ಲಕ್ಷದ್ವೀಪ ಭಾರತದ ವಶಕ್ಕೆ ಬಂದ ಕಥೆ !


ವಿದೇಶೀಯರು ಭಾರತವನ್ನು ಆಕ್ರಮಣ ಮಾಡುವುದಕ್ಕೆ ಮೊದಲು ಲಕ್ಷದ್ವೀಪವು ಭಾರತದ ಪರಿಮಿತಿಯೊಳಗೇ ಇತ್ತು. ಇತಿಹಾಸಗಳ ಪ್ರಕಾರ ೧೭೮೭ ರಿಂದ ೧೭೯೧ರ ತನಕ ಮೈಸೂರಿನ ರಾಜನಾಗಿದ್ದ ಟಿಪ್ಪೂ ಸುಲ್ತಾನ್ ಲಕ್ಷದ್ವೀಪವನ್ನೂ ಆಳುತ್ತಿದ್ದ. ಇದರಿಂದ ಕನ್ನಡನಾಡಿಗೂ ಲಕ್ಷದ್ವೀಪಕ್ಕೂ ಒಂದು ನಂಟು ಇದೆ ಎಂದು ಸಾಬೀತಾಗುತ್ತದೆ. ಈಗಲೂ ಕೊಚ್ಚಿನ್ ನಿಂದ ‘ಎಂ ವಿ ಟಿಪ್ಪು ಸುಲ್ತಾನ್’ ಎಂಬ ಹಡಗು ಲಕ್ಷದ್ವೀಪಕ್ಕೆ ಓಡಾಟ ನಡೆಸುತ್ತಿದೆ.
೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕವೂ ಹಲವಾರು ರಾಜ ಸಂಸ್ಥಾನಗಳು ಅಲ್ಲಲ್ಲಿ ಚದುರಿ ಹೋಗಿದ್ದವು. ಬಹುತೇಕ ಮಂದಿ ತಮ್ಮ ಸಾಮ್ರಾಜ್ಯವನ್ನು ಭಾರತದೊಳಗೆ ವಿಲೀನಕ್ಕೆ ಸಮ್ಮತಿಸಿದ್ದವು. ಕೆಲವು ಸಂಸ್ಥಾನಗಳನ್ನು ಅಂದಿನ ಗೃಹ ಮಂತ್ರಿಯಾಗಿದ್ದ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭ ಭಾಯಿ ಪಟೇಲರು ಸೈನ್ಯ ಬಲಪ್ರಯೋಗ ಮಾಡಿ ಭಾರತದ ಮಡಿಲಿಗೆ ಹಾಕಿದ್ದರು. ಇದಕ್ಕಾಗಿ ಅವರು ಹಗಲೂ ರಾತ್ರಿ ಶ್ರಮಿಸಿದ್ದರು. ಆದರೂ ಅವರ ಕಣ್ಗಾವಲಿಂದ ಲಕ್ಷದ್ವೀಪ ಹೇಗೋ ತಪ್ಪಿಸಿಕೊಂಡಿತ್ತು. ಲಕ್ಷದ್ವೀಪವನ್ನು ಭಾರತದ ತೆಕ್ಕೆಗೆ ಸೇರಿಸುವ ಬಗ್ಗೆ ಆ ಸಮಯ ಯಾರಿಗೂ ಯೋಚನೆಯೇ ಹೊಳೆದಿರಲಿಲ್ಲ. ದೊಡ್ದ ದೊಡ್ಡ ರಾಜ್ಯಗಳ ಬಗ್ಗೆ ಮಾತ್ರ ಆಗ ಗಮನ ಹರಿದಿತ್ತು.
ಇದೇ ಸಮಯ ಭಾರತದಿಂದ ಬೇರ್ಪಟ್ಟು ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರವಾಗಿ ಅದರ ಪ್ರಧಾನಿಯಾಗಿದ್ದ ಲಿಖಾಯತ್ ಆಲಿಖಾನ್ ಗಮನ ಲಕ್ಷದ್ವೀಪದ ಕಡೆಗೆ ಹರಿಯಿತು. ಏಕೆಂದರೆ ಲಕ್ಷದ್ವೀಪ ಮುಸ್ಲಿಂ ಬಾಹುಳ್ಯವಿರುವ ಪ್ರದೇಶ. ಈಗಲೂ ಅಲ್ಲಿ ಮುಸ್ಲಿಮರೇ ಬಹು ಸಂಖ್ಯಾತರು. ಈ ಕಾರಣದಿಂದ ಆಲಿಖಾನ್ ಲಕ್ಷದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಗುಟ್ಟಿನಿಂದ ಯೋಜನೆಗಳನ್ನು ತಯಾರಿಸಿದ. ಅದನ್ನು ವಶ ಪಡಿಸಿಕೊಳ್ಳಲು ಸೇನೆಯನ್ನು ಕಳುಹಿಸಿದ. ಹೇಗೋ ಈ ಸಂಗತಿ ಸರ್ದಾರ್ ಪಟೇಲರಿಗೆ ಗೊತ್ತಾಯಿತು. ಸಣ್ಣ ಭೂಭಾಗವಾದರೂ ಸರಿಯೇ ಪಾಕಿಸ್ತಾನಕ್ಕೆ ಸಿಗಬಾರದು ಎಂದು ಅವರು ಕೂಡಲೇ ಮೈಸೂರಿನ ದಿವಾನರಾಗಿದ್ದ ಸರ್ ಅರ್ಕಾಟ್ ರಾಮಸ್ವಾಮಿ ಮುದಲಿಯಾರ್ ಅವರನ್ನು ಸಂಪರ್ಕಿಸಿ ಸೇನೆಯನ್ನು ಲಕ್ಷದ್ವೀಪಕ್ಕೆ ಕಳಿಸಲು ಆಜ್ಞೆ ಮಾಡಿದರು.
ಕೂಡಲೇ ರಾಮಸ್ವಾಮಿ ಮುದಲಿಯಾರ್ ಅವರು ತಮ್ಮ ಸಹೋದರ ಲಕ್ಷ್ಮಣ ಮುದಲಿಯಾರ್ ಅವರ ಜೊತೆಗೂಡಿ ಸೇನೆಯೊಂದಿಗೆ ಲಕ್ಷದ್ವೀಪಕ್ಕೆ ತಲುಪಿ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದಾದ ಕೇವಲ ಅರ್ಧ ಗಂಟೆಯಲ್ಲಿ ಪಾಕಿಸ್ತಾನದ ಸೇನಾ ಹಡಗು ಅಲ್ಲಿಗೆ ಆಗಮಿಸಿತು. ಅದಾಗಲೇ ಅಲ್ಲಿ ಭಾರತದ ಧ್ವಜ ಹಾರಾಡುತ್ತಿದ್ದುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸಾಯಿತು. ಸರಿಯಾದ ಸಮಯಕ್ಕೆ ಭಾರತ ಸೇನೆ ಲಕ್ಷದ್ವೀಪ ತಲುಪಿದ್ದರಿಂದ ನಮ್ಮ ವಶದಲ್ಲೇ ಉಳಿಯಿತು. ಇಲ್ಲವಾದಲ್ಲಿ ಜಮ್ಮು ಕಾಶ್ಮೀರದಂತೆ ಲಕ್ಷದ್ವೀಪದಲ್ಲೂ ಪಾಕಿಸ್ತಾನದ ಕಿರಿಕಿರಿ ಇರುತ್ತಿತ್ತು. ಸರ್ದಾರ್ ಪಟೇಲರ ದಿಟ್ಟ ನಿರ್ಧಾರದಿಂದ ಲಕ್ಷದ್ವೀಪ ಭಾರತದ ತೆಕ್ಕೆಗೆ ಸೇರಿತು.
ಭಾರತದ ನೈರುತ್ಯ ಕರಾವಳಿಯಿಂದ ಸುಮಾರು ೪೦೦ ಕಿ.ಮೀ. ದೂರವಿರುವ ಲಕ್ಷದ್ವೀಪವು ಕೇವಲ ೩೨ ಚ. ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಇದು ನಮ್ಮ ದೇಶಕ್ಕೆ ಒಳಪಟ್ಟಿರುವ ಅತ್ಯಂತ ಕಿರಿಯ ಕೇಂದ್ರಾಡಳಿತ ಪ್ರದೇಶ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶವೆಂದರೆ ಅದು ಲಕ್ಷದ್ವೀಪ. ೧೯೪೮ರಲ್ಲಿ ಗಾಂಧಿ ಹತ್ಯೆಯಾದಾಗ ಅದರ ಸುದ್ದಿ ಲಕ್ಷದ್ವೀಪಕ್ಕೆ ತಲುಪಿದ್ದು ಬರೋಬ್ಬರಿ ಒಂದು ವಾರದ ನಂತರ. ಹಾಗಿತ್ತು ಅಲ್ಲಿಯ ಸಂಪರ್ಕ ವ್ಯವಸ್ಥೆ. ದಿನಪತ್ರಿಕೆಗಳು ಅಲ್ಲಿಗೆ ತಲುಪಲು ಆಗ ಇದ್ದ ವ್ಯವಸ್ಥೆ ಎಂದರೆ ಹಡಗು ಮೂಲಕ ಮಾತ್ರ. ೧೯೮೮ರಲ್ಲಿ ಕೊಚ್ಚಿನ್ ನಿಂದ ಹಾರಿದ ವಿಮಾನವೊಂದು ಲಕ್ಷದ್ವೀಪದಲ್ಲಿ ಇಳಿದ ಬಳಿಕ ಆಯಾ ದಿನದ ಪತ್ರಿಕೆ ಆಯಾ ದಿನವೇ ಸಿಗುವಂತೆ ಆಯಿತು.
ಈಗ ಲಕ್ಷದ್ವೀಪದ ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಮೋದಿಯವರ ಇತ್ತೀಚಿನ ಭೇಟಿಯ ಬಳಿಕ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯಗಳಲ್ಲಿ ಒಂದು ಲಕ್ಷದ್ವೀಪ ಆಗಿದೆ. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ದೊರೆತಷ್ಟು ಮಹತ್ವ ಲಕ್ಷದ್ವೀಪಕ್ಕೆ ದೊರೆಯಲೇ ಇಲ್ಲ. ಈಗಲೂ ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಸ್ವಚ್ಛತೆ ಮತ್ತು ಆಹಾರ ಸೌಕರ್ಯಗಳ ಬಗ್ಗೆ ದೂರು ಸಲ್ಲಿಸುತ್ತಲೇ ಇದ್ದಾರೆ. ಇವೆರಡು ಮೂಲಭೂತ ವಿಷಯಗಳನ್ನು ಸರಿ ಪಡಿಸಬೇಕಾಗಿರುವುದು ಇಂದಿನ ತುರ್ತು. ಇದರ ಜೊತೆಗೆ ದೂರ ಸಂಪರ್ಕ ವ್ಯವಸ್ಥೆಯನ್ನೂ ಬಲಪಡಿಸಬೇಕಾಗಿದೆ. ಜನವಸತಿ ಇರುವ ಹತ್ತೂ ದ್ವೀಪಗಳಲ್ಲಿ ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ನೆಟ್ ವರ್ಕ್ ಸಿಗುತ್ತದೆ. ಏರ್ ಟೆಲ್ ಕೇವಲ ಎರಡು ದ್ವೀಪಗಳಲ್ಲಿ ಮಾತ್ರ ಸಿಗುತ್ತದೆ. ಇವೆಲ್ಲಾ ಸುಧಾರಣೆಗಳಾದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿ ಲಕ್ಷದ್ವೀಪಕ್ಕೆ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ. ಇದರಿಂದ ಅಲ್ಲಿನ ಮೂಲಭೂತ ಸೌಕರ್ಯಗಳ ವೃದ್ಧಿಯಾಗಲಿದೆ. ಹಾಗಾದರೆ ಇನ್ನೇಕೆ ತಡ… ಹೊರಡಿ ಲಕ್ಷದ್ವೀಪಕ್ಕೆ…
ಚಿತ್ರ ೧: ಎಂ ವಿ ಟಿಪ್ಪು ಸುಲ್ತಾನ್ ಪ್ರಯಾಣಿಕರ ಹಡಗು
ಚಿತ್ರ ೨: ಅಗಟ್ಟಿಯಲ್ಲಿರುವ ವಿಮಾನ ನಿಲ್ದಾಣ
ಚಿತ್ರ ಕೃಪೆ: ಅಂತರ್ಜಾಲ ತಾಣ