ಲಕೋಟೆಯ ರಹಸ್ಯ

ಲಕೋಟೆಯ ರಹಸ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರ್-೫೬೦೦೦೯
ಪುಸ್ತಕದ ಬೆಲೆ
ರೂ.೪೦.೦೦, ಮೊದಲ ಮುದ್ರಣ: ೧೯೬೬

ಪತ್ತೇದಾರಿ ಕಾದಂಬರಿಗಳಿಗೆ ಹೊಸ ಭಾಷ್ಯ ಬರೆದವರು ಎನ್.ನರಸಿಂಹಯ್ಯನವರು. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದರೂ ೬೦-೭೦ರ ದಶಕದಲ್ಲಿ ಓದುಗರಿಗೆ ಪತ್ತೇದಾರಿಯ ಚಟ ಹಿಡಿಸಿಬಿಟ್ಟಿದ್ದರು. ಆ ಸಮಯದ ಸೀಮಿತ ಸಂಪನ್ಮೂಲಗಳಿಂದ ತಮ್ಮ ಮನದ ಶಕ್ತಿಯಿಂದ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಅವರ ಪತ್ತೇದಾರಿಯ ಪಾತ್ರಗಳಾದ ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಇವರೆಲ್ಲಾ ನಮ್ಮ ನಡುವೆಯೇ ಇದ್ದ ವ್ಯಕ್ತಿಗಳಂತೆ ಆಗಿ ಹೋಗಿದ್ದರು. ಆ ಸಮಯದಲ್ಲಿ ಬರೆದ ನೂರಾರು ಕಾದಂಬರಿಗಳು ಮರು ಮುದ್ರಣ ಕಾಣದೇ ಈಗಿನ ಕಾಲದ ಓದುಗರನ್ನು ತಲುಪಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಸಪ್ನ ಬುಕ್ ಹೌಸ್ ಇವರು ಎನ್. ನರಸಿಂಹಯ್ಯನವರ ಬಹುತೇಕ ಕಾದಂಬರಿಗಳನ್ನು ಮತ್ತೆ ಮುದ್ರಿಸಿದ್ದಾರೆ. ಸರಳವಾದ ಬರಹಗಳು ಈಗಿನ ಕಾಲದವರಿಗೆ ಸ್ವಲ್ಪ ಗಲಿಬಿಲಿ ಎನಿಸಿದರೂ ಪ್ರತೀ ಕಾದಂಬರಿ ಕೊನೆಯವರೆಗೆ ಅಪರಾಧಿ ಯಾರಿರ ಬಹುದು ಎಂಬ ಕಿಂಚಿತ್ತೂ ಸುಳಿವು ನೀಡದೇ ಓದಿಸಿಕೊಂಡು ಹೋಗುತ್ತದೆ.

ಬೆನ್ನುಡಿಯಲ್ಲಿ ಖ್ಯಾತ ಕಥೆಗಾರ ಕುಂವೀ ಬರೆಯುವಂತೆ' ಸಾಮಾನ್ಯರಿಗೆ ಓದುವ ಗೀಳನ್ನು ಅಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿಸಿದ, ಅದೂ ಅಕ್ಷರ ಸೌಲಭ್ಯ ವಂಚಿತ ದಲಿತ ಕುಟುಂಬದಿಂದ ಬಂದಿರುವ, ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರರಾಗಿರುವ, ಇಷ್ಟೆಲ್ಲಾ ಸಾಧನೆ ಮಾಡಿಯೂ ಎಲೆ ಮರೆಯ ಕಾಯಿಯಾಗಿ ಬಡತನದಲ್ಲೇ ಬದುಕುತ್ತಿರುವ ಎನ್.ನರಸಿಂಹಯ್ಯನವರ ಬಾಳೇ ಒಂದು ಕಾದಂಬರಿ.’

ಲಕೋಟೆಯ ರಹಸ್ಯ ಎಂಬುದು ಪತ್ತೇದಾರ ಮಧುಸೂದನನ ಚತುರತೆಯ ಕಾದಂಬರಿ. ಸುಮಾರು ೯೦ ಪುಟಗಳ ಈ ಕಿರು ಕಾದಂಬರಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು.