ಲಘು ಹರಟೆ: ಗುಬ್ಬಣ್ಣನ "ಕತ್ತಲೆ ಭಾಗ್ಯ"...

ಲಘು ಹರಟೆ: ಗುಬ್ಬಣ್ಣನ "ಕತ್ತಲೆ ಭಾಗ್ಯ"...

ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನ ಬೇಗೆಗೆ ಬೆವರಿಳಿಯದಂತೆ 'ಏಸಿ' ಹಾಕಿಕೊಂಡು, ಖಿನ್ನ ವದನನಾಗಿ ಕಣ್ಣೆದುರಿನ ಕಂಪ್ಯೂಟರು ಪರದೆಯನ್ನೆ ನೋಡುತ್ತ ಕುಳಿತಿದ್ದಂತೆ ಏಕಾಏಕಿ ಗುಬ್ಬಣ್ಣನ ಆಗಮನವಾಯ್ತು ಅವನದೆ ಶೈಲಿಯ ವಂದನೆಗಳೊಂದಿಗೆ...

" ಸಾರ್ ನಡು ಹಗಲಿನ ಕಡು ವಂದನೆಗಳು..." 

ಗುಬ್ಬಣ್ಣನಿಗೆ ಇದ್ದಕ್ಕಿದ್ದಂತೆ, ಅದರಲ್ಲು ನವೆಂಬರಿನ ಆಸುಪಾಸಿನಲ್ಲಿ ತಟ್ಟನೆ ಕನ್ನಡ ಪ್ರೇಮ ಜಾಗೃತವಾಗಿಬಿಟ್ಟಾಗ ಉದುರುವ ಕನ್ನಡಾಮೃತಧಾರೆಯ ಪರಿ ಹೀಗೆ... ಅಪರಿಚಿತ ತರವಾದರು ಅಪರೂಪವೇನಲ್ಲ.. ಆದರೂ ಸಾರ್ ಅನ್ನುವುದು ಹೇಗೊ ನುಸುಳಿಕೊಂಡುಬಿಟ್ಟಿರುತ್ತದೆ..ಬಹುಶಃ ಅದು ಕನ್ನಡವೆ ಅಂದುಕೊಂಡುಬಿಟ್ಟಿರಬೇಕು..

" ಬಾರೊ ಗೂಬಣ್ಣ.. ಏನೊ ಇಷ್ಟು ದೂರ, ಅದೂ ಮಟ ಮಟ ಮಧ್ಯಾಹ್ನವೆ..?" 

'ವಕ್ಕರಿಸಿಕೊಂಡೆ' ಎಂದು ನಾಲಿಗೆ ತುದಿವರೆಗು ಬಂದ ಕಡೆಯ ಪದವನ್ನು ಹಾಗೆ ನುಂಗಿಕೊಂಡೆ ಕೇಳಿದ್ದೆ. ಆಗ ನಾನಿರುವ ಮೂಡಿನಲ್ಲಿ ಕೆಟ್ಟ ಪದಗಳು ಹೊರಡದಿದ್ದರು ದನಿಯಲ್ಲಿನ ಒರಟುತನವನ್ನು ಮುಚ್ಚಿಡಲಾದೀತೆ ? ಚಾಣಾಕ್ಷ ಗುಬ್ಬಣ್ಣ ಅದನ್ನು ಹಿಡಿದು ಹಾಕುವುದರಲ್ಲಿ ಜಾಣ..

"ಏನ್ ಸಾರ್..ಪ್ರೀತಿ ತುಂಬಾ ಜಾಸ್ತಿಯಾಗಿರೊ ಆಗಿದೆ.. ಗೂಬಣ್ಣ ಅಂತ ಬೈತಾ ಇದೀರಾ ? 'ಯಾಕ್ ಬಂತೊ ಪೀಡೆ' ಅನ್ನೊ ಹಂಗಿದೆ ನಿಮ್ ಮಾತಿನ ವರಸೆ.. ಎಲ್ಲೊ ಏನೊ ಎಡವಟ್ಟಾಗಿರಬೇಕು.. ಯಾರಾದ್ರೂ 'ಕಟು ಟೀಕೆ' ಮಾಡಿ ಪ್ರತಿಕ್ರಿಯೆ ಹಾಕಿಬಿಟ್ಟಿದ್ದಾರಾ ಹೇಗೆ ?" ಎಂದ ನನ್ನ ಕಂಪ್ಯೂಟರ ಪರದೆಯ ಮೇಲಿದ್ದ ದೃಷ್ಟಿ ಗಮನಿಸಿ, ಅಲ್ಲೆ ಏನೊ ಹೆಚ್ಚು ಕಡಿಮೆ ಆಗಿರಬಹುದೆಂದು ಊಹಿಸುತ್ತ..

ಮಾತು ನನ್ನ ಬರಹದತ್ತ ತಿರುಗುತ್ತಿದ್ದಂತೆ ನಾನೂ ಏಕಾಏಕಿ ಮೆತ್ತಗಾಗಿಬಿಟ್ಟೆ - ಆ ಕಾಣದ ದೇಶದಲ್ಲಿ ಗೋಳು ಹೇಳಿಕೊಳ್ಳಲು ಗುಬ್ಬಣ್ಣನಲ್ಲದೆ ಮತ್ಯಾರು ಗತಿ - ಅದರಲ್ಲು ಬರೆಯುವ ವಿಷಯದಲ್ಲಿ ? ಹಾಗೆ ಗುಬ್ಬಣ್ಣ ಕೇಳುತ್ತಿದ್ದಂತೆ , ದುಃಖದಲ್ಲಿದ್ದಾಗ ಯಾರಾದರು ಅನುಕಂಪ ತೋರಿದರೆ ಉಂಟಾಗುವ 'ಎದೆ ತುಂಬಿದ ಭಾವ' ಆ ಹೊತ್ತಲ್ಲು ಪಲುಕಿಸಿ ವೇದನೆಯೆಲ್ಲ ಮಡುವಾದಂತೆ ಮುಖ ಮುದುಡಿಸಿಕೊಂಡೆ ನುಡಿದೆ ಅಳುವ ದನಿಯಲ್ಲಿ..

" ಏನೂಂತ ಹೇಳಲೊ ಗುಬ್ಬಣ್ಣ.. ಹತ್ತು ದಿನ ಹಗಲೂ ರಾತ್ರಿ ಕಷ್ಟ ಪಟ್ಟು ತಿಣುಕಾಡಿ ಈ ಒಂದು ಲೇಖನ ಬರೆದು ಪ್ರಕಟಿಸಿ ಒಂದು ವಾರವಾಯ್ತು.. ಇದುವರೆಗು ಒಬ್ಬನೆ ಒಬ್ಬನೂ ಪ್ರತಿಕ್ರಿಯೆ ಬರೆಯಲಿಲ್ಲ, 'ಭೇಷ್' ಅನ್ನಲಿಲ್ಲ.. ಹಾಳಾಗಲಿ ಓದ್ತಾನಾದ್ರೂ ಇದಾರ ಅಂತ ನೋಡಿದರೆ, ಐದತ್ತು ಜನ ಬಿಟ್ರೆ ಯಾರು ನೋಡ್ದಂಗೆ ಕಾಣ್ಲಿಲ್ಲಾ.. ತುಂಬಾ ಕಷ್ಟ ಪಟ್ ಬರ್ದಿದ್ದೆ ಕಣೊ ಗೂಬಣ್ಣ.."

ನನ್ನ ಮಾತು ಕೇಳುತ್ತಿದ್ದಂತೆ ಪಕ ಪಕನೆ ಬಿದ್ದು ಬಿದ್ದು ನಗತೊಡಗಿದ ಗುಬ್ಬಣ್ಣ.. ನನಗೆ ಯಾಕೆ ನಗುತ್ತಿರುವನೆಂದು ಅರ್ಥವಾಗಲಿಲ್ಲ.. ಜತೆಗೆ ನಾನು ಸಂಕಟದಲ್ಲಿದ್ದಾಗ ನಗುತ್ತಿರುವನಲ್ಲ ಎನ್ನುವ ಕೋಪವೂ ಬಂತು..

" ಗುಬ್ಬಣ್ಣ ಸ್ಟಾಪ್ ಇಟ್.. ಇಲ್ಲಿ ನಾನು ಒದ್ದಾಡ್ತಾ ಇದ್ರೆ ನಿನಗೆ ತಮಾಷೆನಾ.. ನಾನು ಬರೆದಿದ್ದನ್ನ ನೀನೂ ಲೇವಡಿ ಮಾಡ್ತೀಯಾ ?" ಎಂದೆ ಸ್ವಲ್ಪ ತೀಕ್ಷ್ಣ ದನಿಯಲ್ಲಿ.

" ಸಾರ್.. ಬೇಜಾರ್ ಮಾಡ್ಕೋಬೇಡಿ.. ನಾನು ನಗ್ತಾ ಇರೋದು ಅದಕ್ಕಲ್ಲಾ.. ನಿಮ್ಮ ಅಜ್ಞಾನಕ್ಕೆ.."

" ಅಜ್ಞಾನನ..? ಏನು ಅಜ್ಞಾನ ನೀನನ್ನೋದು ?"

" ಸಾರ್.. ನೀವು ನಿಮ್ಮ ಪ್ರಪಂಚದಲ್ಲಿ ಮುಳುಗ್ಹೋಗಿ ಸುತ್ತಮುತ್ತ ಏನಾಗ್ತಿದೆ ಅನ್ನೋದೆ ಗಮನಿಸ್ತಿಲ್ಲಾ.. ಅದರಲ್ಲು ಈ ದೇಶದಲ್ಲಿ ತಂಪಾಗಿ ಕೂತು ಅಭ್ಯಾಸವಾಗಿ, ಎಲ್ಲಾ ಕಡೆಯೂ ಹಾಗೆ ಇದೆ ಅನ್ಕೊಂಬಿಟ್ಟಿರ್ತೀರಾ"

"ಅಂದರೆ..?" ನನಗಿನ್ನು ಅವನ ಮಾತಿನ ಜಾಡು ಅರಿವಾಗದೆ ಪ್ರಶ್ನಿಸಿದೆ..

" ಸರಿ ಸಾರ್.. ನಿಮಗೆ ಸ್ವಲ್ಪ ಜ್ಞಾನೋದಯ ಮಾಡಿಸೇಬಿಡೋಣಾ.. ನೀವು ಬರ್ದಿದ್ದೆಲ್ಲ ಓದೋವ್ರು, ಜಾಸ್ತಿ ಎಲ್ಲಿ ಸಾರ್ ಇರೋದು..?" ಎಂದ

ಗೊಂದಲದಲ್ಲೆ ಅವನ ಮಾತಿನ ಹಿನ್ನಲೆ ಏನಿರಬಹುದೆಂದು ಯೋಚಿಸುತ್ತ, " ಕನ್ನಡಾಂದ್ಮೇಲೆ ಇನ್ಯಾರು ಓದ್ತಾರೆ ಗುಬ್ಬಣ್ಣ? ನಮ್ಮ ಕರ್ನಾಟಕದ ಕನ್ನಡ ಜನ ತಾನೆ ಓದ್ಬೇಕು ?.. ಏನೊ 'ಇಂಟರ್ನೆಟ್ ಭಾಗ್ಯ' ಇರೋದ್ರಿಂದ ಪ್ರಪಂಚದಲ್ಲಿರೊ ಕನ್ನಡ ಬರೊ ಕನ್ನಡಿಗರು ಒಂದಷ್ಟು ಜನ ಓದ್ಬೋದು ಅಂದ್ಕೊಂಡಿದೀನಿ.." ಎಂದೆ. 

ಆನ್ ಲೈನಲ್ಲಿ ನೋಡಿದವರೆಷ್ಟು ಅಂತ ಲೆಕ್ಕ ಸಿಗುತ್ತೆ ಹೊರತು, ಮಿಕ್ಕಿದ ಜಾತಕ ಸಿಗೋದಿಲ್ಲ - ಏನಾದರು ಪ್ರತಿಕ್ರಿಯೆ ಹಾಕಿದ ಹೊರತು. ಅದರಲ್ಲು ನೋಡಿದಾರೆ ಅಂತ ಗಟ್ಟಿಯೆ ಹೊರತು ಓದಿದ್ದಾರೆ ಅನ್ನೊ ಗ್ಯಾರಂಟಿ ಇರೋದಿಲ್ಲ..

" ನಿಜ ಸಾರ್.. ಅದನ್ನ ಹೆಚ್ಚಾಗಿ ಓದ್ಬೇಕಾದವ್ರೂ ನಮ್ಮೂರಿನ ಕನ್ನಡ ಜನರೆ.. ಹೊರಗಿಂದ ಓದೋರಿದ್ರು ಅವರ ಸಂಖ್ಯೆ ತುಂಬಾ ಕಡಿಮೆ - ಈಗ ನೀವ್ ಬರ್ದಿದ್ದನ್ನ ಓದಿರೋ ಜನ ಬರಿ ಹೊರಗಿನೋರು ಮಾತ್ರ , ನಮ್ಮೂರವರಲ್ಲ.." ಎಂದ

ಘಂಟೆ ಹೊಡೆದಂತೆ ಖಚಿತವಾದ ಖಡಾಖಂಡಿತ ದನಿಯಲ್ಲಿ ಹೇಳಿದ ಗುಬ್ಬಣ್ಣನ ಮಾತಿಗೆ ನನಗೆ ಅಚ್ಚರಿಯಾಗಿತ್ತು, 'ಅದೇನು ಇಷ್ಟು ಗ್ಯಾರಂಟಿಯಾಗಿ ಹೇಳುತ್ತಿರುವನಲ್ಲಾ?' ಅಂತ. 

"ಅಲ್ವೊ ಗುಬ್ಬಣ್ಣ.. ಇಲ್ಲಿ ಪ್ರತಿಕ್ರಿಯೆ ಹಾಕದ ಹೊರತು ಯಾರು ಓದಿದ್ರು, ಬಿಟ್ಟರು ಅನ್ನೋದೆ ಗೊತ್ತಾಗಲ್ಲ.. ನಿನಗೆ ಹೆಂಗೆ ಗೊತ್ತಾಗಿಬಿಡುತ್ತೆ, ಬರಿ ಹೊರದೇಶದಲ್ಲಿರೋರು ಮಾತ್ರ ಓದಿದ್ದು ಅಂತ..?"

" ಅದಕ್ಕೆ ಸಾರ್ ಹೇಳಿದ್ದು ನಿಮ್ಮ 'ಕರೆಂಟ್ ಜನರಲ್ ನಾಲೆಡ್ಜ್' ಕಮ್ಮಿ ಅಂತ.. ಎಲ್ಲಾ ' ಕತ್ತಲೆ ಭಾಗ್ಯ'ದ ಫಲ ಸಾರ್.. ಕತ್ತಲೆ ಭಾಗ್ಯ.."

ನಾನೂ ತಾಳಿ ಭಾಗ್ಯ, ಕೋಳಿ ಭಾಗ್ಯ, ಅನ್ನದ ಭಾಗ್ಯ ಎಂದೆಲ್ಲಾ ತರತರದ ಸ್ಕೀಮುಗಳ ಕುರಿತು ವದಂತಿಗಳನ್ನು ಕೇಳಿದ್ದೇನೆ ಹೊರತು ಈ ಕತ್ತಲೆ ಭಾಗ್ಯ ನನಗೂ ಹೊಸತು.. ಬಹುಶಃ ಕತ್ತಲಿದ್ದ ಮನೆಗಳಿಗೆ ಕರೆಂಟ್ ಹಾಕಿಸಿಕೊಟ್ಟು ಬೆಳಕಾಗಿಸೊ ಸ್ಕೀಮ್ ಇರಬೇಕೆಂದುಕೊಂಡು, " ಸರ್ಕಾರ ನೂರೆಂಟು ಭಾಗ್ಯದ ಸ್ಕೀಮು ತರ್ತಾಲೆ ಇರುತ್ತೆ ಬಿಡೊ.. ಕತ್ತಲೆ ಭಾಗ್ಯ ಅಂದ್ಮೇಲೆ ಕರೆಂಟಿಲ್ದಿರೊ ಹಳ್ಳಿ ಮನೆಗಳಿಗೆಲ್ಲ ಬೆಳಕು ಕೊಡೊ ಯೋಜನೆ ಇರ್ಬೇಕು.. ಅದಕ್ಕು ನಾನು ಬರೆದಿದ್ದು ಓದೋದಕ್ಕು ಏನಯ್ಯಾ ಕನೆಕ್ಷನ್ನು ?" ಎಂದೆ 'ಲಾ' ಪಾಯಿಂಟು ಹಾಕುತ್ತ. 

"ಅದೇ ಸಾರ್.. ನಾನು ಹೇಳ್ತಾ ಇರೋ ಮಿಸ್ಸಿಂಗ್ ಲಿಂಕು.. ನಿಮಗೆ ಜನರಲ್ ನಾಲೆಡ್ಜ್ ಕಡಿಮೆ ಅಂದಿದ್ದು ಇದಕ್ಕೇನೆ.. ಮೊದಲಿಗೆ 'ಕತ್ತಲೆ ಭಾಗ್ಯ' ಸರಕಾರದ ಅಧಿಕೃತ ಸ್ಕೀಮ್ ಅಲ್ಲಾ.."

" ಹಾಂ.." ಎಂದೆ ತಲೆ ಕೆರೆದುಕೊಳ್ಳುತ್ತ..  ಊರಲ್ಲಿ ಅದರಲ್ಲು ಸರಕಾರಿ ಮಟ್ಟದಲ್ಲಿ ಏನಾಗುತ್ತಿದೆ ಎಂದು ನಾನು ತಿಳಿದುಕೊಂಡಿರೋದು ತೀರಾ ಕಡಿಮೆಯೆ. ಗುಬ್ಬಣ್ಣನಿಗೆ ಆ ಪಾಯಿಂಟಲ್ಲಿ ಪುಲ್ ಮಾರ್ಕ್ಸ್.. ನನ್ನ ಸರಿಯಾಗಿ, ಕರಾರುವಾಕ್ಕಾಗಿ ಅಸೆಸ್ ಮಾಡಿದ್ದಾನೆ..

" ಇನ್ನು ಎರಡನೆಯದಾಗಿ ಅದರರ್ಥ ಬೆಳಕು ಕೊಡೋದು ಅಂತಲ್ಲ, ಕತ್ತಲ್ಲಲ್ಲಿಡೋದು ಅಂತ.."

ಈ ಎರಡನೆ ಬಾಂಬಿಗೆ ನಾನು ಕೂತಲ್ಲೆ ಅದುರಿ ಬಿದ್ದಿದ್ದೆ..."ವಾಟ್.?" ಎಂದು 'ಹೆಚ್ಚು ಕಡಿಮೆ' ಕಿರುಚುವ ದನಿಯಲ್ಲೆ. ಹಾಗೆ ಹಿಂದೆಯೆ ಸಾವರಿಸಿಕೊಂಡು, " ಕತ್ತಲೆ ಭಾಗ್ಯವೊ, ಬೆತ್ತಲೊ ಭಾಗ್ಯವೊ ಬಿಟ್ಟಾಕು.. ಅದಕ್ಕು ನಾನು ಬರೆದಿದ್ದು ಓದದೆ ಇರೋಕು ಏನು ಸಂಬಂಧ? ಮೊದಲು ಅದನ್ನ ಹೇಳು " ಎಂದೆ.

ಗುಬ್ಬಣ್ಣನಿಗೆ 'ಅಯ್ಯೊ ಪಾಪ' ಅನಿಸಿರಬೇಕು ನನ್ನ ಸಾಮಾಜಿಕ ಜ್ಞಾನ ಕಂಡು. ಆ ಅನುಕಂಪವನ್ನೆ ದನಿಯಲ್ಲು ಬೆರೆಸುತ್ತ, " ಏನೂಂತ ಹೇಳಲಿ ಸಾರ್.. ನೀವು ನ್ಯೂಸ್ ಓದಿಲ್ಲ ಅಂತ ಕಾಣುತ್ತೆ..ಕಳೆದ ಒಂದು ವಾರದಿಂದ ಹೆಚ್ಚು ಕಮ್ಮಿ ದಿನವೂ ಕರೆಂಟೆ ಇಲ್ಲ ಸಾರು ಬೆಂಗಳೂರಲ್ಲಿ.. ಪುಲ್ 'ಪವರ್ ಕಟ್'.."

ಆಗ ನನಗೆ ತಟ್ಟನೆ ಜ್ಞಾನೋದಯವಾಗತೊಡಗಿತು ಅವನು ಹೇಳುತ್ತಿರುವುದರ ಅರ್ಥ..

" ಮೊದಲಾದ್ರೆ ಕರೆಂಟಿಲ್ದೆ ಇದ್ರೂ ಪೇಪರೊ, ಬುಕ್ಕೊ ಹಿಡಿದು ಓದ್ತಾ ಕೂರ್ಬೋದಿತ್ತು.. ಆದರೆ ಈಗೆಲ್ಲ ಇಂಟರ್ನೆಟ್ಟಲ್ಲೆ ಎಲ್ಲಾ ಅಲ್ವಾ ಸಾರ್ ? ಅದರೆ ದಿನಕ್ಕೆ ಮೂರ್ನಾಲ್ಕು ಗಂಟೆ ಪೀಕ್ ಅವರಿನಲ್ಲೆ ಕರೆಂಟಿಲ್ಲಾಂದ್ರೆ ಯಾರಿಗೆ ತಾನೆ ನೋಡೋಕ್ ಆಗುತ್ತೆ ಸಾರ್ ? ಆಮೇಲ್ ಕರೆಂಟ್ ಬಂದ್ರು ಬೇರೆ ಕೆಲಸ ಮಾಡೋಕೆ ಹೊರಟು ಪುರ್ಸೋತ್ತಿರೋಲ್ಲ.. ಹಾಳು ಮೊಬೈಲಲ್ಲಿ ಓದ್ಬೇಕಾದ್ರೂ ಬ್ಯಾಟರಿ ಚಾರ್ಜಿಂಗಿಗೆ ಕರೆಂಟೆ ಬೇಕಲ್ವಾ..?" ಎಂದ ಗುಬ್ಬಣ್ಣ..

ಯಾವಾಗ ಓದದೆ ಇರೋದು ಕರೆಂಟಿಲ್ಲದ ಕಾರಣ ಅನ್ನೊ ಆರ್ಗ್ಯುಮೆಂಟ್ ಹಾಕಿದನೊ, ಆಗಲೆ ನನ್ನ 'ಆಫ್' ಮೂಡೆಲ್ಲ ಮಾಯವಾಗಿ ' ಲೈಟ್ ಇನ್ ದ ಎಂಡ್ ಅಫ್ ದ ಟನೆಲ್' ಕಾಣಿಸಿಕೊಳ್ಳತೊಡಗಿತ್ತು.. ಆ ಹೊಸತಾಗುದಿಸಿದ ಉತ್ಸಾಹದಲ್ಲೆ ನುಡಿದೆ..

"ಅರ್ಥವಾಯ್ತು ಬಿಡೊ ಗುಬ್ಬಣ್ಣ.. ಅಲ್ಲಿಗೆ ಜನ ಓದ್ದೆ ಇರೋದು ನನ್ನ ಬರೆದಿರೊ ಕ್ವಾಲಿಟಿಯಿಂದಲ್ಲ..ಓದೋಕ್ ಆಗ್ದೆ ಇರೊ ಹಾಗೆ ಕೈ ಕೊಡೊ 'ಕರೆಂಟ್ ಕಾಟದಿಂದ' ಅನ್ನು.."

"ಮತ್ತಿನ್ನೇನು ಸಾರ್.. ನಿಮಗೇನೊ ಇಲ್ಲಿ ಇಪ್ಪತ್ನಾಲ್ಕು ಗಂಟೆ ಕೂತಲ್ಲೆ ಕರೆಂಟು, ನೀರು, ಗ್ಯಾಸು ಕೊಟ್ಟು ತಣ್ಣಗಿರಿ ಅಂತಾರೆ.. ಆದರೆ ನಮ್ಮೂರಲ್ಲಿ ಅವೆಲ್ಲ ಎಲ್ಲಿ ಬರಬೇಕು..?"

"ಹೌದೊ ಗುಬ್ಬಣ್ಣ.. ಬೆಂಗಳೂರಲ್ಲೆ ಆ ಕಥೆಯಾದರೆ ಇನ್ನು ಮಿಕ್ಕ ಊರುಗಳ ಕಥೆ ಹೇಳುವ ಹಾಗೆ ಇಲ್ಲಾ ಬಿಡು.. ಯಾರಿಗೂ ಓದೋಕೆ ಆಗಿರಲ್ಲ..".. - ನಾನಿನ್ನು ನನ್ನ ಬರಹದ ಗುಂಗಿನಿಂದ ಹೊರಬಂದಿರಲಿಲ್ಲ.. 

" ಓದೋದ್ ಬಿಡಿ ಸಾರ್.. ಜನ ಬದುಕೋದ್ ಹೆಂಗೆ ಹೇಳಿ..?"

"ಅಲ್ಲಾ ಗುಬ್ಬಣ್ಣ ಹೀಗೆಲ್ಲಾ ಮಾಡಿದ್ರೆ ಜನ ಓಟ್ ಹಾಕಲ್ಲಾಂತಾದ್ರು ಭಯ ಇರ್ಬೇಕಲ್ವಾ? ಮೊನ್ನೆ ಮೊನ್ನೆ ತಾನೆ ಕಾರ್ಪೋರೇಷನ್ ಎಲೆಕ್ಷನ್ ಆಯ್ತೂಂತ ಬೇರೆ ಕೇಳ್ದೆ..?" ನಾನೂ ನನಗಿದ್ದ 'ಅರೆಬರೆ ಪ್ರಚಲಿತ ಜ್ಞಾನ' ಪ್ರದರ್ಶಿಸುತ್ತ ಕೇಳಿದೆ.

" ಅದೇ ಸಾರ್ ಮಹಾನ್ ರಾಜಕೀಯ.. ಎಲೆಕ್ಷನ್ ಮುಗಿತಿದ್ ಹಾಗೆ ಪವರ್ ಕಟ್ ಶುರು ಆಗೋಯ್ತು ನೋಡಿ.." 

" ಅದು ಮಾಮೂಲು ತಾನೆ ? ಎಲೆಕ್ಷನ್ ದಿನದ ವರೆಗೆ ಕರೆಂಟು, ನಲ್ಲಿ ಎಲ್ಲಾ ಪತಿವ್ರತಾ ಶಿರೋಮಣಿಯರ ಹಾಗೆ ಇದ್ದು, ಮುಗಿತಿದ್ದ ಹಾಗೆ ತಮ್ಮ ಬೇಕಾಬಿಟ್ಟಿ ಹಳೆ ಚಾಳಿ ತೋರ್ಸೋದು.. ಅದರಲ್ಲಿ ಹೊಸ್ದೇನಿದೆ ಗುಬ್ಬಣ್ಣ..?"

"ಸಾರ್.. ಅದೆಲ್ಲ ನಿಜಾ ಆದ್ರು ಈ ಸಾರಿ ಪವರ್ ಕಟ್ ಆಗ್ತಿರೋದು ಪವರ್ ಶಾರ್ಟೇಜಿಂದ ಅಲ್ಲ ಅಂತ ನನ್ನ ಥಿಯರಿ.." 

"ಮತ್ತೆ..?"

" ಪವರ್ ಗೇಮಿನ ರಾಜಕೀಯದಿಂದ ಅಂತ.."

" ಅಂದ್ರೆ ನೀನು ಹೇಳೋದ್ರ ಅರ್ಥ ಬೇಕೂಂತಲೆ ಪವರು ಇದ್ರೂ ಪವರ್ ಕಟ್ ಮಾಡ್ತಾ ಇದಾರೆ ಅಂತಲಾ? ಛೆ..ಛೆ.. ಬಿಡು ಗುಬ್ಬಣ್ಣಾ.. ಬಿಲ್ಲಲ್ಲಿ ಕರೆಂಟ್ ಹೊಡಿಯೊ ಹಾಗೆ ಮಾಡ್ಬೇಕೂಂದ್ರೆ ಮೊದ್ಲು ಕರೆಂಟ್ ಕೊಟ್ಮೇಲಲ್ವಾ ಸಾಧ್ಯ? ಇದ್ದು ಕರೆಂಟು ಕೊಡಲ್ಲ ಅಂದ್ರೆ ನಂಗೇನೊ ಅನುಮಾನ" ಅಂದೆ..

" ಅದೇ ಸಾರ್ ರಾಜಕೀಯ ನಿಮಗೆ ಅರ್ಥ ಆಗಲ್ಲ.. ನಿಮ್ಮಂಗೆ ಎಷ್ಟೋ ಜನಗಳಿಗು ಅರ್ಥ ಆಗಲ್ಲ.. ಈಗ ಸದ್ಯಕ್ಕೆ ದೇಶದಲ್ಲಿ ಕರೆಂಟಿಗೇನು ಬರ ಇಲ್ಲ ಸಾರ್..ದುಡ್ ಕೊಟ್ರೆ ಸೆಂಟ್ರಲ್ ಗ್ರಿಡ್ಡಿಂದ ಬೇಕಾದಷ್ಟು ಕರೆಂಟ್ ಕೊಡ್ತಾರಂತೆ.. ಮಳೇನು ತೀರಾ ಕೈ ಕೊಟ್ಟಿಲ್ಲ..ಆದ್ರೂನು ಯಾಕ್ ಸಾರ್ ಈ ಹೆವಿ ಲೋಡ್ ಶೆಡ್ಡಿಂಗೂ ?"

" ಅದೇನೆ ಇದ್ರೂ, ಕರೆಂಟಿದ್ದೂ ಕೊಡೊದಿಲ್ಲ ಅನ್ನೋದನ್ನ ನಾನು ನಂಬಲ್ಲ ಗುಬ್ಬಣ್ಣ.."

" ಕೊಡೊ ತರ ಸ್ಟಾಕಿದೆಯೊ ಇಲ್ವೊ ಬೇರೆ ವಿಚಾರ ಸಾರ್.. ಆದರೆ ನನ್ನ ಗುಮಾನಿಯೆ ಬೇರೆ ತರದ್ದು.. ಇದರ ಹಿಂದೆ ದೊಡ್ಡ ಪಾಲಿಟಿಕ್ಸ್ ಇರ್ಬೇಕೂಂತ ನನ್ನ ಥಿಯರಿ ಸಾರ್.." ಏನೊ ಗುಟ್ಟು ಹೇಳುವವನಂತೆ ನುಡಿದ ಪಿಸುದನಿಯಲ್ಲಿ ಗುಬ್ಬಣ್ಣ..

"ಏನು ಪಾಲಿಟಿಕ್ಸ್ ಅಂತೀನಿ..?"

"ಸಾರ್.. ಕಾರ್ಪೋರೇಷನ್ ಎಲೆಕ್ಷನ್ ರಿಸಲ್ಟ್ ನೋಡಿದ್ರಾ?"

ನಾನು ಮತ್ತೆ ಪೆಚ್ಚು ನಗೆ ನಗುತ್ತ ನನ್ನ ಅಜ್ಞಾನ ಪ್ರದರ್ಶಿಸಿದೆ...

" ನೀವು ನೋಡಿರಲ್ಲ ಬಿಡಿ... ಅದರಲ್ಲಿ ಹೈಯೆಸ್ಟ್ ಸೀಟು ಬಿಜೆಪಿ, ಸೆಕೆಂಡು ಕಾಂಗ್ರೆಸ್ಸು, ಥರ್ಡ್ ದಳದವರು.."

" ಸರಿ .. ಅಲ್ಲಿಗೆ ಬಿಜೆಪಿಯವ್ರು ಪವರಿಗೆ ಬಂದ್ರು ಅಂತಾಯ್ತಲ್ವಾ ? ಅವರ ಮೇಯರು ಬಂದ್ರೂ ಪವರ್ ಕಟ್ ಮಾಡ್ತಾ ಇದಾರ ? ಯಾವಾಗ್ಲೂ ಡೆವಲಪ್ಮೆಂಟು, ಡೆವಲಪ್ಮೆಂಟ್ ಅಂತಿರ್ತಾರಲ್ಲ ಗುಬ್ಬಣ್ಣ..? ಪವರಿಗೆ ಬಂದ್ಮೇಲೆ ಅವರೂ ಪವರ್ ಗೇಮ್ ಶುರು ಮಾಡ್ಕೊಂಡ್ಬಿಟ್ರಾ?" ಎಂದೆ

" ಅಯ್ಯೊ ನಾನು ಮುಗಿಸೊ ತನಕ ಸ್ವಲ್ಪ ಕೇಳಿ ಸಾರ್.. ಮೊದಲಿಗೆ ಅವರು ಅಧಿಕಾರಕ್ಕೆ ಬರಲಿಲ್ಲ, ಮೇಯರ್ಗಿರಿನೂ ಸಿಗಲಿಲ್ಲ..!"

"ಹಾಂ..! ಅವ್ರೆ ನಂಬರ್ ಒನ್ ಅಂದ್ಯಲ್ಲ ಗುಬ್ಬಣ್ಣಾ...? ಏನು 'ಹಂಗ್ ಪಾರ್ಲಿಮೆಂಟ್' ತರ 'ಹಂಗ್ ಕಾರ್ಪೋರೇಷನ್ನಾ?"

"ಒಂದ್ ಲೆಕ್ಕದಲ್ಲಿ 'ಹಂಗೆ' ಅಂತಿಟ್ಕೊಳ್ಳಿ.."

" ಅಂದ್ರೆ..?"

" ಲೆಕ್ಕಾಚಾರದಲ್ಲಿ ಮೆಜಾರಿಟಿ ಬಂದ ಪಕ್ಷ ಅಧಿಕಾರ ವಹಿಸ್ಕೋಬೇಕು, ಪ್ಲೋರಲ್ಲಿ ಪ್ರೂವ್ ಮಾಡ್ಬೇಕು.. ಅಲ್ವಾ ಸಾರ್?"

"ಹೌದು.."

" ಈ ಕೇಸಲ್ಲಿ ಇದ್ದಿದ್ದೆ ಥಿನ್ ಮೆಜಾರಿಟಿ ಸಾರ್... ಎಲೆಕ್ಷನ್ ಮುಗಿದು ವಾರಗಳೆ ಆದ್ರೂ ಇನ್ನು ಯಾರು ಮೇಯರ್ ಆಗ್ತಾರೆ, ಅಧಿಕಾರ ವಹಿಸ್ಕೋತಾರೆ ಅಂತ ಗೊತ್ತಾಗಿರ್ಲಿಲ್ಲ..ಸಾಲದ್ದಕ್ಕೆ ಕಾರ್ಪೋರೇಟರುಗಳಲ್ಲದೆ ಎಮ್ಮೆಲ್ಸಿ, ಎಮ್ಮೆಲ್ಲೆ, ಎಂಪಿಗಳಿಗು ಓಟಿಂಗ್ ಪವರ್ ಉಂಟಂತೆ.. ಕೊನೆಗೆ ಮೊನ್ನೆ ನಡೆದ ಮೇಯರ್ ಸೆಲೆಕ್ಷನ್ನಲ್ಲಿ ಆಪೋಸಿಷನ್ನಲ್ಲಿರೊ ಸೆಕೆಂಡ್, ಥರ್ಡ್ ಜತೆ ಅವರುಗಳೂ ಒಗ್ಗಟ್ಟಾಗಿ ಸೇರ್ಕೊಂಡ್, ಥಿನ್ ಮಾರ್ಜಿನ್ನಲೆ ಫಸ್ಟ್ ಬಂದ ಪಾರ್ಟೀನ ಸೋಲಿಸಿಬಿಟ್ರು ಸಾರ್..! "

" ಅಯ್ಯೊ ಶಿವನೆ..? ಫಸ್ಟ್ ಬಂದ ಪಾರ್ಟಿಗೇನೆ ಪವರಿಲ್ವಾ? ಮಿಕ್ಕವೆರಡು ಪಾರ್ಟಿಗಳು ಹಾವು ಮುಂಗುಸಿ ತರ ಅಲ್ವಾ? ಅದು ಹೇಂಗೆ 'ಹಾಯಿ ಭಾಯಿ' ಆಯ್ತೊ ಗುಬ್ಬಣ್ಣಾ..? ಅದಿರಲಿ , ಆ ಪವರ್ ಗೇಮಿಗೂ, ಈ ಪವರ್ ಕಟ್ಟಿಗು ಏನಯ್ಯ ಲಿಂಕು..?"

ಒಮ್ಮೆ ಗಾಢವಾಗಿ ಉಸಿರೆಳೆದುಕೊಂಡು ಮುಖ ಮುಂದೆ ತಂದ ಗುಬ್ಬಣ್ಣ, " ಅದೇ ಸಾರ್ ರಾಜಕೀಯ .. ಅಲ್ಯಾರು ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ.. ಎಲ್ಲಾ ಅವಕಾಶವಾದಿತ್ವ ಅಷ್ಟೆ.. ಆದರೆ ಈಗ ಜನ ಮೊದಲಿಗಿಂತ ಹುಷಾರಿ.. ಅವರ ಆಟ ನೋಡಿ ನೋಡಿ ಬೇಸತ್ತು ಹೋಗಿದಾರೆ.. ಎಷ್ಟೆ ಆಟ ಆಡಿದ್ರೂ ಎಲೆಕ್ಷನ್ ಬಂದಾಗ ಮಣ್ಣು ಮುಕ್ಕಿಸಿಬಿಡ್ತಾರೆ.."

"ಅಂದ್ರೂನು, ಅದಕ್ಕೆ ಪವರ್ ಕೊಡ್ಬೇಕೆ ಹೊರತು ಕಟ್ ಮಾಡ್ಬಾರದು ಅಲ್ವಾ..?"

" ಅಲ್ಲೆ ಸಾರ್ ನ್ಯಾಕು.. ಈಗ ಜನರಿಗು ನಿರೀಕ್ಷೆ ಏನಿರುತ್ತೆ ಹೇಳಿ? ಮೆಜಾರಿಟಿ ಬಂದ ಪಕ್ಷಾನೆ ಅಧಿಕಾರಕ್ಕೆ ಬರುತ್ತೆ ಅಂತಲ್ವಾ? ಎಲ್ರೂ ಅದನ್ನೆ ಕಾಯ್ತಾ ಇರ್ತಾರೆ.. ಟೀವಿ, ನ್ಯೂಸ್ ಚಾನಲ್ಲುಗಳು ಅದನ್ನೆ ಕವರ್ ಮಾಡ್ತಾ ಜನರಿಗೆ ಏನಾಗ್ತಿದೆ ಅನ್ನೋದನ್ನ ತಲುಪಿಸ್ತಾ ಇರ್ತಾವೆ.. ಯಾರೆ ಪವರಿಗೆ ಬರಲಿ ಅಲ್ಲಿ ತನಕದ ಗದ್ದಲ, ದೊಂಬಿ ಮಾತ್ರ ಸದ್ದು ಮಾಡುತ್ಲೆ ಇರುತ್ತೆ.."

"ಸರಿ..?"

" ಆ ಗದ್ದಲ ದೊಂಬಿ ಇಲ್ದೆ ಸದ್ದಿಲ್ಲದ ಹಾಗೆ ಬ್ಯಾಕ್ ಡೋರಲ್ಲಿ ತಮ್ ರಾಜಕೀಯ ಮಾಡ್ಬೇಕೂಂದ್ರೆ ಏನು ಮಾಡ್ಬೇಕ್ ಹೇಳಿ ಸಾರ್?"

" ಏನ್ ಮಾಡ್ಬೇಕು..?"

" ಜನಗಳ ಗಮನ ಬೇರೆ ಕಡೆ ಹೋಗೋ ಹಾಗೆ ಮಾಡಿ, ಎಲ್ಲಾ ಸ್ವಲ್ಪ ತಣ್ಣಗಾಗೊತನಕ ಕಾಯ್ಬೇಕು.. ಟೀವೀ, ನ್ಯೂಸಲ್ಲಿ ಹೆಚ್ಚು ಬರದ ಹಾಗೆ ನೋಡ್ಕೋಬೇಕು.. ಬಂದ್ರೂನು ನೋಡೋಕ್ ಆಗದ ಹಾಗೆ ಸಿಚುಯೇಶನ್ ಕ್ರಿಯೇಟ್ ಮಾಡಿಬಿಡಬೇಕು.. ಜತೆಗೆ ಹೇಗು ತಮಗೆ ಬೇಕಾದ ನ್ಯೂಸು ಪೇಪರು, ಟೀವಿ ಚಾನಲ್ನವರು ಸ್ವಲ್ಪ ಜನ ಇದ್ದೆ ಇರ್ತಾರೆ.. ಅಲ್ಲಿ ಸ್ವಲ್ಪ ಮಾಡರೇಟ್ ಮಾಡ್ಕೊಂಡ್ರೆ ಸಾಕು.."

" ಆದ್ರೂ ಅದಕ್ಕು ಕರೆಂಟ್ ಕಟ್ಟಿಂಗಿಗು..." ಎನ್ನಲು ಹೊರಟವನನ್ನ ಅಲ್ಲೆ ನಡುವೆಯೆ ತುಂಡಿರಿಸುತ್ತ ಗುಬ್ಬಣ್ಣ ಮತ್ತೆ ಮುಂದುವರೆಸಿದ ತನ್ನ ಉವಾಚವನ್ನ..

" ಅಲ್ಲಿಗೆ ಬರ್ತಾ ಇದ್ದಿನಲ್ಲ ಸಾರ್..? ಈಗ ನೋಡಿ ಯಾವಾಗ ಪವರ್ ಕಟ್ , ಲೋಡ್ ಶೆಡ್ಡಿಂಗ್ ಅಂತ ಬಂತೊ ಜನಗಳ ಗಮನ ಎಲ್ಲಾ ಆ ಕಡೆ ಹೋರಟೋಯ್ತಲ್ವಾ? ಅದು ಮುಂದುವರೀತಾ ಹೋದ ಹಾಗೆ ಎಷ್ಟೊ ಜನಕ್ಕೆ ಅನ್ಸಿರುತ್ತೆ.. ಹಾಳಾಗಲಿ ರಾಜಕೀಯಾ ಯಾರಾದ್ರೂ ಪವರಿಗೆ ಬರಲಿ, ಮೊದಲು ಪವರ್ ಕಟ್ ನಿಲ್ಲಲಿ " ಅಂತ..

" ಸೋ ಇದೊಂದ್ ತರ ಮೈಂಡ್ ಗೇಮ್ ಅಂತೀಯಾ.. ಮುಂದೆ ಆಗೋದನ್ನ ಅನಿವಾರ್ಯವಾಗಿ ಒಪ್ಕೊಳ್ಳೊ ಹಾಗೆ?" 

" ಅದೊಂದೆ ಅಲ್ಲಾ ಸಾರ್.. ಸೈಡ್ ಬೆನಿಫಿಟ್ ನೋಡಿ.. ಕರೆಂಟಿಲ್ಲಾ ಅಂದ್ರೆ ಟೀವಿ ನ್ಯೂಸೂ ಇಲ್ಲ.. ಕರೆಂಟ್ ಬಂದಾಗ ನೋಡೋಕೆ ಪುರುಸೊತ್ತಿರಲ್ಲ.. ಕರೆಂಟಿಲ್ಲದೆ ಪೆಂಡಿಂಗ್ ಇದ್ದ ಕೆಲಸವನ್ನೆಲ್ಲ ಆಗ ಮಾಡ್ಬೇಕು ನೋಡಿ..? ಸೀರಿಯಲ್ ಗಳು ಬೇರೆ ಪೆಂಡಿಂಗ್ ಇರುತ್ತೆ.. ಜತೆಗೆ ಸ್ವಲ್ಪ ಟೈಮಿಂಗ್ ಅಡ್ಜೆಸ್ಟ್ ಮಾಡಿ, ನಾನ್ ಪೀಕ್ ಅವರಿನಲ್ಲಿ ಕರೆಂಟು ಕೊಟ್ರೆ ಅರ್ಧಕ್ಕರ್ಧ ನೋಡೋರೆ ಇರೋಲ್ಲ, ಇನ್ನೆಲ್ಲೊ ಬಿಜಿಯಾಗಿರ್ತಾರೆ.. ಆಗ ಟಿವಿಯಲ್ಲಿ ಕವರೇಜ್ ಇದ್ರೂನು ನೋಡೋರೆ ಇರಲ್ಲ.. ಗದ್ದಲ, ದೊಂಬಿ ಎಲ್ಲಾ ಅಲ್ಲೆ ಅರ್ಧ ಔಟ್.."

"..ಗುರು ಮಲ್ಲೇಶ..!"

" ಜನರ ಅರ್ಧಕ್ಕರ್ಧ ಸಹನೆ, ಕೋಪ ಎಲ್ಲ ಗಬ್ಬೆದ್ದ ಈ ಸಿಚುಯೇಶನ್ನಲ್ಲಿ ದಿನದಿನದ ಜಂಜಾಟದಲ್ಲಿ ಬಿಜಿಯಾಗಿ ಹೋಗಿದ್ದಾಗ, ಈ ಮೇಯರ್ ಸೆಲೆಕ್ಷನ್ ಮುಗಿದು ಹೋದ್ರೆ ಯಾರು ಹೆಚ್ಚು ಜನ ಗಮನಿಸೊಲ್ಲ.. ಗಮನಿಸಿದ್ರೂ ಅವರದೆ ನೂರೆಂಟು ತರಲೆ ತಾಪತ್ರಯಗಳಲ್ಲಿ ಸಿಕ್ಕಿ ಬಿದ್ದಿರ್ತಾರೆ.. ಅವರು ಎಚ್ಚರವಾಗೊ ಹೊತ್ತಿಗೆ ಎಲ್ಲಾ ಮುಗಿದು ಹೋಗಿರುತ್ತೆ.." ಎಲ್ಲಾ ತಾನು ಹೇಳುತ್ತಿರುವ ಸ್ಕೀಮಿನ ರೀತಿಯೆ ನಡೆದಿದೆಯೇನೊ ಅನ್ನುವಂತೆ ಗತ್ತಿನಲ್ಲಿ ನುಡಿದ ಗುಬ್ಬಣ್ಣ..

" ಅಂದರೆ ಈ ಸಾರಿಯ ಕತ್ತಲೆ ಭಾಗ್ಯದ ಹಿಂದೆ ಭಾರಿ ದೊಡ್ಡ ರಾಜಕೀಯ ಕಾರನಾಮೆಯೆ ಇದೆ ಅನ್ನುತ್ತೀಯಾ?"

" ನನಗಂತು ಇದೆ ಅಂತಲೆ ಅನುಮಾನ ಸಾರ್..."

" ಅನುಮಾನ ಮಾತ್ರವಾದರೆ ಅದು ನಿಜವೂ ಆಗದಿರಬಹುದು ಅಲ್ವಾ ಗುಬ್ಬಣ್ಣಾ...?"

" ಅದನ್ನು ಹೌದೊ, ಅಲ್ಲವೊ ಅಂತ ಪರೀಕ್ಷೆ ಮಾಡೋಕು ಒಂದು 'ಲಿಟ್ಮಸ್ ಟೆಸ್ಟ್' ಇದೆ ಸಾರ್.."

"ಅದೇನು ಟೆಸ್ಟೊ..?"

" ಸಾರ್.. ನಾನಂದುಕೊಂಡಿದ್ದು ನಿಜ ಅನ್ನೊದಾದ್ರೆ, ಈ ಸೆಲೆಕ್ಷನ್ ಗಲಾಟೆಯೆಲ್ಲ ಮುಗಿದು ಪವರ್ ಗೇಮೆಲ್ಲ ತಣ್ಣಗಾಗ್ತ ಇದ್ದ ಹಾಗೆ, ನಮ್ಮ ಎಲೆಕ್ಟ್ರಿಕ್ ಪವರ್ ವಾಪಸ್ಸು ಬಂದುಬಿಡುತ್ತೆ, ಏನೂ ಆಗಿರ್ಲೆ ಇಲ್ವೇನೊ ಅನ್ನೊ ಹಾಗೆ.. ಜನಾನೂ ಸ್ವಲ್ಪ ದಿನಾ ಆದ್ಮೇಲೆ ಎಲ್ಲಾ ಮರ್ತುಬಿಡ್ತಾರೆ.. ಎಲ್ಲಾ ಅದರ ಪಾಡಿಗೆ ಅದು ನಡ್ಕೊಂಡು ಹೋಗುತ್ತೆ ಯಥಾಪ್ರಕಾರ.. ಯಾರು ಮೇಯರಾದ್ರೂ, ಯಾರು ಗೆದ್ರು, ಯಾರು ಸೋತ್ರು ಅನ್ನೋದು ಮರೆತುಬಿಡ್ತಾರೆ ಮುಂದಿನ ಎಲೆಕ್ಷನ್ ತನಕ.. ಬೇಕಿದ್ರೆ ನೋಡ್ತಾ ಇರಿ..."

" ನಿನ್ನ ಗೆಸ್ ನಿಜನೊ ಸುಳ್ಳೊ.. ಜೋರಾಗೆಲ್ಲು ಹೇಳ್ಬೇಡಾ.. ಕೇಳಿಸ್ಕೊಂಡವ್ರು ಯಾಕೂ ಇರ್ಲಿ ಇಂತ ಲೋಡ್ ಶೆಡ್ಡಿಂಗ್ ಮುಂದುವರೆಸ್ಕೊಂಡೆ ಹೋಗ್ಬಿಟ್ಟಾರು.. ಪಾಪ ಮೊದಲೆ ಜನ ಕರೆಂಟಿಲ್ದೆ ಒದ್ದಾಡ್ತಾ ಇದಾರೆ.." 'ಹಾಗಾದ್ರೂ ನಾನು ಬರೆದಿದ್ದನ್ನು ಸ್ವಲ್ಪ ಜನ ಓದ್ತಾರೇನೊ.. ಇಲ್ಲಾಂದ್ರೆ ಇನ್ನೂ ಅಧ್ವಾನವಾದೀತು' ಅಂತ ಮನಸಲ್ಲೆ ಹೇಳಿಕೊಂಡರು ಜೋರಾಗಿ ಹೇಳಲಿಲ್ಲ.

" ಅಯ್ಯೊ ಬಿಡಿ ಸಾರ್.. ನಮ್ಮ  ಜನ, ಸರಕಾರ, ರಾಜಕಾರಿಣಿಗಳು, ಅಧಿಕಾರಿಗಳಲ್ಲಿ ಎಲ್ಲರೂ ಅಷ್ಟೊಂದು ಸೆನ್ಸಿಟೀವ್ ಇರಲ್ಲಾ.. ಅಲ್ದೆ.. ಅವರಿಗು ಸ್ವಲ್ಪ ಭಯ ಇರುತ್ತೆ, 'ತೀರಾ ಜಾಸ್ತಿಯಾದ್ರೆ ಜನ ರೊಚ್ಚಿಗೆದ್ರೆ ?' ಅಂತ.. ಅಲ್ಲದೆ ಸ್ವಲ್ಪ ಫ್ಯೂಚರ್ ಎಲೆಕ್ಷನ್ ದೃಷ್ಟಿನೂ ಇರುತ್ತಲ್ಲಾ..? ನೀವೂ ವರಿ ಮಾಡ್ಕೋಬೇಡಿ ಸಾರ್.. 'ಕತ್ತಲ ಭಾಗ್ಯ' ಬಂದ್ ಆಗ್ತಿದ್ದ ಹಾಗೆ ಜನ ಮತ್ತೆ ಓದೋಕ್ ಶುರು ಮಾಡ್ತಾರೆ ನಿಮ್ಮ ಬರಹಾನ.."

ನಾನು ಮುಚ್ಚಿಟ್ಟುಕೊಂಡ್ರು ನನ್ನ ಕನ್ಸರ್ನ್ ಅವನಿಂದ ಮುಚ್ಚಿಡೋದು ಕಷ್ಟ.. ನರಿ ಬುದ್ದಿ ಕನ್ಸಲ್ಟೆಂಟು ಅವನು ಎಂದುಕೊಳ್ಳುತ್ತ, " ಸರಿ ಬಿಡೊ ಗುಬ್ಬಣ್ಣ, ಪರದೇಶದಲ್ಲಿ ಕೂತು ನಾವು ಆಡಿದರೇನು ಬಂತು.. ಹೇಗೊ ಎಂತೊ ಜನರ ತೊಂದರೆ ತಪ್ಪಲಿ ಅಂತ ಪ್ರಾರ್ಥಿಸೋಣ.." ಎಂದೆ ಕಂಪ್ಯೂಟರ್ ಮುಚ್ಚುತ್ತ.

ಆಗ ಕೆಳಗಿನಿಂದ ಕೇಳಿಸಿತ್ತು ನನ್ನ 'ಸಂಸಾರ ಭಾಗ್ಯ'ದ ದನಿ.." ರೀ ಯುಟಿಲಿಟಿ ಬೋರ್ಡಿಂದ ಲೆಟರ್ ಬಂದಿದೆ ನೋಡಿ.. ಮುಂದಿನ ತಿಂಗಳು ಇಪ್ಪತ್ತಾರಕ್ಕೆ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ,  ಒಂದು ಗಂಟೆ ಮಟ್ಟಿಗೆ ಕರೆಂಟು, ನೀರು, ಗ್ಯಾಸು ಎಲ್ಲಾ ನಿಲ್ಲಿಸಿಬಿಡ್ತಾರಂತೆ.. ಅದೇನೊ 'ಪ್ರಿಪೆರ್ಡ್ ನೆಸ್ ಫಾರ್ ಎಮರ್ಜೆನ್ಸೀ' ಅಂತೆ.. ಯುದ್ಧ-ಗಿದ್ಧ ದೊಂಬಿ-ಗಿಂಬಿ ಅಂತ ನಡೆದರೆ ಸಿದ್ದತೆ ಇರಲಿ ಅಂತ.. ಈಗಿನಿಂದಲೆ ಪ್ಲಾನ್ ಮಾಡಿಕೊಳ್ಳಿ ಅಂತ ಲೆಟರ್ ಕಳ್ಸಿದ್ದಾರೆ.."

ನಮ್ಮಲ್ಲಿ ನೀರು ಗೀರು ಅಂತ ತುಂಬಿಟ್ಟುಕೊಳ್ಳಲು ಪಾತ್ರೆ, ಪಗಡಿ, ಹಂಡೆಗಳೂ ಇಲ್ಲ - ಸಣ್ಣದ್ದೊಂದೆರಡು ಸ್ನಾನದ ಬಕೆಟ್ಟು ಬಿಟ್ಟರೆ. ಮೂರು ಹೊತ್ತು ನೀರು ಬರುವಾಗ ಅದರ ಅಗತ್ಯವಾದರೂ ಎಲ್ಲಿ - ನೀರು ಹಿಡಿದಿಡಲೆಬೇಕಿಲ್ಲವಲ್ಲ...? ಇನ್ನು ವಾರದಲ್ಲಿ ಕನಿಷ್ಠ ಮೂರು ದಿನ ನೀರಿಲ್ಲದ ಜಗತ್ತಿನಿಂದ ಬಂದವರಿಗೆ 'ಒಂದು ಗಂಟೆ ನೀರು ಬಂದ್' ಅನ್ನುವುದೆ ಮಹಾನ್ ಜೋಕ್! 

ಹಾಗೆಯೆ ಮಟ ಮಟ ಮಧ್ಯಾಹ್ನ ಕರೆಂಟಿಲ್ಲ ಎಂದರೆ 'ಕತ್ತಲ ಭಾಗ್ಯ'ವಂತೂ ಇಲ್ಲವಾದರು, ಬಿಸಿಲು ಹೆಚ್ಚಿದ್ದರೆ 'ಸೆಕೆ' ಭಾಗ್ಯವಂತು ಸಿಗಬಹುದು - ಫ್ಯಾನು, ಏಸಿ ಕೆಲಸ ಮಾಡದೆ ಕಾರಣ.. ತೀರಾ ಅತಿಯಾದರೆ ಸ್ವಿಮ್ಮಿಂಗ್ ಪೂಲಿನಲ್ಲಿ ಬಿದ್ದುಕೊಂಡರಾಯ್ತು.... 

ಇನ್ನು ಒಂದು ಗಂಟೆ ಗ್ಯಾಸ್ ಇರದಿದ್ದರೇನಂತೆ ? ಅದು ಹೇಗು ಉಂಡು ಮುಗಿಸಿ, ಮಧ್ಯಾಹ್ನದ ನಿದ್ದೆ ತೆಗೆಯುವ ಹೊತ್ತು.. ಬಿಸಿಲಿಗೆ ಹೇಗು ಮಜ್ಜಿಗೆ, ನಿಂಬೆ ರಸ ಇದ್ದೇ ಇರುತ್ತದೆ..

ನಮಗಿರುವ 'ಕರೆಂಟ್ ಭಾಗ್ಯ', 'ಇಂಟರ್ನೆಟ್ ಭಾಗ್ಯ', ' ಜಲ ಭಾಗ್ಯ', ' ಅನಿಲ ಭಾಗ್ಯ' ಗಳಂತಹ ನೂರಾರು ಭಾಗ್ಯಕ್ಕೆ ಹರ್ಷೀಸುತ್ತ 'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು' ಎಂದ ಕವಿ ವಾಣಿಯನ್ನು ನೆನೆದು ಆ ಘನ 'ಕನ್ನಡ ಭಾಗ್ಯ'ಕ್ಕೆ ಮನಸಾರೆ ನಮಿಸುತ್ತ ಮೇಲೆದ್ದೆ..

" ನಡಿಯೊ ಗುಬ್ಬಣ್ಣಾ.. ಸಂಜೆ ಕನ್ನಡ ಸಂಘದಿಂದ ನಮ್ಮ ಏರಿಯಾದಲ್ಲೆ 'ಬನ್ನಿ ಮಾತಾಡೋಣಾ' ಪ್ರೋಗ್ರಾಮ್ ಹಾಕ್ಕೊಂಡಿದಾರೆ.. ಹೋಗಿ ಇಲ್ಲಿರೊ ಕನ್ನಡಿಗರ ಜತೆ ಒಂದು ಸಂಜೆ ಕಳೆದು ಬರೋಣಾ.. ಕೊನೆಯಲ್ಲಿ ಉಪ್ಪಿಟ್ಟೂ, ಕಾಫಿಯೂ ಇರುತ್ತಂತೆ.." ಎಂದೆ, ಕೊನೆಯ ಭಾಗವನ್ನು ಒತ್ತಿ ನುಡಿಯುತ್ತ. ಗುಬ್ಬಣ್ಣನಿಗೆ ಉಪ್ಪಿಟ್ಟೆಂದರೆ ಪಂಚ ಪ್ರಾಣ - ಪೇಸ್ಟು ಪೇಸ್ಟೂ ಅನ್ನುತ್ತಲೆ ವೇಸ್ಟ್ ಮಾಡದೆ ತಿನ್ನುತ್ತಾನೆ..

" ನಡೀರಿ ಸಾರ್ ಹೋಗೋಣ.... 'ಜೈ ಕನ್ನಡ ಮಾತೆ' ಭಾಗ್ಯಾನು ಆದಂಗಾಗುತ್ತೆ ಎಂದು ತಾನೂ ಮೇಲೆದ್ದ ಗುಬ್ಬಣ್ಣ.
  
(ಮುಕ್ತಾಯ)

 

Comments

Submitted by ಗಣೇಶ Sun, 09/13/2015 - 23:39

ನಾಗೇಶರೆ, ನೀವು ದೂರದ ಸಿಂಗಾಪುರದಲ್ಲಿದ್ದೀರಿ ಎಂಬುದು ಈಗ ನನಗೆ ಸಂಶಯ!:)
ಕತ್ತಲೆ ಭಾಗ್ಯದ ಬಗ್ಗೆ ನಿಮ್ಮ ಹಾಸ್ಯ ಬರಹ ಸೂಪರ್..
ಗುಬ್ಬಣ್ಣ ಹೇಳಿದ ಹಾಗೇ ಆಯಿತು. ಈಗ ಬಿಬಿಎಮ್ಪಿ ಆಡಳಿತ "ಕೈ"ಗೆ ಸಿಕ್ಕಿದ್ದೇ ಪವರ್ ಬಂತು!
"ಗುಬ್ಬಣ್ಣ"ನನ್ನು ಹೇಗಾದರೂ ಒಲಿಸಿ, ಅರ್ಜೆಂಟ್ ಕರ್ನಾಟಕಕ್ಕೆ ಕಳುಹಿಸಿ. ಇಂತಹ ತಲೆಯವರು ಈಗ ಕರ್ನಾಟಕದ ಬಿಜೆಪಿಗೆ ಅಗತ್ಯ ಬೇಕಿದೆ. :)

Submitted by nageshamysore Mon, 09/14/2015 - 02:24

In reply to by ಗಣೇಶ

ಗಣೇಶ್ ಜಿ, ನಮಸ್ಕಾರ ಮತ್ತು ಧನ್ಯವಾದಗಳು. ದೂರದೂರಲಿದ್ದರೇನಂತೆ ? ಈಗ ಅಂತರ್ಜಾಲ, ವಾಟ್ಸಪ್ಪು, ವೀಚಾಟುಗಳಂತಹ ಸರ್ವವ್ಯಾಪಿ ಅವಯವಗಳು ದಂಢಿಯಾಗಿರುವುದರಿಂದ ಎಲ್ಲಿದ್ದರು ಸುಲಭವಾಗಿ ವಿಷಯ ಗೊತ್ತಾಗಿಬಿಡುತ್ತದೆ ಬಿಡಿ :-)

Submitted by ಗಣೇಶ Sun, 09/13/2015 - 23:40

ನಾಗೇಶರೆ, ನೀವು ದೂರದ ಸಿಂಗಾಪುರದಲ್ಲಿದ್ದೀರಿ ಎಂಬುದು ಈಗ ನನಗೆ ಸಂಶಯ!:)
ಕತ್ತಲೆ ಭಾಗ್ಯದ ಬಗ್ಗೆ ನಿಮ್ಮ ಹಾಸ್ಯ ಬರಹ ಸೂಪರ್..
ಗುಬ್ಬಣ್ಣ ಹೇಳಿದ ಹಾಗೇ ಆಯಿತು. ಈಗ ಬಿಬಿಎಮ್ಪಿ ಆಡಳಿತ "ಕೈ"ಗೆ ಸಿಕ್ಕಿದ್ದೇ ಪವರ್ ಬಂತು!
"ಗುಬ್ಬಣ್ಣ"ನನ್ನು ಹೇಗಾದರೂ ಒಲಿಸಿ, ಅರ್ಜೆಂಟ್ ಕರ್ನಾಟಕಕ್ಕೆ ಕಳುಹಿಸಿ. ಇಂತಹ ತಲೆಯವರು ಈಗ ಕರ್ನಾಟಕದ ಬಿಜೆಪಿಗೆ ಅಗತ್ಯ ಬೇಕಿದೆ. :)

Submitted by nageshamysore Mon, 09/14/2015 - 02:25

In reply to by ಗಣೇಶ

'ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ವಾ?' ಅನ್ನೋದೊಂದು ಹಳೆಯ ಮಾತಿದೆ. ಹಾಗೆ ಗುಬ್ಬಣ್ಣ ಸಿಂಗಾಪುರದಿಂದ ಬಂದು ಇದನ್ನು ತೋರಿಸೊ ತುರ್ತೇನೂ ಇರಲಾರದು ಗಣೇಶ್ ಜಿ.. ಅಲ್ಲೆ ಈ ಲೈನಿನಲ್ಲಿ ಆಲೋಚಿಸಬಲ್ಲ ಕ್ರಿಮಿನಲ್ ಬ್ರೈನಿನ 'ವಿಚಾರವಾದಿ ಚಿಂತಕರು' ಸಾಕಷ್ಟು ಸಿಗುತ್ತಾರೆಂದು ಗುಬ್ಬಣ್ಣನ ಗುಮಾನಿ! (ಸುಮ್ಮನೆ ಏಕೆ ಕಾಂಪಿಟೇಶನ್ ಅನ್ನೋದು ಅವನ ಲಾಜಿಕ್!). ಬಿಜೆಪಿ ಸ್ವಲ್ಪ ಸ್ಮಾರ್ಟಾಗಿ ಹುಡುಕ್ಬೇಕು ಅಷ್ಟೆ..!

Submitted by kavinagaraj Mon, 09/14/2015 - 12:13

In reply to by ಗಣೇಶ

ಕತ್ತಲೆ ಭಾಗ್ಯದ ಮಹಿಮೆ, ಬಿಜೆಪಿ ಬಿಬಿಎಂಪಿಯಲ್ಲಿ 'ಗೆದ್ದು ಸೋತಿದ್ದು', ಇತ್ಯಾದಿ ಸೊಗಸಾಗಿ ನಿರೂಪಿತವಾಗಿದೆ. ಗಣೇಶರು ಮಧ್ಯರಾತ್ರಿಯಲ್ಲಿ ಸಾಮಾನ್ಯವಾಗಿ ಓದುವ, ಪ್ರತಿಕ್ರಿಯಿಸುವ ಕೆಲಸ ಮಾಡುವ ಕಾರಣ ನನಗೀಗ ಗೊತ್ತಾಯಿತು. ಹಗಲಿನಲ್ಲಿ ಪವರ್ ಕಟ್ ಸಮಸ್ಯೆ, ರಾತ್ರಿ ಹೇಗೂ ಪವರ್ ಉಪಯೋಗಿಸುವುದಿಲ್ಲವೆಂದು ಕರೆಂಟ್ ತೆಗೆಯುವುದಿಲ್ಲ, ಅದಕ್ಕೆ!! ಎಲ್ಲರೂ ಈ ಉಪಾಯದಲ್ಲೇ ತೊಡಗಿದರೆ, ರಾತ್ರಿಯೂ ಪವರ್ ಕಟ್ ಮಾಡಿಬಿಡುತ್ತಾರೇನೋ!

Submitted by nageshamysore Mon, 09/14/2015 - 17:01

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಕತ್ತಲೆ ಭಾಗ್ಯ ಮತ್ತು ಎಲೆಕ್ಷನ್ನಿನ ನೇರ ಅನುಭವವಾಗದಿದ್ದರೂ ವಾಟ್ಸಪ್, ನ್ಯೂಸ್ ಸೈಟುಗಳಲ್ಲಿ ಗ್ರಹಿಸಿದ ಅರೆಬರೆ ಮಾಹಿತಿಯನ್ನೆ ಕೂಡಿಸಿ ಹರಟೆಯ ರೂಪ ಕೊಟ್ಟೆನಷ್ಟೆ..:-)

ಗಣೇಶರು ಎಂದಿನಂತೆ ಪ್ರತಿ ಅಸ್ತ್ರಕ್ಕು ತಮ್ಮದೆ ಆದ ಪ್ರತ್ಯಸ್ತ್ರ ಬತ್ತಳಿಕೆಯಲ್ಲಿಟ್ಟುಕೊಂಡೆ ಇರುತ್ತಾರಲ್ಲವೆ ? ಅಷ್ಟಿಲ್ಲದೆ ಅವರು ದೇವರ ಜತೆಗೆ ವಾದ ಮಾಡಲಾದೀತೆ ? ಆದೇನೆ ಆದರು ಈ ಗುಟ್ಟನ್ನು ಜೋರಾಗಿ ಹೇಳುವುದು ಬೇಡ - ಕೇಳಿಸಿಕೊಂಡು ರಾತ್ರಿಯೂ ಪವರ್ ಕಟ್ ಆರಂಭಿಸಿಬಿಟ್ಟರೆ ಆಮೇಲೆ ನಮ್ಮ ನಿಮ್ಮ ಬರಹಗಳನ್ನು ಆನ್ಲೈನಿನಲ್ಲಿ ಓದುವವರಾದರೂ ಯಾರು ಸಿಗುತ್ತಾರೆ ? :-)

Submitted by Nagaraj Bhadra Wed, 09/16/2015 - 00:03

ನಾಗೇಶ ಸರ್ ಅವರಿಗೆ ನಮಸ್ಕಾರಗಳು. ಬಿಬಿಎಂಪಿ ಗದ್ದುಗೆ ಗುದ್ದಾಡದಲ್ಲಿ ಬಿ.ಜೆ.ಪಿ ಯವರು ಸೋಲು, ಕತ್ತಲೆ ಭಾಗ್ಯದ ಬಗ್ಗೆ ತುಂಬಾ ಚೆನ್ನಾಗಿ ವರ್ಣಿಸಿದ್ದಿರಿ ನಿಮ್ಮ ಬರಹದಲ್ಲಿ ಸರ್..

Submitted by nageshamysore Wed, 09/16/2015 - 02:29

In reply to by Nagaraj Bhadra

ನಾಗರಾಜ್ ಭದ್ರರಿಗೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಈ ದೂರದಿಂದ ಕಂಡಷ್ಟು ಮತ್ತು ಕೇಳಿದಷ್ಟು ಸುದ್ದಿಗೆ ಸ್ವಲ್ಪ ಕಲ್ಪನೆಯ ಹೂರಣ ಸೇರಿಸಿ, ಗುಬ್ಬಣ್ಣನ ಮುಖೇನ 'ಡೆಲಿವರಿ' ಮಾಡಿದ 'ಲಘು ಹಾಸ್ಯದ ಹರಟೆ' ನಿಮಗೆ ಹಿಡಿಸಿದ್ದು ನಿಜಕ್ಕು ಖುಷಿ. ಆದರೆ ಬಿಬಿಎಂಪಿ ಗುದ್ದಾಟ ಮಾತ್ರ ನಿಜಕ್ಕು ಖೇದಕರ. ನಮ್ಮ ರಾಜಕೀಯದಲ್ಲಿ ಎಲ್ಲವೂ ಸಾಧ್ಯ - ಅದೇ ಕೊಂಚ ಹಾಸ್ಯಕ್ಕೂ ಸರಕಾಗುವುದು ವಿಪರ್ಯಾಸ :-)