ಲತಾ ಮಂಗೇಶ್ಕರ್ - ಮಹಾನ್ ಸಂಗೀತ ತಪಸ್ವಿನಿ
ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ ೬ ಫೆಬ್ರವರಿ ೨೦೨೨ರಂದು. ಆದರೆ ಅವರ ಅಮರ ಹಾಡುಗಳು ನಮ್ಮನ್ನೆಂದೂ ಅಗಲುವುದಿಲ್ಲ. ಅವು ದಿನದಿನವೂ ನಮ್ಮಲ್ಲಿ ಚೈತನ್ಯ ತುಂಬ ಬಲ್ಲ ಹಾಡುಗಳು - ಕಳೆದ ಏಳು ದಶಕಗಳಲ್ಲಿ ಮತ್ತೆಮತ್ತೆ ಮಾಡಿದಂತೆ.
೨೮ ಸಪ್ಟಂಬರ್ ೧೯೨೯ರಂದು ಜನಿಸಿದ ಲತಾ ಮಂಗೇಶ್ಕರ್ ಬದುಕಿದ್ದಾಗಲೇ ದಂತಕತೆಯಾದವರು. ಇಷ್ಟೆಂದರೆ ಸಾಕೇ? ಖಂಡಿತ ಸಾಲದು. ಮತ್ತೇನು ಹೇಳೋಣ? ಯಾವ ಪದಗಳೂ ಅವರ ಪರಿಪೂರ್ಣ ಚಿತ್ರ ಕಟ್ಟಿಕೊಡಲಾರವು. ಯಾಕೆಂದರೆ ಅವರ ಬದುಕು ಎಲ್ಲ ಪದಗಳನ್ನೂ ಮೀರಿದ್ದು.
“ಆಯೇಗಾ ಆನೇವಾಲಾ” ಎಂಬ ಅವರ ಹಾಡು ಭಾರತದ ಕೇಳುಗರನ್ನೆಲ್ಲ ಸಮ್ಮೋಹನಕ್ಕೆ ಒಳಪಡಿಸಿದಾಗ ಅವರ ವಯಸ್ಸು ೨೦. ಅನಂತರ ಲತಾ ಮಂಗೇಶ್ಕರ್ ಹಿಂತಿರುಗಿ ನೋಡಲೇ ಇಲ್ಲ. ಆದರೆ, ಆ ಕಾಲಘಟ್ಟದಲ್ಲಿ ಸಿನೆಮಾ ಹಾಡುಗಳಿದ್ದ ಡಿಸ್ಕುಗಳಲ್ಲಿ ಹಾಡಿದವರ ಹೆಸರು ಮುದ್ರಿಸಲಾಗುತ್ತಿರಲಿಲ್ಲ; ಬದಲಾಗಿ ಸಿನೇಮಾದಲ್ಲಿ ಹಾಡು ಹಾಡಿದ ಪಾತ್ರದ ಹೆಸರು ಮುದ್ರಿಸಲಾಗುತ್ತಿತ್ತು ಎಂಬುದು ಬೇರೆ ಮಾತು. ಈ “ಅನ್ಯಾಯ"ವನ್ನು ಸರಿ ಪಡಿಸಿ, ಹಿನ್ನೆಲೆ ಗಾಯಕ/ ಗಾಯಕಿಯರ ಹೆಸರು ಹಾಡಿನ ಜೊತೆಗೆ ಮುನ್ನೆಲೆಗೆ ಬರುವುದರಲ್ಲಿಯೂ ಲತಾ ಮಂಗೇಶ್ಕರ್ ಅವರ ಪ್ರಭಾವ ಮುಖ್ಯವಾಗಿತ್ತು ಅನ್ನೋದು ಅವರ ಬಹುಮುಖಿ ವ್ಯಕ್ತಿತ್ವದ ಮತ್ತೊಂದು ಮುಖ.
ಹತ್ತುಹಲವು ಆಸಕ್ತಿಗಳ ಅಪ್ರತಿಮ ಪ್ರತಿಭಾವಂತ ಮಹಿಳೆ ಲತಾ ಮಂಗೇಶ್ಕರ್. ಅವರಿಗೆ ಫೋಟೋಗ್ರಫಿ ಎಂದರೆ ಪಂಚಪ್ರಾಣ. ಫಾರ್ಮುಲಾ ವನ್ ಮೋಟಾರ್-ಕಾರ್ ಸ್ಪರ್ಧೆಗಳಲ್ಲಿಯೂ ಅವರಿಗೆ ತೀವ್ರ ಆಸಕ್ತಿ. ವಿದೇಶಿ ಚಲನಚಿತ್ರಗಳೆಂದರೆ ಅಪಾರ ಕುತೂಹಲ. ಕ್ರಿಕೆಟ್ ಎಂದರಂತೂ ಎಂದೂ ಮುಗಿಯದ ಸಂಬಂಧ.
ಲತಾ ಮಂಗೇಶ್ಕರ್ ಅವರಿಗೆ ೭೫ ವರುಷ ತುಂಬಿದಾಗ ಮುಂಬೈಯಲ್ಲಿ ಒಂದು ಕಾರ್ಯಕ್ರಮ. ಅದರಲ್ಲಿ ಹಾಡಲು ಬಂದಿದ್ದ ಪ್ರಸಿದ್ಧ ಗಾಯಕಿ ಉಷಾ ಉತ್ತುಪ್ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ. ಎರಡು ಹಾಡುಗಳನ್ನು ಹಾಡಿದ ಉಷಾ ಉತ್ತುಪ್ ವೇದಿಕೆಯಿಂದ ಇಳಿದು ಲತಾಜಿಯವರ ಆಶೀರ್ವಾದ ಪಡೆಯಲು ಧಾವಿಸುತ್ತಾರೆ. ಅವರು ಆಗಲೇ ತಮ್ಮ ಆಸನದಿಂದ ಎದ್ದು ನಿಂತಿದ್ದರು. ಅವರ ಪಾದಗಳಿಗೆ ಎರಗಿದ ನಂತರ, ಉಷಾ ಉತ್ತುಪ್ ವಿನಂತಿಸುತ್ತಾರೆ, “ಇನ್ನಷ್ಟು ಚೆನ್ನಾಗಿ ಹಾಡಲು ನನಗೆ ಸಹಾಯವಾಗುವಂತಹ ಏನನ್ನಾದರೂ ನಿಮ್ಮ ಪುಟ್ಟ ಪರ್ಸಿನಿಂದ ತೆಗೆದು ಕೊಡಿ.” ತಕ್ಷಣವೇ ಲತಾ ಮಂಗೇಶ್ಕರ್ ತಮ್ಮ ಪರ್ಸ್ ತೆರೆದು, ಅದರಿಂದ ಮಿಶ್ರಿ (ಶುಗರ್ ಕ್ಯಾಂಡಿ) ಪ್ಯಾಕೆಟನ್ನು ಕೊಡುತ್ತಾರೆ. ಅದು ಗಂಟಲಿನ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆಯಿದೆ. ಉಷಾ ಉತ್ತುಪ್ “ಇದು ನನಗೆ ಒಂದು ವಾರಕ್ಕೂ ಸಾಲದು” ಎಂದಾಗ ಲತಾಜಿ ಅವರ ಆಶ್ವಾಸನೆ: “ಚಿಂತಿಸಬೇಡ, ನಿನಗೆ ಇನ್ನಷ್ಟು ಕಳಿಸಿಕೊಡ್ತೇನೆ.” ಒಂದು ವಾರದೊಳಗೆ ಲತಾಜಿ ಕಳಿಸಿದ ಒಂದು ಕಿಲೋ ಮಿಶ್ರಿ ಪೊಟ್ಟಣ ಉಷಾ ಉತ್ತುಪ್ ಅವರ ಮನೆಯಲ್ಲಿತ್ತು!
ವಡೋದರದ ಷಬ್ಬಿರ್ ಕುಮಾರ್, ಲತಾ ಮಂಗೇಶ್ಕರ್ ಜೊತೆ ೫೦ಕ್ಕಿಂತ ಅಧಿಕ ಜೋಡಿಹಾಡು (ಡ್ಯುಯೆಟ್)ಗಳನ್ನು ಹಾಡಿದ್ದಾರೆ. ಮೊದಲನೆಯ ಜೋಡಿ ಹಾಡನ್ನು ಅವರಿಬ್ಬರು ಹಾಡಿದ್ದು “ಬೇತಾಬ್" (೧೯೮೩) ಚಲನಚಿತ್ರಕ್ಕಾಗಿ. ಆಗಲೇ ದಂತಕತೆಯಾಗಿದ್ದ ಲತಾ ಮಂಗೇಶ್ಕರ್ ಜೊತೆಯಲ್ಲಿ ಹಾಡುವ ಬಗ್ಗೆ ಷಬ್ಬಿರ್ ಅಧೀರರಾಗಿದ್ದರು. ಅದರಿಂದಾಗಿ ಹಲವು ಬಾರಿ ಪ್ರಯತ್ನಿಸಿದರೂ ಅವರಿಗೆ ಸರಿಯಾಗಿ ಹಾಡಲು ಸಾಧ್ಯವಾಗಲಿಲ್ಲ. (ಅಮಿತಾಬ್ ಬಚ್ಚನರ ಪಾತ್ರಗಳಿಗಾಗಿ ಹಲವು ಹಾಡು ಹಾಡಿದವರು ಷಬ್ಬಿರ್ ಕುಮಾರ್.) ಆಗ, ಚಲನಚಿತ್ರದ ಸಂಗೀತ ನಿರ್ದೇಶಕ ಆರ್. ಡಿ. ಬರ್ಮನರನ್ನು ಕೆಲವು ನಿಮಿಷಗಳ ಬಿಡುವಿಗಾಗಿ ವಿನಂತಿಸಿದರು ಲತಾ ಮಂಗೇಶ್ಕರ್. ತಮ್ಮ ಥರ್ಮಾಸ್ ಫ್ಲಾಸ್ಕಿನಿಂದ ಒಂದು ಕಪ್ ಟೀ ಬಗ್ಗಿಸಿ, ಅದನ್ನು ಷಬ್ಬಿರಿಗೆ ಕೊಟ್ಟ ಲತಾಜಿ ಅವರಿಗೆ ಧೈರ್ಯ ತುಂಬುತ್ತಾ ಹೇಳಿದ ಮಾತು: ನಿನ್ನ ಪಕ್ಕದಲ್ಲಿ ಬೇರೆ ಯಾರೋ ಮಹಿಳೆ ನಿಂತು ಹಾಡುತ್ತಿದ್ದಾರೆ ಎಂಬಂತೆ ಹಾಡು. ಷಬ್ಬಿರ್ ಕುಮಾರ್ ಅನಂತರ ಎದೆಗುಂದದೆ ಹಾಡಿದರು. ಲತಾಜಿ ಎಂತಹ ಸೂಕ್ಷ್ಮಮತಿ!
ತನ್ನ ಒಂಭತ್ತು ದಶಕಗಳ ಬದುಕಿನಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡವರು ಲತಾ ಮಂಗೇಶ್ಕರ್. ಅವರು ತಮ್ಮ ಉಳಿತಾಯದ ಹಣವನ್ನು ಠೇವಣಿ ಇಟ್ಟಿದ್ದ ಬ್ಯಾಂಕ್ ದಿವಾಳಿ ಆಯಿತು. ಆಗ ಮನೆಯ ಬಾಡಿಗೆ ಕೊಡಲಿಕ್ಕೂ ಹಣವಿಲ್ಲದೆ, ಅವರು ತಾವಿದ್ದ ಮನೆ ಬಿಟ್ಟು ಹೋಗಬೇಕಾಯಿತು.
ತಂದೆಯ ಮರಣಾ ನಂತರ ೧೯೪೨ರಲ್ಲಿ ದುಡಿಯಲು ಶುರು ಮಾಡಿದಾಗ ಲತಾ ಮಂಗೇಶ್ಕರ್ ಅವರ ವಯಸ್ಸು ಕೇವಲ ೧೩. ತಾಯಿ, ಮೂವರು ತಂಗಿಯರು ಮತ್ತು ತಮ್ಮನಿದ್ದ ಕುಟುಂಬದ ಜವಾಬ್ದಾರಿ ಅವರ ಹೆಗಲೇರಿತ್ತು. ಕುಟುಂಬ ನಿರ್ವಹಣೆಗಾಗಿ ಅವರು ನಟನೆಯ ಕೆಲಸವನ್ನೂ ಒಪ್ಪಿಕೊಳ್ಳತೊಡಗಿದರು. ಇದರಿಂದಾಗಿ ಅವರ ಸಂಗೀತ ಸಾಧನೆಗೆ ತಾತ್ಕಾಲಿಕ ತಡೆ ಬಿತ್ತು. ಆಗ, ಅವರು ಚೆನ್ನಾಗಿ ಹಾಡುತ್ತಿದ್ದ ಕಾರಣ, ಹಾಡಿದ್ದಕ್ಕೆ ಯಾವುದೇ ಪ್ರತ್ಯೇಕ ಸಂಭಾವನೆಯಿಲ್ಲದೆ ನಟಿಸುವುದರ ಜೊತೆಗೆ ಹಾಡಬೇಕಾಗಿತ್ತು!
ಲತಾಜಿ ಅವರದು ಪರಿಶುದ್ಧ ಸ್ವರ. ಜನಪ್ರಿಯ ಸಿನೇಮಾಗಳಲ್ಲಿ ಯಾವುದೇ ಸನ್ನಿವೇಶದಲ್ಲಿ ಯಾವುದೇ ಪಾತ್ರಕ್ಕೆ, ಭಾವಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಅದ್ಭುತವಾಗಿ ಹಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಉದಾಹರಣೆಗಳು: ಮೊದಲ ಪ್ರೇಮದ ವಿಸ್ಮಯದ ಭಾವ - "ಮುಝೆ ಕಿಸಿ ಸೆ ಪ್ಯಾರ್ ಹೊ ಗಯಾ” (ಬನ್ವಾರಾ, ೧೯೪೪); ಮದುವೆಯ ಉತ್ಕಟತೆ - “ಯೆ ಗಲಿಯಾನ್ ಯೆ ಚೌಬಾರಾ” (ಪ್ರೇಮ್ ರೋಗ್, ೧೯೮೨); ಮಗು ಹುಟ್ಟುವ ನಿರೀಕ್ಷೆ - ಜೀವನ್ ಕಿ ಬಗಿಯ ಮೆಹ್ಕೆಗಿ (ತೇರೆ ಮೇರೆ ಸಪ್ನೆ, ೧೯೭೧); ಮಗುವಿನ ಮರಣದ ದುಃಖ - “ಲುಕ್ಕಾ ಚುಪ್ಪಿ ಬಹುತ್ ಹುಯಿ” (ರಂಗ್ ದೆ ಬಸಂತಿ)
ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ೨೭ ಜನವರಿ ೧೯೬೩ರಲ್ಲಿ ಜಮಾಯಿಸಿದ್ದ ಜನಸಾಗರದೆದುರು, ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಉಪಸ್ಥಿತಿಯ ವೇದಿಕೆಯಲ್ಲಿ “ಏ ಮೇರೆ ವತನ್ ಕೆ ಲೊಗೋನ್” ಎಂಬ ಭಾವತೀವ್ರತೆಯ ಹಾಡನ್ನು ಹೃದಯಾಂತರಾಳದ ಭಾವದಿಂದ ಲತಾ ಮಂಗೇಶ್ಕರ್ ಹಾಡಿದಾಗ ಅಲ್ಲಿದ್ದವರೆಲ್ಲ ಕಣ್ಣೀರಾಗಿದ್ದರು.
ಅಬ್ಬ, ೯೨ ವರುಷಗಳ ಅಸಾಧಾರಣ ಬದುಕಿನಲ್ಲಿ ೩೬ ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಹಾಡಿದ್ದು ೩೦,೦೦೦ಕ್ಕಿಂತ ಅಧಿಕ ಹಾಡುಗಳನ್ನು! ಅದೊಂದು ಮಹಾನ್ ತಪಸ್ಸು. ಸಂಗೀತ ಸಾಧನೆಯ ಉತ್ತುಂಗವನ್ನು ಏರಿದ ನಂತರವೂ, ೧೯೭೩ರಲ್ಲಿ ಯಶ್ ಛೋಪ್ರಾ ಅವರ “ದರ್ರ್" ಚಲನಚಿತ್ರಕ್ಕಾಗಿ ತಾನು ಹಾಡಿದ್ದು ಪರಿಪೂರ್ಣವಾಗಿರಲಿಲ್ಲವೆಂದು ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಪುನಃ ಬಂದು, ಪುನಃ ಪರಿಪೂರ್ಣವಾಗಿ ಹಾಡಿದ್ದ ಮಹಾನ್ ಸಂಗೀತ ತಪಸ್ವಿನಿ ಲತಾ ಮಂಗೇಶ್ಕರ್.
ಫೋಟೋ ಕೃಪೆ: ಆಜ್ ತಕ್ ಜಾಲತಾಣ; ಹಿಂದುಸ್ಥಾನ್ ಟೈಮ್ಸ್ ಜಾಲತಾಣ