ಲಂಚದ ದರ ಪಟ್ಟಿ ಬಿಡುಗಡೆ...
ಭ್ರಷ್ಟಾಚಾರದ ವಿಷಯದಲ್ಲಿ ಜಾರಿಯಾದ ಏಕರೂಪದ ನಾಗರಿಕ ಸಂಹಿತೆ. ಕರ್ನಾಟಕದ ಸಾಧನೆಗೆ ಮತ್ತೊಂದು ಹಿರಿಮೆ! 10%, 20%, 30%, 40% ಆದಮೇಲೆ ಈಗ ದರಪಟ್ಟಿಯನ್ನೇ ವಿಧಾನಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಎಷ್ಟು ಧೈರ್ಯ ಇರಬೇಕು ರಾಜಕಾರಣಿಗಳಿಗೆ ಮತ್ತು ಎಷ್ಟು ಮೂರ್ಖರಿರಬೇಕು ಮತದಾರರು ಯೋಚಿಸಿ. ಇದಕ್ಕೆ ಆಡಳಿತ ನಡೆಸಿದ ಎಲ್ಲಾ ಕಾಲದ ಎಲ್ಲಾ ಪಕ್ಷಗಳ ಬಹುತೇಕ ರಾಜಕಾರಣಿಗಳ ಮತ್ತು ಕೆಲವು ಅಧಿಕಾರಿಗಳ ಕೊಡುಗೆ ಇದೆ. ನಿರ್ದಿಷ್ಟ ಪಕ್ಷ ಅಥವಾ ವ್ಯಕ್ತಿಗಳನ್ನು ಹೆಸರಿಸುವುದು ಸಾಧ್ಯವಿಲ್ಲ.
ಎಲ್ಲಾ ಹಂತದ ಎಲ್ಲಾ ಜಿಲ್ಲೆಗಳ ಯಾವುದೇ ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಇಲಾಖೆಗಳು ಮತ್ತು ಪ್ರದೇಶಗಳನ್ನು ಆಧರಿಸಿ 25,000 ದಿಂದ ಎರಡು ಕೋಟಿಯವರೆಗೆ ಇದೆ. ಕೆಲವು ಪ್ರಕರಣಗಳಲ್ಲಿ ಗರಿಷ್ಠ ಹಣ ಇನ್ನೂ ಹೆಚ್ಚಾಗಬಹುದು.
ಇನ್ನು ಸಾರ್ವಜನಿಕ ಕೆಲಸಗಳಿಗೆ ಡೆತ್ ಸರ್ಟಿಫಿಕೇಟ್ ನಿಂದ ಹಿಡಿದು ಯಾವುದೇ ಕೆಲಸವಾಗಲು ಆಯಾ ಕೆಲಸದ ಮೌಲ್ಯವನ್ನು ಆಧರಿಸಿ 500 ರೂಪಾಯಿಯಿಂದ ಗರಿಷ್ಠ ನೂರಾರು ಕೋಟಿಯವರೆಗೂ ಇದೆ. ಸರ್ಕಾರದ ಯಾವುದೇ ಕೆಲಸ, ಕಾಂಟ್ಯಾಕ್ಟ್, ವ್ಯಾಪಾರ, ವ್ಯವಹಾರ, ವೃತ್ತಿ, ಅನುಮತಿ, ನೋಂದಣಿಗಳಿಗೆ ಕನಿಷ್ಠ 10,000 ಸಾವಿರದಿಂದ ಗರಿಷ್ಠ ಸಾವಿರಾರು ಕೋಟಿಗಳಷ್ಟಿದೆ. ಇದು ಸಹ ಆ ಒಟ್ಟು ವ್ಯವಹಾರದ ಮೌಲ್ಯವನ್ನು ಅವಲಂಬಿಸಿರುತ್ತದೆ. ಕೆಲವು ರಾಜಕೀಯ ಪಕ್ಷಗಳ ಚುನಾವಣಾ ಅಭ್ಯರ್ಥಿಗಳಾಗಲು ಆಯಾ ಕ್ಷೇತ್ರದ ಆರ್ಥಿಕ ಚಟುವಟಿಕೆಗಳನ್ನು ಆಧರಿಸಿ ಒಂದು ಕೋಟೆಯಿಂದ 50 ಕೋಟಿಯವರೆಗೆ ದರ ನಿಗದಿಪಡಿಸಲಾಗಿದೆ.
ವಿಶ್ವವಿದ್ಯಾಲಯಗಳ ವಿವಿಧ ಸಿಂಡಿಕೇಟ್, ಸೆನೆಟ್, ಕುಲಪತಿ, ಉಪ ಕುಲಪತಿಗಳ ನೇಮಕ, ವಿವಿಧ ಅಕಾಡೆಮಿಗಳ ಅಧ್ಯಕ್ಷತೆ ಮತ್ತು ಸದಸ್ಯರ ನೇಮಕ, ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರು, ಸದಸ್ಯರ ನೇಮಕ, ಸರ್ಕಾರ ನೀಡುವ ಅನೇಕ ಪ್ರಶಸ್ತಿಗಳಿಗಾಗಿ 50000 ಸಾವಿರದಿಂದ 5 ಕೋಟಿಯವರೆಗೆ ದರಪಟ್ಟಿ ನಿಗದಿಯಾಗಿದೆ.
ಸರ್ಕಾರದ ಯಾವುದೇ ಹುದ್ದೆಗಾಗಿ ಅಂದರೆ, ಒಪ್ಪಂದದ ದಿನಗೂಲಿ ನೌಕರರು ಸೇರಿ ಜವಾನನ ಕೆಲಸದಿಂದ ಮುಖ್ಯ ಕಾರ್ಯದರ್ಶಿಯವರೆಗೆ ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ಮತ್ತು ಈಗಾಗಲೇ ಇರುವ ಅಧಿಕಾರಿಗಳ ಬಡ್ತಿಗಾಗಿಯೂ ಕನಿಷ್ಠ ಒಂದು ಲಕ್ಷದಿಂದ ಹತ್ತು ಕೋಟಿಯವರೆಗೆ ದರ ನಿಗದಿಪಡಿಸಲಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಸಹಾಯಧನ, ಸಬ್ಸಿಡಿ, ಪ್ರೋತ್ಸಾಹ ಧನ, ವೈದ್ಯಕೀಯ ನೆರವು, ಮಾಸಾಶನ, ಶಿಕ್ಷಣದ ಸ್ಕಾಲರ್ಶಿಪ್ ಮುಂತಾದ ಕೆಲಸಗಳಿಗೆ 1000 ದಿಂದ ಹತ್ತು ಲಕ್ಷಣದವರೆಗೆ ದರ ನಿಗದಿಪಡಿಸಲಾಗಿದೆ.
ಇದು ಮೇಲ್ನೋಟಕ್ಕೆ ಕಾಣಬರುವುದು ಮಾತ್ರ. ಇದಲ್ಲದೆ ಪರೋಕ್ಷವಾಗಿ ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳಲ್ಲಿ ಲಂಚದ ದರಪಟ್ಟಿ ಅನಧಿಕೃತವಾಗಿ ಚಾಲ್ತಿಯಲ್ಲಿದೆ. ವಿಧಾನಸಭೆಯಲ್ಲಿ ಆರೋಪ ಪ್ರತ್ಯಾರೋಪ ಎಂಬುದು ಒಂದು ಪ್ರಹಸನ ಮಾತ್ರ. ವಾಸ್ತವದಲ್ಲಿ ಇದು ಎಲ್ಲಾ ಸರ್ಕಾರಗಳ ಸಂಪ್ರದಾಯವೇ ಆಗಿದೆ. ಅದನ್ನು ಎಲ್ಲರೂ ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ಏಕರೂಪದ ನಾಗರಿಕ ಸಂಹಿತೆ ಈಗಾಗಲೇ ಜಾರಿಯಲ್ಲಿದೆ.
ಬಹಳ ವರ್ಷಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಮಂಡ್ಯದ ಬರಹಗಾರರಾದ ಎಚ್.ಎಲ್. ಕೇಶವ ಮೂರ್ತಿ ಅವರ ಒಂದು ಸಣ್ಣ ಕಥೆ ಭ್ರಷ್ಟಾಚಾರ ಎಷ್ಟು ನಂಜು ಎಂಬುದನ್ನು ಆಳವಾಗಿ ಸೂಚಿಸುತ್ತದೆ. ಒಂದು ಊರಿನಲ್ಲಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿರುತ್ತದೆ. ಪ್ರತಿಯೊಂದಕ್ಕೂ ಲಂಚ ಕೊಡಲೇ ಬೇಕಾಗಿರುತ್ತದೆ. ಇದರಿಂದ ರೋಸಿ ಹೋದ ಊರಿನ ಜನರೆಲ್ಲಾ ಸೇರಿ ಒಂದು ಸಭೆಯನ್ನು ಮಾಡಿ ತೀರ್ಮಾನಕ್ಕೆ ಬರುತ್ತಾರೆ. ಅದರ ಪ್ರಕಾರ ಹೇಗಿದ್ದರೂ ಲಂಚ ಎಂಬುದು ಬಹಿರಂಗ ಸತ್ಯ. ಅದನ್ನು ಒಪ್ಪಿಕೊಳ್ಳಲು ಸಂಕೋಚ ಏಕೆ. ಆದ್ದರಿಂದ ಇನ್ನು ಮುಂದೆ ಈ ಊರಿನಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕಾದರೆ ಸರ್ಕಾರ ನಿಗದಿಪಡಿಸಿದ ಅಧೀಕೃತ ಫೀಜಿನ ಜೊತೆಗೆ ಅನಧಿಕೃತ ಲಂಚದ ಹಣವನ್ನು ಇಂತಿಷ್ಟು ಎಂದು ನಿಗದಿ ಮಾಡಿ ಎಲ್ಲಾ ಕಚೇರಿಗಳಲ್ಲು ಒಂದು ದರ ಪಟ್ಟಿಯನ್ನು ಅಧೀಕೃತವಾಗಿಯೇ ತೂಗು ಹಾಕಲಾಗುತ್ತದೆ. ಆಗ ಎಲ್ಲರೂ ಸರ್ಕಾರ ನಿಗದಿ ಮಾಡಿದ ಹಣ ಮತ್ತು ಲಂಚ ಎರಡನ್ನೂ ಕೊಟ್ಟು ಕೆಲಸ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಉದಾಹರಣೆಗೆ ಖಾತಾ ಮಾಡಿಸಲು 1000 ಹಣ ಅಧೀಕೃತವಾದರೆ ಲಂಚ 5000 ಅಂದರೆ ಒಟ್ಟು 6000 ಹಣ ಕೊಡುವುದು. ಇಲ್ಲಿ ಯಾವುದೇ ಚೌಕಾಸಿ ಇರುವುದಿಲ್ಲ.
ಹೀಗೆ ಕೆಲವು ವರ್ಷ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗುತ್ತದೆ. ಕೆಲವು ವರ್ಷಗಳ ನಂತರ ಒಬ್ಬ ವ್ಯಕ್ತಿ ಅಧೀಕೃತ ಮತ್ತು ಅನಧಿಕೃತ ಎರಡೂ ಹಣ ಪಾವತಿಸಿದ ಅನಂತರವೂ ಕೆಲಸ ಆಗುವುದಿಲ್ಲ. ಮತ್ತೆ ಎಂದಿನಂತೆ ಬಹಳ ದಿನ ಅಲೆದಾಡಿಸುತ್ತಾರೆ. ಆಗ ಆ ವ್ಯಕ್ತಿ ಅಧಿಕಾರಿಯನ್ನು ನೇರವಾಗಿ ಕೇಳುತ್ತಾರೆ " ಸ್ವಾಮಿ ಸರ್ಕಾರದ ಫೀಜು ಮತ್ತು ಲಂಚ ಎರಡೂ ಕೊಟ್ಟ ನಂತರವೂ ನೀವು ಏಕೆ ನಮ್ಮ ಕೆಲಸ ಮಾಡಿಕೊಡುತ್ತಿಲ್ಲ " ಅದಕ್ಕೆ ಅಧಿಕಾರಿಯ ಉತ್ತರ " ಅಷ್ಟು ಮಾತ್ರ ಕೊಟ್ಟರೆ ಸಾಕೆ. ಅದರ ಮೇಲೆ ಇನ್ನೊಂದಿಷ್ಟು ಲಂಚ ಕೊಡಬೇಕು "
ಅಂದರೆ ಲಂಚವೂ ಕೆಲ ದಿನಗಳ ನಂತರ ಸಾಮಾನ್ಯವಾಗಿ ಅದಕ್ಕಿಂತ ಮತ್ತಷ್ಟು ಬೇಡಿಕೆ ಇಡಲಾಗುತ್ತದೆ. ಭ್ರಷ್ಟಾಚಾರ ಎಂಬುದು ಒಂದು ನಂಜು ಇದ್ದಂತೆ. ಅದು ನಿಧಾನವಾಗಿ ಹೆಚ್ಚಾಗುತ್ತಾ ಇಡೀ ದೇಹ ಆಕ್ರಮಿಸಿ ಕೊಳೆಯುವಂತೆ ಮಾಡುತ್ತದೆ. ಈಗ ಇದೇ ಭ್ರಷ್ಟಾಚಾರ ಇಡೀ ಭಾರತೀಯ ಸಮಾಜವೇ ಕೊಳೆಯುವಂತೆ ಮಾಡಿದೆ. ಇದರ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ ಪ್ರಾಮಾಣಿಕತೆಯೇ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲಿನ ನಂಬಿಕೆಯೇ ಇಲ್ಲವಾಗಿದೆ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ.
ಈಗ ಭ್ರಷ್ಟಾಚಾರದ ಮೂಲ ಸ್ವರೂಪವನ್ನು ಹುಡುಕುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಪಕ್ಷಾತೀತವಾಗಿ ಅವಲೋಕನ ಮಾಡಬೇಕು. ಇಲ್ಲದಿದ್ದರೆ ತಪ್ಪುಗಳ ಪ್ರಮಾಣದ ಮೇಲೆ ಭ್ರಷ್ಟಾಚಾರಿಗಳು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಂಡು ನಿರಂತರ ವಂಚಕರಾಗುತ್ತಾರೆ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ