ್ಟೆಲ್ ನಿಂದ ನಿರ್ಗಮಿಸಿದರು. ಹೊಸ ಹುಡುಗ ರೊಂದಿಗೆ ನನ್ನ ತಿರುಗುವ ಅಭ್ಯಾಸ ಹಾಗೇ ಇತ್ತು... ಆದರೆ ಜೇನು ಕೀಳಲು ನಾನೆಂದೂ ಬೆಂಕಿಯನ್ನು ಹಾಕಿ ಹುಳುಗಳ ಕೊಂದು ಜೇನು ಕಿತ್ತು ತಿಂದಿಲ್ಲ.

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ