ಲಕ್ಷ್ಮೀ ಸೆರಗು
ಪಕ್ಕದಲ್ಲಿ ಕಾಣುವ ಚಿತ್ರವು ಕರ್ನಾಟಕ ರಾಜ್ಯ ಚಿಕ್ಕಮಗಳೂರು ಜಿಲ್ಲೆಯ/ತಾಲ್ಲೂಕಿನ ಕಳಸಾಪುರ ಗ್ರಾಮದ ಭಕ್ತರ ಮನೆಯಲ್ಲಿ ತೆಗೆದದ್ದು.
ಇದರ ಹಿಂದಿರುವ ಕಥೆ ಏನೆಂದರೆ, ಸುಮಾರು ಮುನ್ನೂರು ವರ್ಷಗಳ ಹಿಂದೆ ಇವರ ಪೂರ್ವೀಕರ ಕಾಲದಲ್ಲಿ ಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನದಂದು ತಾಯಿಯು ಅಡಿಗೆಗೆ ನೀರು ತರಲು ಕೆರೆಗೆ ಹೋಗಿರುವಾಗ, ಅವಳ ಎಳೆಯ ಕಂದಮ್ಮಗಳು ಹಸಿವಿನಿಂದ ಕಂಗಾಲಾಗಿ ಅಳತೊಡಗುತ್ತವೆ. ಮಕ್ಕಳ ಅಳು ಹೆಚ್ಚಾದಾಗ, ಕರುಳು ಚುರ್ರೆಂದ ವರಮಹಾಲಕ್ಷ್ಮಿಯು ಸ್ವತಃ ಅಲ್ಲಿಗೆ ಮಕ್ಕಳ ತಾಯಿಯ ರೂಪದಲ್ಲಿ ಬಂದು ಪೂಜೆಗಾಗಿ ಮೀಸಲಿಟ್ಟಿದ್ದ ಹಾಲು, ಮೊಸರು, ತುಪ್ಪ ಇತ್ಯಾದಿಗಳನ್ನು ಮಕ್ಕಳಿಗೆ ಊಟಕ್ಕೆ ಬಡಿಸಿ ಉಪಚರಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಮಗುವಿನ ತಾಯಿಯು ಬರಲು, ತಕ್ಷಣ ವರಮಹಾಲಕ್ಷ್ಮಿಯು ಬಾಗಿಲಿನ ಹಿಂದೆ ಮಾಯವಾಗಲು ಪ್ರಯತ್ನಿಸುತ್ತಾಳೆ. ನೀರನ್ನು ತೆಗೆದುಕೊಂಡು ಬಂದ ಆ ಮಕ್ಕಳ ತಾಯಿಯು ಮಕ್ಕಳು ಊಟ ಮುಗಿಸಿ ಕೈತೊಳೆದುಕೊಳ್ಳುತ್ತಿರುವುದನ್ನು ಕಂಡು ಸಿಟ್ಟಿನಿಂದ ಗದರಿಸುತ್ತಾಳೆ. ಮಕ್ಕಳು "ಏನಮ್ಮಾ, ನೀನೇ ಊಟಕ್ಕೆ ಬಡಿಸಿ, ಈಗ ನೀನೇ ಬಯ್ಯುತ್ತಿದ್ದೀಯ" ಎನ್ನುತ್ತವೆ. ಆಶ್ಚರ್ಯ ಚಕಿತಳಾದ ಆ ತಾಯಿಯು ಬಾಗಿಲಿನ ಹಿಂದೆ ಅಡಗಿದ್ದ ವರಮಹಾಲಕ್ಷ್ಮಿಯ ಕುರುಹನ್ನು ಕಂಡು, ಯಾರೋ ಹೆಂಗಸು ಅಲ್ಲಿ ಅಡಗಿಕೊಂಡಿರಬೇಕೆಂದುಕೊಂಡು, ಸೆರಗನ್ನು ಹಿಡಿದೆಳೆಯುತ್ತಾಳೆ. ಸೆರಗಿನ ತುಂಡು ಅವಳ ಕೈಯಲ್ಲಿ ಸಿಕ್ಕಿಕೊಂಡು, ಮಹಾಲಕ್ಷ್ಮಿಯು ಮಾಯವಾಗುತ್ತಾಳೆ. ಸೆರಗು ಹಾಗೆಯೇ ಉಳಿದುಬಿಡುತ್ತದೆ.
ಇದೇನು ವಿಚಿತ್ರವೆಂದು ಯೋಚಿಸುತ್ತಿದ್ದ ಆ ತಾಯಿಗೆ ವರಮಹಾಲಕ್ಷ್ಮಿಯು ಕನಸಿನಲ್ಲಿ ಕಾಣಿಸಿಕೊಂಡು ತಾನೇ ಅಂದಿನ ಆ ಕೃತ್ಯಕ್ಕೆ ಕಾರಣಳೆಂದೂ, ಉಪವಾಸ ಇತ್ಯಾದಿಗಳು ಕೇವಲ ದೊಡ್ಡವರಿಗೆ ಮಾತ್ರ, ಮಕ್ಕಳಿಗಲ್ಲ, ಅವರಿಗೆ ಯಾವರೀತಿಯ ನಿರ್ಬಂಧವನ್ನೂ ಹಾಕಬಾರದೆಂದು ತಿಳಿಸುತ್ತಾಳೆ. ಕಾಲಾನುಕ್ರಮದಲ್ಲಿ ಆ ಮೂಲದ ಅಣ್ಣ ತಮ್ಮಂದಿರು ಬೇರೆ ಬೇರೆಯಾದಾಗ ಆ ಸೆರಗೂ ಸ್ವಲ್ಪ ಸ್ವಲ್ಪವಾಗಿ ಅವರಲ್ಲಿ ಹಂಚಿ ಹೋಗಿರುತ್ತದೆ. ಆ ಕುಟುಂಬದ ವಂಶಜರು ಈಗಲೂ ಸಹ ಶ್ರಾವಣ ಮಾಸದ ಪೂರ್ಣಿಮೆಯ ಸಮೀಪದ ಶುಕ್ರವಾರದಂದು ಅತಿ ಶ್ರದ್ಧಾ ಭಕ್ತಿ ಮತ್ತು ವಿಜೃಂಭಣೆಯಿಂದ ಸೆರಗಿನ ಭಾಗವನ್ನು ಕಲಶದಲ್ಲಿ ಇಟ್ಟು ವರಮಹಾಲಕ್ಷ್ಮಿಯ ವ್ರತವನ್ನು ಪ್ರತಿ ವರ್ಷವೂ ಆಚರಿಸುತ್ತಾರೆ. ಯಾರೇ ಆ ಊರಿಗೆ ಹೋದರು, ಅವರಿಗೆ ಆದರದ ಸ್ವಾಗತ, ಹೃದಯ ಪೂರ್ವಕ ಆತಿಥ್ಯ ಕಟ್ಟಿಟ್ಟ ಬುತ್ತಿ.
ಅನುಕೂಲವಾದರೆ, ನೀವೂ ಒಮ್ಮೆ ಹೋಗಿ ತಾಯಿ ವರಮಹಾಲಕ್ಷ್ಮಿಯ ಆಶೀರ್ವಾಧ ಪಡೆದು ಬನ್ನಿ.
ಎ.ವಿ. ನಾಗರಾಜು
ಅಗಿಲೆನಾಗ್ [ಎಟ್] ರಿಡಿಫ್ ಮೇಲ್.ಕಾಂ.