ಲಚ್‌ಮನ್‌ಪುರ - ಬರಡು ನೆಲದ ಹಸುರುಹಳ್ಳಿ
ಉತ್ತರಪ್ರದೇಶದ ಬುಂದೇಲ್ ಖಂಡ. ಈ ಹೆಸರು ಕೇಳಿದೊಡನೆ ಹಸಿವು ಮತ್ತು ಬಡತನ ಕಣ್ಣೆದುರು ಬರುತ್ತವೆ. ಅಲ್ಲಿನ ಜನರ ಊಟದ ತಟ್ಟೆಯೇ ಅವರ ದಾರುಣ ಪರಿಸ್ಥಿತಿಗೆ ಕನ್ನಡಿ.
ಅಲ್ಲಿ ಬಹುಪಾಲು ಜನರು ತಿನ್ನುವುದು ಒಂಚೂರು ಉಪ್ಪಿನ ಜೊತೆ ರೊಟ್ಟಿ. ಯಾಕೆಂದರೆ, ತರಕಾರಿಗಳು, ದ್ವಿದಳ ಧಾನ್ಯಗಳು - ಇವೆಲ್ಲ ಕಿರಾಣಿ ಅಂಗಡಿಗಳ ಡಬ್ಬಗಳಲ್ಲಿ ಇರುತ್ತವೆ ಹೊರತು ಹಳ್ಳಿ ಜನರ ಊಟದ ಬಟ್ಟಲಿನಲ್ಲಿ ಯಾವತ್ತೂ ಇರುವುದಿಲ್ಲ. ಹಲವು ಕುಟುಂಬಗಳಲ್ಲಿ ಎಲ್ಲರ ಹೊಟ್ಟೆ ತುಂಬುವಷ್ಟು ರೊಟ್ಟಿಯೂ ಇರುವುದಿಲ್ಲ.
ಕಳೆದ ನಾಲ್ಕು ವರುಷಗಳಲ್ಲಿ ಸತತ ಬರಗಾಲದಿಂದಾಗಿ ಬುಂದೇಲ್ ಖಂಡದ ಹಳ್ಳಿಗಳು ತತ್ತರಿಸಿವೆ. ಪ್ರಕೃತಿ ನೀಡುವ ಹೊಡೆತಗಳನ್ನು ಕಾಣಬೇಕಾದರೆ, ಅಲ್ಲಿನ ಜಲಾವುನ್ ಜಿಲ್ಲೆಯ ಮಾಧೈಯಾ ಅಂಗೇಲಾ ಹಳ್ಳಿಗೆ ಬರಬೇಕು. ಅಲ್ಲಿ ಕೃಷಿ ಅವಲಂಬಿತ ಕುಟುಂಬಗಳ ಸ್ಥಿತಿ ಕರಣಾಜನಕ. ಮುಂಗಾರಿನಲ್ಲಿ ಕೇವಲ ಶೇಕಡಾ 20ರಷ್ಟು ಫಸಲು (ಒಳ್ಳೇ ಮಳೆಯಾದ ವರುಷಗಳ ಮುಂಗಾರಿಗೆ ಹೋಲಿಸಿದಾಗ) ಕೈಗೆ ಬಂತು ಎನ್ನುತ್ತಾರೆ ಹಳ್ಳಿಗರು. ಎರಡನೇ ಹಂಗಾಮಿನಲ್ಲಿಯೂ ಅದೇ ಅವಸ್ಥೆ. ಮಳೆಯಿಲ್ಲದೆ ಬರಡಾದ ನೆಲದಲ್ಲಿ ಯಾವ ಬೆಳೆ ಬೆಳೆದೀತು?
ಇವೆಲ್ಲದರಿಂದ ಹತಾಶರಾದ ಹಲವು ಕುಟುಂಬಗಳು ಗುಳೇ ಹೋಗಿವೆ. ಇನ್ನೂ ಹಲವು ಕುಟುಂಬಗಳು ತಮ್ಮ ಹಳ್ಳಿ ತೊರೆದು ದೆಹಲಿ, ಮುಂಬೈ ಅಥವಾ ಗುಜರಾತಿನ ಪಟ್ಟಣಗಳಿಗೆ ಹೋಗುವ ತಯಾರಿಯಲ್ಲಿವೆ - ಅಲ್ಲೇನಾದರೂ ದಿನಗೂಲಿಯ ಕೆಲಸ ಸಿಕ್ಕೀತೆಂಬ ಆಶೆಯಲ್ಲಿ. ಬಹುಮಹಡಿ ಕಟ್ಟಡ ನಿರ್ಮಾಣದಂತಹ ಕಠಿಣ ಕೆಲಸವಾದರೂ ಆದೀತು ಎನ್ನುತ್ತಾರೆ ಅವರು.
ಬುಂದೇಲ್ ಖಂಡದ ಯಾವ ಹಳ್ಳಿಗೆ ಹೋಗಿ ನೋಡಿದರೂ ಇದೇ ಕತೆ-ವ್ಯಥೆ. ಆದರೆ ಲಚ್‌ಮನ್‌ಪುರ ಹಾಗಿಲ್ಲ.
ಬುಂದೇಲ್ ಖಂಡದ ಬರಡು ನೆಲ ಹಾದು ಬರುತ್ತಿದ್ದಂತೆ ಫಕ್ಕನೆ ಕಾಣುವ ಹಸುರು ಹೊಲಗಳು - ಅವೇ ಲಚ್‌ಮನ್‌ಪ್ರುರದ ಹಸುರುಗಾಥೆಯ ಸಾಕ್ಷಿಗಳು. ಈ ಹಸುರುಸಿರಿ ದೊಡ್ಡ ಬದಲಾವಣೆಯ ಸಂಕೇತ ಎನ್ನುತ್ತಾರೆ ಅಲ್ಲಿನ ದಲಿತ ರೈತರು. ಅವರ ಕೃಷಿ ಉತ್ಪಾದಕತೆ, ಆದಾಯ, ಪೌಷ್ಠಿಕ ಆಹಾರದ ಲಭ್ಯತೆ, ಆರೋಗ್ಯ - ಇವೆಲ್ಲವೂ ಇತ್ತೀಚೆಗಿನ ವರುಷಗಳಲ್ಲಿ ಸುಧಾರಿಸಿವೆ. “ಈ ವರುಷ ಮುಂಗಾರಿನಲ್ಲಿ ನಮ್ಮ ಹೊಲಗಳಲ್ಲಿ ಸಮೃದ್ಧ ಫಸಲು. ಎರಡನೇ ಬೆಳೆಯಿಂದಲೂ ಇಳುವರಿ ಚೆನ್ನಾಗಿತ್ತು. ಕೆಲವು ಹಳ್ಳಿಗರು ಮೂರನೇ ಬೆಳೆಯಾಗಿ ತರಕಾರಿಗಳನ್ನೂ ಬೆಳೆದಿದ್ದಾರೆ” ಎನ್ನುತ್ತಾರೆ ಮಹೇಂದ್ರ ಎಂಬ ರೈತ. ಲಚ್‌ಮನ್‌ಪುರದ ಗ್ಯಾನವತಿ ದನಿಗೂಡಿಸುತ್ತಾಳೆ, “ಇತ್ತೀಚೆಗಿನ ವರುಷಗಳಲ್ಲಿ ಬೆಳೆ ಚೆನ್ನಾಗಿದೆ. ಅದರಿಂದಾಗಿ ಒಳ್ಳೆಯ ಅನ್ನಾಹಾರ. ಹಾಗಾಗಿ ರೋಗರುಜಿನದ ಬಾಧೆ ಕಡಿಮೆ. ಇಲ್ಲಿ ತಿಂದುಣ್ಣಲು ಕಷ್ಟ ಅನ್ನೋ ಕಾರಣಕ್ಕಾಗಿ ನಮ್ಮ ಹಳ್ಳಿಯಿಂದ ಯಾರೂ ಗುಳೇ ಹೋಗ್ತಿಲ್ಲ.”
ಈ ಬದಲಾವಣೆ ಲಚ್‌ಮನ್‌ಪುರದಲ್ಲಿ ಹೇಗೆ ಸಾಧ್ಯವಾಯಿತು? “ಪರಮಾರ್ಥ"ದ ಸಂಪನ್ಮೂಲ ಕಾರ್ಯಕ್ರಮದಿಂದಾಗಿ. ಅದು ಸ್ಥಳೀಯ ಸ್ವಯಂಸೇವಾ ಸಂಘಟನೆ. ಕಳೆದ ಐದು ವರುಷಗಳಲ್ಲಿ ಅಲ್ಲಿ ಹಲವಾರು ಬದುಗಳ ಮತ್ತು ಚೆಕ್ ಡ್ಯಾಂಗಳ ನಿರ್ಮಾಣ. ಇಂತಹ ಮಣ್ಣು ಮತ್ತು ನೀರು ಸಂರಕ್ಷಣಾ ಕೆಲಸಗಳ ಜೊತೆಗೆ, ಸರಕಾರದ ಒಂದು ಲಕ್ಷ ರೂಪಾಯಿ ಅನುದಾನದಿಂದ ನಾಲ್ಕು ಕೊಳವೆಬಾವಿಗಳ ನಿರ್ಮಾಣ. ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿ ಇದ್ದದ್ದು ಮಹಿಳೆಯರ ಸಮಿತಿಗಳು.
ಕಡಿಮೆ ವೆಚ್ಚದ ತಂತ್ರಜ್ನಾನವೇ “ಪರಮಾರ್ಥ"ದ ಯಶಸ್ಸಿನ ಮಂತ್ರ. ಉದಾಹರಣೆಗೆ, ರಾಸಾಯನಿಕ ಗೊಬ್ಬರಗಳ ಬದಲಾಗಿ ಕಂಪೋಸ್ಟ್ ಬಳಕೆಗೆ ಪ್ರೋತ್ಸಾಹ. ಹಾಗೆಯೇ ಸಕಾಲದಲ್ಲಿ ಉತ್ತಮ ಬೀಜಗಳ ಒದಗಣೆ. ಇದರಿಂದಾಗಿ ಬೀಜ ಖರೀದಿಗಾಗಿ ಈಗ ಹಲವಾರು ರೈತರು ಲೇವಾದೇವಿದಾರರಿಂದ ಸಾಲ ಪಡೆಯಬೇಕಾಗಿಲ್ಲ. ಟ್ರಾಕ್ಟರುಗಳ ಬದಲಾಗಿ ಹೊಲದಲ್ಲಿ ಎತ್ತುಗಳಿಂದ ಕೃಷಿಕೆಲಸ ಮಾಡಿಸಲು ಉತ್ತೇಜನ. ಹೊಲಗಳಿಂದ ಸಿಗುವ ಮೇವು ಹೈನುಗಾರಿಕೆಗೆ ಒತ್ತಾಸೆಯಾಗಿದೆ. ಹಾಗಾಗಿ, ಹೈನಪಶುಗಳ ಸಂಖ್ಯೆಯಲ್ಲಿ ಶೇಕಡಾ 30 ಹೆಚ್ಚಳವಾಗಿದೆ.
“ಪರಮಾರ್ಥ" ಸುತ್ತುನಿಧಿಯೊಂದನ್ನು ಸ್ಥಾಪಿಸಿದೆ. ಇದರಿಂದ ಹಣ ಪಡೆಯುವ ರೈತರು ಈಗ ಕಡಿಮೆ ಬೆಲೆಗೆ ತಮ್ಮ ಫಸಲು ಮಾರುತ್ತಿಲ್ಲ. ಹಲವು ಸಣ್ಣ ರೈತರು ತಮ್ಮ ಫಸಲನ್ನು ಒಟ್ಟು ಮಾಡಿ, ದೊಡ್ಡ ಮಾರುಕಟ್ಟೆಗೆ ಒಯ್ದು, ಮಾರಿ, ಅಧಿಕ ಆದಾಯ ಗಳಿಸ ತೊಡಗಿದ್ದಾರೆ. ರೈತ ಕುಟುಂಬಗಳೊಳಗೆ ಒಗ್ಗಟ್ಟು ಮೂಡಿದೆ.
ಕದಂಪುರ್ ಮತ್ತು ಚೋಟಿಬೆರ್ ಅದೇ ಜಿಲ್ಲೆಯ ಇನ್ನೆರಡು ಹಳ್ಳಿಗಳು. ಅಲ್ಲಿಯೂ “ಪರಮಾರ್ಥ"ದ ಕಾರ್ಯಾಚರಣೆ. ಅಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದ ಸಂಗತಿ: ಕಳೆದ ಮೂರು ವರುಷಗಳಲ್ಲಿ ಬೇಳೆಕಾಳುಗಳ ಇಳುವರಿ ಎಕ್ರೆಗೆ 300 ಕಿಲೋದಿಂದ 450 ಕಿಲೋಕ್ಕೆ ಹೆಚ್ಚಳ. ಇದರಿಂದಾಗಿ ಎಕ್ರೆಗೆ ಕನಿಷ್ಠ ರೂ.1,000 ಆದಾಯ ಹೆಚ್ಚಳ. ಮೂರು ಹಳ್ಳಿಗಳ 180 ಹೆಕ್ಟೇರ್ ಯೋಜನಾ ಪ್ರದೇಶದಲ್ಲಿ ಒಟ್ಟು ರೂಪಾಯಿ ಐದು ಲಕ್ಷ ಆದಾಯ ಹೆಚ್ಚಳ. ಆ ಮೂರು ಹಳ್ಳಿಗಳಲ್ಲಿ ಕೃಷಿ ಆದಾಯ ಒಟ್ಟಾರೆ ರೂ. 9 ಲಕ್ಷ ಹೆಚ್ಚಿದೆ.
ಪಕ್ಕದ ಚಿತ್ರಕೂಟ ಜಿಲ್ಲೆಯಲ್ಲಿಯೂ ಭಾರತೀಯ ಸಮಾಜ ಸೇವಾ ಸಂಸ್ಥಾನ ಎಂಬ ಸಂಘಟನೆಯಿಂದ ಇಂತಹದೇ ಹಸುರು ಯಶೋಗಾಥೆ. ನಮ್ಮ ಹಳ್ಳಿಗಳ ಅಭಿವೃದ್ಧಿ ಸಾಧಿಸಬೇಕಾದರೆ ಕೋಟಿಗಟ್ಟಲೆ ರೂಪಾಯಿಗಳ ಬೃಹತ್ ಯೋಜನೆಗಳು ಬೇಕಾಗಿಲ್ಲ. ಮಣ್ಣು ಮತ್ತು ನೀರು ಸಂರಕ್ಷಣೆಯ ಸಣ್ಣಪುಟ್ಟ ಯೋಜನೆಗಳೇ ಸಾಕು, ಅಲ್ಲವೇ?
ಫೋಟೋ: ಉತ್ತರಪ್ರದೇಶದ ಹಳ್ಳಿ (ಪ್ರಾತಿನಿಧಿಕ ಫೋಟೋ) …. ಕೃಪೆ: ಡ್ರೀಮ್ಸ್ ಟೈಮ್.ಕೋಮ್