ಲಕ್ಷ್ಮಿನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ

ಲಕ್ಷ್ಮಿನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ

ಕವನ

ಭಾವಜಾಂತಕ ಭಾವಜೀವಿಯು

ದೇವನೊಲುಮೆಗೆ ನಿಷ್ಠಪುರುಷನು

ಜೀವ ತೇರಲಿ ಹಾಡು ಬರೆಯುತ

ಭಾವ ತುಂಬಿದನು|

ಮಾವುಚಿಗುರೆಲೆ ಚಂದ ಮನದಲಿ

ಬೇವು ಮಿಶ್ರಿತ ಬಂಧ ಬೆಸುಗೆಯ

ನಾವು ಬಲ್ಲೆವು ಭಾವ ಗೀತೆಯ

ಕವಿಯ ಮನದೊಳಗೆ||

 

ಎಲ್ಲಿ ಜಾರಿತೋ ಮನದ ಭಾವವು

ಗಲ್ಲಿ ಗಲ್ಲಿಯ ಮೀರಿ ಸಾರಿತೊ

ಮೆಲ್ಲ ಮೆಲ್ಲನೆ ಮನವ ಹೊಕ್ಕುತ 

ಖುಷಿಯ ಬಿತ್ತಿರಲು

ಅಲ್ಲೆ ನಿಂತಿಹ ಕಲ್ಲು ಮನವನು

ಜಲ್ಲ ಜಲ್ಲನೆ ಕುಣಿದು ಮುಟ್ಟಿದೆ

ಬಲ್ಲ ಮೂಲದ ಕಹಳೆಯೊಂದಿಗೆ ಭಾಸವಾಗುತಿದೆ|| 

 

ಕವಿಯು ಬರೆದರು ನವ್ಯ ಕಾವ್ಯವ

ಭವದ ಬಂಧುರ ಬೆಸೆದ ಕಾಲದಿ

ಕವಿದ ಮನಸಿಗೆ ಬೆಳಕ ಹರಿಸುತ ಭಾವಶುದ್ಧಿಯಲಿ|

ಪವನ ಬೀಸುವ ದಿಕ್ಕು ದಿಕ್ಕಿಗು

ದವನ ಸೂಸುವ ಪರಿಯ ಸೊಬಗಲಿ

ಚವರ ಬೀಸಿದೆ ಭಾವ್ಯ ಭಾಷ್ಯದಿ ಭಾಳನೇತ್ರನಲಿ||

 

ಜನರು ಮೆಚ್ಚುವ ಭಾವತುಂಬಿದ

ಮನದ ಭಾವದ ಕಡಲ ಕ್ಷೀರವು

ಸನಿಹ ನೋಡಿದ ಭಿನ್ನವಿಷಯವು ಮನವ ಸೆಳೆದಿರಲು|

ಹನಿಯ ಸೇಚನ ದಿವ್ಯ ಚೇತನ

ತನುವ ನೆಚ್ಚಿಸಿ ಭಾವ ಹರಿಸಿದೆ

ಘನತೆ ಗಳಿಸಿವೆ ಗೀತೆ ಗಾಯನ

ಕವಿಯ ಸಾಂಗತ್ಯ||

 

ಕವಿವರೇಣ್ಯರು ನಾಡ ಸಾಹಿತಿ

ಭುವಿಯ ಚಂದದ ಮೇರು ಕವಿಯೂ

ಲವಣಿಯಂದದಿ ಬರಹ ಮಾತವು 

ನಲಿದು ನಾಡಿನಲಿ|

ಲವಲವಿಕೆಯಲಿ ನಿತ್ಯ ಮೊಗವದು

ವಿವರ ಬರೆಯುತ ಭಾವದಲೆಯಲಿ

ಸವಿದು ಸಹನೆಯ ಬಿತ್ತಿ ಮೆರೆದರು 

ಭಾವ ಕವಿಯಿವರು||

 

-*ಅಭಿಜ್ಞಾ ಪಿ.ಎಮ್ ಗೌಡ*

***

ಮೌನವಿರುವ ತಾಣಕಿಂದು 

ಮೌನವಿರುವ ತಾಣಕಿಂದು ತೇಲಿ ಹೋದೆ ಈ ದಿನ

ಸಾಧನೆಗಳ ತೀರದಿಂದ ದೂರವಾದೆ ಪ್ರತಿ ಕ್ಷಣ

 

ಹುಟ್ಟಿ ನಲಿದೆ ನಾಡಿನಲ್ಲಿ ಕಲಿತು ಬೆಳೆದೆ ನೆಲದಲಿ

ಕನ್ನಡದ ಸೊಲ್ಲ ಬೆಳೆಸಿ ಗೆಲುವಿನಲ್ಲಿ ಕೀರ್ತಿ ಗಳಿಸಿ

 

ಪ್ರತಿಭೆಯಿರುವ ಗೂಡಿನೊಳಗೆ ಕುಳಿತು ಹೀಗೆ ಬೆಳೆದ ಬಗೆಗೆ

ನಾಡ ಜನರ ಹೃದಯದೊಳಗೆ ಜೀವದೆಸರೆ ತುಂಬಿದೆ

 

ಭಾವಗೀತೆ ಬರೆಸಿ ನುಡಿಸಿ ಭಾವದೊಲುಮೆ ಬೆಳೆಸಿದೆ

ಗೀತಗಾನ ಚಿರಯೌವನ ಮುರಳಿನಾದ ಹೊಮ್ಮಿದೆ

 

ನಮ್ಮ ಮನದ ಪಟದವೊಳಗೆ ನಿನ್ನ ಬಿಂಬ ಕುಳಿತಿದೆ

ಅದನೆ ನೋಡಿ ನಾವು ಬೆಳೆದು ಸಾಗುತಿರಲು ಚೆಲುವಿದೆ

 

-ಹಾ ಮ ಸತೀಶ

 

ಚಿತ್ರ್