ಲತಾ ‘ದೀದಿ' ಯ ಮರೆಯಲಾಗದ ಹೆಜ್ಜೆಗಳು...

ಲತಾ ‘ದೀದಿ' ಯ ಮರೆಯಲಾಗದ ಹೆಜ್ಜೆಗಳು...

ಗಾನ ಕೋಗಿಲೆ, ಗಾನ ಸಮ್ರಾಜ್ಞಿ, ಗಾನ ಸರಸ್ವತಿ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ‘ಭಾರತ ರತ್ನ' ಲತಾ ಮಂಗೇಶ್ಕರ್ ಕಳೆದ ಭಾನುವಾರ (ಫೆ.೬, ೨೦೨೨) ದಂದು ನಿಧನ ಹೊಂದಿದರು. ಸುಮಾರು ೮ ದಶಕಗಳ ಕಾಲ ತಮ್ಮ ಗಾನ ಮಾಧುರ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದವರು ನಮ್ಮ ಲತಾ ದೀದಿ. ಇವರ ಬಗ್ಗೆ ಈಗಾಗಲೇ ಸಾಕಷ್ಟು ಲೇಖನ ಮಾಲೆಗಳನ್ನು ನೀವು ಓದಿಯೇ ಇರುತ್ತೀರಿ. ಅದಕ್ಕಾಗಿ ಅವರ ಜೀವನದ ಪ್ರಮುಖ ಸಂಗತಿಗಳನ್ನು ಚುಟುಕಾಗಿ ನೀಡಿದ್ದೇನೆ. ಓದಲೂ ಸುಲಭ, ಮರೆತೂ ಹೋಗಲಾರದು.

* ಲತಾ ಮಂಗೇಶ್ಕರ್ ಹುಟ್ಟಿದ್ದು ಸೆಪ್ಟೆಂಬರ್ ೨೮, ೧೯೨೯ರಲ್ಲಿ ಮಧ್ಯಪ್ರದೇಶ ರಾಜ್ಯದ ಇಂದೋರ್ ನಲ್ಲಿ. ಇವರ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ತಾಯಿ ಸೇವಂತಿ ಮಂಗೇಶ್ಕರ್.

* ಐದು ಮಂದಿ ಮಕ್ಕಳಲ್ಲಿ ಹಿರಿಯ ಮಗಳು ಲತಾ. ಆಶಾ ಬೋಸ್ಲೆ, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್ ಸೋದರಿಯರು. ಹೃದಯನಾಥ ಮಂಗೇಶ್ಕರ್ ಸೋದರ.

* ಶಾಲೆಗೆ ಹೋದದ್ದು ಬರೇ ೧-೨ ದಿನ ಮಾತ್ರ. ಉಳಿದ ಶಿಕ್ಷಣವೆಲ್ಲಾ ಮನೆಯಲ್ಲೇ ಕಲಿತದ್ದು.

* ಲತಾ ಅವರ ಬಾಲ್ಯದ ಹೆಸರು ಹೇಮಾ. ‘ಭಾವ್ ಬಂಧನ್' ಎಂಬ ನಾಟಕದಲ್ಲಿ ನಟಿಸಿದಾಗ ಅದರಲ್ಲಿ ಲತಾ ಎಂಬ ಹೆಸರಿನ ಪಾತ್ರವನ್ನು ಮಾಡಿದ ಕಾರಣ ಎಲ್ಲರೂ ಇವರನ್ನು ಲತಾ ಎಂದೇ ಕರೆಯಲು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಹೇಮಾ ಮಂಗೇಶ್ಕರ್ , ಲತಾ ಮಂಗೇಶ್ಕರ್ ಎಂದೇ ಗುರುತಿಸಲ್ಪಟ್ಟರು.

* ಲತಾ ಅವರಿಗೆ ೧೩ ವರ್ಷವಿದ್ದಾಗ ಅವರ ತಂದೆಯ ನಿಧನದ ಕಾರಣ ಕುಟುಂಬದ ಹಿರಿಯ ಮಗಳಾದ್ದರಿಂದ ಸಂಸಾರದ ಜವಾಬ್ದಾರಿ ಇವರ ಮೇಲೇ ಬಿತ್ತು.

* ೧೯೪೨ರಲ್ಲಿ ಮರಾಠಿ ಚಿತ್ರ ‘ಕಿತೀ ಹಸಾಲ್' ನಲ್ಲಿ ಹಾಡುವ ಮೂಲಕ ಲತಾ ತಮ್ಮ ಗಾಯನದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಆ ಹಾಡನ್ನು ಚಿತ್ರದಲ್ಲಿ ಅಳವಡಿಸಲಾಗಿರಲಿಲ್ಲ.

* ಬಾಲ್ಯದಲ್ಲಿ ತಮ್ಮ ತಂದೆಯವರಾದ ದೀನನಾಥ ಮಂಗೇಶ್ಕರ್ ಅವರಲ್ಲಿ ಶಾಸ್ತ್ರೀಯ ಗಾಯನವನ್ನು ಕಲಿತ ಲತಾ, ನಂತರ ರಾಮಕೃಷ್ಣ ಬುವಾವಚೆ ಹಾಗೂ ಉಸ್ತಾದ್ ಅಮಾನತ್ ಖಾನ್ ಅವರ ಬಳಿ ಸಂಗೀತಾಭ್ಯಾಸ ಮಾಡಿದರು.

* ನಟ ದಿಲೀಪ್ ಕುಮಾರ್ ಒಮ್ಮೆ ಲತಾರ ಹಿಂದಿ ಉಚ್ಛಾರಣೆಯನ್ನು ನೋಡಿ ತಮಾಷೆ ಮಾಡಿದರಂತೆ. ಅದನ್ನು ಸವಾಲಾಗಿ ಸ್ವೀಕರಿಸಿದ ಲತಾ ಹಿಂದಿ ಜೊತೆಗೆ ಉರ್ದು ಭಾಷೆಗೂ ಶಿಕ್ಷರನ್ನು ನೇಮಿಸಿಕೊಂಡು ಆ ಭಾಷೆಗಳನ್ನು ಚೆನ್ನಾಗಿ ಕಲಿತರು. ಅಂದಂತೆ ಲತಾ ಅವರ ಮನೆ ಮಾತು ಮರಾಠಿ.

* ಬಾಲ್ಯದಲ್ಲಿ ಲತಾ ‘ಸಂಗೀತ್ ಸೌಭದ್ರ್' ನಾಟಕದಲ್ಲಿ ನಾರದರ ಪಾತ್ರ ಮಾಡುತ್ತಿದ್ದರು. ಇದು ಬಹಳ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು.

* ಲತಾ ಅವರು ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದ್ದು ೧೯೩೮ರಲ್ಲಿ ಮಹಾರಾಷ್ಟ್ರದ ಶೋಲಾಪುರದಲ್ಲಿ ನ್ಯೂಟನ್ ಥಿಯೇಟರ್ ನಲ್ಲಿ ಎರಡು ಮರಾಠಿ ಹಾಡುಗಳನ್ನು ಹಾಡಿದ್ದರು.

*  ಲತಾ ಅವರಿಗೆ ಸೀರೆಗಳೆಂದರೆ ಬಹು ಪ್ರೀತಿ. ಅವರು ಹೆಚ್ಚಾಗಿ ಧರಿಸಿದ್ದು ಶ್ವೇತ ವರ್ಣದ ಸೀರೆಗಳನ್ನೇ. ಕಾಲಿಗೆ ಬಂಗಾರದ ಗೆಜ್ಜೆಯನ್ನು ಹಾಕಿಕೊಳ್ಳುವುದೂ ಅವರಿಗೆ ಪ್ರಿಯವಾಗಿತ್ತು.

* ಲತಾ ಅವರು ಮೊದಲ ಸಲ ಹಾಡಿದಾಗ ಅವರ ದನಿಯನ್ನು ಬಹಳ ಕೀರಲು ದನಿ ಎಂದು ತಿರಸ್ಕರಿಸಲಾಗಿತ್ತು. ಹಿನ್ನಲೆ ಗಾಯನಕ್ಕೆ ಸೂಕ್ತವಾದ ದನಿ ಅಲ್ಲ ಎಂದು ಸಂಗೀತ ನಿರ್ದೇಶಕರ ವಾದವಾಗಿತ್ತು.

* ಲತಾ ತಮ್ಮ ಹಾಡಿನ ರೆಕಾರ್ಡಿಂಗ್ ಮಾಡುವ ಸಂದರ್ಭದಲ್ಲಿ ಜೇನುತುಪ್ಪ ಹಾಗೂ ನೀರನ್ನು ತಪ್ಪದೇ ಒಯ್ಯುತ್ತಿದ್ದರು. ಮೆಣಸು ಹಾಗೂ ಬಬ್ಬಲ್ ಗಮ್ ಅವರಿಗೆ ಇಷ್ಟವಾಗಿತ್ತು.

* ಲತಾ ಜೀವನ ಪರ್ಯಂತ ಅವಿವಾಹಿತೆಯಾಗಿಯೇ ಉಳಿದರು. ಅವರಿಗೆ ರಾಜಸ್ಥಾನದ ರಾಜ ಕುಟುಂಬದ ರಾಜ್ ಸಿಂಗ್ ಡುಂಗರ್ ಪುರ್ (ಬಿಸಿಸಿಐ ಅಧ್ಯಕ್ಷರೂ ಆಗಿದ್ದರು) ಜೊತೆ ಪ್ರೇಮವಿತ್ತು. ಆದರೆ ರಾಜ್ ಸಿಂಗ್ ಅವರ ತಂದೆ ಸಾಮಾನ್ಯ ಮನೆತನದ ಹುಡುಗಿಯನ್ನು ತಮ್ಮ ಮಗನಿಗೆ ಮದುವೆ ಮಾಡಿಸುವುದಕ್ಕೆ ಒಪ್ಪದ ಕಾರಣ ಇಬ್ಬರೂ ಜೀವನ ಪರ್ಯಂತ ಅವಿವಾಹಿತರಾಗಿಯೇ ಉಳಿದರು. ಇದೊಂದು ವಿಫಲ ಅಮರ ಪ್ರೇಮ ಕಥೆಯಾಗಿಯೇ ಉಳಿಯಿತು.

* ಲತಾ ಹಾಗೂ ರಾಜ್ ಸಿಂಗ್ ಮದುವೆಯಾಗದಿದ್ದರೂ ಅವರ ನಡುವೆ ಇದ್ದ ಉತ್ತಮ ಗೆಳೆತನವು ಜೀವನ ಪರ್ಯಂತ ಮುಂದುವರೆಯಿತು. ರಾಜ್ ಸಿಂಗ್ ಡುಂಗರ್ ಪುರ್ ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ (೧೯೮೩) ಗೆದ್ದಾಗ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿದ್ದರು, ಆ ಸಮಯ ಮಂಡಳಿಯಲ್ಲಿ ವಿಜೇತ ಆಟಗಾರರಿಗೆ ಬಹುಮಾನವಾಗಿ ನೀಡಲು ಹಣವಿಲ್ಲದ ಕಾರಣ ತಮ್ಮ ಗೆಳತಿ ಲತಾ ಜೊತೆ ಮಾತನಾಡಿ ಅವರ ಕಾರ್ಯಕ್ರಮವನ್ನು ಏರ್ಪಡಿಸಿ ಹಣ ಸಂಗ್ರಹ ಮಾಡಿದರು. ಲತಾ ಅವರ ಹಾಡನ್ನು ಕೇಳಲು ಜನ ಸಾಗರವೇ ನೆರೆದಿತ್ತು. ಅಲ್ಲಿ ಸಂಗ್ರಹವಾದ ಹಣವನ್ನು ಆಟಗಾರರಿಗೆ ಬಹುಮಾನವಾಗಿ ಹಂಚಿ ನೀಡಲಾಯಿತು.

* ಲತಾ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು - ಪಹಲಿ ಮಂಗಲ್ ಗೌರ್ (೧೯೪೨), ಬಡೀ ಮಾ (೧೯೪೫), ಜೀವನ್ ಯಾತ್ರಾ ಹಾಗೂ ಸುಭದ್ರಾ (೧೯೪೬), ಮಂದಿರ್ (೧೯೪೮), ಛತ್ರಪತಿ ಶಿವಾಜಿ (೧೯೫೨) ಇತ್ಯಾದಿ.

* ಲತಾ ನಿರ್ದೇಶನದ ಚಿತ್ರಗಳು ೧೯೫೩ ವಾಡಾಲ್ (ಮರಾಠಿ), ೧೯೫೩ ಝಾಂಝರ್, ೧೯೫೫ ಕಂಚನ್, ೧೯೯೦ ಲೇಕಿನ್ (ಹಿಂದಿ)

* ಲತಾ ಮಂಗೇಶ್ಕರ್ ಕನ್ನಡ ಚಿತ್ರದಲ್ಲೂ ಹಾಡಿದ್ದಾರೆ. ೧೯೬೭ರಲ್ಲಿ ತೆರೆಕಂಡ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಎರಡು ಹಾಡುಗಳನ್ನು ಲತಾ ಹಾಡಿದ್ದಾರೆ. ಅವುಗಳಲ್ಲಿ ಬೆಳ್ಳನೆ ಬೆಳಗಾಯಿತು ... ಹಾಡು ತುಂಬಾ ಜನಪ್ರಿಯತೆ ಪಡೆಯಿತು.

* ಲತಾ ಅವರಿಗೆ ಕ್ರಿಕೆಟ್ ಆಟವೆಂದರೆ ಪಂಚ ಪ್ರಾಣ ಹಾಗೂ ಸಚಿನ್ ತೆಂಡೂಲ್ಕರ್ ಅವರ ಮೆಚ್ಚಿನ ಆಟಗಾರ. ಆತನನ್ನು ತಮ್ಮ ಮಗ ಎಂದೇ ಕರೆಯುತ್ತಿದ್ದರು.

* ಲತಾ ಅವರು ಗಾಯಕಿ ಆಗದಿದ್ದದ್ದರೆ ಏನಾಗುತ್ತಿದ್ದರು ಗೊತ್ತೇ? ಅವರೇ ಹೇಳಿದಂತೆ ಉತ್ತಮ ಛಾಯಾಗ್ರಾಹಕರಾಗುತ್ತಿದ್ದರಂತೆ. ಅವರಿಗೆ ಬಾಲ್ಯದಿಂದಲೇ ಛಾಯಾಗ್ರಹಣದಲ್ಲಿ ಆಸಕ್ತಿ ಇತ್ತು. ಫೋಟೋ ತೆಗೆಯುವುದಕ್ಕಾಗಿ ಅವರು ೧೯೪೬ರಲ್ಲಿ ೧,೨೦೦ ರೂ. ನೀಡಿ ರೋಲಿಪ್ಲೆಕ್ಸ್ ಕ್ಯಾಮರಾ ಖರೀದಿ ಮಾಡಿದ್ದರು. 

* ೧೯೯೯ರಲ್ಲಿ ಲತಾ ಅವರು ರಾಜ್ಯ ಸಭಾ ಸದಸ್ಯೆಯಾಗಿ ನಾಮನಿರ್ದೇಶನಗೊಂಡರು. ಅನಾರೋಗ್ಯದ ಕಾರಣ ಅವರು ಅಧಿವೇಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಕಮ್ಮಿ. ಇದೇ ಕಾರಣದಿಂದ ಅವರು ಸಂಸದರಾಗಿ ಸಿಗಬಹುದಾಗಿದ್ದ ಯಾವುದೇ ಸವಲತ್ತನ್ನು ಹಾಗೂ ಸಂಬಳವನ್ನು ಪಡೆದುಕೊಳ್ಳಲಿಲ್ಲ.

* ೧೯೬೩ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮುಂದೆ ಲತಾ ಹಾಡಿದ ‘ಏ ಮೇರೆ ವತನ್ ಕೆ ಲೋಗೋ’ ಹಾಡು ನೆಹರೂ ಅವರ ಕಣ್ಣಲ್ಲಿ ನೀರು ತರಿಸಿತಂತೆ. ಮತ್ತೊಮ್ಮೆ ಆ ಹಾಡು ಹಾಡಲು ನೆಹರೂ ಅವರು ಭಿನ್ನವಿಸಿಕೊಂಡಾಗ ಲತಾ ಅವರು ನಯವಾಗಿ ನಿರಾಕರಿಸಿದರಂತೆ. ಭಾರತದ ಸೈನಿಕರ ಕುರಿತಾದ ಈ ಹಾಡು ಬರೆದದ್ದು ಪ್ರದೀಪ್. 

* ೧೯೬೯ರಲ್ಲಿ ಪದ್ಮಭೂಷಣ, ೧೯೯೯ರಲ್ಲಿ ಪದ್ಮ ವಿಭೂಷಣ, ೨೦೦೧ರಲ್ಲಿ ಭಾರತರತ್ನ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದವು.

* ಸಿನೆಮಾದಲ್ಲಿನ ಗಾಯನಕ್ಕಾಗಿ ಲತಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ, ಜೀವಮಾನದ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ, ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ ಸಂದಿದೆ. 

* ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದೇ ಇದ್ದರೂ ನ್ಯೂಯಾರ್ಕ್ ವಿಶ್ವವಿದ್ಯಾನಿಲಯವೂ ಸೇರಿದಂತೆ ೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಲತಾ ಅವರಿಗೆ ದೊರೆತಿದೆ.

* ಲತಾ ಅವರಿಗೆ ಪತ್ತೇದಾರಿ ಕಾದಂಬರಿಗಳಲ್ಲಿ, ಧಾರವಾಹಿಗಳಲ್ಲಿ ಬಹಳ ಆಸಕ್ತಿ. ಟಿವಿಯಲ್ಲಿ ಬರುತ್ತಿದ್ದ ‘ಸಿಐಡಿ' ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದರಂತೆ.

* ಲತಾ ಅವರು ಸುಮಾರು ೩೫,೦೦೦ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ ಎಂದು ಅಂದಾಜು. ಅವರ ಇಷ್ಟದ ಐದು ಗೀತೆಗಳೆಂದರೆ ೧. ಏ ಮೇರೆ ವತನ್ ಕೆ ಲೋಗೋ, ೨. ದಿಲ್ ಕಾ ಖಿಲೋನಾ ಹಾಯೆ ಟೂಟ್ ಗಯಾ (ಗೂಂಜ್ ಉಠಿ ಶಹನಾಯಿ-೧೯೫೯) ೩. ಆಜ್ ಫಿರ್ ಜೀನೆ ಕಿ ತಮನ್ನಾ ಹೈ (ಗೈಡ್ - ೧೯೬೫), ೪. ಬಿಂದಿಯಾ ಚಮಕೇಗಿ (ದೋ ರಾಸ್ತೆ -೧೯೬೯), ೫. ಇನ್ನೀ ಲೋಗೋಂ ನೆ ( ಪಾಕಿಜಾ -೧೯೭೧) 

* ಲತಾ ಅವರಿಗೆ ಚಿತ್ರರಂಗದ ಹಲವರ ಜೊತೆ ಮುನಿಸು ಇತ್ತು. ಮೊಹಮ್ಮದ್ ರಫಿ, ದಿಲೀಪ್ ಕುಮಾರ್, ರಾಜ್ ಕಪೂರ್ ಮೊದಲಾದವರ ಜೊತೆ ವರ್ಷಾನುಗಟ್ಟಲೆ ಮಾತು ಬಿಟ್ಟಿದ್ದರು. ನಿರ್ದೇಶಕ ಓ.ಪಿ.ನಯ್ಯರ್ ಅವರಂತೂ ಲತಾ ಅವರನ್ನು ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುತ್ತಲೇ ಇರಲಿಲ್ಲ. ಈ ಕಾರಣದಿಂದ ಲತಾ ಅವರಿಗೆ ಸಿಗಬೇಕಾಗಿದ್ದ ಅವಕಾಶ ಅವರ ತಂಗಿ ಆಶಾ ಬೋಸ್ಲೆ ಅವರಿಗೆ ದೊರೆಯಿತು.

* ಕೋವಿಡ್ ಹಾಗೂ ಬಹು ಅಂಗಾಂಗ ವೈಫಲ್ಯದ ಕಾರಣಗಳಿಂದ ಫೆಬ್ರವರಿ ೬, ೨೦೨೨ರಂದು ತಮ್ಮ ೯೨ನೇ ವಯಸ್ಸಿನಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಮುಂಬಯಿಯಲ್ಲಿ ನಿಧನ ಹೊಂದಿದರು.

(ವಿವಿಧ ಮೂಲಗಳಿಂದ ಸಂಗ್ರಹಿತ) 

ಚಿತ್ರ ಕೃಪೆ: ಅಂತರ್ಜಾಲ ತಾಣ