ಲಕ್ಕಮ್ಮ ದಂಪತಿಗಳ ವಚನಗಳ ಬಗ್ಗೆ ಸೂಕ್ಷ್ಮ ಅವಲೋಕನ

ಲಕ್ಕಮ್ಮ ದಂಪತಿಗಳ ವಚನಗಳ ಬಗ್ಗೆ ಸೂಕ್ಷ್ಮ ಅವಲೋಕನ

ನಾನು ಆಯ್ದುಕೊಂಡ ವಚನ: ಆಯ್ದಕ್ಕಿ ಲಕ್ಕಮ್ಮ ಅವರದು

ಆಸೆಯೆಂಬುದು ಅರಸಿಂಗಲ್ಲದೆ

ಶಿವಭಕ್ತರಿಗುಂಟೆ ಅಯ್ಯ

ರೋಷವೆಂಬುದು ಯಮಧೂತರಿಗಲ್ಲದೆ

ಅಜಾತರಿಗುಂಟೆ ಅಯ್ಯ

ಈ ಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ

ಮಾರಯ್ಯಾ ಪ್ರಿಯ ಅಮರೇಶ್ವರ ಲಿಂಗಕೆ ದೂರ ಮಾರಯ್ಯಾ!!

ನನಗೆ ಬಹಳ ಮನಸೆಳೆದ ‘ಮಾರ್ಮಿಕವಾದ ನಗ್ನಸತ್ಯಗಳ’ ಹೊರಗೆಡಹಿದ ಸತ್ಯಜೀವನ ದರ್ಶನದ ನೀತಿಯ, ಸಮತಾಭಾವದ ಪ್ರತಿಪಾದನೆ, ಬಡತನ, ಸೂಕ್ಷ್ಮತೆಯ ಅರಿವು, ಗಾಂಭೀರ್ಯ ಚಿಂತನೆಗಳನ್ನು ಉಣಬಡಿಸಿದ ವಚನವಿದು.

ಆಯ್ದಕ್ಕಿ ಲಕ್ಕಮ್ಮ ತಮ್ಮ ಪತಿ ಕಾಯಕದ ಮಾರಯ್ಯ ಮತ್ತು ತನ್ನ ಮನೆದೇವರೂ ಆದ ಅಮರಲಿಂಗೇಶ್ವರ ಅಂಕಿತನಾಮದಲ್ಲಿ ಬರೆದದ್ದು ಕೇವಲ ೨೫ ವಚನಗಳಾದರೂ ಬಹಳ ಪ್ರಸಿದ್ಧವಾಗಿದೆ. ಮಾರಯ್ಯ ಬರೆದದ್ದು ‘ಅಮರಲಿಂಗೇಶ್ವರ’ ಅಂಕಿತನಾಮದಲ್ಲಿ ೧೫ ವಚನಗಳು ಲಭ್ಯವಿದೆ.

ಮಾರಯ್ಯ ಕಲ್ಯಾಣದ ಬೀದಿಯಲ್ಲಿ ಅಕ್ಕಿ ಆರಿಸುವ ಕೆಲಸ ಮಾಡುತ್ತಿದ್ದ ಮಾರಯ್ಯನ, ನಿಷ್ಠೆ, ಶೃದ್ಧೆಗೆ ಮಾರುಹೋದ ಬಸವಣ್ಣನವರು ಬೀದಿಯಲ್ಲಿ ಹೆಚ್ಚು ಅಕ್ಕಿಯನ್ನು ಹಾಕಿಸಿದರು. ಮನೆಗೆ ನಿತ್ಯದಂತೆ ಅಕ್ಕಿ ತಾರದೆ ಹೆಚ್ಚು ಅಕ್ಕಿ ತಂದುದಕ್ಕೆ , ಪತಿಯ ಕುರಿತಾಗಿ ಈ ಮೇಲಿನ ವಚನವನ್ನು ಹಾಡಿದರು.

ಇದು ಕಾಯಕಕ್ಕೆ ವಿರುದ್ಧವಾಗಿ ಮಾಡಿದ್ದೀರಿ. ಆಸೆ ಎಂಬುದು ಅರಸರಿಗೆ ಇರಬೇಕು. ಶಿವಭಕ್ತರಿಗಲ್ಲ. ಇದು ಪ್ರಸಾದ ಸಂಸ್ಕೃತಿಗೆ ಹೇಳಿಸಿದ್ದಲ್ಲ. ನಿತ್ಯ ಅನ್ನ ದಾಸೋಹವನ್ನು ಗಂಡ ದುಡಿದು ತಂದುದರಲ್ಲಿ ಮಾಡುತ್ತಿದ್ದಳು ಅಕ್ಕಮ್ಮ. ಕಷ್ಟಪಡದೆ ತಂದ ಅಕ್ಕಿ ಬೇಡ. 

ರೋಷ ಎನ್ನುವುದು ಯಮಧೂತರ ಹತ್ತಿರ ಇರಬೇಕು. ನಮ್ಮಂಥ ಅಜಾತಶತ್ರುಗಳು, ಶಿವಶರಣರಿಗೆ ಹೇಳಿಸಿದ್ದಲ್ಲ. ಕಾಯಕದ ಮರ್ಮ ಮತ್ತು ನ್ಯಾಯವನ್ನು ತನ್ನ ಪತಿಗಾದರೂ ಹೇಳುತ್ತಿದ್ದ ಶರಣೆ ಈಕೆ. ದೇವ ಈಶ್ವರನೊಪ್ಪುವ ಕೆಲಸ ಮಾಡಬೇಕು ನಾವು ಎಂಬುದು ವಚನದ ಸಾರ. ಶಿವಶರಣರಿಂದ ರೂಪಿತವಾದ ಕಾಯಕ ಮತ್ತು ದಾಸೋಹ ತತ್ವಗಳನ್ನು ಬದುಕಿನ ಮೌಲ್ಯವಾಗಿ ಸ್ವೀಕರಿಸಿದ ಹೆಗ್ಗಳಿಕೆಗೆ ಈಕೆಯದು. ಕರ್ಪೂರದ ಉರಿಯಂತೆ ಬೆರೆತು ಬದುಕಿ ತೋರಿಸಿದ ಧೀಮಂತ ವ್ಯಕ್ತಿತ್ವ ಹೊಂದಿದ ಶಿವಶರಣರು.

ರಾಯಚೂರು ಜಿಲ್ಲೆಯ ಲಿಂಗಸುಗೂರದಲ್ಲಿದ್ದವರು. ಬನವಾಸಿಯ ಶಿಲಾಮಂಟಪದ ಕಲ್ಲುಗಳಲ್ಲಿ ಮಾರಯ್ಯನ ವಿಗ್ರಹ ಇಂದಿಗೂ ಇದೆಯಂತೆ. ಲಕ್ಕಮ್ಮಳ ಹೆಸರಿನ ಪುಟ್ಟ ದೇವಸ್ಥಾನ ಇದೆಯಂತೆ. ಮನೆಗೆ ಹೆಚ್ಚುವರಿಯಾಗಿ ತಂದ ಅಕ್ಕಿಯನ್ನು ಅಲ್ಲೇ ಸುರಿದು ಬನ್ನಿ ಗಂಡನಿಗೆ ಆಜ್ಞೆ ಮಾಡುವ ಲಕ್ಕಮ್ಮ ನ ಸತ್ಯ ಸಂಧತೆ, ನಿಷ್ಠೆ ಮೆಚ್ಚಲೇಬೇಕು.

ಆಸೆ, ರೋಷ ಎರಡೂ ನಮ್ಮಂಥವರಿಗಲ್ಲ. ಇಲ್ಲಿ ಕೇವಲ ಶಿವ ನೀಡಿದ್ದನ್ನು ಬೊಗಸೆಯಲ್ಲಿ ಹಿಡಿಯುವ ತೃಪ್ತಿ ಯ ಭಾವವಿದೆ. ಅಂತರಂಗಕ್ಕೊಪ್ಪುವಂತೆ ಬದುಕು ನಡೆಸಬೇಕು, ಯಾರದೋ ಮನೆಯ ಅನ್ನಕ್ಕೆ ಕೈಚಾಚದೆ, ದುಡಿದು ಉಣ್ಣೋಣ ತತ್ವ. ಬಡತನದಲ್ಲಿ ಶ್ರೀಮಂತಿಕೆಯ ಕಂಡವರೆಂದು ಅಲ್ಲಮಪ್ರಭುದೇವರು ಹಾಡಿ ಹೊಗಳಿದರಂತೆ.

ಪತಿಗೆ ಅನುರೂಪಳಾದ ಸತಿ, ನಿಷ್ಕಾಮ ಭಕ್ತಿ, ಕಾಯಕ ನಿಷ್ಠೆ, ಪತಿಗೆ ನಿಜ ಕೈಲಾಸವನ್ನೇ ತೋರಿಸಿದ ಸತಿ ಶಿರೋಮಣಿ ಸಂಪನ್ನೆಯಾಗಿದ್ದಳು ಲಕ್ಕಮ್ಮ ಎಂದು ತಿಳಿದು ಬರುವುದು.

ಲಿಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ

ಬೆಟ್ಟ ಬಲ್ಲತ್ತೆಂದೊಡೆ ಉಳಿಯ ಮೊನೆಯಲ್ಲಿ

ಬಡತನವಿದ್ದೊಡೆ ಒಡೆಯದೆ

ಘನಶಿವ ಭಕ್ತರಿಗೆ ಬಡತನವಿಲ್ಲ

ಸತ್ಯರಿಗೆ ದುಷ್ಕರ್ಮವಿಲ್ಲ

ಆರ ಹಂಗಿಲ್ಲ ಮಾರಯ್ಯ.

(ಆಕರ ಪುಸ್ತಕ: ಅಪೂರ್ವ ಮಹಿಳಾ ಮಣಿಗಳು)

ಸಂಗ್ರಹ ಬರಹ: ರತ್ನಾ ಕೆ ಭಟ್, ತಲಂಜೇರಿ