ರೊಬಾಟ್’ ಮಿಡತೆಯ ರೆಕ್ಕೆಯಲ್ಲಿ ನಮ್ಮ ಹೃದಯ ಸ್ನಾಯು?
ಓದಿ ನೆಟ್ನೋಟ...ಸುಧೀಂದ್ರ ಹಾಲ್ದೊಡ್ಡೇರಿ...ವಿ.ಕ.
ನಮ್ಮ ದೇಹದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಸ್ನಾಯುಗಳು ಯಾವುವು ಎಂಬ ಪ್ರಶ್ನೆಗೆ ಹೃದಯದಲ್ಲಿ ಹುದುಗಿರುವ ಸ್ನಾಯುಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಕಾರಣ, ಹಗಲೂ ರಾತ್ರಿ ಹೃದಯವೆಂಬ ಪಂಪು ನಿರಂತರವಾಗಿ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಸ್ನಾಯುಗಳೆಲ್ಲವೂ ಪ್ರತಿಸ್ಪಂದಿಸಬೇಕು. ಒಂದೊಂದು ಹೃದಯ ಮಿಡಿತಕ್ಕೂ ಮೇಳೈಸುವಂತೆ ಸ್ನಾಯುಗಳು ಸಂಕುಚಿತವಾಗಬೇಕು/ವಿಕಸನವಾಗಬೇಕು. ಇದು ಸಾಧ್ಯವಾಗುವುದು ಹೇಗೆಂದರೆ ಹೃದಯ ಸ್ನಾಯುಗಳಲ್ಲಿ ಜೀವಕೋಶಗಳು ಒಂದು ನಿರ್ದಿಷ್ಟ ಮಾದರಿಯಲ್ಲಿ ಜೋಡಣೆಯಾಗಿರುತ್ತವೆ. ಈ ಜೋಡಣೆ ಕೇವಲ ಯಾಂತ್ರಿಕ ಜೋಡಣೆಯಷ್ಟೇ ಅಲ್ಲ, ವಿದ್ಯುತ್ ಸಂಕೇತಗಳ ಸುಗಮ ಹರಿದಾಟಕ್ಕೂ ಅನುವು ಮಾಡಿಕೊಡುತ್ತದೆ. ಅಂದರೆ ನಮ್ಮ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹುದುಗಿರುವ ಸೂಕ್ಷ್ಮಾತಿ ಸೂಕ್ಷ್ಮ ಅಳತೆಯ ‘ಎಲೆಕ್ಟ್ರಾನಿಕ್ ಸರ್ಕ್ಯೂಟ್ - ವಿದ್ಯುನ್ಮಾನ ಮಂಡಲ’ದಂತೆ ಈ ಜೀವಕೋಶ ಮಂಡಲ ಕೆಲಸ ಮಾಡುತ್ತಿರುತ್ತದೆ. ಕಾರ್ಯ ನಿರ್ವಹಿಸುತ್ತಿರುವ ಸ್ನಾಯುಗಳಿಗೆ ಬೇಕಾದ ಶಕ್ತಿ ಸಂಚಯನಕ್ಕೆ ಅಗತ್ಯವಾದ ಗ್ಲುಕೋಸ್ ಅಂಶ ಸತತವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿರುತ್ತದೆ. ಇಂಥ ಅತ್ಯದ್ಭುತ ಕಾರ್ಯಪಟುತ್ವವಿರುವ ಸಾಮಗ್ರಿಯನ್ನು ಕೃತಕವಾಗಿ ತಯಾರಿಸುವಂತಿದ್ದರೆ ಎಷ್ಟೆಲ್ಲಾ ಅನುಕೂಲಗಳಿರುತ್ತಿದ್ದವು. ಹೃದಯಾಘಾತವಾದಾಗ ಆ ಭಾಗದಲ್ಲಿ ನಿಶ್ಚೇತನಗೊಂಡ ಸ್ನಾಯುಗಳಿಗೆ ಬದಲಿಯಾಗಿ ಇಂಥ ಕೃತಕ ಸ್ನಾಯುಗಳನ್ನು ಜೋಡಿಸಬಹುದಿತ್ತು. ತೊಂದರೆಗೀಡಾದ ಸ್ನಾಯುಗಳನ್ನು ಕತ್ತರಿಸಿ ಆ ಭಾಗದಲ್ಲಿ ಕೃತಕ ಸ್ನಾಯುಗಳನ್ನು ಅಳವಡಿಸಬಹುದಿತ್ತು. ಥೇಟ್ ನಮ್ಮ ಮನೆಯ ವಿವಿಧ ಭಾಗಗಳಿಗೆ ವಿದ್ಯುತ್ ಸಂಪರ್ಕ ನೀಡುವ ವೈರುಗಳಂತೆ, ಹಳತಾದ, ಹರಿದು ಹೋದ ತಂತಿಗಳನ್ನು ಬದಲಿಸುವಂತೆ ಅಥವಾ ಹೊಸ ಸಂಪರ್ಕ ಬೇಕೆಂದೆಡೆ ತಂತುಗಳನ್ನು ಸೇರ್ಪಡೆ ಮಾಡುವಂತೆ, ನಮ್ಮ ಹೃದಯದ ಸ್ನಾಯು ಮಂಡಲದಲ್ಲಿ ಮಾರ್ಪಾಡುಗಳನ್ನು ಮಾಡಬಹುದಿತ್ತು.