ಲಘುಹಾಸ್ಯ / ಹರಟೆ: ಗುಬ್ಬಣ್ಣ ಮತ್ತು ಗುಣಿತಾಕಾಕ್ಷರಗಳು..

ಲಘುಹಾಸ್ಯ / ಹರಟೆ: ಗುಬ್ಬಣ್ಣ ಮತ್ತು ಗುಣಿತಾಕಾಕ್ಷರಗಳು..

ಮಟಮಟ ಮಧ್ಯಹ್ಮದ ಸುಡು ಬಿಸಿಲಲ್ಲಿ ಬೋರಾಗಿ ಪೇಪರು ತಿರುವುತ್ತಾ ಕೂತಿದ್ದರು ಯಾಕೊ ಮನಸೆಲ್ಲ ಇನ್ನೆಲ್ಲೊ ಇತ್ತು.. ಇಂಥಹ ಸಮಯದಲ್ಲಿ ಗುಬ್ಬಣ್ಣನಾದರು ಇದ್ದಿದ್ದರೆ ಹಾಳು ಹರಟೆ ಹೊಡೆಯುತ್ತಾ ಕಾಲಾಯಾಪನೆ ಮಾಡಬಹುದಿತ್ತಲ್ಲ ಎನಿಸಿ ಮೊಬೈಲ್ ಕೈಗೆತ್ತಿಕೊಂಡು ಕಾಲ್ ಮಾಡಿದೆ. ಗುಬ್ಬಣ್ಣ ಯಾಕೊ ಪೋನ್ ಎತ್ತುವಂತೆ ಕಾಣಲಿಲ್ಲ ಅನಿಸಿದಾಗ ಒಂದು ವಾಟ್ಸಪ್ ಮೆಸೇಜ್ ಕಳಿಸಿದೆ - 'ಗುಬ್ಬಣ್ಣ, ವಾಟ್ಸ್ ಅಪ್?' ಎನ್ನುವ ತುಂಡು ಸಂದೇಶವನ್ನೆ ರವಾನಿಸುತ್ತಾ.. ಆದಾಗಿ ಐದು ನಿಮಿಷ ಕಳೆದರು ಆ ಕಡೆಯಿಂದ ಸದ್ದೆ ಇಲ್ಲ. ಸರಿ ಯಾವುದಾದರು ಟೀವಿ ಚಾನಲ್ಲನ್ನಾದರು ಹುಡುಕುತ್ತ ರಿಮೋಟನ್ನು ಗೋಳಾಡಿಸೋಣ ಎಂದುಕೊಂಡು ಮೇಲೇಳುವ ಹೊತ್ತಿಗೆ ಸರಿಯಾಗಿ ವಾಟ್ಸಪ್ಪಿನ ಇನ್ ಕಮಿಂಗ್ ಮೆಸೇಜ್ ಬಂದಿತ್ತು - ಗುಬ್ಬಣ್ಣನಿಂದಲೆ..

'ನಥಿಂಗ್ ಅಪ್ ಸಾರ್ ಆಲ್ ಡೌನ್... ಲೈಬ್ರರಿಲಿದೀನಿ'

ಯಥಾರೀತಿ ನಾ ಪೂರ್ತಿ ಕನ್ಫ್ಯೂಸ್... ನಾ ಕೇಳಿದ್ದೆ ಒಂದಾದರೆ ಬರುವ ಉತ್ತರವೆ ಇನ್ನೊಂದು..

'ಗುಬ್ಬಣ್ಣಾ.... ಬೀ ಸೀರಿಯಸ್.. ಐ ಅಮ್ ನಾಟ್ ಟಾಕಿಂಗ್ ಎಬೌಟ್ ಸ್ಟಾಕ್ ಅಂಡ್ ಷೇರು ಮಾರ್ಕೆಟ್ ಅಪ್ ಅಂಡ್ ಡೌನ್..ಎಲ್ಲಿ ಹಾಳಾಗೋಗಿದ್ದೀಯಾ ಎಂದೆ ಅಷ್ಟೆ.. ಯಾವ ಲೈಬ್ರರೀಲಿದೀಯಾ ? ಅಂಗ್ ಮೋ ಕಿಯೊ ಬ್ರಾಂಚಾ? ಸಕತ್ ಬೋರಾಗ್ತಿದೆ ನಾನು ಅಲ್ಲಿಗೆ ಬರ್ತೀನಿ ತಾಳು' ಎಂದು ಉದ್ದದ ಮೆಸೇಜ್ ಕಳಿಸಿದೆ.. ಹಾಳು ಹೊಸ ಪೀಳಿಗೆಯ ಹುಡುಗರ ಹಾಗೆ ತುಂಡು ಸಂದೇಶ ಕಳಿಸಲು ಬರದಿದ್ದಕ್ಕೆ ನನ್ನನ್ನೆ ಶಪಿಸಿಕೊಳ್ಳುತ್ತಾ..

'ಇಲ್ಲಾ ಸಾರ್ ಮೀಟಿಂಗ್ ಆಗಲ್ಲ.. ಆಂಗ್ ಮೋ ಕಿಯೊಲಿಲ್ಲ..ಕನ್ನಡ ಲೈಬ್ರರಿಲಿದೀನಿ..'

ಸಿಂಗಪುರದಲ್ಲೆಲ್ಲಿಂದ ಬರ್ಬೇಕು ಕನ್ನಡ ಲೈಬ್ರರಿ ? ಮತ್ತೊಂದು ಟ್ರೈನು ಹತ್ತಿಸ್ತಾ ಇದಾನೆ ಪಾರ್ಟಿ ಅನ್ಕೊಂಡು, ' ಗುಬ್ಬಣ್ಣ.. ನೊ ಮೋರ್ ಡ್ರಾಮಾ ಪ್ಲೀಸ್.. ಸಿಂಗಪುರದಲ್ಲೆಂತ ಕನ್ನಡ ಲೈಬ್ರರಿ ..? ರೀಲು ಬಿಡೋಕು ಒಂದು ಲಿಮಿಟ್ ಇರ್ಬೇಕು..ಎಲ್ಲಿದ್ದೀಯಾ ಹೇಳು.. ಸಿಟಿ ಬ್ರಾಂಚಾ ?' ಎಂದೆ.

' ಅಯ್ಯೊ.. ನೋ ಸಾರು.. ನಿಜ್ಜ ಕನ್ನಡ ಲೈಬ್ರರಿಲಿ ಕೂತಿದೀನಿ..ಮೈಸೂರಲ್ಲಿದೀನಿ.. ಸಿಂಗಪುರದಲ್ಲಿಲ್ಲಾ.. ' ಎಂದು ಹೊಸ ಬಾಂಬ್ ಬೇರೆ ಹಾರಿಸಿದ..!

ನನಗೆಲ್ಲ ಅಯೋಮಯ.. ಯಾವ ಮೈಸೂರು ? ಯಾವ ಕನ್ನಡ ಲೈಬ್ರರಿ ? ಎಲ್ಲಿಯ ಗುಬ್ಬಣ್ಣ ? ಎಲ್ಲಿಯ ಸಿಂಗಪುರ? ಯಾವುದಕ್ಕು ಲಾಜಿಕಲ್ ಕನೆಕ್ಷನ್ನೆ ಕಾಣಲಿಲ್ಲ ನನಗೆ...

' ಸರಿ ವಾಟ್ಸಪ್ಪಲ್ಲೆ ಕಾಲ್ ಮಾಡ್ತೀನಿ ತೊಗೊ.. ಐ ವಾಂಟ್ ಮೋರ್ ಡೀಟೈಲ್ಸ್ ..' ಎಂದೆ

' ತಾಳಿ.. ಸಾರ್..ರೀಡಿಂಗ್ ಜೋನಲ್ಲಿದೀನಿ ಪೋನು ಸೈಲೆಂಟ್ ಮೋಡಲ್ಲಿದೆ..ಈಚೆಗೆ ಬಂದು ಪಿಂಗ್ ಮಾಡ್ತೀನಿ..' ಎನ್ನುವ ಸಂದೇಶ ರವಾನಿಸಿದ ಗುಬ್ಬಣನ ಮರು ಸಂದೇಶವನ್ನು ಕಾದು ಕುಳಿತೆ..ಐದೆ ನಿಮಿಷದಲ್ಲಿ ಮತ್ತೆ ಸಂದೇಶ ಬಂತು 'ಕಾಲ್ ಮಾಡಿ ಸಾರ್' ಅಂತ

'ಗುಬ್ಬಣ್ಣ.. ವಾಟ್ ಇಸ್ ದಿಸ್ ನಾನ್ಸೆನ್ಸ್ ? ಮೈಸೂರಿಗೆ ಯಾವಾಗ ಹೋದೆ ? ಏನಿದು ಕನ್ನಡ ಲೈಬ್ರರಿ ಮೇಲೆ ಧಾಳಿ ಮಾಡಿದ್ದು ? ಇದ್ಯಾವ ಪ್ರಾಜೆಕ್ಟು ನಿಂದು ? ಮೊನ್ನೆ ಮೊನ್ನೆ ತಾನೆ ಇಲ್ಲೆ ಇದ್ದೆಯಲ್ಲಾ? ಯಾವಾಗ ಹೋಗಿದ್ದು ಮೈಸೂರಿಗೆ ? ' ಎಂದು ಮುಂಗಾರು ಮಳೆಯ ಹಾಗೆ ಪ್ರಶ್ನೆಯ ವರ್ಷಧಾರೆ ಸುರಿಸಿದೆ ಪೋನಲ್ಲೆ..

' ಅಯ್ಯೊ ಎಲ್ಲಾ ಅರ್ಜೆಂಟಲ್ಲಿ ಆಗಿದ್ದು ಸಾರ್.. ನಾಟ್ ಪ್ಲಾನ್ಡ್... ನಮ್ಮ ಪ್ರಾಜೆಕ್ಟ್ ಕಸ್ಟಮರ್ ಒಬ್ಬರು ಜರ್ಮನಿಯಿಂದ ಬಂದವರು.. ಹೀ ಈಸ್ ಆನ್ ಎ ರಿಸರ್ಚ್ ಪ್ರಾಜೆಕ್ಟ್ ಇನ್ ಕನ್ನಡ.. ಅವರಿಗೆ ಹೆಲ್ಪ್ ಬೇಕೂ ಅಂದಿದ್ದಕ್ಕೆ ಲಾಂಗ್ ವೀಕೆಂಡಲ್ಲಿ ಜತೆಗೆ ಬಂದೆ..' ಅಂದ

ಗುಬ್ಬಣ್ಣ ಹೇಳಿದ್ದೆಲ್ಲ ಎಷ್ಟೊ ಸಲ ನಂಬಬೇಕೊ ಬಿಡಬೇಕೊ ಗೊತ್ತಾಗೋದೆ ಇಲ್ಲಾ.. ಅಷ್ಟು ಅನುಮಾನ ಬಂದು ಬಿಡುತ್ತೆ.. ಜರ್ಮನಿ ಕಸ್ಟಮರ್, ಸಿಂಗಪುರಕ್ಕೆ ಬಂದು, ಕನ್ನಡ ರಿಸರ್ಚಿಗೆ ಮೈಸೂರಿಗೆ ಹೋಗ್ತಾ ಗುಬ್ಬಣ್ಣನ್ನ ಕರ್ಕೊಂಡು ಹೋಗದು ಅಂದ್ರೆ - ಸಂಥಿಂ ಟೆರ್ರಿಬಲಿ ರಾಂಗ್..

'ಗುಬ್ಬಣ್ಣ ಇದೆಲ್ಲ ಗೊಂಡಾವನ ಥಿಯರಿ ಇದ್ದ ಹಾಗಿನ ಬುರುಡೆ ಬೇಡ.. ಕಮ್ ಕ್ಲೀನ್ ವಿತ್ ಟ್ರುಥ್.. ನನ್ನ ಕಿವಿಗೆ ಹೂ ಇಡೋದು ಬೇಡ.. ಜರ್ಮನಿಗೂ ಕನ್ನಡಕ್ಕು ಎಲ್ಲಿಯ ಲಿಂಕು..? ಏನೊ ಯಾವುದೊ ಐಟಿ ಪ್ರಾಜೆಕ್ಟಿಗೆ ಬೆಂಗಳೂರಿಗೊ, ಮೈಸೂರಿಗೊ ಬಂದಿದಾರೆ ಅಂದ್ರೆ ನಂಬಬಹುದು.. ಇದು ಟೋಟಲಿ ಅಬ್ಸರ್ಡ್..'ಎಂದೆ ತುಸು ಎತ್ತರಿಸಿದ ದನಿಯಲ್ಲಿ..

ಅತ್ತ ಕಡೆಯಿಂದ ಅರೆಗಳಿಗೆಯ ಮೌನ.. ಏನೊ ಹುಡುಕುತ್ತಿರುವ ಹಾಗೆ.. ಆಮೇಲೆ ಉತ್ತರದ ಬದಲು ಮತ್ತೊಂದು ಪ್ರಶ್ನೆ ತೂರಿ ಬಂತು..' ಸಾರ್.. ಅದ್ಯಾರೊ ಕಿಟ್ಟೆಲ್ ಅಂತಿದಾರಂತೆ ಗೊತ್ತಾ ? ಜರ್ಮನ್ ಅಂತೆ..'

ಈಗ ನಾನೆ ಅರೆಗಳಿಗೆ ಮೌನವಾದೆ.. ಜರ್ಮನಿಗು ಕನ್ನಡ / ಕರ್ನಾಟಕಕ್ಕು ಏನೂ ಸಂಬಂದ ಅಂತ ಕೇಳಬಾರದಿತ್ತು.. ಜಾರ್ಜ್ ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಅನ್ನೊ ಹೆಸರು ಎಲ್ಲಾ ಕನ್ನಡಿಗರಿಗು ಗೊತ್ತಿಲ್ಲದೆ ಇರಬಹುದು.. ಆದರೆ ಅವರ ಅಚ್ಚಗನ್ನಡದ ಮೊದಲ ಕನ್ನಡ ಪದಕೋಶದ ಕುರಿತು ಗೊತ್ತಿರುವವರಾರು ಕನ್ನಡಕ್ಕು ಜರ್ಮನಿಗು ಏನು ಸಂಬಂಧ ಅಂತ ಕೇಳೋ ಧೈರ್ಯ ಮಾಡಲ್ಲ... ನಾನು ಅದನ್ನ ಮೊದಲ ಬಾರಿಗೆ ನೋಡಿದಾಗ ' ಏನ್ರಯ್ಯಾ ಇದು ? ಈ ಪದಕೋಶದ ಪುಸ್ತಕ ಹೊತ್ತುಕೊಂಡು ಬರೋಕೆ ಒಂದು ಜಟಕಾ ಗಾಡಿ ಮಾಡಬೇಕಲ್ರಪ್ಪಾ ? ಇನ್ನು ಇದನ್ನ ತಂದು ಓದೊ ಮಾತೆಲ್ಲಿ ಬರ್ಬೇಕು ?' ಅಂತ ಛೇಡಿಸಿದ್ದೆ. ಅದನ್ನ ಕೇಳಿ ರಾಮು ಮಾಮ 'ಜಟಕಾಗಿಂತ ಆಟೊ ವಾಸಿ, ಬರುತ್ತೇ ಅನ್ನೊ ಗ್ಯಾರಂಟಿ ಇರುತ್ತೆ.. ಜಟಕಾ ಅದ್ರೆ ಯಾವುದೊ ಮುದಿ ಕುದುರೆಗೆ ತಗಲ್ಹಾಕಿರ್ತಾರೆ ಗಾಡಿನ.. ಅದು 'ಉಸ್ಸಪ್ಪಾ' ಅಂತ್ ಎಳ್ಕೊಂಡ್ ಬರೋದ್ರಲ್ಲಿ ಅಲ್ಲೆ ಮಧ್ಯದಲ್ಲಿ ಗೊಟಕ್ ಅಂದ್ಬಿಟ್ಟಿರುತ್ತೆ.. ಈ ಪುಸ್ತಕದ ಭಾರಕ್ಕೆ..' ಅಂತ ಒಗ್ಗರಣೆ ಹಾಕಿದ್ದ..

ಆಗ ಪುಸ್ತಕದ ಸೈಜಿಗೆ ಹಾಸ್ಯ ಮಾಡೋಕಿಂತ ಹೆಚ್ಚಾಗಿ ವಿದೇಶಿಯರಾಗಿದ್ದೂ ಹಳ್ಳಿ ಹಳ್ಳಿ, ಕಾಡುಮೇಡು, ಊರುಕೇರಿ ಸುತ್ತಿ ಕನ್ನಡ ಪದಗಳ ಅರ್ಥ ಪತ್ತೆ ಹಚ್ಚಿ ಕನ್ನಡಕ್ಕಿಂತಹ ಒಂದು ನಿಘಂಟು ಮಾಡಿಕೊಟ್ಟರಲ್ಲ ಅನ್ನೊ ಅಚ್ಚರಿ, ಮೆಚ್ಚುಗೆ ಬೆರೆತ ಯಾವುದೊ ಕಾರಣವಿಲ್ಲದ ಒಣ ಅಸಹನೆಯು ಸೇರಿಕೊಂಡು ಹೀಗೆ ಜೋಕುಗಳ ರೂಪದಲ್ಲಿ ಹೊರಹೊಮ್ಮುತ್ತಿತ್ತೊ ಏನೊ ..? ಬಹುಶಃ ನಮ್ಮವರು ಮಾಡದೆ ವಿದೇಶಿಯವರು ಮಾಡಿದರಲ್ಲ - ಅನ್ನುವ ಈರ್ಷೆಯಿಂದೊಡಗೂಡಿದ ಮೆಚ್ಚುಗೆಯ ಭಾವವು ಕಾರಣವಾಗಿದ್ದಿರಬೇಕು..

' ಗೊತ್ತಿರಲ್ಲ ಅಂತ ಕಾಣುತ್ತೆ ಬಿಡಿ ಸಾ.. ನಮ್ಮವರೆ ನಮಗೆ ಗೊತ್ತಿರಲ್ಲಾ ಇನ್ನು ವಿದೇಶದವರು, ಅದರಲ್ಲು ಜರ್ಮನಿಯವರು ಎಲ್ಲಿ ಗೊತ್ತಿರ್ತಾರೆ..? ಅವರಾರೊ ಕನ್ನಡಕ್ಕೆ ದೊಡ್ಡ ನಿಘಂಟು ಮಾಡಿಕೊಟ್ಟೊದ್ರಂತೆ ಅಂದ ಕಾಲತ್ತಿಲೆ.. ಇವರು ಅವರ ಕಟ್ಟಾ ಅಭಿಮಾನಿ ಅಂತೆ ಸಾರ್... ಅದಕ್ಕೋಸ್ಕರ ಕನ್ನಡದಲ್ಲಿ ಏನೊ ರಿಸರ್ಚ್ ಮಾಡಬೇಕೂ ಅಂತ ಏನೊ ಸಬ್ಜೆಕ್ಟ್ ತೊಗೊಂಡಿದಾರಂತೆ .. ಸಾರ್.. ನಾ ಕನ್ನಡದ ಎಕ್ಸ್ಪರ್ಟ್ ಅಲ್ಲಾ ಅಂದ್ರು ಕೇಳ್ದೆ ನನ್ನ ಜತೆಗೆಳ್ಕೊಂಡ್ ಬಂದಿದಾರೆ ಸಾರ್.. ನನಗೆ ಕನ್ನಡ ಮಾತಾಡಕ್ ಬರುತ್ತೆ ಅಂತ ಗೊತ್ತಾಗಿ...'

' ಅಯ್ಯೊ ಗುಬ್ಬಣ್ಣ.. ಕಿಟ್ಟೆಲ್ ಅಂದ್ರೆ ಗ್ರೇಟ್ ಪರ್ಸನಾಲಿಟಿ ಕಣೊ.. ಕನ್ನಡದವರೂ ಮಾಡದೆ ಇದ್ದ ಕೆಲಸಾನ ಅವರು ಮಾಡಿ ಬಿಟ್ಟಿದ್ದಾರೆ ಆ ಕಾಲದಲ್ಲೆ.. ಅವರ ನೆನಪಿಗೆ ಅಂತ ಬೆಂಗಳೂರಿನ ಒಂದು ಬೀದಿಗೆ ಅವರ ಹೆಸರನ್ನೆ ಇಟ್ಬಿಟ್ಟು ಗೌರವ ತೋರಿಸಿದಾರೆ.. ಅಂತವ್ರು ಗೊತ್ತಿಲ್ಲ ಅಂತ ಹೇಳಿ ಯಾವ ನರಕಕ್ಕೆ ಹೋಗ್ಲಿ ? ಅದು ಬಿಡು, ಇದೇನಿದು ರಿಸರ್ಚುಕಥೆ ? ನೀನ್ಯಾವ ರಿಸರ್ಚ್ ಮಾಡ್ತಿಯಪ್ಪ ಕನ್ನಡದಲ್ಲಿ? ' ಎಂದೆ ನಾನು ಕುತೂಹಲದ ದನಿಯಲ್ಲಿ...

' ಅಯ್ಯೊ ನಾನ್ಯಾವ ರಿಸರ್ಚ್ ಮಾಡ್ತೀನಿ ತಕ್ಕೊಳಿ ಸಾರ್... ಕಸ್ಟಮರ್ ಕರೆದ್ರಲ್ಲಾ ಇಲ್ಲಾ ಅನ್ನೊಕ್ಕಾಗಲ್ಲ ಅಂತ ಬಂದೆ ಅಷ್ಟೆ.. ಹಾಗು ಅವರಿಗೆ ಬಡ್ಕೊಂಡೆ ಸಾರ್ ಬೇಕಿದ್ರೆ ನಮ್ ಫ್ರೆಂಡೊಬ್ಬರು ಇದಾರೆ.. ಕನ್ನಡ, ಗಿನ್ನಡ ಅಂತ ಏನೊ ಬರ್ಕೊಂಡ್ ಹಾರಾಡ್ತಾ ಇರ್ತಾರೆ.. ಅವರನ್ನ ಕರ್ಕೊಂಡ್ ಹೋಗಿ ಸರಿಹೋಗುತ್ತೆ ಅಂತ.. ಕೇಳ್ಬೇಕಲ್ಲಾ ಅವರು..?' ಎಂದ ಗುಬ್ಬಣ್ಣ.. ನನಗು ತಿಳಿಯದ ಆ '... ಔರ್ ವೊ ಕೌನ್ ?' ಅನ್ನೊ ಕುತೂಹಲದಲ್ಲಿ.. ' ನೀನು ಹೇಳೊದೇನೊ ಸರಿ.. ಆದರೆ ಆ ಮಿಸ್ಟರಿ ಕ್ಯಾರಕ್ಟರು ಯಾರು ಅಂತ್ಲೆ ಗೊತ್ತಾಗ್ಲಿಲ್ವೆ..?' ಅಂದೆ.

' ನನಗೆ ಗೊತ್ತಿರೊ ಹಾಗೆ ಕನ್ನಡ ಬರೆಯೋರು ಇನ್ನಾರಿದಾರೆ ಸಾರ್, ನಿಮ್ಮನ್ನ ಬಿಟ್ರೆ ? ನಿಮ್ಮನ್ನೆ ತಗಲ್ಹಾಕಿ ಕಳಿಸೋಣ ಅನ್ಕೊಂಡಿದ್ದೆ.. ಆದರೆ ಆ ಪಾರ್ಟಿ ಸದ್ಯಕ್ಕೆ ಕನ್ನಡ ಮಾತಾಡೊಕ್ ಗೊತ್ತಿದ್ರೆ ಸಾಕು.. ಅದ್ರಲ್ಲೂ ನೀವು ಪರಿಚಯ ಇರೊ ಪಾರ್ಟಿ ನೀವೆ ಬನ್ನಿ ಅಂತ ಪಟ್ಟು ಹಿಡಿದ್ರು.. ವಿಧಿಯಿಲ್ದೆ ಬಂದೆ ' ಅಂದ ಗುಬ್ಬಣ್ಣ ನಿಟ್ಟುಸಿರು ಬಿಡುತ್ತಾ..

ಅವನೇನು ನನ್ನ ಕನ್ನಡ ಸೇವೆಯನ್ನ ಹೊಗಳುತ್ತಿದ್ದಾನೊ ಇಲ್ಲ ತನ್ನ ದುರದೃಷ್ಟವನ್ನು ಹಳಿದುಕೊಳ್ಳುತ್ತಲೆ ತೆಗಳುತ್ತಿದ್ದಾನೊ ಗೊತ್ತಾಗದೆ ಪಿಳಿಪಿಳಿ ಕಣ್ ಬಿಡುತ್ತಲೆ, ' ಸಿಕ್ಕಿದ್ದೆ ಛಾನ್ಸ್ ಅಂತ ಬಾರಿಸೋದೆ ಅಲ್ವಾ ? ಎಂಜಾಯ್ ದ ಟ್ರಿಪ್' ಅಂದೆ..

'ಏನು ಎಂಜಾಯೊ ಕಾಣೆ ಸಾರ್... ಸುಮ್ನೆ ಜತೆಗಿದ್ರೆ ಸಾಕು ಅಂತ ಕರ್ಕೊಂಡು ಬಂದೊರು ಈಗ ಕನ್ನಡದ ವ್ಯಾಕರಣದ ಪ್ರಶ್ನೆ ಕೇಳೋಕ್ ಶುರು ಮಾಡ್ಕೊಂಡಿದಾರೆ.. ಮೊದಲೆ ನನ್ನ ಕನ್ನಡವೆ ಅಧ್ವಾನ. ಅದರಲ್ಲಿ ವ್ಯಾಕರಣ ಅಂದ್ರಂತು ಮಾತಾಡಂಗೆ ಇಲ್ಲಾ.. ನಾನೆ ನಿಮಗೆ ಕಾಲ್ ಮಾಡಿ ಆ ಡೌಟೆಲ್ಲಾ ಕೇಳೋಣಾಂತಿದ್ದೆ.. ಅಷ್ಟಕ್ಕೆ ನೀವೆ ಪಿಂಗ್ ಮಾಡಿದ್ರಲ್ಲಾ..' ಎಂದ ಗುಬ್ಬಣ್ಣ..

ಕಾಗುಣಿತ ವ್ಯಾಕರಣದಲ್ಲೆಲ್ಲ ಗುಬ್ಬಣ್ಣ ಭಾರಿ ವೀಕು.. ಅದರಲ್ಲೂ ಕನ್ನಡ ವ್ಯಾಕರಣ ಅಂದ್ರೆ ಮಾತನಾಡೊ ಹಾಗೆ ಇಲ್ಲಾ.. ನನಗೆ ಒಳಗೊಳಗೆ ಖುಷಿಯಾಯ್ತು ಅವನು ಪರದಾಡುತ್ತಿರುವ ಸೀನನ್ನು ಊಹಿಸಿಕೊಳ್ಳುತ್ತಲೆ. ಕನ್ಸಲ್ಟಿಂಗ್ ಕೆಲಸದಲ್ಲಿ ಎಲ್ಲರನ್ನು ಏಮಾರಿಸಿ ಮಾತಾಡಿ ತಲೆ ಸವರಿದಂತಲ್ಲಾ ಕನ್ನಡ ವ್ಯಾಕರಣ... ಹೈಸ್ಕೂಲಿನಲ್ಲಿ ಗುಂಡಪ್ಪ ಮೇಸ್ಟ್ರು ಕೈಯಿನ ರೂಲು ದೊಣ್ಣೆಯಲ್ಲಿ 'ಕನ್ನಡನಾಡಲ್ಲಿ ಹುಟ್ಟಿ ಕನ್ನಡ ವ್ಯಾಕರಣಕ್ಕೆ ಅವಮಾನ ಮಾಡ್ತೀಯಾ.. ನಿನ್ನ ಬಲೀ ಹಾಕಿ ಬಿಡ್ತೀನಿ ತಾಳು..' ಅಂತ ಎಕ್ಕಾಮುಕ್ಕಾ , ಎಗ್ಗು ಸಿಗ್ಗಿಲ್ಲದೆ ಲಾತ ತಿಂದಿರೊ ರೆಕಾರ್ಡು ಇವತ್ತಿಗು ಗುಬ್ಬಣ್ಣನ ಹೆಸರಲ್ಲೆ ಇರೋದು..

ಆ ಫ್ಲಾಶ್ ಬ್ಯಾಕಿಗೆ ಹೋದರೆ ನನಗೆ ನೆನಪಾಗುತ್ತಿದ್ದುದ್ದು ಅವನ ಸಂಧಿ ಸಮಾಸಗಳ ಉವಾಚವೆ.. ಪಾರಿವಾಳ ಸಾಕುವ ಹುಚ್ಚಿನಲ್ಲಿ ಮೈಸೂರಿನ ಗಲ್ಲಿಗಲ್ಲಿ ಸಂದಿಗೊಂದಿಯೆಲ್ಲ ಸುತ್ತಿ ಅಲೆಯುತ್ತಿದ್ದವನ ಬಾಯಲ್ಲಿ ಬರುತ್ತಿದ್ದ ಹೆಸರುಗಳೆಲ್ಲ ಬರಿ ಜಾಕ್, ತಿರುವಾಲ್, ಜಂಗ್ಲೀ ಅನ್ನೊ ಕಪೋತ ನಾಮಧೇಯಗಳೆ. ಅದು ಬಿಟ್ಟರೆ ಮಿಕ್ಕೆಲ್ಲ ಗಲ್ಲಿ, ಸಂದಿಗಳ ಹೆಸರು ಆ ಪಾರಿವಾಳ ಸಾಕುವ ಅಥವಾ ಮಾರುವ ಓಣಿಗಳು ಮಾತ್ರವೆ.. ಗುಂಡಪ್ಪ ಮೇಸ್ಟ್ರು ಕೆಂಗಣ್ಣು ಬಿಟ್ಟುಕೊಂಡೆ ಒಮ್ಮೆ, 'ಕೆಂಗಣ್ಣು ಪದ ಸಮಾಸವಾಗುತ್ತೊ, ಸಂಧಿಯಾಗುತ್ತೊ ಹೇಳು' ಅಂತ ಗದರಿಸಿದಾಗ, ಅದು 'ಕೋಪ ಲೋಪ ಸಂಧಿ ಸಾರ್' ಅಂತ ಒದೆ ತಿಂದಿದ್ದ.. ಕೆಂಪಾದ + ಕಣ್ಣು = ಕೆಂಗಣ್ಣು ಸಂಧಿಯಲ್ಲ, ಸಮಾಸ ಎಂದಾಗ, ಅದು ವೆಜ್ ಸಮೋಸನೊ, ನಾನ್ ವೆಜ್ಜ್ ಸಮೋಸನೊ ಅಂತ ಕೇಳಿ ಇನ್ನು ನಾಲಕ್ಕು ಇಕ್ಕಿಸಿಕೊಂಡಿದ್ದ.

ಇದೆಲ್ಲ ಹಿನ್ನಲೆ ನೆನಪಾಗಿಯೆ ಖುಷಿಯಾಗಿದ್ದು.. ಆಗೆಲ್ಲ ಸ್ಕೂಲಲ್ಲಿ ಓತ್ಲಾ ಒಡೆದು ಹೆಂಗೊ ಜಸ್ಟ್ ಪಾಸ್ ಮಾಡಿ ಮುಂದಕ್ಕೆ ಹೋಗಿಬಿಟ್ಟರಾಯ್ತಾ? ಈಗ ಉತ್ತರ ಕೊಡಲಿ ನೋಡೋಣ ? .. ಗೊತ್ತಾಗುತ್ತೆ.. 'ಕನ್ನಡ ಕಲಿತರೆ ಮಲ್ಲಿಗೆ ಇಡ್ಲಿ, ಕಲಿಯದಿದ್ದರೆ ನೀರಿಳಿಯದ ಗಂಟಲಿಗೆ ತುರುಕಿದ ಕಡುಬು..' - ಅಂತ.....ಹೀಗೆಲ್ಲಾ ಒಳಗೊಳಗೆ ಖುಷಿ ಪಟ್ಟುಕೊಂಡೆ, ಮೇಲೆ ಮಾತ್ರ ಸಹಾನುಭೂತಿಯ ನಗೆ ತೊಟ್ಟು , ' ನೀ ಮಾಡೊಕಾಗದ್ದೇನಿರುತ್ತೊ ಗುಬ್ಬಣ್ಣ.. ಮೊದಲೆ ನೀನು ಕನ್ಸಲ್ಟೆಂಟ್ ಅಲ್ವಾ ? ಹೇಗೊ ಏಮಾರಿಸ್ತಿಯಾ ಬಿಡು' ಅಂದೆ..

' ಬೇರೆ ಕಡೆ ಆಗ್ತಿತ್ತೇನೊ ...ಆದ್ರೆ ಈ ಕೇಸಲ್ಲಿ ಆಗಲ್ಲ ಸಾರ್.. ಪೂರ ಕನ್ನಡದ ಕಾಗುಣಿತ, ವ್ಯಾಕರಣ, ಒತ್ತಕ್ಷರದ ಬೇಸಿಕ್ ಗೆ ಹೊರಟುಬಿಟ್ಟರೆ ನಾನೆಲ್ಲಿಂದ ಆನ್ಸರ ಮಾಡಲಿ..? ನನ್ನ ಕನ್ನಡ ಭಾಷಾ ಪಾಂಡಿತ್ಯ ನಿಮಗಾಗಲೆ ಗೊತ್ತು..'

' ಅಂಥಾದ್ದೇನು ಕೇಳಿಬಿಟ್ಟ್ರೊ ಗುಬ್ಬಣ್ಣ..? ಏನು ನಾಮಪದ, ಸರ್ವನಾಮ, ವಿಭಕ್ತಿ ಪ್ರತ್ಯಯಗಳನ್ನೆಲ್ಲದರ ಜತೆ ಅಲಂಕಾರಾದಿ ಲಘು ಗುರು ಎಣೆಸಾಟವನ್ನೆಲ್ಲ ಒಟ್ಟಾಗಿಸಿ ಕೇಳಿ ತಲೆ ಕೆಡಿಸ್ಬಿಟ್ರಾ?' ಎಂದೆ..

' ಅಯ್ಯೊ..ಅದೆಲ್ಲಾ ಕೇಳಿದ್ರೆ ವಾಸಿಯಿರ್ತಿತ್ತು ಸಾರ್.. ಈ ಮನುಷ್ಯ ಅದೆಲ್ಲಾ ಬಿಟ್ಟು ಒಂದು ಒತ್ತಕ್ಷರದ ಮೂಲ ಕುರಿತು ಪ್ರಶ್ನೆ ಕೇಳಿ ಎಲ್ಲಾ ದಾರಿ ತಪ್ಪಿಸಿಬಿಟ್ಟ.. ನೀವೆ ಹೇಳಿ ಸಾರ್.. ನಾವು ಹೇಗೊ ಹೆಣಗಾಡಿ ಅಷ್ಟೊ ಇಷ್ಟೊ ಕನ್ನಡ ಕಲ್ತು ಎಕ್ಸಾಮ್ ಪಾಸ್ ಮಾಡಿ ಆ ಕಡೆ ಮುಖಾನು ಹಾಕ್ದೆ ಏನೊ ಹೊಟ್ಟೆ ಪಾಡಿನ್ ಕಸುಬು ಮಾಡ್ಕೊಂಡಿರೊ ಜನ.. ನಮಗೆ ಆ ಒತ್ತಕ್ಷರದ ಲಾಜಿಕ್ಕು , ಮೂಲ ಎಲ್ಲಾ ಹೇಗೆ ಗೊತ್ತಿರುತ್ತೆ..?'

ನನಗೆ ಇನ್ನು ಸಿಚುಯೇಶನ್ ಕ್ರಿಸ್ಟಲ್ ಕ್ಲಿಯರ್ ಅಂತ ಅನಿಸಲಿಲ್ಲ.. ' ಒತ್ತಕ್ಷರದಲ್ಲಿ ಎಂತದ್ದೊ ಮೂಲ, ಮಣ್ಣು ಮಸಿ ? ಯಾವುದೊ ಒಂದಕ್ಷರಕ್ಕೆ ಅರ್ಧ ಅಕ್ಷರ ಒತ್ತು ಕೊಡೋದು ತಾನೆ ? ಅದರಲ್ಲೇನು ಗ್ರೇಟ್ ಸೈನ್ಸ್, ಆರ್ಟ್ಸ್ ಇರೋದು ?'

' ನಾನು ಹಾಗೆ ಅನ್ಕೊಂಡಿದ್ದೆ ಸಾರ್.. ಆದರೆ ಅವನು ನನ್ನೆ ಉಲ್ಟಾಪಳ್ಟ ಪ್ರಶ್ನೆ ಕೇಳಿ ಎಲ್ಲಾ ಉಡೀಸ್ ಮಾಡ್ಬಿಟ್ಟಾ ಸಾರ್.. ಸಾಲದ್ದಕ್ಕೆ ಅವನ ಪ್ರಶ್ನೆಗೆ ಉತ್ತರ ಕೊಡಕಾಗದೆ ನಮ್ಮ ಭಾಷೆಲಿ ನಮ್ ತಿಳುವಳಿಕೆ ಇಷ್ಟೇನಾ ಅಂತ ಪೂರ ನಾಚಿಕೆನೂ ಆಗೋಯ್ತು ಸಾರ್..'

ಆಗಬೇಕಾದ್ದೆ.. ಯಾರೊ ಪರದೇಶಿಗೆ ಕನ್ನಡದ ಮೇಲಿರೊ ಮೋಹ, ಜ್ಞಾನ ನಮಗಿಲ್ಲ ಅಂದ್ರೆ ಅದು ತೀರಾ ಅಬ್ಸರ್ಡ್..ಆದರು ಆ ಟಾಫಿಕ್ ಏನೂಂತ ಮೊದಲು ಕ್ಲಾರಿಫೈ ಮಾಡ್ಕೊಬೇಕು ಅಂದ್ಕೊಂಡು ..' ಏನಪ್ಪ ಅಂಥಾ ಉಲ್ಟಾಪಲ್ಟಾ ಕ್ವೆಶ್ಚನ್ ಅವನು ಕೇಳಿಬಿಟ್ಟಿದ್ದು.. ?' ಅಂದೆ.

' ಸಾರ್.. ಮೊದಲು ನಮ್ಮ ಒತ್ತಕ್ಷರದ ಕಾನ್ಸೆಪ್ಟ್ ನೋಡಿದ್ದೆ , ಸುಪರ್ ಅಂತ ಕುಣಿದಾಡಿ ಹೊಗಳಿಟ್ಟುಬಿಟ್ಟ ಆ ಮಾರಾಯ .. 'ಲಗ್+ನ' = ಲಗ್ನ, 'ರತ್+ನ' = ರತ್ನ, 'ಮುಕ್+ತಾ' = ಮುಕ್ತಾ... ಅಂತಾ ಯಾವುದೆ ಒತ್ತಕ್ಷರದ ಪದ ತಗೊಂಡ್ರು, ಮೊದಲ ಭಾಗದ ಕೊನೆಯಕ್ಷರಕ್ಕೆ ಸೇರಿಕೊಳ್ಳುವ ಅರ್ಧ ಒತ್ತಕ್ಷರ ಆ ಪದಕ್ಕೆ ಕೊನೆ ಸೌಂಡ್ ಕೊಡುತ್ತೆ.. ಅಲ್ವಾ ಸಾರ್..?'

'ಹೂಂ.. ರತ್ನ ಲಿ , 'ತ+ನ'= ತ್ನ ಆಗೊ ಹಾಗೆ..'

' ಅದೇ ಅಕ್ಷರದ ಒತ್ತಾದ್ರೆ ಇನ್ನು ಸುಲಭ ಸಾರ್.. ಉದಾಹರಣೆಗೆ 'ಕನ್ನಡ' ಪದದಲ್ಲಿ 'ನ' ಗೆ 'ನ' ಒತ್ತಕ್ಷರ ಬಂದು 'ನ್ನ' ಆಗುತ್ತಲ್ಲಾ, ಹಾಗೆ..'

'ಸರೀ..?'

'ಆದರೆ ಈ 'ರ' ಒತ್ತಕ್ಷರ ಬಂದ್ರೆ ಮಾತ್ರ ಯಾಕೆ ಈ ಲಾಜಿಕ್ಕು ವರ್ಕ್ ಆಗಲ್ಲ ಅಂತ ಅವರ ಪ್ರಶ್ನೆ..!'

ನನಗಲ್ಲೇನು ತರ್ಕ ಮಿಸ್ಸಾಗಿದೆಯೊ ಕಾಣಿಸಲಿಲ್ಲ..' ಅಲ್ವೊ ಗುಬ್ಬಣ್ಣ ..ಅಲ್ಲೇನು ಮಿಸ್ಸಿಂಗ್ ಎಲಿಮೆಂಟ್ ಕಾಣ್ತಿಲ್ಲ್ವಲ್ಲೊ.. ಉದಾಹರಣೆಗೆ ತ್ರಿಪುರ ತಗೊ.. 'ತಿ+ರಿ= ತ್ರಿ ' ಆಗುತ್ತೆ.. ಹಾಗೆ 'ಕಿ+ ರಿ= ಕ್ರಿ' ಅನ್ನೊ ಲಾಜಿಕ್ಕಲ್ಲಿ ಕ್ರೀಡೆ, ಕ್ರಿಯೆ ಅನ್ನೊ ಪದಗಳು ಹುಟ್ಟುತ್ತೆ.. ಇದರಲ್ಲೇನು ವಿಶೇಷ ಇದೆಯೊ ?'

' ವಿಶೇಷ ಏನಿದೆಯೊ ಗೊತ್ತಾಗುತ್ತೆ ಹಾಗೆಯೆ ನಿಮ್ಮ ಲಾಜಿಕ್ ನ 'ಕೀರ್ತಿ', ' ಕರ್ನಾಟಕ' 'ಅರ್ಧ' ತರದ ಪದಗಳಲ್ಲಿ ಅಪ್ಲೈ ಮಾಡಿ ವಿವರಿಸಿ ನೋಡೋಣಾ..?'

' ಹೂ ತೊಗೊ ಅದಕ್ಕೇನಂತೆ.. ಮೊದಲಿಗೆ ಕರ್ನಾಟಕವನ್ನೆ ತೊಗೊ, 'ಕರ್+ನಾಟಕ = ಕರ್ನಾಟಕ', 'ಕೀರ್+ತಿ = ಕೀರ್ತಿ', 'ಅರ್+ಧ = ಅರ್ಧ' .. ಅದರಲ್ಲೇನು ವಿಶೇಷ ? '

'ನೋಡಿದ್ರಾ ನೀವೂ ಮಿಸ್ ಮಾಡ್ಕೊಂಡ್ರಿ ನನ್ ತರಾನೆ... ಬೇರೆ ಕಡೆಯೆಲ್ಲ ಒತ್ತಕ್ಷರ ಮೂಲ ಅಕ್ಷರದ ಪಕ್ಕದಲ್ಲೆ ಬರುತ್ತೆ - 'ಗ' ಜತೆ 'ನ' ಸೇರಿ- 'ಗ್ನ' ಆದ ಹಾಗೆ.. ಆದರೆ 'ರ' ಒತ್ತಕ್ಷರದಲ್ಲಿ ಮಾತ್ರ ಈ ಫಾರ್ಮುಲ ಎಡವಟ್ಟಾಗಿಬಿಡುತ್ತೆ.. ತ್ರಿಪುರದಲ್ಲಿ ಸರಿಯಾಗಿ 'ತಿ+ರಿ' ಆಗಿ 'ತ್ರಿ' ಬಂದಿದೆ.. ಆದರೆ ಅದೆ 'ಕರ್ನಾಟಕ' ಪದದಲ್ಲಿ ಯಾಕೆ 'ರ' ಒತ್ತಕ್ಷರ 'ಕ' ಆದಮೇಲೆ ಬರದೆ, 'ನಾ' ಆದ ಮೇಲೆ ಬರುತ್ತೆ ? ಸರಿಯಾಗಿ ಬರೆದರೆ 'ಕರ್-ನಾಟಕ' ಅಥವಾ 'ಕರ್-ಣಾಟಕ' ಆಗ್ಬೇಕಲ್ವಾ ? ಹಾಗೆ ಬರೆದರೆ 'ಕರ್ನಾಟಕ' ವನ್ನ 'ಕನಾರ+ಟಕ' ಅಂತ ಬರೆದ ಹಾಗಾಗಲಿಲ್ಲವ ? ಹಾಗೆಯೆ ಅರ್ಧ ಹೋಗಿ 'ಅಧ+ರ= ಅಧ್ರ' ಅಂದ ಹಾಗೆ ಆಗ್ಲಿಲ್ಲಾ ? ಕರೆಕ್ಟಾಗಿ ಬರೆದರೆ 'ಅರ್+ಧ=ಅರ್-ಧ' ಅಂತ ತಾನೆ ಆಗ್ಬೇಕು...?' ಅದೇ ಲಾಜಿಕ್ಕಲ್ಲಿ ಕೀರ್ತಿ ಕೂಡ 'ಕೀರ್-ತಿ' ತಾನೆ ಆಗ್ಬೇಕು.. ಎಲ್ಲೆಲ್ಲಿ 'ರ' ಒತ್ತಕ್ಷರ, ಪದದ ಮಧ್ಯ ಬರುತ್ತೊ ಅಲ್ಲೆಲ್ಲಾ ಇದೆ ತರ ಇದೆಯಲ್ಲಾ ಯಾಕೆ ಅಂತ ಅವನ ಪ್ರಶ್ನೆ ಸಾರ್..'

ಯೋಚಿಸಿ ನೋಡಿದೆ.. ನನಗೂ ಉತ್ತರ ಗೊತ್ತಿರಲಿಲ್ಲ.... ಅವನ ಪ್ರಶ್ನೆಯ ಲಾಜಿಕ್ ಮಾತ್ರ ಸರಿಯೆ ಇದೆಯಲ್ಲಾ? ಅನಿಸಿತು.. ನಮಗ್ಯಾಕೆ ಇದು ಇಷ್ಟು ದಿನ ತೋಚಲೆ ಇಲ್ಲಾ ? ಸುಮ್ಮನೆ ವಿವೇಚಿಸದೆ ಒಪ್ಪಿಕೊಂಡುಬಿಟ್ಟಿದ್ದೀವ ಹೇಗೆ?

'ಹೌದಲ್ಲೊ ಗುಬ್ಬಣ್ಣ... ಈ ಲಾಜಿಕ್ಕಲ್ಲೇನೊ ಎಡವಟ್ಟಿರೊ ಹಾಗೆ ಕಾಣುತ್ತಲ್ಲೊ...?'

' ನೋಡಿದ್ರಾ ಸಾರ್..? ಕನ್ನಡ ಪಂಟರು ನಿಮಗೆ ಹೀಗನಿಸಿದ್ರೆ , ಇನ್ನು ನಮ್ಮ ಪಾಡೇನು ಹೇಳಿ?'

' ಇದೊಂದೆ ತಾನೆ ? ಯಾರಿಗಾದರು ಗೊತ್ತಿರುತ್ತೆ ಕೇಳಿ ಹೇಳ್ತೀನಿ.. ಅಂದ್ರಾಗ್ತಿತ್ತು..' ನಾನಿನ್ನು ಡಿಫೆನ್ಸಿವ್ ಷಾಟ್ ಮೂಡಲ್ಲೆ ಇದ್ದೆ..

'ಅಯ್ಯೊ ಹಾಗನ್ಕೋಬೇಡಿ ಸಾರ್.. ನಾನೂ ಹಾಗೆ ತೇಲಿಸೋಣಾ ಅಂತ ಹೊರಟ್ರೆ ಇನ್ನೊಂದು ಮೂಲ ಹಿಡಿದು ಅಳ್ಳಾಡಿಸಿಬಿಡೋದೆ - ಅದರಲ್ಲೂ 'ಓಂ' ಪದದ ಉದಾಹರಣೆ ಹಿಡ್ಕೊಂಡು?'

' ಅದ್ಯಾವುದೊ ಇನ್ನೊಂದು ಮೂಲ..?' ಫೌಂಡೇಷನ್ನೆ ಅಲುಗಾಡಿಸುತ್ತಿರೊ ಭೀತಿಯಲ್ಲಿ ನಾನು ಸ್ವಲ್ಪ ಜೋರಾದ ಗಾಬರಿ ದನಿಯಲ್ಲೆ ಕೇಳಿದೆ..

' ಸಾರ್.. ನಾವು ಸ್ವರಗಳನ್ನೆಲ್ಲ ವ್ಯಂಜನಕ್ಕೆ ಜೋಡಿಸಿ ತಾನೆ ಕಾಗುಣಿತ ಮಾಡೋದು ? 'ಕ್+ ಅ= ಕ'..., 'ಕ್+ ಆ= ಕಾ'.........ಹಾಗೆಯೆ ಸ್ವರ + ಅನುಸ್ವಾರದ ಜತೆಯ ಕಾಂಬಿನೇಷನ್ನಿಗೆ - 'ಕ್+ಅಂ=ಕಂ', 'ಕ್+ಆಃ=ಕಃ' ತನಕ?'

'ಹೌದೌದು... ಹಾಗೆ ತಾನೆ 'ಕ' ನಿಂದ ' ಕ್ಷ' ವರೆಗು ಕಾಗುಣಿತ ಬರೋದು ?'

'ಹೂಂ.. ಅದರಲ್ಲಿ 'ಓಂ' ಎಲ್ಲಿಂದ ಬಂತು ತೋರ್ಸು ಅಂದ್ರು..!'

ನಾ ಗಾಬರಿಗೆ ಬೆಚ್ಚಿ ಬಿದ್ದೆ.... 'ಓಂ' ಅನ್ನ ಒಡೆದರೆ 'ಓ + ಅಂ'. ಅಲ್ಲಿ ಅನುಸ್ವಾರ, ವ್ಯಂಜನ ಮಿಕ್ಸ್ ಇಲ್ಲಾ! ಇದೇನು ಸಂಸ್ಕೃತದಿಂದ ಬಂದಿರೊ ಅಕ್ಷರ ಅಂತ ವಿಶೇಷಾನ ? ಅಥವಾ ಇದೂ ಮಿಸ್ಸಿಂಗ್ ಲಿಂಕೊ ? ನಾವು ಕಲೀತಿರೊ ಕನ್ನಡದಲ್ಲಿ ಇದಾವುದು ಹೇಳಿಕೊಟ್ಟ ನೆನಪೆ ಇಲ್ಲವಲ್ಲ ?

' ಗುಬ್ಬಣ್ಣಾ.. ಅವರ್ಯಾರೊ.. ಮರಿ ಕಿಟ್ಟೆಲ್ಲೆ ಇರೊ ಹಾಗೆ ಕಾಣ್ತಾ ಇದೆ.. ಯಾರೊ ಅವರ ವಂಶದವರೆ ಇರಬೇಕು ವಿಚಾರಿಸಿದೆಯಾ ? '

' ಯಾರಾದ್ರೂ ಆಗ್ಲಿ ಬಿಡಿ ಸಾರ್... ಅದು ಅಷ್ಟಕ್ಕೆ ನಿಲ್ಲಲಿಲ್ಲ... ಇಂಗ್ಲಿಷಲ್ಲಿ 'ಇ+ಅಂ=ಇಂ', 'ಉಂಡ'ದಲ್ಲಿ 'ಉ+ಅಂ=ಉಂ' , 'ಐಂದ್ರಾಜಾಲ'ದಲ್ಲಿ 'ಐ+ಅಂ=ಐಂ' - ಇವ್ಯಾವ್ದು ಯಾಕೆ ಲಿಸ್ಟಲಿಲ್ಲಾ ಅಂತ ಪ್ರಶ್ನೆ ಅವರದು..'

' ಅರ್ಥಾತ್, ಸ್ವರ ಮತ್ತು ಅನುಸ್ವಾರ ಕಾಂಬಿನೇಷನ್ ಅಕ್ಷರ ಮಾತ್ರ ಯಥೇಚ್ಛವಾಗಿ ಬಳಸ್ತಾ ಇದೀವಿ.. ಆದರೆ ಯಾಕೆ ಅದೆಲ್ಲು ಕಾಣಿಸಲ್ಲ - ಅಕ್ಷರಮಾಲೆಲಾಗ್ಲಿ, ಕಾಗುಣಿತದಲ್ಲಾಗ್ಲಿ ಅಂತ ಅವರ ಕ್ವೈರಿ ಅನ್ನು..'

' ಹೂ ಸಾರ್.. ಈ ಕನ್ನಡ ಸ್ವರಗಳು 'ಅಃ' ಅಂದ್ರೆ ವಿಸರ್ಗದ ಜತೆಗು ಸೇರಿಕೊಂಡು ಇನ್ನು ಓಃ, ಇಃ, ಈಃ, ಉಃ, ಔಃ ತರದ ಹದಿನಾಲ್ಕು ಅಕ್ಷರಗಳಾಗಿರೊ ಛಾನ್ಸ್ ಇದೆ ಅಂತ ವಾದ ಬೇರೆ ಶುರು ಮಾಡಿದಾರೆ ಸಾರ್..'

'ಹಾಂ...!'

'ಸ್ವರ ಮತ್ತು ಅನುಸ್ವಾರ, ವಿಸರ್ಗದ ಕಾಂಬಿನೇಷನ್ನಿನಲ್ಲಿ ಹದಿನಾಲ್ಕು + ಹದಿನಾಲ್ಕು ಹೊಸ ಅಕ್ಷರ ಕನ್ನಡ ಕಾಗುಣಿತಕ್ಕೆ ಫಾರ್ಮಲ್ ಆಗಿ ಸೇರಿಸಬೇಕು ಅಂತ ಹೊಸ ಆರ್ಗುಮೆಂಟ್ ತೊಗೊಂಡಿದಾರೆ ಸಾರ್.. ಅದೇ ರಿಸರ್ಚ್ ಟಾಫಿಕ್ ಅಂತೆ...!'

ನನಗ್ಯಾಕೊ ಇದು ನಮ್ಮಂತಹ ಪುಡಿ ಪಂಡಿತರ ಅಳತೆಗೆ ಮೀರಿದ ಟಾಪಿಕ್ಕು ಅನಿಸಿತು..ಅದೇ ತರ್ಕದಲ್ಲಿ ನುಡಿದೆ, ' ಗುಬ್ಬಣ್ಣ.. ಇದು ನಾನು ನೀನು ಆರ್ಗ್ಯು ಮಾಡೋಕಾಗೊ ವಿಷಯ ಅಲ್ಲ... ನಾ ಒಂದು ಐಡಿಯಾ ಕೊಡ್ತೀನಿ ಕೇಳು.. ಎಲ್ಲ ಡೀಟೈಲ್ಸ್ ತಗೊಂಡ್ ನೀನು ಹೊರಡು.. ನಾನು ಮೈಸೂರಲ್ಲಿರೊ ಒಬ್ಬ ಕನ್ನಡ ವಿದ್ವಾಂಸರ ಅಡ್ರೆಸ್ ಕೊಡ್ತೀನಿ.. ಅವರಿಬ್ಬರಿಗು ಕನೆಕ್ಷನ್ ಮಾಡಿಸಿಬಿಡು.. ಅವರವರಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಲಿ..'

' ನಂಗೂ ಅದೇ ಸರಿ ಅನ್ಸುತ್ತೆ ಸಾರ್.. ಆದ್ರೆ ನಂಗೂ ಡೌಟು ಯಾಕೆ 'ರ' ಒತ್ತು ಹಾಗೆ ಅಂತ... ಹಾಗೆ 'ಓಂ' ಅಕ್ಷರದ ವಿಚಾರನೂ....'

'ಗುಬ್ಬಣ್ಣಾ.....?'

' ಗೊತ್ತಾಯ್ತು ಸಾರ್... ಆಳ ಗೊತ್ತಿಲ್ಲದ ಬಾವಿಗೆ ಇಳಿಯೊ ಅಡ್ವೆಂಚರ್ ಬೇಡ ಅಂತೀರಾ..'

' ಗುಡ್... ಅವ್ರೆಲ್ಲ ರಿಸರ್ಚ್ ಮಾಡಿ ಪೇಪರ ಪಬ್ಲಿಷ್ ಮಾಡ್ಲಿ.. ಹೇಗು ಥ್ಯಾಂಕ್ಯೂ ಲಿಸ್ಟಲ್ಲಿ ನಿನ್ನ ಹೆಸರೂ ಇರುತ್ತೆ... ಅವರ ಜತೆ ಈಗ ಹೆಣಗೋದು ಕಷ್ಟ ಅದರ ಬದಲು ಅವರಿಗೆ ನಾ ಹೇಳಿದ ಕನೆಕ್ಷನ್ ಕೊಡಿಸಿಬಿಡು..'

' ಆಯ್ತು ಸಾರ್...ಆದ್ರೆ ಇದು ಅಷ್ಟಕ್ಕೂ ನಿಲ್ಲೊ ಹಾಗೆ ಕಾಣ್ಲಿಲ್ಲಾ ಸಾರ್...'

' ಯಾಕೆ ? ಇನ್ನು ಏನಾದರು ಹೊಸ ಬಾಂಬ್ ಹಾಕಿದ್ರಾ ನಿಮ್ ಕಸ್ಟಮರು..?'

' ಹೊಸದೂಂತ ಅಲ್ಲ... ಈ ಅನುಸ್ವಾರ, ವಿಸರ್ಗದ ಕಾಂಬಿನೇಷನ್ ಬರಿ ಅ ಆ ಇ ಈ ಸ್ವರಗಳ ಜತೆಮಾತ್ರ ಅಲ್ಲಾ, ವ್ಯಂಜನಗಳ ಜತೆಗು ಇದೆ.. ಅರ್ಥಾತ್ ಪ್ರತಿ ಕಾಗುಣಿತಾಕ್ಷರದ ಜತೆಗು ಇದೆ, ಆದರೆ ಅದನ್ನು ಕೂಡಾ ನಾವು ಸ್ಪಷ್ಟವಾಗಿ ತೋರ್ಸಿಲ್ಲಾ ಎಲ್ಲೂವೆ ಅಂತ ಆರ್ಗ್ಯುಮೆಂಟ್ ಸಾರ್..'

' ಕಂ, ಕಃ, ಗಂ, ಗಃ, ಚಂ, ಚಃ ಅಂತ ಅದನ್ನ ಆಗಲೆ ತೋರಿಸಿದಿವಲ್ಲಯ್ಯ ? ಪ್ರತಿ ಕಾಗುಣಿತದ ಕೊನೆ ಎರಡು ಅಕ್ಷರ ಅವೆ ಅಲ್ವಾ ?' ನಾನು ತುಸು ರೇಗಿದ ದನಿಯಲ್ಲೆ ಕೂಗಿದೆ..

' ನಾನು ಡಿಟೊ ಇದೆ ಟೋನಲ್ಲಿ ಹೀಗೆ ಹೇಳಿದೆ ಸಾರ್.. ಅವರು ಕುಂಡ, ಗುಂಡ, ಕಾಂಡ, ಚಾಂಡಾಲ, ಸುಂಕ, ಚುಂಬನ..... ಹೀಗೆ ಪದಗಳ ಮೇಲೆ ಪದ ತೋರಿಸಿ ಅಲ್ಲೆಲ್ಲ ಕುಂ, ಗುಂ, ಕಾಂ, ಚಾಂ, ಸುಂ, ಚುಂ ತರದ ಕಾಗುಣಿತಾಕ್ಷರಗಳೆಲ್ಲ ಅನುಸ್ವಾರದ ಜತೆ ಸೇರಿ ಹೊಸ ಅಕ್ಷರವಾಗಿರೋದನ್ನ ವಿವರಿಸಿ - ಎಲ್ಲಾಯ್ಯಾ ಅವೆಲ್ಲ ಅಕ್ಷರಗಳು ? ಲಿಸ್ಟಲ್ಲೆ ಇಲ್ಲಾ ' ಅಂತ ಜಾಡಿಸಿಬಿಟ್ರು..'

ಭಗವಂತ..! ಈ ಲೆಕ್ಕದಲ್ಲಿ ಹೋದರೆ ಇರೊ 34 ವ್ಯಂಜನಗಳ ಮಿಕ್ಕುಳಿದ ಎಲ್ಲಾ 14 ಕಾಗುಣಿತಾಕ್ಷರಕ್ಕು ಪಕ್ಕದಲ್ಲೊಂದು ಸೊನ್ನೆ ಸುತ್ತುವುದು ಸಾಧ್ಯ ಅಂತಾಯ್ತು.. ಅದೇ ಲಾಜಿಕ್ಕನ್ನ ವಿಸರ್ಗಕ್ಕೂ ವಿಸ್ತರಿಸಿಬಿಟ್ರೆ 34 X 14 ಕಾಗುಣಿತಾಕ್ಷರದ ಜತೆಗೆ ಪಕ್ಕ ಎರಡು ಸೊನ್ನೆ ಹಾಕೋದು ಸಾಧ್ಯ ಅನ್ನೊ ವಾದಾನು ಶುರುವಾಗುತ್ತೆ... ಓಹ್ ಮೈ ಗಾಡ್...

ಅಲ್ಲಿಗೆ ಹದಿನಾಲ್ಕು + ಹದಿನಾಲ್ಕು = ಇಪ್ಪತ್ತೆಂಟು ಹೊಸ ಅಕ್ಷರ ಮಾತ್ರ ಅಲ್ಲ.. ಇನ್ನು ಮುವತ್ತನಾಲ್ಕು ವ್ಯಂಜನಾಕ್ಷರ ಇಂಟು ಹದಿನಾಲ್ಕು = ನಾನೂರ ಎಪ್ಪತ್ತಾರು ಅಕ್ಷರಗಳ ಲೆಕ್ಕಾ..! ಅದಕ್ಕೆ ಮೊದಲಿನ ಇಪ್ಪತ್ತೆಂಟು ಸೇರಿಬಿಟ್ಟರೆ ಒಟ್ಟು ಐನೂರ ನಾಲ್ಕು ಅಕ್ಷರಗಳು... ಅದರಲ್ಲಿ ಅನುಸ್ವಾರ ಮಾತ್ರ ಲೆಕ್ಕ ಇಟ್ಟು ವಿಸರ್ಗಕ್ಕೆ ಸೋಡಾ ಚೀಟಿ ಕೊಟ್ಟರು... ಇನ್ನು ಅನುಸ್ವಾರದ ಆ ನಾನೂರ ಎಪ್ಪತ್ತಾರು ಅಕ್ಷರಗಳನ್ನು ಸೇರಿಸಿದರೆ - ಐನೂರನಾಲ್ಕು ಪ್ಲಸ್ ನಾನೂರ ಎಪ್ಪತ್ತಾರು = ಒಂಭೈನೂರ ಎಂಭತ್ತು ಅಕ್ಷರಗಳಾಗಿ ಹೋಗುತ್ತೆ.. ಶಿವ , ಶಿವಾ!!

'ಗುಬ್ಬಣ್ಣ ನಾ ಆಗ್ಲೆ ಹೇಳಿದ ಹಾಗೆ ಮೊದಲು ಆ ವಿದ್ವಾಂಸರ ಕೈಗೆ ಒಪ್ಪಿಸಿ ಕೈ ತೊಳ್ಕೊ.. ನಾವಿನ್ನು ಡೀಪ್ ಹೋದರೆ ನಮಗೆ ಎಲಿಮೆಂಟರಿ ನಾಲೆಡ್ಜು ಇಲ್ವೇನೊ ಅಂತ ಅನುಮಾನ ಬರೋಕೆ ಶುರುವಾಗಿಬಿಡುತ್ತೆ... ವಿ ಡೊಂಟ್ ನೋ ವಾಟ್ ವಿ ಡೊಂಟ್ ನೋ..!'
ಎಂದು ಗಾಬರಿಯಲ್ಲೆ ಉಸುರುತ್ತ, ಹಾಗೆಯೆ ಮಾತಿನ ಟ್ರಾಕ್ ಬದಲಿಸಲು 'ಹೇಗೂ ಹೋಗೋದು ಹೋಗಿದೀಯಾ... ಹಾಗೆ ಬರ್ತಾ ಅಣ್ಣಾವ್ರು ಹಾಡಿರೊ ಮಂಕುತಿಮ್ಮನ ಕಗ್ಗ ಸಿಡಿ ತೊಗೊಂಡ್ ಬಾ.. ಕೂತ್ಕೊಂಡು ಒಟ್ಟಿಗೆ ಕೇಳೋಣ...' ಅಂದೆ.

'ಅಣ್ಣಾವ್ರೂ ಕಗ್ಗ ಹಾಡಿದಾರಾ ?!' ಅಚ್ಚರಿ , ಗಾಬರಿ ಎರಡು ಬೆರೆಸಿ ಕೇಳಿದ ಗುಬ್ಬಣ್ಣಾ..

' ಮತ್ತೆ ? ತುಂಬಾ ಜನಕ್ಕೆ ಗೊತ್ತಿಲ್ಲ ಅಷ್ಟೆ.. ಹುಡುಕಿ ತೊಗೊಂಡು ಬಾ ..' ಎನ್ನುತ್ತಿದ್ದ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ದನಿ ನಡುವೆಯೆ ತೂರಿ ಬಂತು..' ಸಾರ್.. ಸ್ಮಾರ್ಟ್ ಪೋನ್ ಬ್ಯಾಟರಿ ಔಟ್.. ಪವರ್ ಬ್ಯಾಂಕೂ ಡೆಡ್.. ಈಗ ಲೈನ್ ಕಟ್ ಆಗುತ್ತೆ ...'

ಹಾಗೆನ್ನುತ್ತಿದ್ದ ಹಾಗೆಯೆ ಲೈನ್ ಕಟ್ಟಾಯ್ತು.. ಹೇಗೊ ಬೋರಾದಾಗ ಗುಬ್ಬಣ್ಣ ಮಾತಿಗೆ ಸಿಕ್ಕನಲ್ಲ ಎಂದು ನಿರಾಳವಾಗಿ, ನಾನು ಅಕ್ಷರಮಾಲೆಯ ಇ-ಪುಸ್ತಕವೇನಾದರು ಸಿಗುತ್ತಾ ನೋಡೋಣ ಎಂದು ಗೂಗಲಿಸತೊಡಗಿದೆ..

- ನಾಗೇಶ ಮೈಸೂರು

Comments

Submitted by ಗಣೇಶ Sun, 02/07/2016 - 23:19

ನಾಗೇಶರೆ, ಗುಬ್ಬಣ್ಣ ನೀವು ಸೇರಿ ವ್ಯಾಕರಣವೆಲ್ಲಾ ಅಡಿಮೇಲು ಮಾಡಿಬಿಟ್ಟಿರಿ. :)
>>ತ್ರಿಪುರದಲ್ಲಿ ಸರಿಯಾಗಿ 'ತಿ+ರಿ' ಆಗಿ 'ತ್ರಿ' ಬಂದಿದೆ.. ಆದರೆ ಅದೆ 'ಕರ್ನಾಟಕ' ಪದದಲ್ಲಿ ಯಾಕೆ 'ರ' ಒತ್ತಕ್ಷರ 'ಕ' ಆದಮೇಲೆ ಬರದೆ, 'ನಾ' ಆದ ಮೇಲೆ ಬರುತ್ತೆ ?
-ನಾನೂ ಚಿಕ್ಕವನಿದ್ದಾಗ ಆಶೀರ್ವಾದ ಬರೆಯುವಲ್ಲಿ ಆರ್ಶೀವಾದ ಬರೆಯುತ್ತಿದ್ದು, ಅದೇ ಸರಿ ಎಂದು ವಾದಮಾಡುತ್ತಿದ್ದೆ.:)

ಗಣೇಶ್ ಜಿ ನಮಸ್ಕಾರ ಮತ್ತು ಧನ್ಯವಾದಗಳು.. ಇದ್ದಕ್ಕಿದ್ದಂತೆ ಗಮನಿಸಿದ ಈ 'ರ'ಕಾರದ ಗೊಂದಲದ ಹಿಂದೆ ಏನೊ ಸಕಾರಣ ತರ್ಕವಿರಬಹುದು ಎನಿಸಿದರು, ಅದೇನೆಂದು ಇಬ್ಬರಿಗು ಗೊತ್ತಿಲ್ಲ. ಜತೆಗೆ ನೀವೆ ಗಮನಿಸಿದಂತೆ ಅದು ಎಲ್ಲಾ ಕಡೆ ಒಂದೆ ರೀತಿಯಲ್ಲು ಬಳಕೆಯಾಗಿಲ್ಲ. ಬಹುಶಃ ಯಾರಾದರು ಗೊತ್ತಿರುವ ಸಂಪದಿಗರು ಅದರ ಹಿನ್ನಲೆಗೆ ಬೆಳಕು ಚೆಲ್ಲಬಹುದೆಂದುಕೊಂಡು ಈ ಹರಟೆಯಾಗಿಸಿದೆ. ಹಾಗೆಯೆ ನಾವು ಯಥೇಚ್ಛವಾಗಿ ಬಳಸುವ ಅನುಸ್ವಾರ + ವಿಸರ್ಗದ ಕಾಂಬಿನೇಷನ್ ಬಗ್ಗೆ ಕಲಿಯುವಾಗ ಹೆಚ್ಚು ಚರ್ಚೆಯೆ ಆಗುವುದಿಲ್ಲ - ಅಂ,ಅಃ,ಕಂ,ಕಃ,ಜಂ,ಜಃ ತರದ ಕಾಗುಣಿತದ ಕೊನೆಗೆ ಬರುವೆರಡು ಜೋಡಿಯಕ್ಷರ ಬಿಟ್ಟರೆ. ಬಹುಶಃ ಕಲಿಸಬೇಕಾದ ಅಕ್ಷರಗಳ ಸಂಖ್ಯೆ ತೀರಾ ಹೆಚ್ಚಾಗುವುದೆಂದಿರಬೇಕು; ಆದರೆ ಅದು ಈ ಹರಟೆಗೊಂದು ವಸ್ತುವಂತೂ ಆಯ್ತು :-)

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು..! ಯಾವುದಕ್ಕು ರಿಸ್ಕು ತೆಗೆದುಕೊಳ್ಳದಿರುವುದೆ ಒಳ್ಳೆಯದು.. ವರ್ ಬದಲಿಗೆ ವಾರ್ (war) ಅಂತ ಓದಿಕೊಂಡು , ಕಾಲು ಕೆದರಿಕೊಂಡು ಜಗಳಕ್ಕೆ ಬರುವಂತಾದರೆ ಕಷ್ಟ!