ಲಘು ಹರಟೆ: ವಿಶ್ವ ಪುರುಷರ ದಿನ..! (ಗುಬ್ಬಣ್ಣ)

ಲಘು ಹರಟೆ: ವಿಶ್ವ ಪುರುಷರ ದಿನ..! (ಗುಬ್ಬಣ್ಣ)

ಬೂನ್ ಕೆಂಗ್ ಟ್ರೈನ್ ಸ್ಟೇಷನ್ನಿನ ಹತ್ತಿರದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು, ಪಕ್ಕದ ಸ್ವಯಂಚಾಲಿತ ಯಂತ್ರದಿಂದ ಬ್ಯಾಂಕಿನ ಪಾಸ್ ಬುಕ್ಕಿಗೆ ಎಂಟ್ರಿ ಹಾಕಿಸುತ್ತಿದ್ದೆ. ಹಿಂದೆ ಯಾರೊ 'ಸಾರ್..' ಎಂದು ಭುಸುಗುಟ್ಟಿದಂತಾಯ್ತು. ಅದು ಮೊದಲೆ ಹೆಚ್ಚು ಜನಸಂದಣಿಯ ಜಾಗ; ಜತೆಗೆ ನಾನು ವಾಸವಿರುವ ಲಿಟಲ್ ಇಂಡಿಯಾದಿಂದ ಎರಡು ಸ್ಟೇಷನ್ ಆಚೆಯಿರುವ, ವಾರದ ಕೊನೆಯ ವಾಕಿಂಗ್ ನೆಪದಲ್ಲಿ ನಡೆದು ಬಂದರೂ ಮೂವತ್ತು ನಿಮಿಷ ಹಿಡಿಯುತ್ತಿದ್ದ, ದೂರದ ಜಾಗ. ಆ ಸುತ್ತಮುತ್ತಲಲ್ಲಿ ನನಗಾವ ಪರಿಚಿತರು ಇರದಿದ್ದ ಕಾರಣ ಆ ಕರೆಗೆ ಗಮನ ಕೊಡದೆ ಮತ್ತೆ ಪಾಸ್ ಬುಕ್ಕಿನತ್ತ ಕಣ್ಣು ನೆಟ್ಟಿದ್ದೆ. ಎಂಟ್ರಿ ಮುಗಿಸಿ ಪಾಸ್ ಬುಕ್ ವಾಪಸೆತ್ತಿಕೊಂಡು ತಿರುಗಿ ಮೆಟ್ಟಿಲಿಳಿಯಲು ಹೊರಡುವ ಹೊತ್ತಿಗೆ ಸರಿಯಾಗಿ, ಮತ್ತೆ ಕೇಳಿಸಿತು ಗೊಗ್ಗರಾದ, ಅಳುವಿನ ದನಿಯಲ್ಲಿ, 'ಸಾರ್ರ್ರ್..'

'ಅರೆ! ಅಳುವ ದನಿಯಂತಿದ್ದರು ನಮ್ಮ ಗುಬ್ಬಣ್ಣನ ದನಿಯಿರುವಂತಿದೆಯಲ್ಲಾ?' ಎನಿಸಿ ತಿರುಗಿ ನೋಡಿದರೆ ಸಾಕ್ಷಾತ್ ಅವನೇ !! ಅಳುಬುರುಕನಂತೆ ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದಾನೆ - ಗಡ್ಡ ಮೀಸೆಯನ್ನು ಬೋಳಿಸದೆ ಕುರುಚಲು ಪಾರ್ಥೇನಿಯಮ್ಮಿನ ಹಾಗೆ ಅಸ್ತ್ಯವ್ಯಸ್ತ ಕೆದರಿದ ಕೂದಲು ಬಿಟ್ಟುಕೊಂಡು ಎದುರು ನಿಂತವನನ್ನು ಕಂಡು ಸ್ವಲ್ಪ ಗಾಬರಿಯೂ ಆಯ್ತು.

' ಏನೊ ಗುಬ್ಬಣ್ಣ ಇದು, ನಿನ್ನವಸ್ಥೆ? 'ಊರು ಹೋಗು, ಕಾಡು ಬಾ' ಅನ್ನೋ ಹಾಗೆ ಪೂರಾ ಕೇರಾಫ್ ಪುಟ್ಪಾತಾದವರ ತರ ಬಂದು ನಿಂತಿದ್ದಿಯಲ್ಲೊ... ಎಲ್ಲಾ ನೆಟ್ಟಗಿದೆ ತಾನೆ ?' ಎಂದೆ.

'ಅಯ್ಯೊ.. ಏನು ನೆಟ್ಟಗಿರೋದು ಬಿಡಿ ಸಾರ್... ಪೂರ್ತಿ ಚಿಂದಿ ಚಿತ್ರಾನ್ನಾ ಆಗಿ ಕೂತಿದ್ದೀನಿ.... ಬದುಕಿರೋದೆ ಬೇಡಾ ಅನಿಸಿಬಿಟ್ಟಿದೆ' ಎಂದ ಹತಾಶ ದನಿಯಲ್ಲಿ.

ಆಫೀಸಿನಲ್ಲೊ, ಮನೆಯಲ್ಲೊ ಏನಾದರು ಸಣ್ಣಪುಟ್ಟ ಎಡವಟ್ಟಾದರು, ಆಕಾಶವೆ ತಲೆಯ ಮೇಲೆ ಬಿದ್ದವರಂತೆ ಪೂರ್ತಿ ಕುಸಿದು ಹೋಗುವುದು ಗುಬ್ಬಣ್ಣನಿಗೆ ಮಾಮೂಲೆ. ಹಾಗಾದಾಗೆಲ್ಲ ಆ ಶೋಕವನ್ನು ಹಂಚಿಕೊಂಡು ವ್ಯಥೆ ಪಡುತ್ತಾ ಯಾರ ಜತೆಗಾದರೂ ಗೋಳಾಡಿಕೊಂಡರಷ್ಟೆ ಆ ಉದ್ವೇಗ ತುಸು ಶಮನವಾಗುತ್ತಿದ್ದುದ್ದು. ಸಿಂಗಪುರದಲ್ಲಿ 'ಹೂಂ' ಅಂದ ತಕ್ಷಣ ಅವನ ಗೋಳು ಕೇಳುವ ಬಾಂಧವರು ಯಾರು ಸಿಗುತ್ತಾರೆ ? ಇವತ್ತಿನ ಹಾಗೆ ವಾರದ ಕೊನೆಯಾದರೆ ನಾನೆ ಸಿಕ್ಕಿಬೀಳುತ್ತಿದ್ದೆ. ಮಾಮೂಲಿ ವಾರದ ದಿನವಾದರೆ, ವಿಧಿಯಿಲ್ಲದೆ 'ಮೊಬೈಲಾಸುರ'ನ ಮೊರೆ ಹೋಗಬೇಕಾಗುತ್ತಿತ್ತು. ತೀರಾ ಕ್ಷುಲ್ಲಕ ವಿಚಾರವನ್ನು 'ಬೆಟ್ಟ ತಲೆಯ ಮೇಲೆ ಬಿದ್ದವರ' ಹಾಗೆ ವಿಲೋಮಾನುಪಾತದಲ್ಲಿ ಉಬ್ಬಿಸಿ ಸಂಕಟ ಪಡುವ ಅವನ ರೀತಿ ನನಗೇನು ಹೊಸದಲ್ಲದ ಕಾರಣ, ಸಮಾಧಾನದ ದನಿಯಲ್ಲೆ 'ಬದುಕೋದೆ ಬೇಡ ಸಾಯಬೇಕು ಅಂತಲೆ ತೀರ್ಮಾನ ತೆಗೆದುಕೊಂಡಿದ್ದರೆ, ಇಲ್ಲೆ ಹತ್ತಿರದಲ್ಲೆ ಕೇಯಫ್ಸಿ ಇದೆ.. ಅಲ್ಲೊಂದು ರೌಂಡ್ ಚಿಕನ್ನು, ಕಾಫಿ ಕೊಡಿಸಿಬಿಡು; ಆಮೇಲೆ ಧಾರಳವಾಗಿ ನೆಮ್ಮದಿಯಿಂದ ಪ್ರಾಣ ಬಿಡು.. ಹೊಟ್ಟೆ ತುಂಬಿರುವಾಗ ಸತ್ತರೆ, ಜೀವ ಹೋಗುವಾಗ ಸಂಕಟವಾಗುವುದಿಲ್ಲವಂತೆ..' ಎಂದೆ.

ಸಾಧಾರಣ ಸಣ್ಣಪುಟ್ಟ ಜೋಕಿಗೂ 'ಗುರ್ರೆಂದು' ಹಾಯುವ ಪ್ರಾಣಿ ಗುಬ್ಬಣ್ಣ, ಇಂದು ಮಾತ್ರ ಯಾಕೊ ತೀರಾ 'ಆಫ್' ಮೂಡಿನಲ್ಲಿದ್ದಂತೆ ಕಂಡಿತು. ವಿಷಾದವೆ ಮೈವೆತ್ತ ದನಿಯಲ್ಲಿ, ನನ್ನ ದನಿಯ ತೆಳು ಹಾಸ್ಯದ ವ್ಯಂಗ್ಯವನ್ನು ಗಮನಿಸದೆ, ' ನಾನೆ ಬಾತಿಗೂ ಕಾಸಿಲ್ಲದೆ, ನೊಣ ಹೊಡೀತಾ ಇದೀನಿ.. ನಿಮಗೆಲ್ಲಿ ಕೇಯಫ್ಸಿಯಲ್ಲಿ ಕೊಡಿಸಲಿ ಬಿಡಿ, ಸಾರ್... ಸದ್ಯಕ್ಕೆ ನನಗೆ ಯಾರಾದರೂ ಒಂದು ಚೂರು ಇಲಿ ಪಾಷಾಣವೊ, ಫಾಲಿಡಾಲೊ ಕೊಟ್ಟರೆ ಸಾಕಾಗಿದೆ..' ಎಂದ.

ಸಾಧಾರಣ ತೀರಾ ಕುಗ್ಗಿ ಕುಸಿದು ಹೋದಾಗಷ್ಟೆ ಗುಬ್ಬಣ್ಣ, 'ಬಾತಿಗೂ ಕಾಸಿಲ್ಲದ..' ವರಸೆ ತೆಗೆಯುತ್ತಿದ್ದುದ್ದು. ಬಾತು ಎಂದರೆ ಬಾತುಕೋಳಿಯೇನಲ್ಲ ಬಿಡಿ... ಅವನ ಬ್ರಹ್ಮಚರ್ಯದ ದಿನಗಳಲ್ಲಿ ತಳ್ಳುಗಾಡಿಯಲ್ಲಿ ಎರಡು ಮೂರು ರೂಪಾಯಿಗೆಲ್ಲ ಸಿಗುತ್ತಿದ್ದ 'ಪಲಾವ್ ಬಾತನ್ನ' ದ ದಯೆಯಿಂದಾಗಿ, ಸಿಗುತ್ತಿದ್ದ ಅಷ್ಟಿಷ್ಟು ಕಾಸಿನಲ್ಲೆ ತಿಂಗಳೆಲ್ಲ ನಿಭಾಯಿಸುತ್ತಿದ್ದನಂತೆ ಗುಬ್ಬಣ್ಣ, ತಿಂಗಳ ಕೊನೆಯೂ ಸೇರಿದಂತೆ. ಎಂದೊ ಒಮ್ಮೊಮ್ಮೆ, ತಿಂಗಳ ಕೊನೆಯಲ್ಲಿ ಆ ಎರಡು ಮೂರು ರೂಪಾಯಿಗೂ ಬಿಕ್ಕಟ್ಟಾಗಿ, ಮೃಷ್ಟಾನ್ನವಿರಲಿ 'ಖಾಲಿ ಬಾತಿಗೂ ಕಾಸಿಲ್ಲವಲ್ಲ..' ಅನ್ನುವ ಸ್ಥಿತಿ ಬಂದುಬಿಡುತ್ತಿತ್ತಂತೆ. ಅದೇ ಗತ ವೈಭವದ ನೆನಪಿನಲ್ಲಿ ಮೂಡು ಕೆಟ್ಟಾಗೆಲ್ಲ ' ಬಾತಿಗೂ ಕಾಸಿಲ್ಲ' ಎನ್ನುವುದು ಅವನ ಅಭ್ಯಾಸ. ಸಿಂಗಪುರದಲ್ಲಿ ಕಾಸಾದರೂ ಯಾಕೆ ಬೇಕು? ಹೋದ ಕಡೆಯೆಲ್ಲ ಕಾರ್ಡಲ್ಲೆ ನಿಭಾಯಿಸಬಹುದು. ಆದರೂ ಅವನ ಆ ಮಾತಿಂದ ಸ್ವಲ್ಪ 'ತೀರಾ ಹದಗೆಟ್ಟ ಪರಿಸ್ಥಿತಿ' ಉದ್ಭವಿಸಿರುವಂತೆ ಭಾಸವಾಗಿ, ತೀರ ಕೆಣಕಲು ಹೋಗದೆ,

'ಸರಿ.. ಹಾಳಾಗಲಿ ಬಾ, ನಾನೆ ಕೊಡಿಸುತ್ತೇನೆ. ಕೇಯಫ್ಸಿಯ ಚಿಕನ್ನು ತಿಂದ ಮೇಲೆ ಬೇಕಾದರೆ ಲಿಟಲ್ ಇಂಡಿಯಾಗೆ ಇಬ್ಬರೂ ಒಟ್ಟಿಗೆ ಹೋಗಿ 'ಮುಸ್ತಫ' ಮಾಲಿನಲ್ಲಿ ಇಲಿ ಪಾಷಾಣ, ಫಾಲಿಡಾಲ್ ಸಿಗುತ್ತಾ ಅಂತ ಹುಡುಕೋಣ... ಸಿಕ್ಕಿದರೆ ಅಲ್ಲಿ ಮಾತ್ರ ಸಿಗಬೇಕಷ್ಟೆ... ಬೇರೆಲ್ಲೂ ಸಿಕ್ಕೊ ಚಾನ್ಸೆ ಇಲ್ಲ.. ಮೊದಲೆ ಇಲ್ಲಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಫಾಲಿಡಾಲ್ ಇರಲಿ, 'ಆಲ್ಕೋಹಾಲು' ಕೊಡಲ್ಲ' ಎಂದೆ.

' ಆಲ್ಕೋಹಾಲ್' ಅನ್ನುತ್ತಿದ್ದಂತೆ ಯಾಕೊ ಮುದುಡಿದಂತಿದ್ದ ಮುಖ ಸ್ವಲ್ಪ ಅರಳಿದಂತೆ ಕಂಡರು, ಅದನ್ನು ಕುಡಿಯಲು ಕೂಡ ' ಹೋಂ ಮಿನಿಸ್ಟ್ರಿ' ಪರ್ಮಿಶನ್ ಬೇಕೆಂದು ನೆನಪಾಯ್ತೇನೊ, ಮತ್ತೆ ಮುದುಡಿದ ತಾವರೆಯಂತೆ ಮಂಕಾಗಿ ಹೋಯ್ತು. ಅದೇ ಗುಂಗಿನಲ್ಲೆಂಬಂತೆ, 'ಅಲ್ಲಾ ಸಾರ್.. ಪ್ರತಿ ವರ್ಷ ವರ್ಷ ಮಾರ್ಚ್ ಎಂಟು ಬಂತು ಅಂದ್ರೆ ಸಾಕು, 'ವಿಶ್ವ ಮಹಿಳೆಯರ ದಿನ' ಅಂತ ಸೆಲೆಬ್ರೇಟ್ ಮಾಡ್ತಾರೆ... ಆದರೆ ಯಾಕೆ ಸಾರ್ ಅದೇ ರೀತಿ 'ವಿಶ್ವ ಪುರುಷರ ದಿನ ' ಅಂತೆ ಸೆಲಬ್ರೇಟ್ ಮಾಡಲ್ಲಾ? ' ಎಂದ ದುಗುಡದ ಬಿಕ್ಕುವ ದನಿಯಲ್ಲಿ.

ಅಲ್ಲಿಗೆ ಮ್ಯಾಟರ್ ಯಾಕೊ ಸ್ವಲ್ಪ ಸೀರಿಯಸ್ಸಾಗಿಯೆ ಇದೆ ಅನಿಸಿತು - ಮನೆಯಲ್ಲೇನೊ ಮೂರನೆಯ 'ಮಹಾಯುದ್ಧ' ನಡೆಸಿಯೆ ಬಂದಿರಬೇಕು. ಪೂರ್ತಿ ಧಾಳಿ ಮಾಡಿ 'ಶೇಪ್ ನಿಕಾಲ್' ಮಾಡಿ ಕಳಿಸಿಬಿಟ್ಟಿರಬೇಕು ಅವನ ಸತಿ ಶಿರೋಮಣಿ ಅನಿಸುತ್ತಿದ್ದಂತೆ ಯಾಕೊ ಅನುಕಂಪ ಉಕ್ಕುಕ್ಕಿ ಬಂತು. ಹೇಳಿ ಕೇಳಿ ನಾವು ಗಂಡುಪ್ರಾಣಿಗಳೆಲ್ಲದರ ಹಣೆಬರಹವೆಲ್ಲ ಒಂದೆ ರೀತಿ ತಾನೆ ? ಕೆಲವು ಪುಣ್ಯವಂತರಿಗೆ ಕಡಿಮೆ ದಬ್ಬಾಳಿಕೆಯ ಅನುಭವವಾದರೆ, ಮತ್ತೆ ಕೆಲ ದುರದೃಷ್ಟವಂತರಿಗೆ 'ತೀವ್ರ ನಿಗಾ ಘಟಕ'ದಲ್ಲಿಡಬಹುದಾದ ಅನುಭವ. ಎಲ್ಲಾ ಅವರವರು ಪಡೆದು ಬಂದದ್ದು - ಪಾಲಿಗೆ ಬಂದದ್ದು ಪಂಚಾಮೃತ.... ಆ ಸ್ವಾನುಭೂತಿಯ ಸಹಾನುಕಂಪದಲ್ಲೆ, 'ಯಾಕೊ ವಿಶ್ವ ಪುರುಷರ ದಿನದ ಮಾತಾಡುತ್ತಿದ್ದೀಯಾ?.. ಇವತ್ತು ನೋಡಿದರೆ 'ವಿಶ್ವ ಮಹಿಳಾ ದಿನ'... ಇವತ್ತು ಏನಿದ್ದರು ಮಹಿಳೆಯರ ಕಲ್ಯಾಣ, ಶ್ರೇಯೋಭಿವೃದ್ಧಿಯ ಮಾತಷ್ಟೆ ಆಡಬೇಕೆ ಹೊರತು ಪುರುಷರದಲ್ಲ.. ಇದ್ದಕ್ಕಿದ್ದಂತೆ ಆ ಟಾಪಿಕ್ ಯಾಕೊ ಬಂತು ?' ಎಂದು ಕೇಳಿದೆ.

' ಇದೇ ಸಾರ್.. ಎಗ್ಸಾಕ್ಟ್ಲಿ ಇದೇ ಮಾತು ಅವರದೂನು ಸಾರ್... ಇವತ್ತು ಮಹಿಳೆಯರ ದಿನವಂತೆ.. ಅದಕ್ಕೆ ಇವತ್ತಾದರೂ ಅವರಿಗೆ ಸಹಾನುಭೂತಿ ತೋರಿಸಿ, ಅವರ ಕಲ್ಯಾಣಾಭಿವೃದ್ಧಿಯ ಬಗ್ಗೆ ಮಾತಾಡಬೇಕಂತೆ ಸಾರ್... ಬರಿ ಮಾತಾಗಿದ್ದರೆ ಬಿಡಿ, ಗಂಟೆಗಟ್ಟಲೆ ಆಡೋಣಾ... ಆದರೆ ಅದನ್ನು ಕಾರ್ಯಗತ ಮಾಡಿ ಉದಾಹರಣೆಯಲ್ಲೂ ತೋರಿಸಬೇಕಂತೆ ಸಾರ್.. ಇಲ್ಲವಾದರೆ ಆ ಗಂಡಸರೆಲ್ಲ ಬೂಟಾಟಿಕೆ ದಾಸರು.. ಡೊಂಗಿಯವರು..ಮಹಿಳೆಯರ ಬಗೆ ನಿಜವಾದ ಕಾಳಜಿ ಇರದವರು ಎಂದೆಲ್ಲ ಶಂಖ ಊದಿ ಒಂದೇ ಸಮನೆ ನನ್ನ ತಲೆ ತಿಂದು ಬಿಟ್ಟರು ಸಾರು..'

'ತಲೆ ತಿಂದುಬಿಟ್ಟರು' ಎಂದು ಬಹುವಚನ ಬಳಸುತ್ತಿರುವುದನ್ನು ನೋಡಿದರೆ ಒಬ್ಬರಿಗಿಂತ ಹೆಚ್ಚು ಜನ ಅಟ್ಯಾಕ್ ಮಾಡಿರುವಂತೆ ಕಾಣುತ್ತಿದೆಯಲ್ಲಾ ? ಅಥವಾ 'ಮಹಿಳಾ ದಿನ' ಅನ್ನುವ ಗೌರವದಿಂದ ಬಹುವಚನ ಬಳಸುತ್ತಿದ್ದಾನೆಯೆ ? ಒಂದು ವೇಳೆ ಹೆಂಡತಿಯರು ಗಂಡಂದಿರನ್ನು ಬಹುವಚನದಲ್ಲಿ 'ರೀ...' ಎನ್ನುವ ಹಾಗೆ, ಸಮಾನತೆಯ ವಾದವನ್ನೊಡ್ಡಿ 'ಸತಿಯನ್ನೂ ಬಹುವಚನದಲ್ಲೆ ಸಂಬೋಧಿಸಬೇಕು ' ಎಂದೇನಾದರೂ ಠರಾವು ಪಾಸು ಮಾಡಿಬಿಟ್ಟಿದ್ದಾರೊ, ಹೇಗೆ - ವಿಶ್ವ ಮಹಿಳಾ ದಿನದ ಪ್ರಯುಕ್ತ ?' ಅನಿಸಿತು. ಅದೆ ಅನಿಸಿಕೆಯಲ್ಲೆ, ' ನಿನ್ನ ಹೆಂಡತಿಯನ್ನ ಯಾವಾಗಿಂದ ಬಹುವಚನದಲ್ಲಿ ಕರೆಯೋಕೆ ಶುರು ಮಾಡಿದೆ ಗುಬ್ಬಣ್ಣ ? ವಿಮೆನ್ಸ್ ಡೆ ಅಂತಾನಾ?' ಎಂದು ಕೇಳಿಯೆಬಿಟ್ಟೆ.

' ಅಯ್ಯೊ... ಅದೆಲ್ಲಿ ಬಂತು ಬಿಡಿ ಸಾರ್... ಹಾಗೆ ಬಹುವಚನದಲ್ಲಿ ಕರೆಯೋಕು ಸ್ವಾತಂತ್ರ ಇಲ್ಲ ಮನೇಲಿ.. ಹಾಕೆ ಕರೆದರೆ ಹೆಂಡತಿಗೆ ಅಶ್ರೇಯಸ್ಸು, ಅಪಶಕುನ, ಅಮಂಗಳ ಅಂತೆಲ್ಲ ಹೇಳಿ ಬಾಯಿ ಮುಚ್ಚಿಸಿಬಿಡುತ್ತಾಳೆ - ಏನೊ ಭಾರಿ ಮರ್ಯಾದೆ, ಗೌರವ ಕೊಡೊ ಹಾಗೆ..'

' ಮತ್ತೆ 'ಅವರು' ಅಂದಿದ್ದು ಯಾರಿಗೆ ? ನಿನ್ನ ಹೆಂಡ್ತಿ ಜತೆ ಮಗಳೂ ಸೇರ್ಕೊಂಡ್ ಬಿಟ್ಟಿದ್ದಾಳೊ ಏನು ಕಥೆ?'

' ಅವಳು ಸೇರ್ಕೊಂಡಿದ್ದಾಳೆ ಅನ್ನೋದು ನಿಜಾನೆ ಆದ್ರೂ ಅದನ್ನ ಹೇಗೊ ನಿಭಾಯಿಸಬಹುದಿತ್ತು ಸಾರ್.. ಅವರಿಬ್ಬರೂ ಯಾವಾಗಲೂ ಜತೇಲೆ ಇರೋ ಡಾಕಿನಿ-ಶಾಕಿನಿಯರು ತಾನೆ ?'

' ಏಯ್ ಗುಬ್ಬಣ್ಣ.. ಕೊಂಚ ಹುಷಾರೊ.. ಅದೂ ಹೇಳಿ ಕೇಳಿ 'ವಿಶ್ವ ಮಹಿಳಾ ದಿನ'.. ಅವತ್ತೆ ಫೌಲ್ ಲಾಂಗ್ವೇಜ್ ಬಳಸಿ ಅವಹೇಳನ ಮಾಡ್ತಾ ಇದೀಯಾ ಅಂತ ಕೇಸು ಗೀಸು ಹಾಕಿಬಿಟ್ಟಾರು..! ಈಗಂತೂ ಏನೇನು 'ಲಾ' ಗಳಿದೆಯೊ, ಯಾವ್ಯಾವ 'ಸೆಕ್ಷನ್ನು', 'ಕ್ಲಾಸ್' ಗಳಿವೆಯೊ ಒಂದೂ ಗೊತ್ತಾಗೊಲ್ಲ.. ಗಂಡ ಹೆಂಡ್ತಿ ಮಕ್ಕಳು ಅಂತ ಮುಖಾಮೂತಿ ನೋಡದೆ ಒದ್ದು ಒಳಗೆ ಹಾಕ್ಬಿಡ್ತಾರೆ.. ! ಸಾಲದ್ದಕ್ಕೆ ಅದೇಲ್ಲಿರ್ತಾರೊ ಕಾಣೆ.. ಎಲ್ಲಾ ಊರಿನ, ಎಲ್ಲಾ ಟೀವಿ ಚಾನಲ್ ಗಳವರು ಬೇರೆ ಬಂದು ವಕ್ಕರಿಸಿಕೊಂಡುಬಿಡ್ತಾರೆ ' ಬ್ರೇಕಿಂಗ್ ನ್ಯೂಸ್ - ಮನೆ ಮಹಿಳೆಯರ ಮೇಲೆ ಪುರುಷನ ದೌರ್ಜನ್ಯ.. ಪುಂಡ ಗಂಡ ಸದ್ಯಕ್ಕೆ ಪೋಲೀಸರ ಅತಿಥಿ!' ಅಂತೆಲ್ಲ ಹೆಡ್ಲೈನ್ ಕೊಟ್ಟು, ಪೋಟೊ, ವೀಡಿಯೋ ಎಲ್ಲಾ ಪದೆ ಪದೇ ತೋರಿಸಿ ಮಾನ ಮರ್ಯಾದೆನೆಲ್ಲ ಹರಾಜ್ ಹಾಕಿಬಿಡ್ತಾರೆ...' ಅರ್ಧ ನಿಜವಾದ ಭೀತಿಯಲ್ಲೆ ಉಸುರಿದೆ ಮೆಲುವಾದ ದನಿಯಲ್ಲಿ. ಆದರೆ ಗುಬ್ಬಣ್ಣ ಕೇರ್ ಮಾಡುವ ಮೂಡಿನಲ್ಲಿ ಇದ್ದಂತೆ ಕಾಣಲಿಲ್ಲ...

' ಅವೆಲ್ಲಾ ಇಂಡಿಯಾದಲ್ಲಿ ನಡೆಯುತ್ತೆ ಸಾರ್.. ಸಿಂಗಪುರದಲ್ಲಿ ಯಾರು ಕೇಳ್ತಾರೆ ? ಟೀವಿಯವರನ್ನೆ ಒದ್ದು ಒಳಗೆ ಹಾಕ್ತಾರೆ ಅಷ್ಟೆ... ಸದ್ಯ ಅದೂ ಇದ್ದುಬಿಟ್ಟಿದ್ರೆ ದೇವ್ರೆ ಗತಿ..'

'ಹೋಗ್ಲಿ ಬಿಡು... ಈಗ್ಲಾದ್ರೂ ಸರಿಯಾಗಿ ಹೇಳು... ತಾಯಿ ಮಗಳ ತಾಪತ್ರಯ ಅಲ್ಲಾಂದ್ರೆ ಬೇರೆ ಯಾವುದು ? ಇನ್ನಾವುದಾದರೂ 'ಚಿನ್ನವೀಡು' ಇಲ್ಲಾ ತಾನೆ?' ಎಂದೆ ಸ್ವಲ್ಪ ಪ್ರಚೋದಿಸುವ ದನಿಯಲ್ಲಿ..

'ಈ ಊರಲ್ಲಿ ಇರೋ ಗುಬ್ಬಿಗೂಡಂತ 'ವೀಡಿ'ಗೆ ಬಾಡಿಗೆ ಕೊಟ್ಟು ನಿಭಾಯಿಸೋದೆ ಕಷ್ಟ.. ಇನ್ನು ಚಿನ್ನವೀಡೆಲ್ಲಿ ಬರಬೇಕು ತಗೊಳ್ಳಿ ಸಾರ್.. ತಾಯಿ ಮಗಳಿಬ್ಬರು ಏನು ಕಮ್ಮಿ ಕೋಟಲೆಯೇನಲ್ಲ ಬಿಡಿ.. ಆದರೆ ಅವರಿಬ್ಬರ ಜತೆಗೆ ಅವರಮ್ಮ ಮತ್ತೆ ಜತೆಗೆ ನಮ್ಮಮ್ಮನೂ ಸೇರಿಕೊಂಡುಬಿಟ್ಟಿದ್ದಾರೆ.. ಗ್ರಹ, ತಾರೆ, ನಕ್ಷತ್ರ, ಉಲ್ಕೆ, ಧೂಮಪಾತಗಳೆಲ್ಲ ಒಂದೆ ಕಡೆ ವಕ್ಕರಿಸಿಕೊಂಡ ಹಾಗೆ..'

ಆಗ ನನಗೂ ತಟ್ಟನೆ ನೆನಪಾಗಿತ್ತು ಕೆಲವು ವಾರದ ಹಿಂದೆ ಗುಬ್ಬಣ್ಣ ಹೇಳಿದ್ದ ಸುದ್ದಿ. ಅದೊಂದು ದಾರುಣ, ಕರುಣಾಜನಕ ಸ್ಥಿತಿಯೆಂದೆ ಹೇಳಬಹುದೇನೊ ! ಸರಿ ಸುಮಾರು ವರ್ಷಗಳಿಂದ ಸಿಂಗಪುರ ನೋಡಲು ಮಗನ ಮನೆಗೆ ಬರುವ ಆಸೆ ಇಟ್ಟುಕೊಂಡಿದ್ದ ಅವರಮ್ಮನನ್ನು ಹಾಗೂ ಹೀಗೂ ಮಾಡಿ ಒಂದು ಪಾಸ್ಪೋರ್ಟ್ ಮಾಡಿಸಿ, ವೀಸಾ ಕೊಡಿಸಿ ಕರೆಸಿಕೊಂಡಿದ್ದ ಗುಬ್ಬಣ್ಣ.. ಆದರೆ ಅದೇನು ಗ್ರಹಚಾರವೊ ; ಅವನ ಹೆಂಡತಿಗೂ ಅವನಮ್ಮನಿಗು ಸದಾ ಎಣ್ಣೆ ಸೀಗೆಕಾಯಿ.. ಮೂರು ಹೊತ್ತು ಯಾವುದಾದರೊಂದು ಜಟಾಪಟಿ ಕುಸ್ತಿಯಲ್ಲೆ ಇಬ್ಬರೂ ನಿರತ. ಸಂಜೆ ಮನೆಗೆ ಬರುವಷ್ಟು ಹೊತ್ತಿಗೆ ಇಬ್ಬರು ತಲೆಗೊಂದಷ್ಟು ದೂರು ಹಿಡಿದುಕೊಂಡೆ ಕಾದು ತಲೆ ತಿಂದುಬಿಡುತ್ತಿದ್ದರು.. ಅವರಿಬ್ಬರ ಕಾಟದಲ್ಲಿ ಯಾರ ಪರವೂ ವಹಿಸಿಕೊಳ್ಳಲಾಗದೆ ಸುಸ್ತಾಗಿ ಹೋಗಿದ್ದ ಗುಬ್ಬಣ್ಣ..

' ಅವರಿಬ್ಬರೂ ಹಾವೂ ಮುಂಗೂಸಿಯ ತರ ಅಂತ ಮೊದಲೆ ನೀನೆ ಹೇಳಿದ್ದಿಯಲ್ಲ ? ' ಎಂದೆ.

'ಅಯ್ಯೊ ಭಯಂಕರ ಸಾರ್.. ನಮ್ಮಮ್ಮನನ್ನು ಯಾಕಾದ್ರೂ ಕರೆಸಿಕೊಂಡೆನೊ? ಅನಿಸುವಷ್ಟು.. ಇಲ್ಲಿರುವತನಕ ಇಬ್ಬರ ಪಕ್ಷವನ್ನು ವಹಿಸದೆ ತಟಸ್ಥ ನೀತಿ ಅನುಸರಿಸೋಣ ಅಂದುಕೊಂಡಿದ್ದೆ. ಆದರೆಲ್ಲಿ ಸಾರ್..ಸಾಧ್ಯ ? ನಮ್ಮಮ್ಮನಿಗೆ ಬಾಯಿ ಕೊಡಲು ತನಗಾಗುವುದಿಲ್ಲ ಅಂತ ನೆಪ ಹೇಳಿ ಹೋದ ವಾರ ನನ್ನ ಹೆಂಡತಿ, ಅವರಮ್ಮನನ್ನು ಕರೆಸಿಕೊಂಡುಬಿಟ್ಟಿದ್ದಾಳೆ ತನ್ನ ಸಪೋರ್ಟಿಗೆ...! ಈಗ ನೋ 'ಡೈರೆಕ್ಟ್ ಕಾಂಟೆಸ್ಟ್' ಏನಿ ಮೋರ್, ಸಾರ್.. 'ಎಲ್ಲಾ ಮಲ್ಟಿ ಕಾರ್ನರು' ಕಾಂಟೆಸ್ಟೆ!'

' ಅವರಮ್ಮನೂ' ಬಂದಿರುವ ವಿಷಯ ನನಗೂ ಹೊಸತು. ಅಲ್ಲಿಗೆ ನಾಲ್ಕು ಹೆಂಗಸರ ಮಧ್ಯೆ ಸಿಕ್ಕಿಹಾಕಿಕೊಂಡ ಅವನೊಬ್ಬನ ವಿಷಾದ ಕಥಾನಕ ಕಣ್ಮುಂದೆ ಕಟ್ಟಿದಂತಾಯ್ತು... ' ಅದೂ ಒಂದು ತರ ಒಳ್ಳೆಯದೆ ಅಲ್ವೇನೊ ಗುಬ್ಬಣ್ಣ..? ಅವರವರೆ ಕಚ್ಚಾಡಿಕೊಂಡು ಸುಮ್ಮನಾಗಲಿ ಅಂತ ಸುಮ್ಮನಿದ್ದುಬಿಡುವುದಲ್ಲವಾ? ' ಎಂದೆ.

ಗುಬ್ಬಣ್ಣ ಒಂದರೆಗಳಿಗೆ ಮೌನತಳೆದು ನಂತರ, 'ಅಲ್ಲೆ ಸಾರ್ ಬಂದಿರೋದು ನಿಜವಾದ ತೊಡಕು..' ಎಂದ. ನನಗೆ ತೊಡಕೇನೆಂದು ಅರ್ಥವಾಗಲಿಲ್ಲ. ಆ ಭಾವದಲ್ಲೆ ' ಅಂದರೆ?' ಎಂದೆ.

' ದಿನಾ ಒಂದಲ್ಲಾ ಒಂದು ವಿಷಯಕ್ಕೆ ದಿನಾ ಕಚ್ಚಾಡುತ್ತಿದ್ದವರು ಈಗ ಇದ್ದಕ್ಕಿದ್ದಂತೆ ಒಂದಾಗಿಬಿಟ್ಟಿದ್ದಾರೆ ಸಾರ್... ವಿಶ್ವ ಮಹಿಳಾ ದಿನದ ಪ್ರಯುಕ್ತಾ...!'

'ಆಹ್..! ' ಎಂದೆ ನಾನು ಅವಾಕ್ಕಾದ ದನಿಯಲ್ಲಿ.

' ಅವರಮ್ಮ ಬಂದ ಮೇಲೆ ತಾಯಿ, ಮಗಳು ಒಂದು ಕಡೆ, ನಮ್ಮಮ್ಮ ಇನ್ನೊಂದು ಕಡೆ, ಇಬ್ಬರ ಮಧ್ಯೆ ಒಗ್ಗರಣೆಗೆ ನನ್ನ ಮಗಳು ಬೇರೆ - 'ಮೂರು ಕೊಟ್ಟರೆ ಅತ್ತ, ಆರು ಕೊಟ್ಟರೆ ಇತ್ತ..' ಅನ್ನುವಂತೆ... ಮನೆಯೆ ಕುರುಕ್ಷೇತ್ರ ಮಾಡಿಬಿಡುತ್ತಿದ್ದರು. ನನಗೂ ನೋಡಿ ನೋಡಿ ಸಾಕಾಗಿ, ಹೊರಡಬೇಕಿದ್ದ ದಿನಕ್ಕಿಂತ ಎರಡು ವಾರ ಮುಂಚಿತವಾಗಿಯೆ 'ಅಮ್ಮಾ, ನೀನು ವಾಪಸ್ಸು ಹೋಗಿಬಿಡು ಅಂದೆ.. ಅವಳು ಅತ್ತೂ ಕರೆದು ಗೋಳಾಡಿ ಕೊನೆಗೆ, ' ಆಯ್ತು ಮಗಾ.. ಹೆಂಗೂ ಬೇಗ ಹೋಗೂಂತಿದಿಯಾ.. ಸಾಯೋ ಕಾಲ್ದಲ್ಲಿ ಒಂದಾಸೆ - ನಾಕೆಳೆ ಬಂಗಾರದ ಸರ ಹಾಕೊಂಡಿರಬೇಕು, ಸಾಯೋತನಕ ಅಂತ.. ಅದೊಂದು ಕೊಡಿಸಿಬಿಡು, ನೆಮ್ಮದಿಯಾಗಿ ಹೋಗ್ಬಿಡ್ತೀನಿ.. ನಾ ಸತ್ತ ಮೇಲೆ ಅದು ಹೆಂಗಿದ್ರೂ ನಿಂದೆ ತಾನೆ..?' ಅಂತೆಲ್ಲಾ ತಲೆ ಸವರಿ ಒಪ್ಪಿಸಿಬಿಟ್ಟಳು.. ಅದು ಏನಾಯ್ತೊ, ಹೇಗಾಯ್ತೊ ಗೊತ್ತಿಲ್ಲಾ ಸಾರ್...ನಮ್ಮಿಬ್ಬರಲ್ಲೆ ಗುಟ್ಟಾಗಿದ್ದ ಈ ವಿಷಯ 'ಆಪೋಸಿಶನ್ ಪಾರ್ಟಿಗೂ' ಗೊತ್ತಾಗಿ ಹೋಗಿದೆ ಸಾರ್.. ಈಗ ಇದ್ದಕ್ಕಿದ್ದ ಹಾಗೆ 'ವಿಶ್ವ ಮಹಿಳೆಯರ ದಿನ' ಅಂತ ಎಲ್ಲಾ ಒಂದಾಗಿಬಿಟ್ಟಿದ್ದಾರೆ ಸಾರ್..'

ಹೆಂಗಸರ ವಿಷಯದಲ್ಲಿ ಗುಟ್ಟೆಲ್ಲಿ ಬಂತು? ಆ ಮುದುಕಿಯೆ ಬೇಕಂತಲೆ ಬಿನ್ನಾಣ ಮಾಡಿ ಒಡವೆ ಹಾಕಿಕೊಂಡು ತೋರಿಸಿಕೊಂಡಿರಬೇಕು, ಅವರಿಗೆಲ್ಲ ಹೊಟ್ಟೆ ಉರಿಸುವ ಸಲುವಾಗಿ. ಪೆದ್ದು ಗುಬ್ಬಣ್ಣನಿಗೆ ಅದೆಲ್ಲಾ ತಂತ್ರದರಿವಾಗದೆ 'ಹೇಗೊ ಗೊತ್ತಾಗಿಬಿಟ್ಟಿದೆ' ಅಂದುಕೊಂಡಿದ್ದಾನೆ..

'ಅರೆ..! ಗುಗ್ಗು ಕಣೊ ನೀನು ಗುಬ್ಬಣ್ಣಾ.. ಅವರೆಲ್ಲಾ ಗಲಾಟೆ ನಿಲ್ಸಿ ಒಂದಾಗಿದಾರೆ ಅಂದ್ರೆ ಖುಷಿ ಪಡೋದು ಬಿಟ್ಟು ಹರಳೆಣ್ಣೆ ಮುಖ ಯಾಕೊ ಮಾಡ್ಕೋತಿ?' ಎಂದೆ ನಾನು ಅಚ್ಚರಿಯಿಂದ.

' ಅಯ್ಯೊ.. ಅವರೆಲ್ಲ ಸಾಮಾನ್ಯದವರು ಅಂದ್ಕೋಬೇಡಿ ಸಾರ್... ಅವರು ಒಂದಾಗಿರೋದು ಆ ಲೆಕ್ಕದಲ್ಲಲ್ಲಾ... ಅದು ಹೇಗೆ ಮನೆ ಹೆಂಗಸರಲ್ಲೆ ಒಬ್ಬರಿಗೆ ಬಂಗಾರದ ಒಡವೆ ಮಾಡಿಸಿಕೊಟ್ಟು ಮಿಕ್ಕವರನ್ನು ಕಡೆಗಣಿಸಲು ಸಾಧ್ಯ?' ಅನ್ನೊ ಲಾಜಿಕ್...! ಈ ವಿಷಯದಲ್ಲಿ ಮಾತ್ರ ನಾಲ್ಕು ಜನವೂ ಒಟ್ಟಾಗಿ ಬಿಟ್ಟು ಒಂದೆ ತರದ ಒಂದೆ ತೂಕದ, ಒಂದೆ ಡಿಸೈನಿನ ನಾಲ್ಕು ಚೈನು ಕೇಳ್ತಾ ಇದಾರೆ ಸಾರ್ .... :-( ಒಂದಕ್ಕೆ ಉಭ ಶುಭ ಅನಲಾಗದೆ ಎದುಸಿರು ಬಿಡ್ತಾ ಇದೀನಿ.. ಇವರು ನಾಲ್ಕು ಅಂದರೆ ನಾನೆಲ್ಲಿ ಹೋಗಲಿ ಸಾರ್..'ಗಂಟಲುಬ್ಬಿಸಿ ಅಳುವಿನ ದನಿಯಲ್ಲಿ ನುಡಿದ ಗುಬ್ಬಣ್ಣ..

ನನಗೀಗ ಗುಬ್ಬಣ್ಣನ ಕಷ್ಟ ಪೂರ್ತಿ ಅರಿವಾಯ್ತು.. ಒಂದು ತಿಂಗಳಿಂದ ಆಗಲೆ ಗುಬ್ಬಣ್ಣನೆ ಎಲ್ಲಾದಕ್ಕು ಮನೆಯಾಳಿನಂತೆ ಆಗಿಬಿಟ್ಟಿದ್ದಾನೆ. 'ನಿಮ್ಮಮ್ಮ ಇರುವತನಕ ನಾನು ಒಲೆ ಹಚ್ಚಲ್ಲ' ಎಂದು ಸತಿ ಶಪಥವಾದ ಮೇಲಂತೂ ದಿನವೂ ಅವನಿಗೆ ಹೊರಗೆ ಊಟ, ಜತೆಗೆ ಮನೆಯವರಿಗೆಲ್ಲ ಪಾರ್ಸೆಲ್ ಕಟ್ಟಿಸಿಕೊಂಡು ಬರುವ ದುರ್ವಿಧಿ... ಅಲ್ಲಲ್ಲಿ ಅಡಿಗೆ ಮಾಡಿದರೂ ಮನೆ ಹತ್ತಿರದ ಮಾರ್ಕೆಟ್ಟು, ದಿನಸಿ ಅಂಗಡಿಗು ಗುಬ್ಬಣ್ಣನದೆ ಕೈಂಕರ್ಯ. ಹೀಗಾಗಿ ಅವರೆಲ್ಲರ ನಡುವೆ ಸಿಕ್ಕಿ ಈಗಾಗಲೆ ಹೈರಾಣಾಗಿಹೋಗಿದ್ದಾನೆ ಗುಬ್ಬಣ್ಣ.. ಇದರ ಜತೆಗೆ ಈಗ ಚಿನ್ನದ ಸರ ಬೇರೆ...!

' ನಾಲ್ಕು ಜನ ಸೇರಿ ಈಗ ನನ್ನ ತಿಥಿಯಾಗುವುದೊಂದು ಬಾಕಿ ಸಾರ್.. ಹಾಳಾದ 'ವಿಶ್ವ ಪುರುಷರ ದಿನ' ಅಂತೇನಾದ್ರೂ ಇದ್ರೆ ನೋಡಿ ಹೇಳಿ ಸಾರ್..'

'ಹಾಗಂತ ಹೆಸರಿಗೆ ಒಂದು ದಿನವೇನೊ ಇದೆ ಗುಬ್ಬಣ್ಣ, ನವೆಂಬರ್ ಹತ್ತೊಂಭತ್ತಕ್ಕೆ... ಆದರೆ ಮಹಿಳಾ ದಿನದ ಹಾಗೆ ಯಾರೂ ಹೆಚ್ಚು ಆಚರಿಸೊ ಹಾಗೆ ಕಾಣ್ಲಿಲ್ಲ.. ಅಷ್ಟೆ..'

' ಅದೇ ಸಾರ್.. ನಾವ್ ಮಾಡೊ ತಪ್ಪು.. ನಾವು ಜೋರಾಗಿ ಸೆಲೆಬ್ರೇಟ್ ಮಾಡ್ಬೇಕು ಸಾ.. ಆಗಲೆ ನಮಗು ಸ್ವಲ್ಪ ಬಲ ಬರೋದು.. ಮಹಿಳಾ ದಿನ, ಅಮ್ಮನ ದಿನ, ಅಪ್ಪನ ದಿನ ಅಂತೆಲ್ಲ ಏನೇನೊ ದಿನ ಬರುತ್ತೆ. ಗಂಡಂದಿರ ದಿನ, ಗಂಡಸರ ದಿನ ಅಂತ ಮಾತ್ರ ಎಲ್ಲೂ ಕಾಣುವುದಿಲ್ಲ.... ನಮ್ಮ ಮನೆಯ ಈ ಹೆಂಗಸರಂತೂ, ಅಂತ ಒಂದು ದಿನವೆ ಇಲ್ಲಾ ಅಂತಾ ವಾದಿಸ್ಕೊಂಡು ಕೂತಿದಾರೆ ಸಾರ್...'

' ಅದೇನ್ ಮಹಾ ವಿಷಯ ಗುಬ್ಬಣ್ಣ..? ಗೂಗಲ್ ಮಾಡಿದರೆ ನಿನಗೆ ಸಿಗ್ತಾ ಇತ್ತು.. ಅದಿರಲಿ, ಅವರಿಗ್ಯಾಕೆ ಅದು ಅಷ್ಟೊಂದು ಇಂಟ್ರೆಷ್ಟು?' ನಾನೆಂದೆ ಕುತೂಹಲದಲ್ಲಿ.

' ಅವರಿಗೇನೂ ಇಲ್ಲಾ ಬಿಡಿ ಸಾರ್.. ನಾನು ನಯವಾಗಿಯೆ 'ವಿಶ್ವ ಮಹಿಳಾ ದಿನ ಮಹಿಳೆಯರು ಬಯಸಿದ್ದು ಕೊಡಿಸಬೇಕು ಆನ್ನೋದು ನಿಮ್ಮ ಲಾಜಿಕ್ ಆದರೆ , ನಾನು ಹೇಗೆ ಮಹಿಳಾ ದಿನ ನೀವು ಕೇಳಿದ್ದು ತೆಗೆದುಕೊಡಲು ಒಪ್ಪುತ್ತೇನೊ, ಹಾಗೆ ನೀವು ಪುರುಷರ ದಿನ ನಾನು ಕೇಳಿದ್ದು ಕೊಡಿಸಬೇಕು.. ಹಾಗಿದ್ದರೆ ಚಿನ್ನದ ಸರ, ಇಲ್ಲದಿದ್ರೆ ಇಲ್ಲಾ ' ಅಂದುಬಿಟ್ಟೆ ಸಾರ್.. ಆದಕ್ಕೆ, ಅಂತಹ ಒಂದು ದಿನವೆ ಇಲ್ಲ ಅಂತ ಒಂದೆ ಸಮ ವಾದಿಸುತ್ತಿದ್ದಾರೆ... ಈಗ ನೀವು ಡೇಟ್ ಸಮೇತ ಡೀಟೇಲ್ಸ್ ಹೇಳಿದ್ದೀರಾ... ಅದನ್ನೆ ಹಿಡಿದುಕೊಂಡು ಎಲ್ಲರಿಗೂ ಬೆಂಡು ತೆಗೆದುಬಿಡುತ್ತೇನೆ.. ಆಗ ಈ ಚಿನ್ನದ ಸರದ ಪ್ರಸಂಗಕ್ಕೆ ಒಂದು 'ಪುಲ್ ಸ್ಟಾಪ್' ಹಾಕಬಹುದೇನೊ ' ಎಂದ.

' ಆಹಾ..'

' ಅಷ್ಟೆ ಅಲ್ಲಾ ಸಾರ್.. ಅವತ್ತೊಂದು ದಿನವಾದರು ಎಲ್ಲಾ ಜವಾನಿಕೆ ಕೆಲಸ ಬಿಟ್ಟು ಫ್ರೀಯಾಗಿ, ಯಾವುದಾದರೂ ಕ್ಲಬ್ಬಲ್ಲೊ, ಪಬ್ಬಲ್ಲೊ ಕಾಲ ಹಾಕಬಹುದು ಸಾರ್..'ವಿಶ್ವ ಪುರುಷರ' ದಿನದ ಲೆಕ್ಕದಲ್ಲಿ..'

'ಎಂತಾ ಕಾಲ ಬಂದು ಹೋಯ್ತೊ ಗುಬ್ಬಣ್ಣ.. ಸೀತಾ, ದ್ರೌಪತಿಯಂತಹ ಪತಿವ್ರತೆಯರ ಈ ನಾಡಿನಲ್ಲಿ ಹೆಂಗಸರಿಗೆ ಹೆದರಿ, ಮುದುರಿ ಕೂರುವ ಕಾಲ ಬಂದೋಯ್ತಲ್ಲೊ...?'

'ನಿಜ ಸಾರ್... ನಾವು ನಮ್ಮ ರೈಟ್ಸ್ ಗೆ ಹೋರಾಡಬೇಕು ಸಾರ್.. ಸಂಘಟಿತರಾಗಿ ಮುನ್ನಡೆಯಬೇಕು ಸಾರ್.. ಅದಕ್ಕೆ ಪುರುಷ ದಿನಕ್ಕೆ 'ಜೈ' ಅನ್ನಿ ಸಾರ್..ಜೋರಾಗಿ..'... ನಾನು ಜೋರಾಗಿಯೆ ಜೈಕಾರ ಹಾಕಿದೆ, ಅಲ್ಲಾರಿಗೆ ತಾನೆ ಕನ್ನಡ ಬರುತ್ತದೆ ? ಎನ್ನುವ ಆತ್ಮವಿಶ್ವಾಸದಲ್ಲಿ. ಆದರೂ ಒಮ್ಮೆ ಸುತ್ತಮುತ್ತ ಕಣ್ಣಾಡಿಸಿದ್ದೆ , ಯಾರಾದರು ಕೇಳಿಸಿಕೊಂಡಿದ್ದರೆ ಎನ್ನುವ ಭೀತಿಯಲ್ಲೆ.

' ಸರಿ ನಿಮ್ಮಮ್ಮನಿಗೆ ಕೊಡಿಸಿದ ಸರಕ್ಕೇನು ಮಾಡ್ತೀಯಾ?' ಎಂದೆ ಅದರ ಗತಿಯೇನಾಯ್ತೊ? ಅನ್ನೊ ಕುತೂಹಲದಲ್ಲಿ..

' ಈ ಗಲಾಟೆ ಶುರುವಾಗಿದ್ದೆ, ಮೊದಲು ವಾಪಸ್ ಕಿತ್ತಿಟ್ಕೊಂಡೆ ಸಾರ್.. ಜಿ.ಎಂ.ಟಿ ಜುವೆಲರ್ಸಲ್ಲಿ ಕೊಡಿಸಿದ್ದು, ಹೇಗೂ ವಾರದೊಳಗೆ ವಾಪಸ್ ಕೊಟ್ರೆ ವಾಪಸ್ ತೊಗೋತಾರೆ, ಸ್ವಲ್ಪ ಕಮಿಷನ್ ಹಿಡ್ಕೊಂಡು.. ನಾಳೇನೆ ಹೋಗಿ ರಿಟರ್ನ್ ಮಾಡಿಬಿಡ್ತೀನಿ ' ಎಂದ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಹೊಸ ಧೈರ್ಯದಲ್ಲಿ.. ವಿಶ್ವ ಪುರುಷರ ದಿನ ಅನ್ನೋದೊಂದು ಅಸ್ತಿತ್ವದಲ್ಲಿದೆ ಅನ್ನೋದೆ ಅವನಿಗೆ ನೂರಾನೆ ಬಲ ತಂದ ಹಾಗೆ ಕಾಣಿಸಿ, ' ಸರಿ ಬಿಡೋ ಗುಬ್ಬಣ್ಣ..ಅಲ್ಲಿಗೆ ಯಾರಿಗೂ ಕೊಡಿಸಲಿಲ್ಲಾ ಅಂತಾದ್ರೆ, ಮ್ಯಾಟರ್ ಅಷ್ಟು ಸೀರಿಯಸ್ಸಾಗಲ್ಲ.. ಒಬ್ಬರಿಗೆ ಕೊಡಿಸಿ, ಇನ್ನೊಬ್ಬರಿಗೆ ಕೊಡಿಸಲಿಲ್ಲ ಅಂದ್ರೆ ಮಾತ್ರ ತಾಪತ್ರಯ..' ಎಂದೆ ತುಸು ಸಮಾಧಾನದ ದನಿಯಲ್ಲಿ. ಈ ಸೀನರಿಯೋದಲ್ಲಿ ಗುಬ್ಬಣ್ಣನಿಗೆ ಬರಿ ಚೂರುಪಾರು ಮೂಗೇಟು ಬೀಳಬಹುದೆ ಹೊರತು, ಪ್ರಾಣಾಂತಿಕ ಪೆಟ್ಟೇನೂ ಆಗುವುದಿಲ್ಲಾ..

' ಸರಿ ಬನ್ನಿ ಸಾರ್.. ಒಳ್ಳೆ ಗುಡ್ ನ್ಯೂಸ್ ಕೊಟ್ಟಿದ್ದೀರಾ.... ಅದೆ ನೆಪದಲ್ಲಿ ಕೇಯಫ್ಸಿಯಲ್ಲೊಂದು ಮೀಲ್ಸ್ ಹೊಡೆದೇ ಬಿಡೋಣ ..' ಎಂದ ಗುಬ್ಬಣ್ಣ ತಾನೆ 'ಮೆನ್ಸ್ ಲಿಬ್' ನ ಆಧುನಿಕ ವಕ್ತಾರನಾದವನ ಗತ್ತಿನಲ್ಲಿ..

ಚಿಕನ್ನುಗಳಂತೆ ಆಡುವ ಪುರುಷರಿಗೆ ಕೇಯಫ್ಸಿ ಚಿಕನ್ ತಿಂದ ಮೇಲಾದರು ಸ್ವಲ್ಪ ಲಯನ್ನುಗಳಾಗುವ ಹುರುಪು ಬಂದೀತೆಂದುಕೊಂಡು ಗುಬ್ಬಣ್ಣನ ಜತೆ ನಾನೂ ಹೆಜ್ಜೆ ಹಾಕಿದ್ದೆ, ಕುರಿಯಂತೆ ತಲೆತಗ್ಗಿಸಿ ಗುಬ್ಬಣ್ಣನನ್ನು ಹಿಂಬಾಲಿಸುತ್ತಲೆ!

(ಕಾಲ್ಪನಿಕ ಹರಟೆ - 'ಮಹಿಳೆ ಮತ್ತು ಪುರುಷರ ಸಂಯುಕ್ತ ಕ್ಷಮೆ ಕೋರಿ!')

- ನಾಗೇಶಮೈಸೂರು

Comments

Submitted by santhosha shastry Thu, 11/19/2015 - 23:24

ಪುರುಷ ಸಿಂಹವಾಗಲು ಹೋಗಿ ಎಂದಿನಂತೆ ಗ್ರಾಮಸಿಂಹವಾಗುವುದೇ ನಮ್ಮ ಹಣೆಯಲ್ಲಿ ಬರೆದಿರುವುದು. ಇದನ್ನು ಬಹಳ ಸೊಗಸಾಗಿ ಹೇಳಿಸಿದ್ದೀರಾ ರಾಯರು ಗುಬ್ಬಣ್ಣನ ಮೂಲಕ.

Submitted by nageshamysore Thu, 11/19/2015 - 23:55

In reply to by santhosha shastry

ಆದರೂ ಹೊರಗಿನವರ ಕಣ್ಣಿಗೆ ಬೀಳುವಂತೆ ಡ್ಯುಯೆಟ್ಟು ಹಾಡುವುದು ಮಾತ್ರ ' ಪುರುಷ ಸಿಂಹನ ಬಾಹು ಬಂಧನ ನಮ್ಮ ಕಲ್ಯಾಣ' ಅಂತ ಅಲ್ವಾ ಶಾಸ್ತ್ರಿಗಳೆ ? ಪುರುಷಸಿಂಹ-ಗ್ರಾಮಸಿಂಹ ಅಂತ ಒಳ್ಳೆ ಹೋಲಿಕೆ ಕೊಟ್ಟಿದ್ದೀರ (ನನ್ನ ಚಿಕನ್ನು - ಲಯನ್ನು ಗಿಂತ ನೂರಾರು ಪಾಲು ವಾಸಿ!). ಗ್ರಾಮಸಿಂಹವಾಗಿ ಹಾಕಿದ್ದು ತಿಂದ್ಕೊಂಡು ಬಿದ್ದಿರೋದೆ ಶ್ರೇಯಸ್ಸಾದರೂ, ನವೆಂಬರು ಹತ್ತೊಂಭತ್ತಕ್ಕೆ ಒಂದ್ಸಾರಿ 'ಗುರ್' ಅಂದ ಹಾಗೆ ಶಾಸ್ತ್ರ ಮಾಡಿಬಿಟ್ರೆ ಸರಿ - ಅಂತರ ರಾಷ್ಟ್ರೀಯ ಪುರುಷರ ದಿನ ಅಂತ ಒಮ್ಮೆ ನೆನಪಿಸಿಕೊಳ್ಳೊಕೆ ( ಅದೂ ಒಂದು ಗಳಿಗೆ ಅಷ್ಟೆ - ನವೆಂಬರ 19 ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಹುಟ್ಟಿದ ದಿನಾನು ಹೌದಂತೆ.. ಅವಳ ಅವತಾರ ಎತ್ತಿ ಬರೋಕೆ ಛಾನ್ಸ್ ಕೊಡದಿರೋದೆ ವಾಸಿ ಅಲ್ವಾ? )

ಏನೇ ಆಗ್ಲಿ ಧೈರ್ಯವಾಗಿ ಪ್ರತಿಕ್ರಿಯೆ ಕೊಟ್ಟಿದ್ದಿರಾ - ಅದಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು ಶಾಸ್ತ್ರಿಗಳೆ :-)

Submitted by ಗಣೇಶ Thu, 11/19/2015 - 23:45

>>>ಕಾಲ್ಪನಿಕ ಹರಟೆ - 'ಮಹಿಳೆ ಮತ್ತು ಪುರುಷರ ಸಂಯುಕ್ತ ಕ್ಷಮೆ ಕೋರಿ!
ನಾಗೇಶರೆ,
ಪುರುಷರ ಕ್ಷಮೆ ಬೇಕಾಗಿಯೇ ಇಲ್ಲ. ಇನ್ನು ಮಹಿಳೆಯರು- ಗುಬ್ಬಣ್ಣನ ಮನೆಯಲ್ಲಿ ನೀವೇ ಐಡಿಯಾ ಕೊಟ್ಟ ವಿಷಯ ಗೊತ್ತಾದರೆ....ಗೋವಿಂದಾ....
ಹಾಗೇ ಮನೆಗೆ ಹಿಂದಿರುಗುವಾಗ ಜಿ.ಎಂ.ಟಿ ಜುವೆಲರ್ಸಗೆ ಭೇಟಿ ನೀಡುವುದೂ ಒಳಿತು.:)
ಹಾಸ್ಯ ಸೂಪರ್.

Submitted by nageshamysore Fri, 11/20/2015 - 00:11

In reply to by ಗಣೇಶ

ಗಣೇಶ್ ಜೀ ನಮಸ್ಕಾರ.. ನೋಡಿ ಪುರುಷ ಸಿಂಹಗಳೆಲ್ಲ ಧೈರ್ಯವಾಗಿ ಮುಂದೆ ಬಂದು ಪ್ರತಿಕ್ರಿಯೆ ಕೊಡ್ತಾ ಇದಾರೆ ಅಂದ್ರೆ ಅದೂ ದೊಡ್ಡ ಇಂಪ್ರೂಮೆಂಟ್ ಅಲ್ವಾ? ಆದ್ರೆ ಸ್ವಲ್ಪ ಹುಷಾರಾಗಿರಬೇಕೂ ಅಂದ್ರೆ ಗ್ರಾಮ ಸಿಂಹಗಳ ಹಾಗೆ ಗುಟ್ಟಾಗಿ ಓದೋದೆ ವಾಸಿ..! ದೀಪಾವಳಿ ನೆಪದಲ್ಲಿ ಮನೆಗೆ ಬರೀ ಜಿಎಂಟೀ ಏನ್ ಬಂತು, ಅರ್ಧ ಮುಸ್ತಫಾ ಮಾಲನ್ನೆ ತಂದು ಹಾಕ್ಕಿದೀನಿ ( ಹಾಳು ಕ್ರೆಡಿಟ್ ಕಾರ್ಡ್ ಸಾವಾಸ) - ಸೊ ಸದ್ಯಕ್ಕೆ ಆ ಎಂಡ್ ಸೇಫ್..!

ನಿಜವಾದ ಡೆಂಜರು ಇರೋದು - ಮುಂದಿನ ವಾರ ಗುಬ್ಬಣ್ಣನ ಮನೆಗೆ ಹೋಗ್ಬೇಕು - ಅಲ್ಲಿಗೆ ಆನಂದ ಭವನದ ಒಂದು ವಡೆ ಪೊಂಗಲ್ ಪ್ಯಾಕೆಟ್ ತೊಗೊಂಡು ಹೋಗಿ ಕೊಡೋದು ಅಂತ ಡಿಸೈಡ್ ಮಾಡಿಬಿಟ್ಟೀದೀನಿ - ಆಕೆಗೆ ಅದೂ ಅಂದ್ರೆ ಪಂಚಪ್ರಾಣವಂತೆ... 'ಪೊಂಗಲ್ಲು ಇದ್ರೆ ತಂಗಳಾದ್ರು ತಿಂತಾಳೆ' ಅಂತಿರ್ತಾನೆ ಗುಬ್ಬಣ್ಣ.. ಸದ್ಯಕ್ಕೆ ಅದೊಂದೆ 'ಕೇಫ್ ಆಫ್ ಗೂಡ್ ಹೋಪ್' ಅಷ್ಟೊತ್ತಿಗೆ ಎಲ್ಲಾ ತಣ್ಣಗಾಗಿರ್ಲಿ ಅಂತ ಕಾಳಿಯಮ್ಮನ ಗುಡಿ ಗಣೇಶನಿಗೆ ಒಂದು ಅರ್ಚನೆ ಮಾಡಿಸಿ ಹೊರಡೋದು ಇದೆ ಪ್ಲಾನ್ ಬೀ ತರ.. ಮಿಕ್ಕಿದ್ದೆಲ್ಲ ದೈವೇಚ್ಚೆ..!

ಪ್ರತಿಕ್ರಿಯೆಗೆ ಧನ್ಯವಾದಗಳು ಮತ್ತು ಎಲ್ಲರಿಗು 'ವಿಶ್ವ ಪುರುಷರ ದಿನದ 'ಬಿಲೆಟೆಡ್' ವಿಷಸ್..' ( ಸ್ವಲ್ಪ ಧೈರ್ಯವಾಗಿ ಹೇಳಬಹುದು ಈಗಾಗ್ಲೆ ನವೆಂಬರ 20ಕ್ಕೆ ಕಾಲಿಟ್ಟಾಯ್ತಲ್ಲ..! ):-)

Submitted by ಗಣೇಶ Fri, 11/20/2015 - 00:39

In reply to by nageshamysore

ನಾಗೇಶರೆ, ನೀವು ಭಯಂಕರ ಇದೀರ್ರಿ ಮಾರಾಯ್ರೆ!
ನಾನೇನೋ ನಿಮ್ಮನ್ನು ಭಯಬೀಳಿಸೋಣ ಅಂತ ಇದ್ರೆ,ಆಗಲೇ ಪ್ಲಾನ್ ಎ, ಪ್ಲಾನ್ ಬಿ ಎಲ್ಲಾ ತಯಾರಿ ಮಾಡಿಯೇ ಬಿಟ್ಟಿದ್ದೀರಿ!!
ನೀವು ದೂರದ ಸಿಂಗಾಪುರದಲ್ಲಿರದೇ ಇಲ್ಲೇ ಹತ್ತಿರದಲ್ಲೇ ಎಲ್ಲಾದರೂ ಇದ್ದಿದ್ದರೆ, ಗುಬ್ಬಣ್ಣನಿಗಿಂತ ಜಾಸ್ತಿ,ಇಲ್ಲಿನ ಜನ ನಿಮ್ಮ ಬಳಿ ಸಮಸ್ಯೆ ಪರಿಹಾರಕ್ಕೆ ಬರುತ್ತಿದ್ದರು...

Submitted by nageshamysore Fri, 11/20/2015 - 05:30

In reply to by ಗಣೇಶ

ಗಣೇಶ್ ಜಿ, ಏನು ಮಾಡುವುದು - ಎಲ್ಲಾ ಕಾಲಧರ್ಮ - ಗುಬ್ಬಣ್ಣನ ಜತೆ ಹೆಣಗಿ ಹೆಣಗಿ ಎಲ್ಲದರಲ್ಲು ಸ್ವಲ್ಪ ಹುಷಾರಿರಬೇಕು ಅನ್ನೊ ಪ್ರಜ್ಞೆ ಎಚ್ಚರವಾಗಿಬಿಟ್ಟಿರಬೇಕು..!

ಅಂದ ಹಾಗೆ ನಿಮ್ಮ ಆಶ್ರಮದಲ್ಲಿ ಒಂದು ವೇಕೆನ್ಸಿ ಮಾಡಿಕೊಟ್ಟುಬಿಡಿ -ಕನ್ಸಲ್ಟಿಂಗ್ ಜಾಯಿಂಟ್ ವೆಂಚರ್ ಆರಂಭಿಸಿ ಬಿಡೋಣ .. ಬಂದದ್ದೆಲ್ಲಾ ಫಿಫ್ಟಿ ಫಿಫ್ಟಿ :-)

Submitted by ಗಣೇಶ Thu, 12/10/2015 - 00:56

In reply to by nageshamysore

ಅಯ್ಯೋ ನಾಗೇಶರೆ, ಶನಿ ವಕ್ರದೃಷ್ಟಿಯ ಹಾಗೇ ಸಿದ್ದರಾಮಯ್ಯನವರ ದೃಷ್ಟಿ ನಮ್ಮ ಜ್ಯೋತಿಷ್ಯದ ಮೇಲೆ ಬಿದ್ದಿದೆ...ನಾವೇ ಈಗ ಬೇರೆ ಕಡೆ ಶಿಫ್ಟ್ ಆಗೋ ಯೋಚನೆಯಲ್ಲಿದ್ದೇವೆ:(
-ಅಂ.ಭಂ.ಸ್ವಾಮಿ.

Submitted by nageshamysore Thu, 12/10/2015 - 12:13

In reply to by ಗಣೇಶ

ಗಣೇಶ್ ಜಿ,

ಅಂತೂ "ಸಿದ್ದ" 'ಪುರುಷರ' ರಾಜ್ಯದಲ್ಲಿ ಸಿಂಹಗಳಿಗೆ ಎಡೆಯೆ ಇಲ್ಲಾ ಅನ್ನುವಂತಾಯ್ತು.. ಹೋಗಲಿ ಬಿಡಿ - 'ಜೈ ವಿಶ್ವ ಪುರುಷರ ದಿನ' ಅಂತ ಎಲ್ಲಾ ಸಹಿಸಿಕೊಂಡು ಬಿಡೋಣ!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by nageshamysore Tue, 01/19/2016 - 08:56

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು.. ಈ ತರ ಆಚರಿಸಿಕೊಳ್ಳೋಕೆ ಒಂದು ದಿನ ಇದೆ ಅನ್ನೋದೆ ಖುಷಿ ವಿಷಯ ಅಲ್ವಾ ? ಪಾಪ ಸುಮಾರು ಜನರಿಗೆ ಅದೇ ಗೊತ್ತಿಲ್ಲ.. ಗುಬ್ಬಣ್ಣಂದು ಅದೇ ಪಾಡಿತ್ತು, ಆದ್ರೆ ಈಗ ಗೊತ್ತಾಗೋಗಿದೆ :-)