"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫

ಬರಹ

ನಮಸ್ಕಾರ,
ನನ್ನ ಪ್ರಕಾರ ಎಲ್ಲರೂ ನನ್ನ ರೀತಿ "ಹೆಂಡತಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು" ಹಂಚಿಕೊಳ್ಳಬೇಕು, ಯಾಕಪ್ಪ ನಾವು ನೆಮ್ಮದಿಯಾಗಿರುವುದು ನಿನಗೆ ಇಷ್ಟವಿಲ್ಲವೇ ಎಂದು ನೀವು ಕೇಳಬಹುದು, ಉತ್ತರಕ್ಕಾಗಿ ನೀವು ಈ ಲೇಖನ ಓದಿ.

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" ಮೊದಲೆರಡು ಲೇಖನಗಳನ್ನು ಬರೆದಾದ ಮೇಲೆ ನಾನು ಒಂದು ರೀತಿಯ ಖಾಲಿತನವನ್ನು ಅನುಭವಿಸಿದೆ, ನನಗೆ ನಾನೆ "ಅಲ್ಲಪ್ಪಾ ರಾಜಕುಮಾರ? ಸಮಸ್ಯೆ ಇಷ್ಟೆನಾ? ಅಲ್ಲ ಅಸಲಿಗೆ ಇವುಗಳೂ ಒಂದು ಸಮಸ್ಯೆನಾ?" ಅಂತ ಅನ್ನಿಸೋಕೆ ಶುರು ಆಯಿತು, ಸರಿ ಇನ್ನೆನು ಮಾಡೋದು ಅಂತ ನನ್ನ ಮನೆಯವಳ ಒತ್ತಡವೆಂದು ಹೇಳಿ, ಮೂರನೆಯದಕ್ಕೆ ಮುಗಿಯಿತು ಅಂದು ಬಿಟ್ಟೆ.

ಬದಲಾದ ಪರಿಸ್ಥಿತಿಗಳ ಪರಿಣಾಮವಾಗಿ, ಇನ್ನೊಂದು ಸಮಸ್ಯೆಯನ್ನ ಹುಡುಕಿ ಅದನ್ನು ವಣ೯ ರಂಜಿತವಾಗಿ ನಿಮ್ಮೆಲ್ಲರ ಮುಂದಿಡುವ ಹೊತ್ತಿಗೆ ಸಾಕು ಬೇಕಾಗಿ ಹೋಗಿತ್ತು. ಎಷ್ಟು ಪರಿ ಪರಿಯಾಗಿ ಯೋಚಿಸಿದರೂ ಹೇಳಿಕೊಳ್ಳಬಹುದಾದಂತಹ ಮತ್ತೊಂದು ಸಮಸ್ಯೆ ಕಾಣಿಸಲಿಲ್ಲ, ಮೊದಲ ಬಾರಿಗೆ ನನ್ನ ಮನೆಯವಳು "ಪಾಪದ ಹುಡುಗಿ" ಅಂಥ ಕೂಡ ಅನ್ನಿಸಿತು. ಅವಳ ಊರು, ಅವಳ ಮನೆ, ಅವಳ ತನ್ನವರು ಎನ್ನುವವರನ್ನೆಲ್ಲ ಬಿಟ್ಟು, ಅವುಗಳ ಸಿಹಿ ಸಿಹಿ ನೆನಪಿನೊಡನೆ ನನ್ನಲ್ಲಿಗೆ ಬಂದು... ಮದುವೆಗೆ ಮುಂಚಿನ ಸಾಮಾನ್ಯ ಹುಡುಗನೊಬ್ಬನಲ್ಲಿ ಗಂಡನನ್ನು ಕಂಡುಕೊಂಡು, ಅತ್ತೆ ಮಾವರಲ್ಲಿ ತಂದೆ ತಾಯಿಯರನ್ನು ಕಂಡುಕೊಂಡು, ನನ್ನ ಸ್ನೇಹಿತ ವೃಂದವನ್ನು ಕೂಡ ತನ್ನದೇ ಬಳಗವನ್ನಾಗಿಸಿಕೂಂಡಿರುವ ಇವಳು ನಿಜಕ್ಕೂ ಗ್ರೇಟ್ ಅನ್ನಿಸಹತ್ತಿತು.

ಇದೆಲ್ಲದರ ನಡುವೆ, ಅನುಭವ ಕಥನ ಎಂದು ಬರೆದದ್ದರಿಂದ ಸ್ನೇಹಿತರಿಗೆ ಎನೆನ್ನಿಸಿತೊ, ಯಾಕೋ ಹೀಗೆ ಬರೆದಿದೀಯ? ಅಂದ್ರು, ಏನದ್ರೂ ತೊಂದರೆ ಇದೆಯೇನೋ? ಅಂಥ ಕೂಡ ಕೇಳಿದರು, ಒಬ್ಬ ಮಹಾಶಯನಂತೂ "ಸಂಸಾರ ಗುಟ್ಟು ವ್ಯಾಧಿ ಮಾತ್ರ ರಟ್ಟು...." ಎಂದೂ ಹೇಳಿದ, ಮದುವೆಯಾಗದವರು ಚಳಿ ಬಿಟ್ಟು ಇನ್ನೇನಾದರೂ ಇದೆಯಾ? ಮದುವೆಯಲಿ ಎಂದರು. ಅವರು ಹೇಳಿದ ಕೇಳಿದ ಪ್ರತಿಯೊಂದು ಪ್ರಶ್ನೆ ನನಗೆ ನನ್ನ ಮನೆಯವಳೊಂದಿಗಿನ ಸಾವಿರ ಸಾವಿರ (ಸ್ವಲ್ಪ ಜಾಸ್ತಿ ಅಯ್ತು?!?!?!. ನೂರಾರು) ಸವಿ ಸವಿ ನೆನಪುಗಳನ್ನು ನನ್ನ ಮನಃಪಟಲ ತೋರಿಸಹತ್ತಿತು.

ಮೊದಲ ಬಾರಿ ಅವಳೊಡನೆ ಮಾತನಾಡಿದ್ದು, ಮೊದಲ ಬಾರಿ ಅವಳನ್ನು ನೋಡಿದ್ದು, ಮೊದಲ ಬಾರಿ ಅವಳ ಮನೆಗೆ ಹೋಗಿದ್ದು, ಅವಳು ಮಾಡಿದ ಗಸಗಸೆ ಪಾಯಸ ಮತ್ತು ಕ್ಯಾರೆಟ್ ಹಲ್ವ, ಮಾತಿಗೆ ಮುಂಚೆ ಬೀರಿದ ನಗು, ಎಲ್ಲರ ನಡುವೆ ನನ್ನನು ಕದ್ದು ನೋಡಿ ಅನುಭವಿಸಿದ ಆನಂದ, ಕಾಲರ್ ಟ್ಯೂನ್ ನಲ್ಲಿ ಮೊದಲ ಬಾರಿಗೆ ಕೇಳಿದ "ತುಮ್ ಸೇ ಮಿಲ್ ಕೇ.... ಐಸಾ ಲಗಾ ತುಮ್ ಸೆ ಮಿಲ್ ಕೇ...." ಹಾಡು, ಮೊದಲಾಗಿ ಗುನುಗುನಿಸಿದ ಹಾಡು, ಇಬ್ಬರೂ ಹಾಡಿದ ಹಾಡು, ಇಬ್ಬರೂ ಕೇಳಿದ ಹಾಡು, ಇಬ್ಬರೂ ಅನುಭವಿಸಿದ ಹಾಡು, ಕಾಫೀ ಡೇ ದ ಮೊದಲ ಕಾಫಿ, ಮೊದಲ ಚಲನಚಿತ್ರ, ನಡು ರಾತ್ರಿ ಮನೆಯ ಮಾಳಿಗೆಯ ಮೇಲೆ ಆಡಿದ ಮಾತು, ನನಗಾಗಿ ಅವಳು ಮತ್ತು ಅವಳಿಗಾಗಿ ನಾನು ಹುಡು-ಹುಡುಕಿ ಕಳುಹಿಸಿದ ಮೊದಲ ಎಸ್ ಮ್ ಎಸ್ ಮತ್ತು ಇ ಮೈಲ್, ಅವಳು ಕೊಟ್ಟ ಮೊದಲನೆಯ ಗಿಫ್ಟ್, ಮೊದಲ ಗ್ರೀಟಿಂಗ್ ಕಾಡ್೯, ಮೊದಲ ಮಿಸ್ ಕಾಲ್, ಮೊದಲ ಲಾಂಗ್ ಕಾಲ್, ಅವಳನ್ನು ನೋಡಲು ಹೋಗುವಾಗಿನ ಆ ತುಮುಲ, ಕುಕ್ಕುಲತೆ, ಪ್ರೀತಿ, ಮನಸಿನ ಆ ಮಟ್ಟಿಗಿನ ಆದ೯ತೆ ಒಹ್....... ಅದೆಲ್ಲವನ್ನೂ ನಮೂದಿಸಲು ಜಾಗ ಮತ್ತು ಸಮಯ ಎರಡೂ ಸಾಲದಾದೀತು.

ಪ್ರಯಾಣಿಸಿದ ಹಿಮಾಲಯದ ಹಿಮಾಛ್ಛಾದಿತ ಗಿರಿ ಶಿಖರಗಳು ಅವಳ ಇರುವಿನೊಂದಿಗೆ ಮತ್ತಷ್ಟು ಶ್ವೇತ ವಣ೯ದವಾಗಿ, ಮತ್ತಷ್ಟು ಶೃಂಗಾರ ಮಯವಾಗಿ, ಮತ್ತಷ್ಟು ಛಳಿಯಾಗಿ......"ತೇರಾ ಮೇರಾ ಪ್ಯಾರ್ ಅಮರ್" ಎಂದೂ..., ತಾಜ್ ಮಹಲ್ ಅಂಗಳದಲ್ಲಿ ನೆಡೆದಾಡುತ "ನಮ್ಮೂರ ಮಂದಾರ ಹೂವೆ..ನನ್ನೊಲುಮೆ ಬಾಂದಳದ ಚೆಲುವೆ" ಎಂದೂ, ಆಧುನಿಕ ಕೃಷ್ಣ-ರುಕ್ಮಿಣಿಯರಂತೆ ಯಮುನೆಯ ದಡದಲ್ಲಿ ನೆಡೆದಾಡಿದ್ದು, ಮಥುರೆಯಲ್ಲಿ ಓಡಿಯಾಡಿದ್ದು ಎಲ್ಲವೂ ನೆನಪಿಗೆ ಬಂದು ಮುದ ನೀಡುತ್ತಿವೆ.

ಸದ್ಯಕ್ಕೆ ನನ್ನ ಪಾಲಿನ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ಎಂದರೆ ಅದು ನನ್ನ ಮನೆಯವಳು. ಇಬ್ಬರೂ ಒಟ್ಟಿಗೆ "ಗ್ರೇಟ್ ಇಂಡಿಯನ್ ಲಾಫ್ಟರ್ ಛಾಲೆಂಜ್" ನೋಡಿ ನಗುತ್ತೇವೆ, ಭಯೋತ್ಪಾದಕರು ಮಾಡಿದ ಅನಾಹುತದ ಬಗ್ಗೆ ಕಣ್ಣೀರಿಡುತ್ತೇವೆ, ಡ್ಯಾನ್ಸ್ ಕಾಯ೯ಕ್ರಮಗಳನ್ನು ನೋಡಿ ಕುಣಿಯಲು ತಯಾರಗುತ್ತೇವೆ, ಹೊಸ ರುಚಿ ನೋಡಿ ಹೊಸದನ್ನು ಅಡುಗೆ ಮನೆಯಲ್ಲಿ ಟ್ರೈ ಮಾಡುತ್ತೇವೆ, ಸದ್ಯಕ್ಕೆ ಸಂಜೆ ಮನೆಯಲ್ಲಿ "ಶಂಕರ ಪುಳ್ಳೆ" ಮಾಡಬೇಕೆಂದಿದ್ದೇವೆ ಮತ್ತು ಜನವರಿ ೧,೨,೩,೪ ರ ಪ್ರವಾಸದ ಬಗ್ಗೆ ಪ್ಲಾನ್ ಮಾಡ್ತಾ ಇದೀವಿ.

ಕೊನೆಯ ಮಾತು: ನೆಂಟರ ಮನೆಯಲ್ಲಿ ಹೋಳಿಗೆ ಊಟ ಮಾಡಿದ ನಂತರ ಅವರ ಮನೆಯ ಹಿತ್ತಿಲಿನ ಹುಣಸೇ ಹಣ್ಣು ಕಿತ್ತು ತಿಂದ ನನ್ನವಳು ಎಂದಿಗೂ ನನ್ನವಳೇ.
ಎನು ಸ್ವಾಮಿ ಏನಂತೀರಿ? ಇಷ್ಟೆಲ್ಲಾ ಆದಮೇಲೆ...........
ಮನೆಯವಳ ಫೋನ್ ಬರ್ತಾ ಇದೆ...ಪ್ರಶ್ನೆ ಗೊತ್ತಲ್ಲಾ?
"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"