ರೈಲ್ವೇ ನಿಲ್ದಾಣದಲ್ಲಿ ಬ್ಲೂಫೈ
ರೈಲ್ವೇ ನಿಲ್ದಾಣದಲ್ಲಿ ಬ್ಲೂಫೈ
ಬೆಂಗಳೂರು ರೈಲ್ವೇ ನಿಲ್ದಾಣವು ದೇಶದಲ್ಲೇ ಮೊದಲ ಬಾರಿಗೆ ಬ್ಲೂಟೂತ್ ಮತ್ತು ವೈಫೈ ಮೂಲಕ ರೈಲ್ವೇ ನಿಲ್ದಾಣದಲ್ಲಿ ವಿವಿಧ ಮಾಹಿತಿಗಳನ್ನು ಒದಗಿಸಲಿದೆ.ಅಂತರ್ಜಾಲ ಸಂಪರ್ಕ ಬೇಕಾದರೆ,ಎಸೆಮ್ಮೆಸ್ ಸಂದೇಶ ರವಾನಿಸಿ,ನೋಂದಾಯಿಸಿಕೊಳ್ಳಬೇಕು.ಒಮ್ಮೆ ನೋಂದಾಯಿಸಿದ ಬಳಿಕ ಮುಕ್ಕಾಲು ಗಂಟೆ ಅಂತರ್ಜಾಲ ಸಂಪರ್ಕ ಸಿಗುತ್ತದೆ.ವೈಫೈ ಇಲ್ಲದವರಿಗೆ,ಬ್ಲೂಟೂತ್ ಸಂಪರ್ಕ ಮೂಲಕ ಮಾಹಿತಿಗಳನ್ನು ನೀಡಲಾಗುವುದು.ರೈಲ್ಟೆಲ್ ಮತ್ತು ಮೊಬೈಲ್ ಜಾಹೀರಾತು ಸಂಸ್ಥೆ ಟೆಲಿಬ್ರಹ್ಮಗಳ ಸಹಯೋಗದಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ.ರೈಲ್ಟೆಲ್ ವೈಫೈ ಸಂಪರ್ಕದ ಹೊಣೆ ಹೊತ್ತಿದ್ದರೆ,ಟೆಲಿಬ್ರಹ್ಮ ಬ್ಲೂಟೂತ್ ಸಂಪರ್ಕವನ್ನು ನೀಡುತ್ತದೆ.
-------------------------------------
ವಿಂಡೋಸ್ 8 :ಬಳಕೆಗೆ ಲಭ್ಯ
ಬಳಕೆದಾರರಿಗೆ ಮುಂಬರುವ ಹೊಸ ವಿಂಡೋಸ್ 8ರ ಅನುಭವ ನೀಡಲು ಮೈಕ್ರೋಸಾಫ್ಟ್ ಆಪರೇಟೀಂಗ್ ವ್ಯವಸ್ಥೆ ತಂತ್ರಾಂಶದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.ಇದು ಸರ್ವ ಸಾಧನಗಳನ್ನು ಗಮನದಲ್ಲಿರಿಸಿ ಸಿದ್ಧ ಪಡಿಸಿರುವ ಆಪರೇಟಿಂಗ್ ವ್ಯವಸ್ಥೆಯಾಗಿರುವುದರಿಂದ.ಇದರಲ್ಲಿ ಡೆಸ್ಕ್ಟಾಪ್ ವ್ಯವಸ್ಥೆಯ ಮಾಮೂಲಿ ಬಳಕೆಗೆ ಒಗ್ಗದಿರಬಹುದು.ಆದರೆ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಬಳಕೆಯಲ್ಲಿ ಸ್ಪರ್ಶಸಂವೇದಿ ತೆರೆಗೆ ಸೂಕ್ತವಾದ ಅನುಕೂಲತೆಗಳನ್ನಿದು ಹೊಂದಿದೆ ಎಂದು ಇದನ್ನು ಬಳಸಿದವರು ಪ್ರಮಾಣೀಕರಿಸಿದ್ದಾರೆ.ವಿಂಡೋಸ್ ಎಂಟನ್ನು ಅನುಸ್ಥಾಪಿಸಿದಾಗ,ಸ್ಟಾರ್ಟ್ ಬಟನ್ ಇತ್ಯಾದಿಗಳ ಮಾಮೂಲಿ ನೋಟ ಸಿಗದು.ವಿವಿಧ ಅಪ್ಲಿಕೇಶನ್ಗಳ ಐಕಾನುಗಳ ದರ್ಶನವಾದೀತು.ಮಾಮೂಲಿ ಡೆಸ್ಕ್ಟಾಪ್ ಅನುಭವ ನೀಡುವಂತೆ ಆಪರೇಟಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸಿದರೆ,ವಿಂಡೋಸ್ ಏಳನ್ನು ಬಳಸಿದಂತೆ ಕಾಣಿಸಿ,ಹೊಸ ಆಪರೇಟಿಂಗ್ ವ್ಯವಸ್ಥೆಯಿದೆ ಎನ್ನುವುದೇ ಮರೆತೀತು ಎಂದು ಬಳಕೆದಾರರ ಮೊದಲ ಪ್ರತಿಕ್ರಿಯೆಗಳು ಹೇಳುತ್ತವೆ.
----------------------------------------------------
ಟ್ವಿಟರ್:ಸಂದೇಶಗಳ ಬಿಕರಿ
ಟ್ವಿಟರ್ ತಾಣವು ಪ್ರತಿದಿನ ಇಪ್ಪತ್ತೈದು ಕೋಟಿ ಸಂದೇಶಗಳನ್ನು ಪ್ರದರ್ಶಿಸಬೇಕಾಗುತ್ತದೆ.ಹೀಗೆ ತನ್ನ ತಾಣವು ಆರಂಭದಿಂದ ಸ್ವೀಕರಿಸಿದ ಸಂದೇಶಗಳ ಬಹುದೊಡ್ಡ ಖಜಾನೆಯನ್ನದು ಹೊಂದಿದೆ.ಈ ಸಂದೇಶಗಳನ್ನು ದತ್ತಾಂಶ ವಿಶ್ಲೇಷಣಾ ಕಂಪೆನಿಗಳಿಗೆ ಬಿಕರಿ ಮಾಡಿ,ಲಾಭ ಮಾಡಿಕೊಳ್ಳಲು ಟ್ವಿಟರ್ ನಿರ್ಧರಿಸಿದೆ.ಈ ವಿಶ್ಲೇಷಣೆಯು ಜನರ ಮನೋಭಾವ,ಇಷ್ಟಾನಿಷ್ಟಗಳ ಬಗ್ಗೆ ಕಂಪೆನಿಗಳಿಗೆ ಬೇಕಾದ ಅಪಾರ ಸುಳಿವುಗಳನ್ನು ಒದಗಿಸುವುದು ಖಂಡಿತ.ದತ್ತಾಂಶಗಳು ಗಣಿಗಳಿದ್ದಂತೆ.ಗಣಿಗಳಿಂದ ಲಭ್ಯವಾಗುವ ಸಂಪನ್ಮೂಲಗಳಂತೆ ,ದತ್ತಾಂಶಗಳ ವಿಶ್ಲೇಶಣೆ,ಮಾಹಿತಿ,ಜ್ಞಾನ ಮತ್ತು ತಿಳುವಳಿಕೆಗಳನ್ನು ನೀಡುವುದು ನಿಶ್ಚಿತ.
--------------------------------------------------------
ಹೈಟೆಕ್ ಕಾರುಗಳಿಗೆ ಹ್ಯಾಕರುಗಳ ಭೀತಿ
ಹೈಟೆಕ್ ಕಾರುಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಲು ಸಾಧ್ಯವಾಗುವಂತೆ ಅಭಿವೃದ್ಧಿಗೊಳಿಸಲಾಗಿರುತ್ತದೆ.ಫೋರ್ಡ್,ಟೊಯೋಟಾದ ಹೊಸ ಕಾರುಗಳನ್ನು ಸ್ಮಾರ್ಟ್ಫೋನುಗಳನ್ನು ಬಳಸಿ ಚಲಾಯಿಸಲು ಬರುತ್ತದೆ.ಚಾಲಕನಿಲ್ಲದೆಯೂ ಇವು ಗೂಗಲ್ ಮ್ಯಾಪ್ ಮೂಲಕ ಸಾಗಬೇಕಾದ ಕಡೆ ಸಾಗಲು ನಿರ್ದೇಶನ ಪಡೆಯುತ್ತವೆ.ಹೀಗಾಗಿ ಇಂತಹ ನವೀನ ಹೈಟೆಕ್ ಕಾರುಗಳು ಹ್ಯಾಕರುಗಳ ದಾಳಿಗೆ ತುತ್ತಾಗುವ ಅಪಾಯವೂ ಇದೆ.ಕಂಪ್ಯೂಟರುಗಳನ್ನು ಹ್ಯಾಕರುಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುವುದರ ಬಗ್ಗೆ ನೀವು ಕೇಳಿದ್ದೀರಿ.ಅದೇ ರೀತಿ ಕಾರುಗಳನ್ನೂ ಅವರುಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಸಾಧ್ಯವೇನಲ್ಲ.ಒಂದು ವೇಳೆ ಹಾಗಾದರೆ,ಕಾರುಗಳನ್ನು ಬೇಕಾದೆಡೆಗೆ ಒಯ್ಯುವುದು,ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು,ಅತಿವೇಗದಲ್ಲಿ ಚಲಾಯಿಸುವುದು ಇಂತಹ ಹಲವು ರೀತಿಯ ಪುಂಡಾಟಗಳನ್ನು ದಾಳಿಕೋರರು ಪ್ರದರ್ಶಿಸುವುದು ಸಂಭವನೀಯ ಎನ್ನುವುದು ಸ್ಪಷ್ಟ.ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲುವಂತೆ ಮಾಡಿ,ಅಪಹರಿಸಲು ಇಂತಹ ತಂತ್ರಜ್ಞಾನಗಳ ದುರ್ಬಳಕೆಯಾದರೆ ಅಚ್ಚರಿಯೇನಿಲ್ಲ ಅಲ್ಲವೇ?
--------------------------------------------
ನಿಟ್ಟೆಯಲ್ಲಿ ಟೆಡೆಕ್ಸ್
ಯುವಜನರು ಸಾಧಕರ ಜತೆ ಬೆರೆತು ತಮ್ಮ ಪ್ರಗತಿಗೆ ಮಾರ್ಗದರ್ಶನ ಮತ್ತು ಹುರುಪನ್ನು ಪಡೆದುಕೊಳ್ಳಲು ನೆರವಾಗುವ ಉದ್ದೇಶದ ಟೆಡ್-ಎಕ್ಸ್ ಎನ್ನುವ ಸ್ವತಂತ್ರ ಕಾರ್ಯಕ್ರಮವನ್ನು ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಅನುಭವದ ಸೆಲೆಯನ್ನು ಮಾತುಕತೆಯ ಮೂಲಕ ಬಿಚ್ಚಿಡುವ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ವಿನ್ನಿ ಲೋಹನ್,ಕಾರ್ತಿಕೇಯನ್ ವಿಜಯ್,ನ್ಯಾಶನಲ್ ಎರೋಸ್ಪೇಸ್ ಲ್ಯಾಬೋರೇಟರಿಯ ಡಾ.ಎ.ಆರ್.ಉಪಾಧ್ಯಾಯ,ಎನ್ ಜಿ ಓವೊಂದರ ಜಿತಿನ್,ಚಲನಚಿತ್ರ ಕ್ಷೇತ್ರದ ವಸುಂಧರಾದಾಸ್,ಕಾರ್ಗಿಲ್ ವೀರ ಮೇಜರ್ ಡಿ ಪಿ ಸಿಂಗ್,ಅಸಾಧಾರಣ ಪ್ರತಿಭಾಶಾಲಿ ಅನು ವೈದ್ಯನಾಥನ್,ಇಸ್ರೋದ ವಿಜ್ಞಾನಿ ಮೈಲಾಸ್ವಾಮಿ ಅಣ್ಣಾದುರೈ ಮುಂತಾದವರು ಭಾಗವಹಿಸಿದರು.ವಿವರಗಳಿಗೆ http://tedxnmamit.com ನೋಡಿ.
-------------------------------------------------
ಭಾಷಣಕಾರನ ಬಾಯಿ ಬಂದ್ ಮಾಡಲು ಸಾಧನ
ಭೀಷಣವಾದ ಭಾಷಣ ಮಾಡಿ ಕಾಟ ಕೊಡುತ್ತಿರುವ ಭಾಷಣಕಾರನ ಬಾಯಿ ಬಂದ್ ಮಾಡುವ ಸಾಧನವೂ ಇದೀಗ ಲಭ್ಯ.ಸ್ಪೀಚ್ ಗನ್ ಎನ್ನುವ ಸಾಧನದಲ್ಲಿ ಭಾಷಣಕಾರನ ಮಾತನ್ನು ಗ್ರಹಿಸುವ ಮೈಕ್ ಮತ್ತದನ್ನು ತುಸು ವಿಳಂಬವಾಗಿ ಭಾಷಣಕಾರನತ್ತ ಕಳುಹಿಸುವ ಧ್ವನಿವರ್ಧಕ ಇದೆ.ಹೀಗಾಗಿ ಮಾತನಾಡುವವನು ತನ್ನದೇ ಮಾತನ್ನು ಕೇಳಿ,ಕಕ್ಕಾಬಿಕ್ಕಿಯಾಗಿ ಮಾತು ನಿಲ್ಲಿಸಬೇಕಾಗುವ ಮೂಲಕ ಮಾತುಗಾರನ ಮಾತಿಗೆ ಕಡಿವಾಣ ಹಾಕುವ ವ್ಯವಸ್ಥೆಯಿದೆ.ಇದನ್ನು ಗ್ರಂಥಾಲಯಗಳಲ್ಲಿ ಜನರು ಮಾತನಾಡುವುದನ್ನು ತಡೆಯುವಂತಹ ಒಳ್ಳೆಯ ಕೆಲಸಕ್ಕೆ ಬಳಸಬಹುದು.ಇಲ್ಲವೇ ಭಾಷಣಕಾರನ ಭಾಷಣಕ್ಕೆ ಅಡ್ಡಿಪಡಿಸುವಂತಹ ಕಿಡಿಗೇಡಿ ಕೆಲಸಕ್ಕೂ ಬಳಸಬಹುದು.ಅಂದಹಾಗೆ ಇದು ಜಪಾನೀ ಸಂಶೋಧಕರ ಸಂಶೋಧನೆಯಾಗಿದೆ.ಸುಮ್ಮನೆ ಗದ್ದಲ ಎಬ್ಬಿಸುವವರ ಮಾತು ಕಟ್ಟಲು ಈ ಸಾಧನದಿಂದ ಸಾಧ್ಯವಿಲ್ಲ.
-----------------------------------------
ಮನೆಕೆಲಸಕ್ಕೆ ರೊಬೋಟ್
ವ್ಯಾಕ್ಯೂಂ ಕ್ಲೀನಿಂಗ್ ಕೆಲಸ ಮಾಡುವ ರೊಬೋಟುಗಳನ್ನು ಮಾರುವುದರಲ್ಲಿ ವಿಕ್ರಮಗೈದ ಐರೊಬೋಟ್ ಕಂಪೆನಿಯು ತನ್ನ ರೊಬೋಟುಗಳನ್ನು ಮನೆಕೆಲಸ,ಕಚೇರಿ ಕೆಲಸಗಳಿಗೂ ಬಳಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಿದೆ.ಬಾಂಬು ಪತ್ತೆ ಮತ್ತು ಅದನ್ನು ನಿಷ್ಕ್ರಿಯಗೊಳಿಸುವಿಕೆಗೆ ಬಳಸುವ ರೊಬೋಟನ್ನು ಅಭಿವೃದ್ಧಿ ಪಡಿಸುವುದರಲ್ಲಿ ಯಶಸ್ಸು ಪಡೆದಿರುವ ಕಂಪೆನಿಯು,ಐಪ್ಯಾಡನ್ನು ತಲೆಯಾಗುಳ್ಳ ಮತ್ತು ಎಕ್ಸ್ಬಾಕ್ಸ್ ಸಾಧನವನ್ನು ಚಲನೆ ಪತ್ತೆ ಮಾಡಲು ಬಳಸಿ,ರೊಬೋಟನ್ನು ಸುಧಾರಿಸುವತ್ತ ಹೆಜ್ಜೆಯಿಡುತ್ತಿದೆ.ವೈದ್ಯರುಗಳು ದೂರದಿಂದಲೇ ರೋಗಿಯ ಶುಶ್ರೂಷೆಗೈಯಲು ನೆರವಾಗುವ ರೊಬೋಟ್ ತಯಾರಿಸುವ ಗುರಿಯನ್ನು ಕಂಪೆನಿ ಹೊಂದಿದೆ.
----------------------------------------
ಐದು ಲಕ್ಷ ನೌಕರಿ ಸೃಷ್ಟಿಸಿರುವ ಅಪಲ್
ಅಮೆರಿಕಾದ ಅತ್ಯಧಿಕ ಬೆಲೆಬಾಳುವ ಕಂಪೆನಿಯಾದ ಆಪಲ್ ತಾನು ಐದು ಲಕ್ಷ ನೌಕರಿ ಸೃಷ್ಟಿಸಿರುವುದಾಗಿ ಹೇಳಿಕೊಂಡಿದೆ.ಸುಮಾರು ಐವತ್ತು ಸಾವಿರ ಜನರಿಗೆ ಕಂಪೆನಿಯಲ್ಲೇ ನೇರವಾಗಿ ಕೆಲಸ ಸಿಕ್ಕಿದೆ.ಇನ್ನುಳಿದ ನೌಕರಿಗಳು ಕೊರಿಯರ್,ಆರೋಗ್ಯಕ್ಷೇತ್ರ,ತಂತ್ರಾಂಶ ಅಭಿವೃದ್ಧಿ ಕೆಲಸ ಹೀಗೆ ಪರೋಕ್ಷವಾಗಿ ಸೃಷ್ಟಿಯಾಗಿರುವ ನೌಕರಿಗಳಾಗಿವೆ.ಆಪಲ್ ಕಂಪೆನಿಯು ಚೀನಾ,ಕೊರಿಯಾಗಳಲ್ಲಿ ಸಾಧನ ತಯಾರಿಕೆಗೆ ಹೊರಗುತ್ತಿಗೆ ನೀಡಿ,ಅಮೆರಿಕನ್ನರ ಕೆಲಸಕ್ಕೆ ಕನ್ನ ಹಾಕಿದೆ ಎಂಬ ಅರೋಪಗಳಿಗುತ್ತರವಾಗಿ ಕಂಪೆನಿಯು ಈ ಲೆಕ್ಕಾಚಾರಕ್ಕಿಳಿದಿದೆ.
UDAYAVANI
ಅಶೋಕ್ಕುಮಾರ್ ಎ