ಲಕ್ಕಿ
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭೦ನೇ ಪುಸ್ತಕವೇ ಲಕ್ಕಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲಕ್ಕಿ ಎಂಬ ಸಸ್ಯವನ್ನು ಎಲ್ಲರೂ ನೋಡಿರುತ್ತೀರಿ. ಆದರೆ ಅದರ ಹೆಸರು ಲಕ್ಕಿ ಎನ್ನುವ ಬಗ್ಗೆ ಕಲ್ಪನೆ ಇರುವುದು ಕಡಿಮೆ. ಅದರ ಉಪಯೋಗಗಳ ಬಗ್ಗೆಯೂ ತಿಳಿದಿರುವ ಸಾಧ್ಯತೆಗಳು ಕಡಿಮೆ. “ಜಗತ್ತಿನ ಎಲ್ಲೆಡೆ ರಸ್ತೆ ಬದಿಗಳಲ್ಲಿ, ವ್ಯರ್ಥ ಜಾಗಗಳಲ್ಲಿ ಬೆಳೆಯುವ ಲಕ್ಕಿ ಒಂದು ಅಪೂರ್ವ ಔಷಧೀಯ ಸಸ್ಯವಾಗಿದೆ. ಇದರ ಬಳಕೆಯನ್ನು ಎಲ್ಲಾ ದೇಶಗಳಲ್ಲಿ ಬಲು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಇಂದಿಗೂ ನಮ್ಮ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಮರ್ಥ್ಯ ಈ ಗಿಡಕ್ಕೆ ಇದೆ.” ಎನ್ನುವುದು ಬೆನ್ನುಡಿಯಲ್ಲಿ ಕಂಡ ಬರಹ.
ಲೇಖಕರಾದ ಮುನಿಯಾಲ್ ಗಣೇಶ್ ಶೆಣೈ ಅವರು ‘ಸಸ್ಯ ಸಂಪದ' ಪರಿಕಲ್ಪನೆಯ ಬಗ್ಗೆ ಹೇಳುವುದು ಹೀಗೆ..." ಕಳೆದ ಮೂರು ದಶಕಗಳಿಂದ ನಾನು ಗಿಡಮರಗಳ ಕುರಿತು ಆಸಕ್ತಿ ತಾಳಿದ್ದೇನೆ. ನಮ್ಮ ಸುತ್ತಲೂ ಇರುವ ಸಾವಿರಾರು ಬಗೆಯ ಗಿಡಮರ ಬಳ್ಳಿಗಳು ಒಂದೊಂದು ಹೊಸ ಜಗತ್ತನ್ನು ತೆರೆದಿಟ್ಟಿವೆ. ನಮ್ಮ ದೇಶದ ಒಂದೊಂದು ಪ್ರದೇಶದಲ್ಲೂ ನೂರಾರು ವರ್ಷಗಳಿಂದ ಬೆಳೆದು ಬಂದಿರುವ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಹಲವಾರು ಗಿಡಗಳನ್ನು ಬಳಸುತ್ತ ಬಂದಿದ್ದಾರೆ. ಈಗಲೂ ಆಧುನಿಕ ವೈದ್ಯಕೀಯ ಭರಾಟೆಯ ನಡುವೆಯೂ ಹಳ್ಳಿ ಮದ್ದುಗಳು ಅಪಾರ ಜನಪ್ರಿಯತೆಯನ್ನು ಗಳಿಸಿರಲು ಗಿಡಮರಗಳ ಕೊಡುಗೆ ಅನನ್ಯವಾದುದು.
ಒಂದೊಂದು ಗಿಡವೂ ಅಪಾರ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಡುತ್ತವೆ. ಈ ಸಸ್ಯಗಳ ಕುರಿತು ಇರುವ ಸಸ್ಯ ವೈಜ್ಞಾನಿಕ ಮಾಹಿತಿ, ಅವುಗಳ ಕೃಷಿ ವಿಧಾನ, ಆರ್ಥಿಕವಾಗಿ ಅವುಗಳ ಮಹತ್ವ, ಔಷಧವಾಗಿ ಅವುಗಳ ಬಳಕೆ, ಆಯುರ್ವೇದದಲ್ಲಿ ಇಂತಹ ಗಿಡಗಳ ಮಹತ್ವ, ಆಧುನಿಕ ಸಂಶೋಧಕರ ದೃಷ್ಟಿಯಲ್ಲಿ ಈ ಸಸ್ಯಗಳ ಪಾತ್ರ - ಇಂತಹ ಸಂಗತಿಗಳ ಬಗೆಗೆ ಅಧ್ಯಯನವನ್ನು ಮಾಡುತ್ತ ಬಂದಿರುವ ನಾನು ಇವನ್ನೆಲ್ಲ ಪುಸ್ತಕಗಳ ರೂಪದಲ್ಲಿ ನಿಮ್ಮ ಕೈಗಿಡುವ ಪ್ರಯತ್ನ ಮಾಡುತ್ತಿದ್ದೇನೆ.”
‘ಲಕ್ಕಿ' ಪುಸ್ತಕದ ಪ್ರಸ್ತಾವನೆಯಲ್ಲಿ ಲೇಖಕರು “ಸಾವಿರಾರು ವರ್ಷಗಳ ಹಿಂದೆ ಸುಶ್ರುತ ಆಚಾರ್ಯರು ತಮ್ಮ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಬಳಸುವ ಸಮಯದಲ್ಲಿ ಲಕ್ಕಿ ಗಿಡದ ಎಲೆಯನ್ನು ಕೆಂಡದ ಮೇಲೆ ಹಾಕಿ ಹೊಗೆ ಬರುವಂತೆ ಮಾಡಿ, ಕೋಣೆಯನ್ನು ಅಣಿಗೊಳಿಸುತ್ತಿದ್ದರು. ಅನಂತರವೂ ಈ ದೇಶದಲ್ಲಿ ನೂರಾರು ವರ್ಷಗಳ ಕಾಲ ಜನರು ಕೆಂಡದ ಮೇಲೆ ಹಸಿ ಲಕ್ಕಿ ಎಲೆ ಹಾಕಿ, ಹೊಗೆಯನ್ನು ಬರಿಸಿ, ಮಎಯೊಳಗೆ ಅದು ಹರಡುವಂತೆ ಮಾಡುತ್ತಿದ್ದರು. ಇದರಿಂದ ಸೊಳ್ಳೆಗಳ ಕಾಟ ಇರುತ್ತಿರಲಿಲ್ಲ.
ಮನುಷ್ಯನಿಗೆ ಮಾರಕ ರೋಗಗಳನ್ನು ತಂದೊಡ್ಡುವ ಸೊಳ್ಳೆಗಳ ಪುನರುತ್ಪಾದನೆ ಆಗದಂತೆ ಮಾಡುವ ಶಕ್ತಿ ಲಕ್ಕಿ ಗಿಡಗಳಿಗಿವೆ. ನಿಂತ ನೀರಿನಲ್ಲಿ ಸೊಳ್ಳೆಗಳು ಇಡುವ ಮೊಟ್ಟೆಗಳುಮರಿಯಾಗಿ ದೊಡ್ಡದಾಗುತ್ತವೆ. ಅಂತ ನೀರಿಗೆ ಲಕ್ಕಿ ಸೊಪ್ಪನ್ನು ಹಾಕಿದರೆ ಸೊಳ್ಳೆ ಮರಿಗಳು ನಾಶವಾಗುತ್ತವೆ. ಸಂಕ್ರಾಂತಿ ಎಂಬುದು ನಮ್ಮ ನಾಡಿನ ರೈತರಿಗೆಲ್ಲಾ ಸಂಭ್ರಮದ ದಿನ. ಆ ಸಂದರ್ಭದಲ್ಲಿ ಲಕ್ಕಿ ಗಿಡದ ಎಳೆಕೊಂಬೆಗಳನ್ನು ಬಾಗಿಲಿನ ತೋರಣಕ್ಕೆ ಸಿಕ್ಕಿಸುತ್ತಾರೆ. ಇದು ಮನೆಮಂದಿಯ ಆರೋಗ್ಯಕ್ಕೆ ಉಪಯುಕ್ತ, ಶುಭದಾಯಕ ಎಂಬ ನಂಬಿಕೆ ಇದೆ. ಇದು ಪಾರಂಪರಿಕ ಜ್ಞಾನ" ಎಂದಿದ್ದಾರೆ.
ಈ ಕೃತಿಯಲ್ಲಿ ಲೇಖಕರು ಲಕ್ಕಿಗಿಡದ ಸಸ್ಯ ಪರಿಚಯ, ಆಯುರ್ವೇದದಲ್ಲಿ ಲಕ್ಕಿ ಗಿಡದ ಬಳಕೆ, ಮನೆ ಔಷಧಿಯಾಗಿ ಲಕ್ಕಿ ಗಿಡ, ಲಕ್ಕಿ ಗಿಡದ ಬಗ್ಗೆ ನಡೆದ ಸಂಶೋಧನೆಗಳು ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದಾರೆ ಪುಸ್ತಕದಲ್ಲಿ ಲೇಖನಕ್ಕೆ ಪೂರಕಾವಾಗಿರುವ ಛಾಯಾಚಿತ್ರಗಳು ಇವೆ. ಸುಮಾರು ೬೪ ಪುಟಗಳ ಈ ಪುಸ್ತಕ ಲಕ್ಕಿ ಗಿಡದ ಬಗ್ಗೆ ಸಮಗ್ರ ಮಾಹಿತಿ ಹಾಗೂ ಅದರ ಔಷಧೀಯ ಗುಣಗಳ ಬಗ್ಗೆ ವಿವರಗಳನ್ನು ತೆರೆದಿಡುತ್ತದೆ.
`