ರೊಹಂತ ಮತ್ತು ನಂದ್ರಿಯಾ

ರೊಹಂತ ಮತ್ತು ನಂದ್ರಿಯಾ

ಪುಸ್ತಕದ ಲೇಖಕ/ಕವಿಯ ಹೆಸರು
ಕೃಷ್ಣ ಚೈತನ್ಯ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.45/-

ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ.

ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ. ಇಂತಹ ಪ್ರತಿಯೊಂದು ಪುನರ್ಜನ್ಮದ ಕತೆಯನ್ನು ಜಾತಕ (ಜನ್ಮ) ಕತೆಯೆಂದು ಕರೆಯಲಾಗಿದೆ. ಕಾಲಕ್ರಮೇಣ ಈ ಎಲ್ಲ ಕತೆಗಳನ್ನು ಪಾಳಿ ಭಾಷೆಯಲ್ಲಿ ಬರೆಯಲಾಯಿತು (ಹಿಂದೆ ಮಗಧ - ಈಗಿನ ಬಿಹಾರ - ರಾಜ್ಯದ ಜನರ ಭಾಷೆ). ಐನೂರಕ್ಕೂ ಹೆಚ್ಚು ಜಾತಕ ಕತೆಗಳಿವೆ. ಅಜಂತಾ ಗುಹಾ ದೇವಾಲಯಗಳಲ್ಲಿ ಹೆಚ್ಚುಕಡಿಮೆ ಈ ಎಲ್ಲ ಕತೆಗಳನ್ನೂ ವರ್ಣ ಚಿತ್ರಗಳಲ್ಲಿ ನಿರೂಪಿಸಲಾಗಿದೆ.

ಮೊದಲನೆಯದು ರೊಹಂತ ಎಂಬ ಹೆಸರಿನ ಕಪ್ಪು ಗಂಡು ಜಿಂಕೆಯ ಕತೆ. ಈ ವರ್ಗದ ಜಿಂಕೆಗಳ ಸೂಕ್ಷ್ಮ ದೃಷ್ಟಿ ಮತ್ತು ಚುರುಕಾದ ಕಾಲುಗಳು ಇವುಗಳಿಗೆ ರಕ್ಷಣೆ ನೀಡುವ ಮುಖ್ಯ ಸಾಧನಗಳು. ಜಗತ್ತಿನ ಅತ್ಯಂತ ವೇಗಶಾಲಿ ಪ್ರಾಣಿಗಳಲ್ಲಿ ಒಂದಾದ ಇವು ಗಂಟೆ 65 ಕಿಮೀ ವೇಗದಲ್ಲಿ ಓಡಬಲ್ಲವು.

ಬಹಳ ಬುದ್ಧಿಶಾಲಿಯಾದ ರೊಹಂತ ಬಹುಬೇಗನೇ ತನ್ನ ಗುಂಪಿನ ಜೀವನ ವಿಧಾನವನ್ನು ಕಲಿತುಕೊಂಡಿತು. ಮರಿಯಾಗಿದ್ದಾಗ ಒಂದು ಮಾವಿನ ಮರದ ರುಚಿಯಾದ ಹಣ್ಣು ತಿನ್ನಲು ಹೋಗುತ್ತಿತ್ತು ರೊಹಂತ. ಇದರ ಹೆಜ್ಜೆಜಾಡು ಹಿಡಿದ ಬೇಟೆಗಾರನೊಬ್ಬ ಆ ಮರದ ಮೇಲೆ ಈಟಿ ಹಿಡಿದು ಕಾದು ಕೂತ. ಆದರೆ ಜಾಣ ರೊಹಂತ ಅವನ ಹೆಜ್ಜೆಗಳ ಜಾಡು ಹಿಡಿದು ದೂರದಲ್ಲೇ ನಿಂತಿತು. ಬೇಟೆಗಾರ ಕಾದುಕಾದು ಬೇಸತ್ತು ಅದರತ್ತ ಈಟಿ ಎಸೆದಾಗ ಆ ಈಟಿಯನ್ನೇ ಕಚ್ಚಿಕೊಂಡು ಹೋಯಿತು. ಅನಂತರ ಎರಡು ಸಲ ಬೇಟೆಗಾರನ ಬಲೆಗೆ ಸಿಕ್ಕಿಬಿದ್ದರೂ ಉಪಾಯದಿಂದ ಪಾರಾಯಿತು.

ಇಂತಹ ರೊಹಂತ ಬೆಳೆದು ತನ್ನ ಜಿಂಕೆಗಳ ಹಿಂಡಿನ ನಾಯಕನಾಯಿತು. ತದನಂತರ ಅಲ್ಲಿನ ವೃದ್ಧ ರಾಜ ಸತ್ತಾಗ, ಯುವರಾಜನಿಗೆ ಪಟ್ಟ ಕಟ್ಟಲಾಯಿತು. ಅವನಿಗೆ ಪ್ರತಿದಿನ ಭೇಟೆಯಾಡಿ, ದಿನಕ್ಕೊಂದು ಜಿಂಕೆ ಕೊಲ್ಲುವ ಖಯಾಲಿ. ಕೊನೆಗೆ,  ರಾಜನಿಗೆ ತನ್ನನ್ನೇ ಬಲಿಗೊಡಲು ಮುಂದಾದ ರೊಹಂತ ಆ ರಾಜನ ಮನಪರಿವರ್ತನೆ ಮಾಡಿ ಕಾಡಿನ ಜಿಂಕೆಗಳನ್ನು ಉಳಿಸುತ್ತದೆ. ಜಿಂಕೆಗಳು ವಾಸಿಸುತ್ತಿದ್ದ ಪ್ರದೇಶವನ್ನು ಆ ರಾಜ ಜಿಂಕೆಗಳ ಅಭಯಾರಣ್ಯವೆಂದು ಘೋಷಿಸುತ್ತಾನೆ.

ಎರಡನೆಯದು ನಂದ್ರಿಯಾ ಎಂಬ ವಾನರ ರಾಜನ ಕತೆ. ಇದೂ ಬಹಳ ಬುದ್ಧಿವಂತ ಮಗ. ಮರಿಯಾಗಿದ್ದಾಗಲೇ ಕಾಡಿನಲ್ಲಿ ದೂರದೂರಕ್ಕೆ ಹೋಗಿ, ಸಂಜೆಯಾಗುವಾಗ ಹಿಂತಿರುಗಿ ತನ್ನ ಹಿಂಡನ್ನು ಸೇರಿಕೊಳ್ಳುತ್ತಿತ್ತು. ಒಮ್ಮೆ ಬಹುದೂರ ಹೋಗಿ ನದಿಯೊಂದನ್ನು ನೋಡಿತು. ನದಿ ದಾಟಿದರೆ ಸಿಗುವ ದ್ವೀಪದಲ್ಲಿ ಮಾವಿನ ಮರಗಳಿದ್ದವು. ಆದರೆ, ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ನದಿಯ ನಡುವಿನಲ್ಲೊಂದು ಬಂಡೆ. ನಂದ್ರಿಯಾ ಈ ದಡದ ಮರದಿಂದ ಆ ಬಂಡೆಗೆ ಜಿಗಿಯಿತು. ಅಲ್ಲಿಂದ ಆ ದಡಕ್ಕೆ ಜಿಗಿದು ದ್ವೀಪ ತಲಪಿತು. ಅಲ್ಲಿನ ಮಾವಿನ ಮರಗಳ ಹಣ್ಣು ತಿಂದಿತು. ಅವು ಅದ್ಭುತ ರುಚಿಯ ಹಣ್ಣುಗಳು. ಆ ಸಂಜೆ ತನ್ನ ಹಿಂಡಿಗೆ ಮರಳಿದ ನಂದ್ರಿಯಾ ಇತರ ಮಂಗಗಳಿಗೆ ಮಾವಿನ ಹಣ್ಣುಗಳ ಬಗ್ಗೆ ತಿಳಿಸಿದರೆ ಅವು ನಂಬಲೇ ಇಲ್ಲ.

ಕಾಲಕ್ರಮೇಣ ನಂದ್ರಿಯಾ ಮಂಗಗಳ ತಂಡದ ನಾಯಕನಾಯಿತು. ಈಗ ತನ್ನ ತಂಡದ ಮಂಗಗಳನ್ನೆಲ್ಲ ಆ ದ್ವೀಪಕ್ಕೆ ಕರೆದೊಯ್ದಿತು. ಅಲ್ಲಿನ ಮಾವಿನ ಹಣ್ಣು ಚಪ್ಪರಿಸಿದ ಮಂಗಗಳಿಗೆ ನಂದ್ರಿಯಾನ ಮಾತು ನಿಜವೆಂದು ಅರಿವಾಯಿತು. ನದಿಯ ಬದಿಯಲ್ಲಿದ್ದ ಒಂದು ಮಾವಿನ ಮರದ ಯಾವುದೇ ಹಣ್ಣು ನದಿಗೆ ಬಿದ್ದು ಮನುಷ್ಯರ ಗಮನಕ್ಕೆ ಬರಬಾರದೆಂದು ನಂದ್ರಿಯಾ ಎಚ್ಚರಿಕೆ ವಹಿಸಿತ್ತು. ಆದರೂ ಒಂದು ಹಣ್ಣು ನದಿಗೆ ಬಿದ್ದು, ತೇಲಿಕೊಂಡು ದೂರದ ರಾಜ್ಯಕ್ಕೆ ಹೋಗಿ ಅಲ್ಲಿನ ರಾಜನ ಕೈಸೇರಿತು.

ಅದರ ಅದ್ಭುತ ರುಚಿಗೆ ಮಾರು ಹೋದ ರಾಜ ಕೊನೆಗೂ ಆ ದ್ವೀಪಕ್ಕೆ ಸೈನಿಕರೊಂದಿಗೆ ಬಂದ. ಆಗ ಮುಸ್ಸಂಜೆ. ಮರುದಿನ ದ್ವೀಪದಿಂದ ಮಂಗಗಳನ್ನೆಲ್ಲ ಓಡಿಸಬೇಕೆಂದು ಆದೇಶಿಸಿದ. ಇದನ್ನು ತಿಳಿದ ನಂದ್ರಿಯಾ ಆ ರಾತ್ರಿಯೇ ತನ್ನ ತಂಡದ ಮಂಗಗಳನ್ನು ದ್ವೀಪದಿಂದ ಪಾರುಮಾಡಲಿಕ್ಕಾಗಿ ಉಪಾಯ ಮಾಡಿತು. ನದಿಯ ಈ ದಡದ ಮರದ ಗೆಲ್ಲಿನಿಂದ ಆ ದಡದ ಮರದ ಗೆಲ್ಲಿಗೆ ತಾನೇ ಸೇತುವೆಯಂತೆ ಜೋತಾಡಿತು. ಹಲವಾರು ಮಂಗಗಳು ಅದರ ದೇಹದ ಮೇಲೆಯೇ ಹತ್ತಿ ಹೋಗಿ ನದಿ ದಾಟಿದವು. ಕೊನೆಗೆ ದಣಿದು ಕೆಳಕ್ಕೆ ಬಿತ್ತು ನಂದ್ರಿಯಾ. ಕತ್ತಲಿನಲ್ಲಿ ಇದನ್ನೆಲ್ಲ ನೋಡುತ್ತಿದ್ದ ರಾಜ ಧಾವಿಸಿ ಬಂದು ನಂದ್ರಿಯಾನ ಶುಶ್ರೂಷೆ ಮಾಡಿದರೂ ಅದು ಬದುಕಿ ಉಳಿಯಲಿಲ್ಲ. ಸಾಯುವ ಮುನ್ನ "ನನ್ನ ತಂಡದವರಿಗೆ ದುಃಖವಾಗದಂತೆ ನೋಡಿಕೋ” ಎಂದು ರಾಜನನ್ನು ಪ್ರಾರ್ಥಿಸಿತು. ಇತರರ ರಕ್ಷಣೆಗಾಗಿ ತನ್ನನ್ನೇ ಬಲಿಗೊಟ್ಟ ನಂದ್ರಿಯಾನ ನೆನಪಿಗಾಗಿ ದ್ವೀಪದಲ್ಲಿ ಸ್ತಂಭವೊಂದನ್ನು ಸ್ಥಾಪಿಸಿದ. ಮಾತ್ರವಲ್ಲ, ಆ ದ್ವೀಪ ಮಂಗಗಳ ರಕ್ಷಿತ ಪ್ರದೇಶವೆಂದು ಸ್ತಂಭದ ಬುಡದಲ್ಲಿ ನೆಟ್ಟ ಶಿಲಾಫಲಕದಲ್ಲಿ ರಾಜಾಜ್ನೆ ಕೆತ್ತಿಸಿದ.

ನಾಯಕರು ಹೇಗಿರಬೇಕೆಂದು ಕಿರಿಯರಿಗೂ ಹಿರಿಯರಿಗೂ ಮನಮುಟ್ಟುವಂತೆ ಸಾರುವ ಈ ಎರಡು ಜಾತಕ ಕತೆಗಳ ನಾಯಕರ ಬದುಕು ಮಾನವರಿಗೂ ಎಲ್ಲ ಕಾಲಕ್ಕೂ ಆದರ್ಶಪ್ರಾಯ, ಅಲ್ಲವೇ?