ರೋಗಗಳ ಉಪಶಮನಕ್ಕೆ ಆಯುರ್ವೇದ

ರೋಗಗಳ ಉಪಶಮನಕ್ಕೆ ಆಯುರ್ವೇದ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಡಾ. ರಾಜೀವ್ ಶರ್ಮ, ಕನ್ನಡಕ್ಕೆ: ಬಿ.ಕೆ.ಎಸ್. ಮೂರ್ತಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ಆಗಸ್ಟ್ ೨೦೧೪

ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್. ಮೂರ್ತಿಯವರು ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಪ್ರಕೃತಿ ತತ್ವದಲ್ಲಿನ ಪಂಚಭೂತಗಳ ಪ್ರಕ್ರಿಯೆಯಿಂದ ತ್ರಿದೋಷಗಳು ಉಂಟಾಗುತ್ತವೆ. ತ್ರಿದೋಷಗಳೆಂದರೆ ವಾತ, ಪಿತ್ತ, ಶ್ಲೇಷ ದೋಷವೆಂದರೆ ಇವುಗಳಲ್ಲಾಗುವ ಬದಲಾವಣೆ. ಈ ಮೂರು ದೋಷಗಳ ಸಮತೋಲನವನ್ನು ಕಾಯ್ದುಕೊಂಡಿದ್ದರೆ, ನಾವು ಆರೋಗ್ಯವಂತರಾಗಿರಲು ಸಾಧ್ಯ. ಆಯುರ್ವೇದದ ಮೂಲತತ್ವವೇ ಇದು.”

“ಆಯುರ್ವೇದ ಪದ್ಧತಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುತ್ತಾ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದೆ. ಈ ಕೃತಿಯಲ್ಲಿ ಮಾನವ ಶರೀರಕ್ಕೆ ಉಂಟಾಗುವ ಸಾಮಾನ್ಯ ತೊಂದರೆಗಳಿಗೆ ಉಪಶಮನಾಕಾರಿ ಔಷಧಿಗಳನ್ನು ಸೂಚಿಸಲಾಗಿದೆ. ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಉಂಟಾಗುವ ತೊಂದರೆಗಳನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಈ ಔಷಧಿಗಳನ್ನು ಸುಲಭವಾಗಿ ದೊರಕುವ ಔಷಧ ದ್ರವ್ಯಗಳನ್ನು ಉಪಯೋಗಿಸಿ ಮನೆಯಲ್ಲೇ ತಯಾರಿಸಬಹುದು. ಈ ಕೃತಿಯಲ್ಲಿ ಸೂಚಿಸಿರುವ ಔಷಧಿಗಳನ್ನು ಪುರಾತನ ಕಾಲದಿಂದಲೂ ಅಸಂಖ್ಯಾತ ಜನರು ಬಳಸಿ ಪರಿಣಾಮಕಾರಿಯಾದ ಉಪಶಮನ ಪಡೆಯುತ್ತಿರುವರು.”

ಪುಸ್ತಕದಲ್ಲಿ ೧೪ ಅಧ್ಯಾಯಗಳಿವೆ. ಆಯುರ್ವೇದ ಪದ್ಧತಿಯಲ್ಲಿ ಬಳಸುವ ಔಷಧಗಳನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನೂ ತಿಳಿಸಿಕೊಡಲಾಗಿದೆ. ತಲೆನೋವು, ಮೈಕೈ ನೋವು, ಗಾಯ, ಉಳುಕು, ಸುಟ್ಟ ಗಾಯ, ಶೀತ, ಕೆಮ್ಮು ಮೊದಲಾದ ಹಲವಾರು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕ್ರಮವನ್ನು ನೀಡಲಾಗಿದೆ. ಉಳಿದಂತೆ ದೇಹದ ಎಲ್ಲಾ ಭಾಗಗಳಿಗೆ ತಗಲುವ ರೋಗಗಳಿಗೆ ಇಲ್ಲಿ ಪ್ರತ್ಯೇಕವಾಗಿ ವಿಂಗಡಿಸಿ ಔಷಧ ಕ್ರಮವನ್ನು ಸೂಚಿಸಿದ್ದಾರೆ. ಪಂಚಭೂತ ತತ್ವ, ತ್ರಿದೋಷಗಳ ಬಗ್ಗೆಯೂ ಮಾಹಿತಿ ಇದೆ. ರೋಗದ ವಿವಿಧ ಘಟ್ಟಗಳ ಬಗ್ಗೆಯೂ ವಿವರಣೆಯಿದೆ. 

ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಬಳಸುವವರು ಬಹಳ ತಾಳ್ಮೆಯನ್ನು ಹೊಂದಿರಬೇಕು. ಏಕೆಂದರೆ ಈ ಪದ್ಧತಿಯ ಪ್ರಕಾರ ನೀವು ಮದ್ದು ತೆಗೆದುಕೊಂಡ ತಕ್ಷಣ ರೋಗ ವಾಸಿಯಾಗುವುದಿಲ್ಲ. ನಿಯಮಿತ ಪಥ್ಯದೊಡನೆ ನಿಗದಿತ ಪ್ರಮಾಣದಲ್ಲಿ ಔಷಧಿಯನ್ನು ತೆಗೆದುಕೊಳ್ಳುತ್ತಾ ಬಂದರೆ ಯಾವ ರೋಗವಾದರೂ ಗುಣವಾಗುವ ಸಾಧ್ಯತೆ ಇರುತ್ತದೆ. ಅಂದರೆ ಮನಸ್ಸಿನಲ್ಲಿ ಆಯುರ್ವೇದ ಪದ್ಧತಿಯ ಬಗ್ಗೆ ನಂಬಿಕೆ ಇರಬೇಕು ಅಷ್ಟೇ. ಈ ಮಾಹಿತಿಪೂರ್ಣ ಪುಸ್ತಕವನ್ನು ಆಯುರ್ವೇದದಲ್ಲಿ ಆಸಕ್ತಿ ಹೊಂದಿದವರು ಮಾತ್ರವಲ್ಲ ಬೇರೆಯವರೂ ಓದಲು ಅಡ್ಡಿಯಿಲ್ಲ. ಏಕೆಂದರೆ ಹಲವಾರು ಔಷಧೀಯ ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಸಿಗುತ್ತವೆ. ಆಕರ್ಷಕ ಮುಖಪುಟ ಹೊಂದಿರುವ ಈ ಪುಸ್ತಕವು ಸುಮಾರು ೭೫ ಪುಟಗಳನ್ನು ಹೊಂದಿದೆ.