ಲಕ್ಷ್ಮೀ ದೇವಿ ನಮೋಸ್ತುತೆ

ಲಕ್ಷ್ಮೀ ದೇವಿ ನಮೋಸ್ತುತೆ

ಕವನ

( ಭಾಮಿನಿ ಷಟ್ಪದಿ)

ಕಮಲವದನೆಯೆ ವಿಷ್ಣುವಲ್ಲಭೆ

ಕಮಲಕೋಮಲ ಚಂಚರೀಕಳೆ

ಕಮಲ ಮಾಲೆಯ ಕೊರಳಿನಲ್ಲಿಯೆ ಧರಿಸಿ ಮೆರೆಯುವಳು||

ಕಮಲ ಕುಸುಮ ಪ್ರಿಯಳೆ ಲಕ್ಷ್ಮೀ

ಕಮಲಿಕಾ ದೇವಿಯದು ಮಾಧವಿ

ಕಮಲವಾಸಿನಿ ಪಾಲಕಡಲಲಿ ಪುಟ್ಟಿ

ಬಂದಿಹಳು||

 

ಚಾರು ಹಾಸಿನಿ ವನದವಾಸಿನಿ

ತಾರೆಯಂದದಿ ಹೊಳೆವ ಚಂದ್ರಿಕೆ

ಬೀರಿನಗೆಯನು ಕಮಲ ಲೋಚನ ಕಮಲ

ದಳದಲ್ಲಿ|

ತೋರು ಕರುಣೆಯ ಲಕುಮಿ ಮಾತೆಯೆ

ಚಾರು ಚುಬುಕದಿ ಮಂದ ಹಾಸವು

ಸೀರೆ ರೇಷ್ಮೆಯು ಚಿತ್ರಚೊಲ್ಲೆಯು

ಕುಸುಮಚಿತ್ರದಲಿ||

 

ಕರದಿ ಪುಷ್ಪವ ಪಿಡಿದು ನಿಂತಳು

ಸುರರ ಲೋಕದ ದೇವಿ ಲಕುಮಿಯು

ಧರೆಯ ಮೇಲಣ ಕಮಲ ಕುಸುಮದ ಮೇಲೆ‌ ಕುಳಿತಿಹಳು||

ಹರಿಯ ಮಡದಿಯು ವಿತ್ತನೀಳ್ಪಳು

ಕರುಣೆ ತೋರಲು ಕಷ್ಟದೂರಕೆ

ತೊರೆದು ಹೋಗುತ ವಿತ್ತಸುರಿಮಳೆ ಹರಿದು ಬರುತಿಹುದು||

 

ನಮಿಪೆ ದೀಪಾವಳಿಯ ಸಮಯದಿ

ತಮವ ದೂರಕೆ ಸರಿದು ಹೋಗಲು

ವಿಮಲ ಪಾದವ ಪೂಜೆ ಮಾಡುತ ಲಕುಮಿ

ದೇವಿಯನು||

ಕಮರಿದಂತಹ ಕನಸು ಚಿಗುರಿತು

ಶಮನವಾಗಿ ಕ್ಲೇಶ ಮನದೊಳು

ಗಮನವಿಡುತ ಧ್ಯಾನ ಮಾಳ್ಪಿಹ ಭಕುತ

ಜನರಿಂಗೆ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್